ಸಚಿವ ‘ಲೇಟ್ ಲತೀಫ್’ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಇನ್ನೇನಾಗುತ್ತೆ! ಸಭಿಕರ ಬೈಗುಳ ಜಾಸ್ತಿಯಾದಾಗ ಸಂಯೋಜಕರಿಗೆ ಕಾರ್ಯಕ್ರಮ ಆರಂಭಿಸದೆ ಬೇರೆ ಉಪಾಯವಿರಲಿಲ್ಲ. ‘ಸಚಿವರು ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ’ ಎಂಬ ಘೋಷಣೆಯೂ ಆಯಿತು. ಕೆಲವೇ ನಿಮಿಷಗಳಲ್ಲಿ ಸಚಿವರು ಬರಲಿಲ್ಲ. ಆದರೆ ಅವರ ಫೋನ್ ಕರೆ ಬಂತು. ‘ಕ್ಷಮಿಸಿ, ಈಗಷ್ಟೇ ಎದ್ದೆ. ಇನ್ನು ಶಿವಮೊಗ್ಗಕ್ಕೆ ಬಂದು ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಷ್ಟ. ಏನೂ ಗಡಿಬಿಡಿ ಮಾಡ್ಬೇಡಿ... ನಾನು ಇಲ್ಲಿಂದಲೇ ಮೊಬೈಲ್ ವಿಡಿಯೊ ಚಾಟ್ ಮೂಲಕ ಲೈವ್ ಭಾಷಣ ಮಾಡ್ತೀನಿ’ ಎಂದು ಫೋನ್ ಕೆಳಗಿಟ್ಟರು. ನೋಡಿದಿರಾ? ‘ತಡ ಮಾಡುವುದು ಜನ್ಮಸಿದ್ಧ ಹಕ್ಕು’ ಎಂದೇ ತಿಳಿದುಕೊಂಡಿದ್ದ ಸಚಿವ ‘ಲೇಟ್ ಲತೀಫ್’ ಕೊನೆಗೂ ತಮ್ಮ ಹಳೆಯ ದುರಭ್ಯಾಸಕ್ಕೆ ಪರಿಹಾರ ಕಂಡುಹುಡುಕಿದ್ದಾರೆ!

ಕಂಡ ಕಂಡಲ್ಲಿ ಖಂಡಿಸುತಿದ್ದ ಕೆಲವು ರಾಜಕೀಯ ಮುಖಂಡರು ಈಗ ಪತ್ರಿಕಾಗೋಷ್ಠಿಯನ್ನು ಕರೆಯುವುದನ್ನೂ ನಿಲ್ಲಿಸಿಬಿಟ್ಟಿದ್ದಾರೆ. ಸ್ವೀಟ್-ಖಾರ-ಟೀ ಇಲ್ಲದೆ ಟ್ವಿಟರ್‌ನಲ್ಲಿ ಟೀಕೆಗಳ ಸುರಿಮಳೆ ಹರಿಸುತ್ತಿದ್ದಾರೆ. ಪತ್ರಕರ್ತ ‘ಏನ್ಸಾರ್, ನಿಮ್ಮ ಅಭಿಪ್ರಾಯ?’ ಎಂದು ಕೇಳಿದರೆ, ‘ರೀ, ನೀವು ಬಹುಶಃ ಖಾದ್ರಿ ಶಾಮಣ್ಣ ಜಮಾನದ ಜರ್ನಲಿಸ್ಟ್ ಇರಬೇಕು... ಟ್ವಿಟರ್ ನೋಡುವ ಅಭ್ಯಾಸ ಇಲ್ವೇನ್ರೀ?’ ಎಂದು ಗುರುಗುಟ್ಟುತ್ತಾರೆ.

ನೀವು ಅಧಿಕಾರಿಯೊಬ್ಬರನ್ನು ಭೇಟಿ ಆಗುವುದಕ್ಕೆಂದು ಸರ್ಕಾರಿ ಕಚೇರಿಗೆ ಹೋಗುತ್ತೀರಿ ಎಂದಿಟ್ಕೊಳ್ಳಿ. ‘ಸಾಹೇಬ್ರು ಸೀಟಲ್ಲಿ ಇಲ್ಲ’ ಎಂದು ಅಲ್ಲಿಯ ಗುಮಾಸ್ತ ಹೇಳುವಾಗ ‘ಬರಬಹುದು’ ಎಂಬ ಆಶಾಭಾವನೆಯಿಂದ ಅಲ್ಲೇ ಕುರ್ಚಿಯಲ್ಲಿ ಆಸೀನರಾಗುತ್ತೀರಿ. ಸಾಹೇಬರ ಗುಟ್ಟು ಗೊತ್ತಿರುವ ಆ ಗುಮಾಸ್ತ ‘ಸಾರ್ ವಾಪಸ್ ಯಾವಾಗ ಬರುತ್ತಾರೆ ಎಂದು ಹೇಳುವುದಕ್ಕಾಗಲ್ಲ. ನಿಮಗೆ ಅಷ್ಟು ಅರ್ಜಂಟ್ ಇದ್ದರೆ ಅವರ ಫೇಸ್ ಬುಕ್‌ಗೆ ಹೋಗಿ. ಅಲ್ಲಿ ಸಿಗೋದು ಗ್ಯಾರಂಟಿ’ ಎಂದು ಹೊಸ ದಾರಿ ತೋರಿಸುತ್ತಾನೆ!

ಈ ಫೇಸ್ ಬುಕ್‌ನ ಕತೆ ನೋಡಿ. ಅಲ್ಲಿ ಎಲ್ಲರೂ ಸ್ವಾಮಿ ವಿವೇಕಾನಂದ, ಅಬ್ರಹಾಂ ಲಿಂಕನ್, ಗಾಂಧೀಜಿಗಳೇ! ಅವರಂತೆ ‘ನುಡಿ ಮುತ್ತು’ಗಳನ್ನು ಹರಿಯಬಿಡುತ್ತಿದ್ದಾರೆ. ಈಚೆಗೊಮ್ಮೆ ಯಾರೋ ಫೇಸ್ ಬುಕ್ಕಿಗ ಬರ್ನಾರ್ಡ್ ಷಾ ಅವರ ‘ಏನೂ ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿರುವಂತೆ ವರ್ತಿಸುವವರು ರಾಜಕಾರಣಕ್ಕೆ ಲಾಯಕ್ಕು’ ಎಂಬ ಮಾತನ್ನು ಪೋಸ್ಟ್ ಮಾಡಿದ್ದ. ಬಂತು ನೋಡಿ, ಲೈಕ್‌ಗಳ ಮೇಲೆ ಲೈಕ್‌ಗಳು! ಬರೀ ಲೈಕ್‌ಗಳು ಬಂದಿದ್ದರೆ ಪರವಾಗಿರಲಿಲ್ಲ. ಕಮೆಂಟ್‌ಗಳಲ್ಲಿ ಬಹಳ ಮಂದಿ ಅದನ್ನು ಪೋಸ್ಟಿಸಿದ ಆ ‘ಮಹಾನುಭಾವ’ನಿಗೆ ‘ವೆಲ್ ಸೆಡ್’, ‘ಅಹಾ! ಎಂತಹ ಯೋಚನೆ ನಿಮ್ಮದು!’ ಎಂದೆಲ್ಲಾ ಹೊಗಳುವುದೇ!

ಹಿಂದೆ ತಮ್ಮ ಅಚ್ಚುಮೆಚ್ಚಿನ ನಟ ನಟಿಯರ ಆಟೊಗ್ರಾಫ್‌ಗಾಗಿ ಅಭಿಮಾನಿಗಳು ಇಲ್ಲದ ಶ್ರಮಪಡುತ್ತಿದ್ದರು.. ಈಗ ‘ಸೆಲ್ಫಿ’ಗಾಗಿ ನಟ ನಟಿಯರನ್ನು ಸತಾಯಿಸುವುದೇ ಅಭಿಮಾನಿಗಳಿಗೆ ಖುಷಿ. ಪಾಪ, ಇಂದಿನ ಸಿನಿಮಾ ತಾರೆಯರ ಸಹಿಗಳಿಗೆ ಮೂರುಕಾಸಿನ ಬೆಲೆ ಇಲ್ಲ!

ಹಾಗೆ ನೋಡಿದರೆ ಕಾಲದ ವೈಪರೀತ್ಯ ಇಡೀ ಸಿನಿಮಾರಂಗಕ್ಕೆ ಹಬ್ಬಿದೆ. ಈಗ ಕುಟುಂಬ ಸಮೇತ ನೋಡುವ ಚಿತ್ರ ಅಂದರೆ ಏನು ಗೊತ್ತೆ? ಆ ಚಿತ್ರವನ್ನು ಅದರ ನಿರ್ಮಾಪಕ, ನಿರ್ದೇಶಕ, ನಟ, ನಟಿಯರ ಕುಟುಂಬದವರು ಮಾತ್ರ ನೋಡಬೇಕಾಗುತ್ತದಷ್ಟೆ! ಇನ್ನು ಚಿತ್ರದಲ್ಲಿ ಬರುವ ಪಾತ್ರಗಳನ್ನು ಜನ ಅನುಕರಿಸುತ್ತಿದ್ದ ಕಾಲ ಹೋಗಿ, ಚಂಡ ಪ್ರಚಂಡ ಕಳ್ಳರನ್ನು, ಚಾಕಚಕ್ಯತೆಯ ಹಂತಕರನ್ನು, ಭಗ್ನಪ್ರೇಮಿಗಳ ನಿಜ ಜೀವನಾಧರಿತ ಚಿತ್ರಗಳನ್ನು ಮಾಡುವ ಹಂತಕ್ಕೆ ಬಂದಿದೆ ನಮ್ಮ ಸಿನಿಮಾರಂಗ! ಕೆಲವು ನಿರ್ದೇಶಕರಂತೂ ಅಂತಹ ನಿಗೂಢ ಕೊಲೆಗಳಾಗುವುದಕ್ಕೇ ಕಾಯುತ್ತಿರಬಹುದು.

‘ಎಲ್ಲ ಬಿಡಿ, ಈಗಿನ ಕಳ್ಳ ನನ್ಮಕ್ಳು ಹಿಂದಿನ ಕಳ್ಳರಂತೆ ಶ್ರಮಪಟ್ಟು ದುಡಿಯುತ್ತಿಲ್ಲ!’ ಎಂದು ಪೊಲೀಸರೇ ದೂರಲಾರಂಭಿಸಿದ್ದಾರೆ. ನಿಜ, ಹಿಂದೆ ಕಳ್ಳರು ಎಲ್ಲಿಯಾದರೂ ಕನ್ನ ಹಾಕಬೇಕಂದರೆ ಹಾರೆ, ಗುದ್ದಲಿ ಹಿಡಿದುಕೊಂಡು ಹೋಗುತ್ತಿದ್ದರು. ಗೋಡೆ ಕೊರೆದೋ, ಹಂಚು ತೆಗೆದೋ, ಬಾಗಿಲು– ಕಿಟಕಿ ಮುರಿದೋ ಮನೆಯೊಳಗೆ ಪ್ರವೇಶಿಸುತ್ತಿದ್ದರು. ಮೈ ಕೈಗೆ ಬೇರೆ ಕಪ್ಪು ಮಸಿ, ಎಣ್ಣೆ ಹಚ್ಚಬೇಕಾಗಿತ್ತು. ಮುಖ್ಯವಾಗಿ ದಿನಾ ನೈಟ್ ಡ್ಯೂಟಿಯೇ ಮಾಡಬೇಕಾಗಿ ಬರುತ್ತಿತ್ತು. ಈಗ ನೋಡಿ! ಎಲ್ಲಾ ಹೈಟೆಕ್ ! ದೂರದ ನೋಯ್ಡಾದಲ್ಲೇ ಕುಳಿತುಕೊಂಡು ನಿಮ್ಮ ಎಟಿಎಂ ಹಣ ಗುಳುಂ! ಇಪ್ಪತ್ತು ಲಕ್ಷ ರೂಪಾಯಿ ಇನಾಮು ಬಂದಿದೆ ಎಂದು ನಿಮಗೇ ಮೂವತ್ತು ಲಕ್ಷ ರೂಪಾಯಿ ನಾಮ ಹಾಕುವವರಿದ್ದಾರೆ! ನೆಲದಲ್ಲಿ ಹತ್ತು ರೂಪಾಯಿ ಬಿದ್ದಿರುವುದನ್ನು ತೋರಿಸಿ ನಿಮ್ಮ ಕೈಯಲ್ಲಿದ್ದ ಹತ್ತು ಲಕ್ಷ ರೂಪಾಯಿ ಗಂಟನ್ನೇ ಎಗರಿಸುತ್ತಾರೆ! ದಾರಿಯಲ್ಲಿ ಹೋಗುತ್ತಿರುವಾಗಲೇ ಹೆಂಗಸರ ಸರ ಮಾಯವಾಗಿರುತ್ತದೆ!

ಟೊಮೆಟೊ ಅಥವಾ ಈರುಳ್ಳಿ ಬೆಲೆಗಳು ನಮ್ಮನ್ನು ಎಷ್ಟು ಆಟ ಆಡಿಸುತ್ತಿವೆ ಎಂದರೆ ಅವುಗಳ ಬೆಲೆ ಅಗ್ಗವಾಗಿದೆ ಎಂದು ಸುದ್ದಿ ಓದಿದಾಗ ಅರ್ಧಾಂಗಿಗಳ ಮುಖ ಅರಳುವ ಕಾಲ ಹೋಗಿದೆ. ಅದರ ಬದಲು ಅವರು ಕೇಳುವ ಒಂದೇ ಪ್ರಶ್ನೆ- ಎಷ್ಟು ದಿವಸ?

ಬೇಸಿಗೆ ಕಾಲಕ್ಕೆ ಜಡಿಮಳೆ ಬರುತ್ತದೆ. ಮಳೆಗಾಲಕ್ಕೆ ಸೆಕೆ ತಡೆಯಲಾರದೆ ಒದ್ದಾಡುತ್ತೇವೆ. ಅದೆಲ್ಲಾ ಸರಿ, ಬೆಂಗಳೂರಿನ ರಾಜಾಜಿನಗರದವರು ಮುಂಜಾನೆ ದಿನ ಪತ್ರಿಕೆಯಲ್ಲಿ ‘ಬೆಂಗಳೂರಿನಲ್ಲಿ ಮಳೆಯಿಂದ ನೆರೆಯ ಭೀತಿ’ ಎಂಬ ಸುದ್ದಿ ಓದಿ ನಗುವಂತಹ ಪರಿಸ್ಥಿತಿ ಬಂದಿದೆ! ಯಾಕೆಂದರೆ ರಾಜಾಜಿನಗರದಲ್ಲಿ ಹಿಂದಿನ ದಿನ ಒಂದು ಹನಿಯೂ ಬಿದ್ದಿರುವುದಿಲ್ಲ! ಹೌದಲ್ಲ, ಕಾಲ ಎಷ್ಟು ಬದಲಾಗಿದೆಯಲ್ಲ!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.