ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲುಪಾಲಾದವರು, ಸೆರೆಮನೆ ತಪ್ಪಿಸಿಕೊಂಡವರು...

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಹಲವು ವರ್ಷಗಳ ಹಿಂದೆ ನಡೆದಿದ್ದ ಭ್ರಷ್ಟಾಚಾರ ಹಗರಣಗಳ ತೀರ್ಪುಗಳು ಈ ವರ್ಷ ಪ್ರಕಟವಾದವು. ಕೆಲವರು ಜೈಲು ಪಾಲಾದರೆ ಇನ್ನೂ ಕೆಲವರು ದೋಷಮುಕ್ತಗೊಂಡರು.

ಕನಿಮೊಳಿ, ರಾಜಾ ಖುಲಾಸೆ

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ, ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಹಗರಣ ಎಂದು ಕರೆಯಲಾಗಿದ್ದ 2ಜಿ ತರಂಗಾಂತರ ಹಂಚಿಕೆ ಹಗರಣದ ತೀರ್ಪನ್ನು ಸಿಬಿಐನ ವಿಶೇಷ ನ್ಯಾಯಾಲಯ ಡಿಸೆಂಬರ್‌ 21ರಂದು ಪ್ರಕಟಿಸಿತು. ಹಗರಣದ ಪ್ರಮುಖ ಆರೋಪಿ, ಮಾಜಿ ದೂರಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು, ಸಂಸದೆ ಕನಿಮೊಳಿ ಸೇರಿದಂತೆ ಎಲ್ಲ 16 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು.

2ಜಿ ತರಂಗಾಂತರ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರಗಳಿಂದ ಬೊಕ್ಕಸಕ್ಕೆ ₹1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಿನ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ಹೇಳಿದ್ದರು. ಸಿಬಿಐ ಇದರ ತನಿಖೆ ನಡೆಸಿತ್ತು. 2011ರಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿತ್ತು. ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಹೇಳಿದ್ದರು.

ಮೇವು ಹಗರಣ: ಜೈಲು ಪಾಲದ ಲಾಲು

1990ರ ದಶಕದಲ್ಲಿ ಬಿಹಾರದಲ್ಲಿ ನಡೆದಿದ್ದ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರ (ದೇವಗಡ ಖಜಾನೆಯಿಂದ ₹90 ಲಕ್ಷ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣ) ತೀರ್ಪನ್ನು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಡಿಸೆಂಬರ್‌ 23ರಂದು ಪ್ರಕಟಿಸಿತು.

ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಮತ್ತು ಇತರ 15 ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದ ನ್ಯಾಯಾಲಯ, ರಾಜ್ಯದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್‌ ಮಿಶ್ರಾ ಹಾಗೂ ಇತರ ಐವರನ್ನು ಖುಲಾಸೆಗೊಳಿಸಿತು.

ಮಧುಕೋಡಾ ಸೆರೆಮನೆಗೆ

ಜಾರ್ಖಂಡ್‌ನಲ್ಲಿ 2008ರಲ್ಲಿ ನಡೆದಿದ್ದ ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರನ್ನು ಅಪರಾಧಿ ಎಂದು ಘೋಷಿಸಿದ ಸಿಬಿಐನ ವಿಶೇಷ ನ್ಯಾಯಾಲಯ ಅವರಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿತು. ಜೊತೆಗೆ ₹25 ಲಕ್ಷ ದಂಡವನ್ನು ವಿಧಿಸಿತು.

ಕೋಡಾ ಜೊತೆಗೆ ಜಾರ್ಖಂಡ್‌ನ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್‌.ಸಿ.ಗುಪ್ತಾ, ಆಗ ಮುಖ್ಯ ಕಾರ್ಯದರ್ಶಿಯಾಗಿದ್ದ ಅಶೋಕ್‌ ಕುಮಾರ್‌ ಬಸು ಮತ್ತು ವಿನಿ ಐರನ್‌ ಮತ್ತು ಸ್ಟೀಲ್‌ ಉದ್ಯೋಗ್‌ ಲಿಮಿಟೆಡ್‌ನ ವಿಜಯ್‌ ಜೋಷಿ ಅವರಿಗೂ ಮೂರು ವರ್ಷಗಳ ಕಠಿಣ ಸಜೆಯನ್ನು ನ್ಯಾಯಾಲಯ ವಿಧಿಸಿತು.

ಅಂತರಿಕ್ಷ್–ದೇವಾಸ್‌ ಒಪ್ಪಂದ ಹಗರಣ: ಮಾಧವನ್‌ ನಾಯರ್‌ಗೆ ಸಂಕಷ್ಟ

ಅಂತರಿಕ್ಷ್–ದೇವಾಸ್‌ ಬಹುಕೋಟಿ ಒಪ್ಪಂದ ಹಗರಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಜಿ.ಮಾಧವನ್‌ ನಾಯರ್‌ ಅವರನ್ನು ಆರೋಪಿಗಳು ಎಂದು ಸಿಬಿಐ ನ್ಯಾಯಾಲಯ ಪರಿಗಣಿಸಿ, ಅವರಿಗೆ ಸಮನ್‌ ಜಾರಿ ಮಾಡಿತು.

ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿಯ ನ್ಯಾಯಾಲಯದ ಮುಂದೆ ಹಾಜರಾದ ಅವರು ಜಾಮೀನು ಪಡೆಯಲು ಯಶಸ್ವಿಯಾದರು.

ಖಾಸಗಿ ಸಂಸ್ಥೆಗೆ ಅಕ್ರಮವಾಗಿ ಲಾಭ ಮಾಡಿಕೊಡುವ ಉದ್ದೇಶದಿಂದ ನಾಯರ್‌ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ದೇಶದ ಬೊಕ್ಕಸಕ್ಕೆ ₹578 ಕೋಟಿ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ.

ಆರುಷಿ ಹತ್ಯೆ: ಖುಲಾಸೆಗೊಂಡ ತಲ್ವಾರ್‌ ದಂಪತಿ

2008ರ ಮೇನಲ್ಲಿ ನೊಯಿಡಾದಲ್ಲಿ ನಡೆದಿದ್ದ, ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಆರುಷಿ–ಹೇಮರಾಜ್‌ ಜೋಡಿ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ ಅವರನ್ನು ಅಲಹಾಬಾದ್‌ ಹೈಕೋರ್ಟ್‌ ಆರೋಪದಿಂದ ಖುಲಾಸೆಗೊಳಿಸಿತು.

ವೃತ್ತಿಯಲ್ಲಿ ದಂತವೈದ್ಯರಾಗಿರುವ ತಲ್ವಾರ್‌ ದಂಪತಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

‘ಕೇವಲ ಅನುಮಾನದ ಆಧಾರದಲ್ಲಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಲು ಸಾಧ್ಯವಿಲ್ಲ. ಆರುಷಿ ಪೋಷಕರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಮತ್ತು ಲಭ್ಯವಿರುವ ಸಾಂದರ್ಭಿಕ ಸಾಕ್ಷ್ಯಗಳು ಆರೋಪವನ್ನು ಸಾಬೀತು ಮಾಡುವಲ್ಲಿ ವಿಫಲವಾಗಿವೆ’ ಎಂದು ಹೇಳಿದ ಹೈಕೋರ್ಟ್‌, ಸಿಬಿಐ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿತು. ಆರುಷಿ–ಹೇಮರಾಜ್‌ ಅವರನ್ನು ಕೊಂದವರು ಯಾರು ಎಂಬುದು ನಿಗೂಢವಾಗಿಯೇ ಉಳಿಯಿತು.

ಆದರ್ಶ ಹಗರಣ: ನಿಟ್ಟುಸಿರು ಬಿಟ್ಟ ಚವಾಣ್‌

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಮುಂಬೈನ ಬಹುಕೋಟಿ ಆದರ್ಶ ವಸತಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ನಿಟ್ಟುಸಿರುವ ಬಿಡುವಂತಹ ತೀರ್ಪನ್ನು ಬಾಂಬೆ ಹೈಕೋರ್ಟ್‌ ನೀಡಿತು. ಚವಾಣ್‌ ವಿರುದ್ಧ ವಿಚಾರಣೆ ನಡೆಸಲು ರಾಜ್ಯಪಾಲ ಸಿ.ಎಚ್‌. ವಿದ್ಯಾಸಾಗರ್‌ ರಾವ್‌ ಅನುಮತಿ ನೀಡಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ವಜಾಗೊಳಿಸಿತು.

ಕಾರ್ಗಿಲ್‌ ಯೋಧರಿಗಾಗಿ ಮೀಸಲಾಗಿದ್ದ ಆದರ್ಶ ಹೌಸಿಂಗ್‌ ಸೊಸೈಟಿಯಲ್ಲಿ ಚವಾಣ್‌ ತಮ್ಮ ಅತ್ತೆ ಭಾಗವತಿ ದೇವಿ ಶರ್ಮಾ (ಹೆಂಡತಿಯ ತಾಯಿ), ಹೆಂಡತಿಯ ಸಹೋದರಿ ಸೀಮಾ ಶರ್ಮಾ, ಮಾವನ ಸಹೋದರ ಮದನಲಾಲ್‌ ಶರ್ಮಾ ಅವರಿಗೆ ಫ್ಲ್ಯಾಟ್‌ ನೀಡಿದ್ದ ಆರೋಪ ಎದುರಿಸುತ್ತಿದ್ದರು.

ವಿಜಯ್‌ ಮಲ್ಯ ಬಂಧನ, ಬಿಡುಗಡೆ, ವಿಚಾರಣೆ

ಭಾರತದ ಬ್ಯಾಂಕುಗಳಿಂದ ₹9,000 ಕೋಟಿ ಸಾಲ ಪಡೆದು ವಂಚಿಸಿ ದೇಶದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ಆಶ್ರಯಪಡೆದಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಸ್ಕಾಟ್ಲೆಂಡ್‌ಯಾರ್ಡ್‌ ಪೊಲೀಸರು ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಬಂಧಿಸಿದರು. ಅದೇ ದಿನ ಅಲ್ಲಿನ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಈ ಬಂಧನ ನಡೆದಿತ್ತು.  ಹಸ್ತಾಂತರ ಪ್ರಕರಣದ ವಿಚಾರಣೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ. ತಮ್ಮ ವಿರುದ್ಧ ಭಾರತ ಮಾಡುತ್ತಿರುವ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಮಲ್ಯ ವಾದಿಸಿ
ದ್ದಾರೆ. ಆದರೆ, ಪ್ರಬಲ ಪುರಾವೆಗಳಿವೆ ಎಂದು ಭಾರತೀಯ ತನಿಖಾ ಸಂಸ್ಥೆಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT