ಗುರುವಾರ , ಮಾರ್ಚ್ 4, 2021
18 °C

ಈಜೀಪುರ ಮೇಲ್ಸೇತುವೆ ಕಾಮಗಾರಿ ಶುರು

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಈಜೀಪುರ ಮೇಲ್ಸೇತುವೆ ಕಾಮಗಾರಿ ಶುರು

ಬೆಂಗಳೂರು: ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಎರಡನೇ ಅತಿ ಉದ್ದದ ಮೇಲ್ಸೇತುವೆಯಾದ ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿರುವ ಈಜೀಪುರ ಮುಖ್ಯರಸ್ತೆ–ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗಿನ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದ್ದು, ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ.

ಈ ಮೇಲ್ಸೇತುವೆಯು 2.4 ಕಿ.ಮೀ. ಉದ್ದ ಹೊಂದಿದೆ. ಮೈಸೂರು ರಸ್ತೆಯಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ 2.65 ಕಿ.ಮೀ. ಹೊಂದಿದೆ.

ಮುಖ್ಯಮಂತ್ರಿ ಅವರ ನಗರೋತ್ಥಾನ ಯೋಜನೆ ಅಡಿಯಲ್ಲಿ ₹203.20 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಯ ಗುತ್ತಿಗೆಯನ್ನು ಮೆ.ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿದೆ.

‘ಕೇಂದ್ರೀಯ ಸದನ ಜಂಕ್ಷನ್‌ ಹಾಗೂ ಈಜೀಪುರ ಮುಖ್ಯರಸ್ತೆಯಲ್ಲಿ 20 ಮೀಟರ್‌ ಆಳದಷ್ಟು ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಒಟ್ಟು 62 ಕಂಬಗಳನ್ನು ನಿರ್ಮಿಸಲಿದ್ದು, ಪ್ರತಿಯೊಂದು ಕಂಬಕ್ಕೂ ನಾಲ್ಕು ಕಡೆಗಳಲ್ಲಿ ಮಣ್ಣಿನ ಪರೀಕ್ಷೆ ನಡೆಸಬೇಕು. ಒಂದು ತಿಂಗಳಲ್ಲಿ ಈ ಪರೀಕ್ಷೆ ಮುಗಿಯಲಿದ್ದು, ಬಳಿಕ ಕಂಬಗಳ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ರಸ್ತೆ ಮೂಲಸೌಕರ್ಯ (ಯೋಜನೆ) ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೇತುವೆಗೆ ಬೇಕಾದ ಪಿಲ್ಲರ್‌ಗಳನ್ನು ಪ್ರಿ–ಕಾಸ್ಟಿಂಗ್‌ ತಂತ್ರಜ್ಞಾನದ ಮೂಲಕ ಸಿದ್ಧಪಡಿಸಲಾಗುತ್ತದೆ. ಕಾಸ್ಟಿಂಗ್‌ ಯಾರ್ಡ್‌ಗಾಗಿ ಸ್ಥಳ ಗುರುತಿಸಲಾಗಿದೆ. ಅಲ್ಲಿ ಸಿದ್ಧಪಡಿಸಿದ ಬಿಡಿ ಭಾಗಗಳನ್ನು ತಂದು ಜೋಡಿಸಲಾಗುತ್ತದೆ. 2020ರ ಜನವರಿ 23ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಷರತ್ತು ವಿಧಿಸಲಾಗಿದೆ’ ಎಂದರು.

‘ದೊಮ್ಮಲೂರು ಕಡೆಗೆ 118.62 ಮೀಟರ್‌ ಉದ್ದದ ರ‍್ಯಾಂಪ್‌, ಹೊಸೂರು ರಸ್ತೆಯ ಕಡೆಗೆ 192.46 ಮೀ. ಉದ್ದದ ರ‍್ಯಾಂಪ್‌, ಮಡಿವಾಳದ ಕಡೆಗೆ 169.21 ಮೀ. ಉದ್ದದ ರ‍್ಯಾಂಪ್‌ ನಿರ್ಮಿಸಲಾಗುತ್ತದೆ. ಕೇಂದ್ರೀಯ ಸದನದ ಬಳಿ ಹೊಸೂರು ರಸ್ತೆಯಿಂದ ಮೇಲ್ಸೇತುವೆ ಕಡೆಗೆ 164.74 ಮೀಟರ್‌ ಉದ್ದದ ರ‍್ಯಾಂಪ್‌ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು.

‘ಈ ಸೇತುವೆಯು ನಗರದ ಆಗ್ನೇಯ ಭಾಗದಲ್ಲಿ ಪೂರ್ವ ಮತ್ತು ದಕ್ಷಿಣ ಕಾರಿಡಾರ್‌ ಆಗಿ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಈಜೀಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದವರೆಗೆ 3 ಮುಖ್ಯ ಮತ್ತು 4 ಸಣ್ಣ ಜಂಕ್ಷನ್‌ಗಳ ವಾಹನ ದಟ್ಟಣೆಯನ್ನು ತಪ್ಪಿಸಿದಂತಾಗುತ್ತದೆ. ಸಂಚಾರದಲ್ಲಿ ಸುಮಾರು 30 ನಿಮಿಷಗಳು ಉಳಿತಾಯವಾಗುತ್ತದೆ’ ಎಂದು ಹೇಳಿದರು.

‘ತ್ವರಿತಗತಿಯಲ್ಲಿ ಪೂರ್ಣಗೊಳಿಸಿ’: ‘ಇಂದಿರಾನಗರದಿಂದ ಹೊಸೂರು ರಸ್ತೆಯ ಕಡೆಗೆ ಪ್ರತಿದಿನ ಸಂಚರಿಸುತ್ತೇನೆ. ಈ ಮಾರ್ಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ವಿಪರೀತ. ಬೈಕ್‌ನಲ್ಲಿ ಮನೆಯಿಂದ ಕಚೇರಿಗೆ ಹೋಗಬೇಕಾದರೆ ಸುಮಾರು ಒಂದೂವರೆ ತಾಸು ಹಿಡಿಯುತ್ತದೆ. ಮೇಲ್ಸೇತುವೆ ನಿರ್ಮಾಣಗೊಂಡರೆ ಸಂಚಾರ ದಟ್ಟಣೆಯ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ. ಆದರೆ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಕಂಪೆನಿಯೊಂದರ ಉದ್ಯೋಗಿ ಬಿ.ಕೆ.ರಾಜೇಶ್‌ ಒತ್ತಾಯಿಸಿದರು.

ಮೇಲ್ಸೇತುವೆಯ ವಿಶೇಷ

* ದ್ವಿಮುಖ ಸಂಚಾರದ ನಾಲ್ಕು ಪಥಗಳು

* 5.50 ಮೀಟರ್‌ ಅಗಲದ ಸರ್ವಿಸ್‌ ರಸ್ತೆಗಳು

* ಗ್ರೇಡ್‌ ಮಟ್ಟದಲ್ಲಿ ಎರಡು ಬದಿಗಳಲ್ಲಿ 2.50 ಮೀಟರ್‌ ಅಗಲದ ಪಾದಚಾರಿ ಮಾರ್ಗ

* ಗ್ರೇಡ್‌ ಮಟ್ಟದಲ್ಲಿ ಎರಡು ಬದಿಗಳಲ್ಲಿ 2 ಮೀಟರ್‌ ಅಗಲದ ಸೈಕಲ್‌ ಪಥ

‘ಮರಗಳನ್ನು ಕತ್ತರಿಸುವುದಿಲ್ಲ’

‘ಕೋರಮಂಗಲ 100 ಅಡಿ ರಸ್ತೆಯ ವಿಭಜಕದ ಭಾಗದಲ್ಲಿ ಸಣ್ಣ ಗಾತ್ರದ ಮರಗಳಿವೆ. ಸೇತುವೆಗಾಗಿ ಕಂಬಗಳನ್ನು ನಿರ್ಮಿಸುವ ಜಾಗದಲ್ಲಿ ಇರುವ ಮರಗಳನ್ನು ಮಾತ್ರ ಸ್ಥಳಾಂತರ ಮಾಡುತ್ತೇವೆ. ಉಳಿದ ಕಡೆಗಳಲ್ಲಿ ಮರಗಳು ಹಾಗೆಯೇ ಇರುತ್ತವೆ. ಪಾದಚಾರಿ ಮಾರ್ಗದಲ್ಲಿರುವ ಮರಗಳಿಗೆ ಯಾವುದೇ ತೊಂದರೆ ಇಲ್ಲ’ ಎಂದು ಕೆ.ಟಿ.ನಾಗರಾಜ್‌ ತಿಳಿಸಿದರು.

ರಸ್ತೆ ದುರಸ್ತಿಗೆ ಆಗ್ರಹ

‘ಸರ್ಜಾಪುರ ರಸ್ತೆಯ ಕೋರಮಂಗಲ ವಾಟರ್‌ ಟ್ಯಾಂಕ್‌ ಬಳಿ ಜಲಮಂಡಳಿಯವರು ಅಳವಡಿಸಿರುವ ನೀರಿನ ಪೈಪ್‌ ಒಡೆದು ನೀರು ಹೊರಬರುತ್ತಿದೆ. ಇದರಿಂದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ’ ಎಂದು ಟ್ಯಾಕ್ಸಿ ಚಾಲಕ ಕೆ.ಗಿರೀಶ್‌ ದೂರಿದರು.

‘ಕೇಂದ್ರೀಯ ಸದನ ಜಂಕ್ಷನ್‌ ಬಳಿ ಮಣ್ಣಿನ ಪರೀಕ್ಷೆ ನಡೆಸಲು ಬ್ಯಾರಿಕೇಡ್‌ ಹಾಕಿರುವುದರಿಂದ ರಸ್ತೆ ಕಿರಿದಾಗಿದೆ. ಸರ್ಜಾಪುರ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಸಿಗ್ನಲ್‌ ದಾಟಲು ಕನಿಷ್ಠ 15 ನಿಮಿಷಗಳು ಬೇಕು. ಒಂದು ತಿಂಗಳಿಂದ ಈ ಸಮಸ್ಯೆ ಇದೆ. ಆದರೆ, ಜಲಮಂಡಳಿ ಹಾಗೂ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.