ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಆದಾಯ ಮೂಲ ಹೆಚ್ಚಿಸಿ

Last Updated 3 ಜನವರಿ 2018, 8:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರಸಭೆಗೆ ಆದಾಯ ತರುವ ಮುಖ್ಯ ಮೂಲಗಳಾದ ಉದ್ಯಮ, ಪರವಾನಗಿ, ಜಾಹೀರಾತು ಶುಲ್ಕಗಳ ಕಡೆಗೆ ಆದ್ಯತೆ ನೀಡಿ, ನಗರದಲ್ಲಿ ತುರ್ತಾಗಿ ಆಗಬೇಕಿರುವ ವಿದ್ಯುತ್‌ ಚಿತಾಗಾರ, ಮಳೆ ನೀರು ಸಂಗ್ರಹಣೆ, ಒಳಚರಂಡಿ ನೀರಿನ ಶುದ್ಧೀಕರಣ ಮಾಡಬೇಕು. ನಗರದಲ್ಲಿನ ರಸ್ತೆ ಅಗಲ ಹೆಚ್ಚಿಸಬೇಕು. ಕಸಾಯಿಖಾನೆ ಸ್ಥಳಾಂತರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂಬ ಒತ್ತಾಯ ಮಂಗಳವಾರ ನಗರಸಭೆ ವತಿಯಿಂದ ನಡೆದ ಬಜೆಟ್‌ ಪೂರ್ವ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಜನರಿಂದ ಕೇಳಿಬಂದ ಸಲಹೆ ಮತ್ತು ಒತ್ತಾಯಗಳು.

ವ್ಯಾಪರಸ್ಥ ಕೇಶವ ಮಾತನಾಡಿ, ಅಧಿಕಾರಿಗಳು ಹಾಗೂ ಅಧ್ಯಕ್ಷರು ಪ್ರತಿ ದಿನ ಒಂದೊಂದು ವಾರ್ಡ್‌ಗಳಲ್ಲಿ ಬೆಳಿಗ್ಗೆ ಸಂಚರಿಸಬೇಕು. ಸ್ವಚ್ಛತೆ ಹಾಗೂ ಯಾವ ಕಾಮಗಾರಿಗಳು ನಡೆಯುತ್ತಿವೆ ಎನ್ನುವುದು ತಿಳಿಯುತ್ತದೆ. ರಸ್ತೆ ಬದಿಗಳಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್‌ ಚರಂಡಿಗಳಿಗೆ ಕೆಲವು ಕಡೆಗಳಲ್ಲಿ ಮಾತ್ರ ಮೇಲ್ಬಾಗದಲ್ಲಿ ಸ್ಲ್ಯಾಬ್‌ಗಳನ್ನು ಆಳವಡಿಸಲಾಗಿದೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದರು.

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯ ಎಸ್‌.ನಟರಾಜ್‌ ಮಾತನಾಡಿ, ನಗರಸಭೆ ವತಿಯಿಂದ ಹಳೇ ಬಸ್‌ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಮಾರುಕಟ್ಟೆಯಲ್ಲಿನ ಬೆಲೆಗಿಂತಲೂ ಹೆಚ್ಚಾಗಿ ನಿಗದಿಯಾಗಿದೆ.

ಇಂತಹವರು ನಗರಸಭೆಗೆ ಬಾಡಿಗೆ ಪಾವತಿ ಮಾಡುವುದು ಅನುಮಾನ. ನಗರದ ಪ್ರಮುಖ ವೃತ್ತಗಳು, ರಸ್ತೆಗಳ ಬದಿಯಲ್ಲಿ ಅಕ್ರಮವಗಿ ಫ್ಲೆಕ್ಸ್‌, ಬ್ಯಾನರ್‌ಗಳು, ಜಾಹೀರಾತು ಫಲಕಗಳನ್ನು ಹಾಕಲಾಗುತ್ತಿದೆ. ಆದರೆ ಶುಲ್ಕ ಮಾತ್ರ ಪಾವತಿ ಮಾಡುತ್ತಿಲ್ಲ. ಶುಲ್ಕ ವಸೂಲಿ ಮಾಡಬೇಕು. ಮಳೆ ನೀರು ಸಂಗ್ರಹಣೆಗೆ ಪ್ರೋತ್ಸಾಹ ನೀಡಿ, ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಿ. ವಾರ್ಡ್‌ವಾರು ನಾಗರಿಕರ ಸಮಿತಿಗಳನ್ನು ರಚಿಸಿ. ಸಣ್ಣ ರಸ್ತೆಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಕೋರ್ಟ್‌ ರಸ್ತೆ ಒತ್ತುವರಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದರು.

ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ ಮಾತನಾಡಿ, ಹಾಲಿನ ಡೈರಿ ವೃತ್ತದಿಂದ ತಾಲ್ಲೂಕು ಕಚೇರಿ ವೃತ್ತದವರೆಗೂ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಭಾರಿ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಬ್ಯಾರಿಕೇಡ್‌ಗಳು, ರಸ್ತೆ ಉಬ್ಬುಗಳನ್ನು ಹಾಕಬೇಕು. ಸಿಸಿ ಟಿವಿ ಕ್ಯಾಮೆರಾಗಳ ಆಳವಡಿಕೆ, ಪಾರ್ಕ್‌ಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಹಾದೇವ್‌ ಮಾತನಾಡಿ, ನಗರಸಭೆ ವತಿಯಿಂದ ಬಜೆಟ್‌ ಕುರಿತ ಸಮಾಲೋಚನ ಸಭೆಯನ್ನು ನವೆಂಬರ್‌ನಲ್ಲೇ ನಡೆಸಿ ಸಲಹೆ ಸೂಚನೆಗಳನ್ನು ಬಜೆಟ್‌ನಲ್ಲಿ ಆಳವಡಿಸಿಕೊಳ್ಳಬೇಕು. ಪ್ರತಿ ಬಾರಿ ತರಾತುರಿಯಲ್ಲಿ ಸಭೆ ಕರೆಯಲಾಗುತ್ತಿದೆ. ನಿಯಮದ ಪ್ರಕಾರ ಕನಿಷ್ಠ ಎರಡು ಬಾರಿ ಸಮಾಲೋಚನ ಸಭೆ ನಡೆಸಬೇಕು ಎಂದರು.

ಯುವ ಸಂಚಲನದ ಸಂಚಾಲಕ ಚಿದಾನಂದ್‌ ಮಾತನಾಡಿ, ನಗರಸಭೆ ವ್ಯಾಪ್ತಿಲ್ಲಿನ ನಾಗರಕೆರೆ ಅಂಗಳದಲ್ಲಿ ಒಳಚರಂಡಿ ಮ್ಯಾನ್‌ ಹೋಲ್‌ ನಿರ್ಮಿಸಲಾಗಿದೆ. ಇದರಿಂದ ಕೆರೆ ಅಂಗಳಕ್ಕೆ ಚರಂಡಿ ನೀರು ಹರಿಯುತ್ತಿದೆ. ಚಿಕ್ಕತುಮಕೂರು ಕೆರೆ ಅಂಗಳದಲ್ಲಿ ನಿರ್ಮಿಸಿದ ಒಳಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ನೈಸರ್ಗಿಕವಾಗಿ ನೀರು ಶುದ್ದೀಕರಣ ಸಮರ್ಪಕವಾಗಿ ಕೆಲಸವಾಗುತ್ತಿಲ್ಲ. ರೈತರಿಗೆ, ನಿವಾಸಿಗಳಿಗೆ ಸಮಸ್ಯೆಯಾಗಿದೆ. ನೀರು ಶುದ್ಧೀಕರಣಕ್ಕೆ ಯಾಂತ್ರಿಕ ವಿಧಾನ ಆಳವಡಿಸಿ. ಇದಕ್ಕೆ ಅಗತ್ಯ ಹಣಕಾಸು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ರಾಜೇಂದ್ರಕುಮಾರ್‌ ಮಾತನಾಡಿ, ವಾರ್ಷಿಕ ಕನಿಷ್ಠ ನಾಲ್ಕು ಕುಂದು ಕೊರತೆ ಸಭೆಗಳನ್ನು ನಡೆಸುವ ಮೂಲಕ ನಾಗರಿಕರ ಸಮಸ್ಯೆಗಳನ್ನು ಆಲಿಸಬೇಕು. ಕೇವಲ ವರ್ಷಕ್ಕೆ ಒಂದು ಬಾರಿ ಬಜೆಟ್‌ ಸಭೆ ನಡೆಸಿದರೇ ಸಾಲದು. ನಗರದಲ್ಲಿ ಬೀಡಾಡಿ ರಾಸುಗಳ, ಬೀದಿ ನಾಯಿಗಳ ಹಾವಳಿ ಮೀತಿ ಮೀರಿದೆ.

ಇವುಗಳ ನಿಯಂತ್ರಣಕ್ಕೆ ಹಣ ಮೀಸಲಿಟ್ಟು ಕೆಲಸ ಮಾಡಿ. ನಗರದಲ್ಲಿ ರಾಜಕಾಲುವೆಗಳ ಒತ್ತುವರಿ ತೆರವಿಗೆ ಕಾಲಮಿತಿಯಲ್ಲಿ ಕೆಲಸ ನಿರ್ವಹಿಸಬೇಕು. ಉದ್ದಿಮೆ ತೆರಿಗೆ ಕಡ್ಡಾಯಗೊಳಿಸಬೇಕು. ವಿದ್ಯುತ್‌ ಮಗ್ಗಗಳಿಗೂ ಉದ್ದಿಮೆ ಪರವಾನಗಿ ಶುಲ್ಕ ವಿಧಿಸಿ. ಸ್ವತ್ತುಗಳನ್ನು ಉಳಿಸಿಕೊಳ್ಳಲು ಈ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಆದಾಯ ಬರಲಿದೆ ಎಂದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿನಟರಾಜ್‌, ಪೌರಾಯುಕ್ತ ಶೇಖ್‌ಫಿರೋಜ್‌ ಹಾಗೂ ನಗರಸಭೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ಸಾರ್ವಜನಿಕರ ಸಮಲೋಚನ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ನಿಯಮ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುವವರಿಗೆ ಎರಡು ಪಟ್ಟು ಕಂದಾಯ ವಿಧಿಸಲಾಗುತ್ತಿದೆ. ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಿ. ಕಸ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಮುಖ್ಯ. ಮಿನಿ ಮೂತ್ರಾಲಯಗಳನ್ನು ನಿರ್ಮಿಸಲು ಹಣ ಮೀಸಲಿಡಲಾಗುವುದು. ಕೋಳಿ ತ್ಯಾಜ್ಯ ಎಲ್ಲೆಂದರಲ್ಲಿ ಹಾಕುತ್ತಿರುವ ಬಗ್ಗೆ ಈಗಾಗಲೇ ಕೋಳಿ ಅಂಗಡಿ ಮಾಲೀಕರ ಸಭೆ ಕರೆದು ಸೂಚನೆಗಳನ್ನು ನೀಡಲಾಗಿದೆ. ರಾತ್ರಿ ಪಾಳಿಯಲ್ಲೂ ಪೌರ ಕಾರ್ಮಿಕರು ಬೀಟ್‌ ನಡೆಸುವ ಮೂಲಕ ನಾಗರಕೆರೆ ಸೇರಿದಂತೆ ಯಾವುದೇ ರಸ್ತೆಗಳಲ್ಲಿ ಕೋಳಿ ತ್ಯಾಜ ಹಾಕದಂತೆ ನಿಗಾವಹಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ನಗರದಲ್ಲಿ ಅಧಿಕೃತವಾಗಿ 18,000 ಖಾತೆಗಳಿವೆ. ಆದರೆ ಇದುವರೆಗೆ 7,000 ಖಾತೆದಾರರು ಮಾತ್ರ ಒಳಚರಂಡಿ ಸಂಪರ್ಕಗಳನ್ನು ಪಡೆದಿದ್ದಾರೆ. ಇದರಲ್ಲಿ 2,000 ಜನ ಅಕ್ರಮವಾಗಿ ಸಂಪರ್ಕಗಳನ್ನು ಹೊಂದಿದ್ದಾರೆ. ಇವುಗಳ ತೆರವಿಗೂ ಕ್ರಮ ವಹಿಸಲಾಗುತ್ತಿದೆ. ಕೊಳಚೆ ನೀರನ್ನು ಯಂತ್ರದ ಮೂಲಕ ಶುದ್ಧೀಕರಿಸಲು ಚಿಂತನೆ ನಡೆಸಲಾಗಿದೆ. ನಗರದ ಹೊರ ಭಾಗದಲ್ಲಿ ಖಸಾಯಿ ಖಾನೆ ತೆರೆಯಲು ಒಂದು ಎಕರೆ ಭೂಮಿ ಗುರುತಿಸಲಾಗಿದೆ. ನಗರದಲ್ಲಿನ ಎಲ್ಲ ಕಸಾಯಿ ಖಾನೆಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT