ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಯೋಗ ಸ್ಥಾಪನೆಗೆ ವಿರೋಧ: ಇಂದು ಖಾಸಗಿ ಆಸ್ಪತ್ರೆ ಒಪಿಡಿ ಬಂದ್‌

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಮುಷ್ಕರ ಬೆಂಬಲಿಸಿ ರಾಜ್ಯದಲ್ಲಿರುವ ಸುಮಾರು 15 ಸಾವಿರ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್ ಮಾಡಲು ಐಎಂಎ ಕರ್ನಾಟಕ ಶಾಖೆ ನಿರ್ಧರಿಸಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಕಾರ್ಯನಿರ್ವಹಿಸುವುದಿಲ್ಲ. ಆದರೆ, ತುರ್ತು ಚಿಕಿತ್ಸಾ ಸೌಲಭ್ಯ, ಔಷಧಿ ಅಂಗಡಿಗಳು ಮತ್ತು ಒಳರೋಗಿ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಒಂದು ದಿನದ ಮುಷ್ಕರದಲ್ಲಿ ದೇಶದ ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರು ಪಾಲ್ಗೊಳ್ಳಲಿದ್ದು, ಆರೋಗ್ಯ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ. ರವಿ ವಾಂಖೇಡ್ಕರ್‌ ಹೇಳಿದ್ದಾರೆ.‌

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವೈದ್ಯರು ಜಿಲ್ಲಾಧಿಕಾರಿ ಕಚೇರಿಗಳಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದು ಐಎಂಎ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ಆಸ್ಪತ್ರೆಗಳು ಬಂದ್ ಆಗಲಿವೆ. ಪ್ರತಿಭಟನೆ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಐಎಂಎ ಬೆಂಗಳೂರು ಶಾಖೆ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ್‌ ಸ್ಪಷ್ಟಪಡಿಸಿದ್ದಾರೆ.

ಮಸೂದೆಗೆ ವಿರೋಧ: ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆಯನ್ನು ಐಎಂಎ ತೀವ್ರವಾಗಿ ವಿರೋಧಿಸಿದೆ.

ಕಳೆದ ಶುಕ್ರವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದ್ದು, ಮುಂದಿನ ನಾಲ್ಕು ದಿನ ಸಂಸತ್‌ನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಈ ಮಸೂದೆಯನ್ನು ಮತ್ತೊಮ್ಮೆ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂಬ ನಿಲುವನ್ನು ವಿರೋಧ ಪಕ್ಷಗಳ ಕೆಲವು ಸದಸ್ಯರು ಹೊಂದಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೂಚನೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ನಟರಾಜ್ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳು ಹೊರ ರೋಗಿ ವಿಭಾಗ ಬಂದ್ ಮಾಡುತ್ತಿರುವ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಬಂದ್ ಆದರೂ ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದರು.

ಮಸೂದೆಗೆ ವೈದ್ಯರ ವಿರೋಧ ಯಾಕೆ?

* ಭಾರತೀಯ ವೈದ್ಯಕೀಯ ಮಂಡಳಿ ಮುಚ್ಚಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸಲು ಹೊರಟಿರುವುದಕ್ಕೆ ಆಕ್ಷೇಪ

* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 80ರಷ್ಟು ಸೀಟುಗಳ ಶುಲ್ಕ ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ

* ವೈದ್ಯಕೀಯ ಆಯೋಗ ಸ್ಥಾಪನೆಯಾದರೆ ಶೇ 60ರಷ್ಟು ಸೀಟುಗಳ ಶುಲ್ಕ ನಿಗದಿ ಅಧಿಕಾರ ಕಾಲೇಜುಗಳಿಗೆ ಸಿಗಲಿದೆ.

* ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕೆಂಬ ಪೋಷಕರ ಆಸೆಗೆ ಪೆಟ್ಟು ಬೀಳಲಿದೆ

* ಕೆಲವೇ ದಿನಗಳ ತರಬೇತಿ ಪಡೆದ ಇತರೆ ಪದ್ಧತಿಯ ವೈದ್ಯರು ಕೂಡ ಅಧಿಕೃತವಾಗಿ ಅಲೋಪತಿ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳಲು ಅವಕಾಶ ಆಗಲಿದೆ.

* ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT