ಮಂಗಳವಾರ, ಮಾರ್ಚ್ 2, 2021
31 °C

‘ಆವೇಶದಲ್ಲಿ ಎಂದಿಗೂ ತಪ್ಪು ಮಾಡಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆವೇಶದಲ್ಲಿ ಎಂದಿಗೂ ತಪ್ಪು ಮಾಡಬೇಡಿ’

ಬೆಂಗಳೂರು: ವರದಕ್ಷಿಣೆ ಸಾವು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಮಗುವಿನ ಸಮೇತ ಬಂದಿಯಾಗಿದ್ದ 36 ವರ್ಷದ ಸಬೀನಾ ಬಾನು ಎಂಬುವರು, ಸನ್ನಡತೆ ಆಧಾರದಲ್ಲಿ ಬುಧವಾರ ಬಿಡುಗಡೆಯಾದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಬೀನಾ ಬಾನು ಸೇರಿ 5 ಮಹಿಳೆಯರು ಹಾಗೂ 45 ಪುರುಷ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಲಾಯಿತು. ಕೈದಿಗಳು ಜೈಲಿನಿಂದ ಹೊರಬರುತ್ತಿದ್ದಂತೆ, ಅವರ ಕುಟುಂಬದವರೆಲ್ಲ ಸಿಹಿ ಹಂಚಿ ಸಂಭ್ರಮದಿಂದ ಸ್ವಾಗತಿಸಿದರು. ಕೈದಿ ಪಾರ್ವತಮ್ಮ ಎಂಬುವರನ್ನು ಕರೆದೊಯ್ಯಲು ಸಂಬಂಧಿಕರ‍್ಯಾರು ಬಂದಿರಲಿಲ್ಲ. ಸ್ಥಳೀಯ ಯುವಕರೊಬ್ಬರು ಅವರ ಬ್ಯಾಗ್‌ಗಳನ್ನು ಹೊತ್ತುಕೊಂಡು ಜೈಲಿನ ಆವರಣದಿಂದ ಹೊಸ ರಸ್ತೆಯವರೆಗೆ ಸಾಗಿ, ಆಟೊದಲ್ಲಿ ಕಳುಹಿಸಿಕೊಟ್ಟರು.

ಸುದ್ದಿಗಾರರ ಜತೆ ಮಾತನಾಡಿದ ಸಬೀನಾ ಬಾನು, ‘ಬನಶಂಕರಿಯಲ್ಲಿ ನನ್ನ ಮನೆ ಇದೆ. ವರದಕ್ಷಿಣೆ ಸಾವು ಸಂಬಂಧ ಮನೆಯವರೆಲ್ಲರಿಗೂ ಶಿಕ್ಷೆಯಾಗಿತ್ತು. ಪೆರೋಲ್‌ ವೇಳೆ ಆಗಾಗ ಮನೆಗೆ ಹೋಗಿ ಬರುತ್ತಿದ್ದೆ. ಮಗುವೂ ಆಯಿತು. ಜೈಲಿನಲ್ಲಿ ಸನ್ನಡತೆಯಿಂದ ನಡೆದುಕೊಂಡೆ. ಈಗ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ’ ಎಂದರು.

‘ಮಗುವಿಗೆ ಶಿಕ್ಷಣ ಕೊಡಿಸಿ ಒಳ್ಳೆಯ ಪ್ರಜೆಯನ್ನಾಗಿ ಮಾಡುವ ಆಸೆ ಇದೆ. ಜೈಲಿನಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಮಹಿಳೆಯಾಗಿ ಪ್ರತಿದಿನವೂ ನೋವು ಅನುಭವಿಸಿದ್ದೇನೆ. ಈ ಪರಿಸ್ಥಿತಿ ಯಾರಿಗೂ ಬರಬಾರದು. ಮಹಿಳೆಯರು ಆವೇಷದಲ್ಲಿ ಎಂದಿಗೂ ತಪ್ಪು ಮಾಡಬೇಡಿ. ಮಾಡಿದರೆ, ನನ್ನಂತೆ ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಜೈಲ್ಲಿನಲ್ಲೇ ಮೂರು ಸ್ನಾತಕೋತ್ತರ ಪದವಿ: ಬಿಡುಗಡೆಯಾದ ಕೈದಿ ಎಂ.ಎಸ್‌.ನರಸಿಂಹ ರೆಡ್ಡಿ, ‘ನನ್ನದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಳ್ಳಿ. ಕ್ಷಣಿಕ ಆವೇಷದಲ್ಲಿ ಮಾಡಿದ ತಪ್ಪಿಗೆ 2003ರಲ್ಲಿ ಶಿಕ್ಷೆಯಾಯಿತು. ಜೈಲಿನ ಗ್ರಂಥಾಲಯದಲ್ಲಿ ಕೆಲಸ ಮಾಡಲು ಆರಂಭಿಸಿದೆ. ಪತ್ರಿಕೆ, ಪುಸ್ತಕ ಓದಿ ಸ್ನಾತಕೋತ್ತರ ಪದವಿ ಮಾಡುವ ಆಸೆ ಬಂತು. ಪತ್ರಿಕೋದ್ಯಮ, ಅರ್ಥಶಾಸ್ತ್ರ ಹಾಗೂ ಇತಿಹಾಸದಲ್ಲಿ ಎಂ.ಎ ಮುಗಿಸಿದೆ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಎಂಜಿನಿಯರಿಂಗ್‌ ಪದವಿ ಮಾಡಿಸಿದ್ದೇನೆ. ನನ್ನಂತೆ ಹಲವರು ಬಿಡುಗಡೆಗೆ ಅರ್ಹರಾದ ಕೈದಿಗಳಿದ್ದಾರೆ. ಅವರ ಬಿಡುಗಡೆಗೆ ಸಚಿವರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇನ್ನೊಬ್ಬ ಕೈದಿ ಭಾವಿ ರೆಡ್ಡಿ, ‘2003ರಲ್ಲಿ ಜೈಲಿಗೆ ಬಂದೆ. ಆರಂಭದಲ್ಲಿ ಜೀವನವೇ ಬೇಡವಾಗಿತ್ತು. 14 ವರ್ಷ ಶಿಕ್ಷೆಯು ಸಾಕಷ್ಟು ಪಾಠ ಕಲಿಸಿದೆ. ಮನುಷ್ಯರಿಗೆ ಅನ್ನ ನೀಡುವ ಶಕ್ತಿ ಇರುವುದು ಕೃಷಿಗೆ ಮಾತ್ರ. ಹೊರಗೆ ಹೋದ ಬಳಿಕ ಕೃಷಿ ಮಾಡುವೆ’ ಎಂದರು.

ಸಹೋದರರು ಬಿಡುಗಡೆ: ಹುಲಿಯೂರು ತಾಲ್ಲೂಕಿನ ಬಂಡಿಹಳ್ಳಿಯಲ್ಲಿ 1992ರಲ್ಲಿ ನಡೆದ ಕೊಲೆ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವರದೇಗೌಡ (88) ಹಾಗೂ ಅವರ ತಮ್ಮ ವನ್ನಯ್ಯ (82) ಅವರು ಇದೇ ವೇಳೆ ಬಿಡುಗಡೆಯಾದರು.

ವನ್ನಯ್ಯ, ‘ಜಮೀನು ವ್ಯಾಜ್ಯ ಸಂಬಂಧ ಕೊಲೆ ನಡೆಯಿತು. ನನ್ನನ್ನು ಸೇರಿ 8 ಮಂದಿಯನ್ನು ಜೈಲಿಗೆ ಹಾಕಲಾಯಿತು. ಒಬ್ಬ ಇಲ್ಲಿಯೇ ಮೃತಪಟ್ಟ. ಐವರು ಈ ಹಿಂದೆಯೇ ಬಿಡುಗಡೆಯಾಗಿ ಹೋಗಿದ್ದಾರೆ’ ಎಂದರು.

‘1998ರಲ್ಲಿ ನಮಗೆ ಜೀವಾವಧಿ ಶಿಕ್ಷೆಯಾಗಿತ್ತು. 2001ರಲ್ಲಿ ಬಿಡುಗಡೆಯೂ ಆಗಿತ್ತು. 2008ರಲ್ಲಿ ಸುಪ್ರೀಂಕೋರ್ಟ್ ಪುನಃ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಜೈಲಿನಲ್ಲಿದ್ದೆವು. ಈಗ 2ನೇ ಬಾರಿ ಬಿಡುಗಡೆಯಾಗುತ್ತಿದ್ದೇವೆ’ ಎಂದರು.

ಕೈದಿಗಳ ಹೆಸರಿನಲ್ಲಿ ₹2 ಲಕ್ಷ ವಿಮೆ: ಕಾರಾಗೃಹಗಳ ಡಿಐಜಿ ಎಚ್‌.ಎಂ.ರೇವಣ್ಣ, ‘ಕೈದಿಗಳು ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ₹2 ಲಕ್ಷ ವಿಮೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದೇವೆ. ಒಬ್ಬ ಕೈದಿಯಿಂದ ವರ್ಷಕ್ಕೆ ₹42 ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಕಾರಾಗೃಹದ ಕೈದಿಗಳ ಹೆಸರಿನಲ್ಲಿ ಜನಧನ್‌ ಬ್ಯಾಂಕ್‌ ಖಾತೆ ತೆರೆಯಲಾಗುವುದು. ಆಧಾರ್‌ ಸಂಖ್ಯೆ ನೀಡಲಾಗುವುದು. ಕೂಲಿ ಹಣವನ್ನು ಕೈದಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಕಾರಾಗೃಹದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಅವರಿಗಾಗಿ ಪ್ರತ್ಯೇಕ ಸ್ಟುಡಿಯೊ ತೆರೆದು ಕ್ಯಾಮೆರಾ ಹಾಗೂ ತಾಂತ್ರಿಕತೆ ಬಗ್ಗೆ ತರಬೇತಿ ನೀಡಲಿದ್ದೇವೆ. ಹೈನುಗಾರಿಕೆ, ಟೈಲರಿಂಗ್, ಸಾಬೂನು ತಯಾರಿಕೆ, ವರ್ಕ್‌ಶಾಪ್‌, ಬೇಕರಿ ಹಾಗೂ ಹಲವು ಕೆಲಸಗಳನ್ನು ಸೃಷ್ಟಿಸುತ್ತಿದ್ದೇವೆ’ ಎಂದರು.

ನಂಬಿಕೆ ಇರುವವರು ಧಾರ್ಮಿಕ ಸ್ಥಳಗಳಿಗೆ ಹೋಗಿ

‘ಕೋಪ ನಿಯಂತ್ರಣಕ್ಕಾಗಿ ಹಲವರು ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುತ್ತಾರೆ. ದೇವರಲ್ಲಿ ನಂಬಿಕೆ ಇರುವವರೆಲ್ಲ ಆ ರೀತಿ ಮಾಡಬಹುದು. ಅದನ್ನು ಎಲ್ಲರೂ ಅಳವಡಿಸಿಕೊಂಡಿದ್ದರೆ, ಐಪಿಸಿ ಸೆಕ್ಷನ್‌ಗಳು, ಪೊಲೀಸರು, ಕೋರ್ಟ್‌, ವಕೀಲರು, ಜೈಲುಗಳೇ ಇರುತ್ತಿರಲಿಲ್ಲ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಇಂದು ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಕಾರಾಗೃಹಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ₹20 ಕೋಟಿ ವೆಚ್ಚದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಪಕ್ಕದ ಜಾಗದಲ್ಲೇ ಮಹಿಳಾ ಕೈದಿಗಳಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗುತ್ತಿದೆ. ಐದು ತಿಂಗಳಲ್ಲಿ ನಿರ್ಮಾಣ ಕೆಲಸ ಮುಗಿಯಬಹುದು’ ಎಂದರು.

ಕೈದಿಗಳಿಗೆ ಸ್ಮರಣಿಕೆ ನೀಡಿದ ಸಚಿವ: ಕಾರ್ಯಕ್ರಮದ ನೆನಪಿಗಾಗಿ ರಾಮಲಿಂಗಾರೆಡ್ಡಿ ಅವರಿಗೆ ಆನೆಯ ಪ್ರತಿಮೆಯುಳ್ಳ ಸ್ಮರಣಿಕೆ ನೀಡಲಾಯಿತು. ಅದೇ ಸ್ಮರಣಿಕೆಯನ್ನು ಸಚಿವರು, ಬಿಡುಗಡೆಗೊಂಡ ಕೈದಿಗಳಾದ ವರದೇಗೌಡ ಹಾಗೂ ವನ್ನಯ್ಯ ಅವರಿಗೆ ನೀಡಿ ಬೀಳ್ಕೋಟ್ಟರು.

ಮನವಿ ಸಲ್ಲಿಕೆ: ‘ಕೊಲೆ (ಐಪಿಸಿ 302) ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಕೈದಿಗಳನ್ನು ಬಿಡುಗಡೆ ಮಾಡುವಂತೆ, ಸುಲಿಗೆ ಸೇರಿ ಇತರೆ ಪ್ರಕರಣಗಳಲ್ಲಿ 14 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸಿದ ಕೈದಿಗಳನ್ನು ಸಹ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಕೆಲ ಕೈದಿಗಳು ಸಚಿವರಿಗೆ ಮನವಿ ಸಲ್ಲಿಸಿದರು. ‘ಬಿಡುಗಡೆ ಸಂಬಂಧ ಸುಪ್ರೀ ಕೋರ್ಟ್ ಆದೇಶ ಹಾಗೂ ಹಲವು ನಿಯಮಗಳಿವೆ. ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.