ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಕ್‌ ಪಾತ್ರಗಳೊಂದಿಗೆ ವಾರಾಂತ್ಯದ ಮೋಜು

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತವಾಗಿರುವ ಕೆಲವು ಮನರಂಜನಾ ಕಾರ್ಯಕ್ರಮಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಜನಪ್ರಿಯವಾಗುತ್ತಿವೆ. ವೈಟ್‌ಫೀಲ್ಡ್‌ನ ಕರ್ನಾಟಕ ಟ್ರೇಡ್‌ ಪ್ರಮೋಷನ್ ಆರ್ಗನೈಸೇಷನ್‌ನಲ್ಲಿ (ಕೆಟಿಪಿಒ) ಕಳೆದ ವಾರಾಂತ್ಯ ಆಯೋಜನೆಗೊಂಡಿದ್ದ ‘ಕಾಮಿಕ್‌ ಕಾನ್‌’ ಅಂತಹುದೇ ಕಾರ್ಯಕ್ರಮ. ಅಮೆರಿಕಾದ ‘ಕಾಮಿಕ್‌ ಕಾನ್’ ಸಂಸ್ಥೆ ಭಾರತದಲ್ಲಿ 2011ರಿಂದೀಚೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ನಡೆದಿತ್ತು.

ವಿವಿಧ ನಿರುಪಯುಕ್ತ ವಸ್ತುಗಳು, ಘನತ್ಯಾಜ್ಯಗಳನ್ನು ಬಳಸಿ ಅವುಗಳ ಮೂಲ ಸ್ವರೂಪವನ್ನೇ ನಾಚಿಸುವಂತೆ ಸುಂದರ ವಿನ್ಯಾಸಗಳಲ್ಲಿ ಸಿದ್ಧವಾಗಿದ್ದ ಬ್ಯಾಟ್‌ಮನ್, ಸೂಪರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ಪ್ರತಿಕೃತಿಗಳು ವೀಕ್ಷಕರ ಗಮನ ಸೆಳೆದವು.  ಮಕ್ಕಳು ತಮ್ಮ ನೆಚ್ಚಿನ ಕಾಮಿಕ್‌ ಪಾತ್ರಗಳಂತೆ ವೇಷ ಧರಿಸಿ ಮೇಳದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವುದು ಈ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು. ಅವರೆಲ್ಲ ಜೀವಂತ ಸೂಪರ್‌ಮ್ಯಾನ್‌, ಬ್ಯಾಟ್‌ಮನ್‌, ಚಂದಮಾಮಗಳಂತೆ ಕಂಗೊಳಿಸುತ್ತಿದ್ದರು. ಎರಡೂ ದಿನ ಅತ್ಯುತ್ತಮವಾಗಿ ಕಾಮಿಕ್‌ ವೇಷಧಾರಿಗಳಾಗಿ ಬಂದವರಿಗೆ ನಗದು ಬಹುಮಾನ ನೀಡಲಾಯಿತು.

ದೇಶಿಯ ಕಲಾವಿದರು ಹಾಗೂ ಕಾಮಿಕ್‌ ಪಾತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚಂದಮಾಮ, ಟಿಂಕಲ್‌, ಅಮರಚಿತ್ರ ಕಥಾ, ಫ್ಯಾಂಟಮ್‌, ಚಿತ್ರಭಾರತಿಗಳ ಜನಪ್ರಿಯತೆಗೆ ಕಾಮಿಕ್‌ ಕಾನ್‌ಗಳಿಗೆ ಪ್ರಚಾರ ನೀಡಲಾಯಿತು. ಅಷ್ಟೇ ಅಲ್ಲ, ಘನತ್ಯಾಜ್ಯಗಳ ಮರುಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶವೂ ಇದರ ಹಿಂದೆ ಇದೆ ಎನ್ನುವುದು ಸಂಸ್ಥೆಯ ಅಂಬೋಣ.

ದೇಶದ ವಿವಿಧೆಡೆಗಳಿಂದ ಬಂದಿದ್ದ ಕಲಾವಿದರು ಅನುಪಯುಕ್ತ ಮದ್ಯ ಹಾಗೂ ಹಾಲಿನ ಬಾಟಲಿಗಳು, ತಂಪು ಪಾನೀಯ ಬಾಟಲಿಗಳ ಮುಚ್ಚಳ, ಕಂಪ್ಯೂಟರ್ ಕೀಬೋರ್ಡ್‌ ಹಾಗೂ ಇ ತ್ಯಾಜ್ಯಗಳಲ್ಲಿ ಸುಂದರ ಕಾಮಿಕ್ ಕಲಾಕೃತಿಗಳನ್ನು ರಚಿಸಿದ್ದರು. ಮೇಳದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಳಿಗೆಗಳಿದ್ದರೂ ಆಕರ್ಷಣೆಯ ಕೇಂದ್ರವಾಗಿದ್ದುದು ಬಾಹುಬಲಿ ಮಳಿಗೆ! ಬಾಹುಬಲಿಯ ಚಲನಚಿತ್ರಕ್ಕೆ ಅನಿಮೇಶನ್‌ ಸ್ಪರ್ಶ ನೀಡಿದ ಬಗೆಯನ್ನು ಕಲಾವಿದರು ವಿವರಿಸುತ್ತಿದ್ದರೆ, ನೋಡುಗರು ಸಿನಿಮಾದ ದೃಶ್ಯಗಳನ್ನು ಮೆಲುಕು ಹಾಕುತ್ತಿದ್ದರು. ಅಮರ ಚಿತ್ರಕಥಾ ಮಳಿಗೆಯ ಕಲಾವಿದರು ಭಾರತೀಯ ಕಾಮಿಕ್‌ ಪಾತ್ರಗಳ ಮಹತ್ವವನ್ನು ವಿವರಿಸುತ್ತಿದ್ದರು. ಓಲೆ, ಉಂಗುರ ಮತ್ತು ಪದಕಗಳ ಮೇಲೆ ಮೂಡಿದ್ದ ಸ್ಪೈಡರ್‌ಮ್ಯಾನ್‌, ಸೂಪರ್‌ಮ್ಯಾನ್‌ ಚಿತ್ರಗಳು ಆಭರಣಪ್ರಿಯರ ಮನಗೆದ್ದವು.

ಪ್ರತಿವರ್ಷ ದೆಹಲಿಯಲ್ಲಿ ಮೂರು ದಿನ ಕಾಮಿಕ್‌ ಕಾನ್‌ ಸಮ್ಮೇಳನ ನಡೆಯುತ್ತದೆ. ಬೆಂಗಳೂರು, ಮುಂಬೈ, ಹೈದರಾಬಾದ್‌ನಲ್ಲಿ ತಲಾ ಎರಡು ದಿನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗುತ್ತದೆ.

‘ನನಗೆ ಮತ್ತು ನನ್ನ ಪತ್ನಿಗೆ ಕಾಮಿಕ್‌ ಪಾತ್ರಗಳ ಮೇಲೆ ಹಲವು ವರ್ಷಗಳಿಂದ ಆಸಕ್ತಿ. ಅದನ್ನೇ ಪ್ರೇರಣೆಯಾಗಿಟ್ಟುಕೊಂಡು ಕಂಪ್ಯೂಟರ್‌ನ ಬಿಡಿಭಾಗಗಳನ್ನು ಬಳಸಿ ಕಾಮಿಕ್ ಪಾತ್ರಗಳ ಪ್ರತಿಕೃತಿಗಳನ್ನು ರಚಿಸುವ ಹವ್ಯಾಸ ರೂಢಿಸಿಕೊಂಡೆವು. ಅದಕ್ಕೆ ಆಸಕ್ತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ಮೇಳದಲ್ಲಿ ಭಾಗವಹಿಸಿದ್ದ ಕಲಾವಿದ ಗೌತಮ್‌ ಶರ್ಮಾ ತಿಳಿಸಿದರು.

‘ಸಾಮಾನ್ಯವಾಗಿ ವಿವಿಧ ವಯಸ್ಸಿನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಘನತ್ಯಾಜ್ಯದಿಂದ ಆಭರಣ ತಯಾರಿಸುತ್ತೇವೆ. ಆದರೆ ಈ ಮೇಳದಲ್ಲಿ ಎಲ್ಲ ವಯಸ್ಸಿನವರೂ ಬಾಟಲಿ ಮುಚ್ಚಳದ ಮೇಲಿನ ಕಲಾಕೃತಿಗಳನ್ನು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲದೆ ಬಾಟಲಿಗಳನ್ನು ಕರಗಿಸಿ ಆಭರಣ ತಯಾರಿಸುವ ಕೌಶಲಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ’ ಎಂದು ಕಲಾವಿದರಾದ ಆಂಜೆಲಿನ್‌ ಬಾಬು ಮತ್ತು ರಿತುಪರ್ಣ ದಾಸ್‌ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT