ಬುಧವಾರ, ಜೂಲೈ 8, 2020
23 °C

ಪರಿಣಾಮ ಬೀರದ ‘ಒಪಿಡಿ ಬಂದ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಣಾಮ ಬೀರದ ‘ಒಪಿಡಿ ಬಂದ್‌’

ಬಳ್ಳಾರಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರೆಗೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ವಿಭಾಗಗಳು ಮಂಗಳವಾರ ಬಂದ್‌ ಆಗಿದ್ದರೂ ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ.

ಚಿಕಿತ್ಸೆ ದೊರಕಲಿಲ್ಲ ಎಂಬ ಕಾರಣಕ್ಕೆ ವಿಮ್ಸ್‌ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚು ರೋಗಿಗಳೂ ಕಂಡು ಬರಲಿಲ್ಲ. ಈ ಎರಡೂ ಆಸ್ಪತ್ರೆಗಳು ಎಂದಿನಂತೆಯೇ ಕಂಡುಬಂದವು.

ಗಡಿಗಿ ಚೆನ್ನಪ್ಪ ವೃತ್ತದ ಸುತ್ತ ಹೆಚ್ಚು ಆಸ್ಪತ್ರೆಗಳು ಇದ್ದು ಅವೆಲ್ಲವೂ ಬಂದ್‌ ಆಗಿತ್ತು. ನಗರದ ಗಾಂಧೀನಗರ, ಹೊಸಪೇಟೆ ರಸ್ತೆ. ಸತ್ಯನಾರಾಯಣಪೇಟೆ ಪ್ರದೇಶದಲ್ಲಿ ಖಾಸಗಿ ನರ್ಸಿಂಗ್‌ ಹೋಂಗಳಲ್ಲೂ ಘಟಕಗಳು ಮುಚ್ಚಿದ್ದವು. ಎಲ್ಲೆಡೆ ‘ಹೊರರೋಗಿ ಚಿಕಿತ್ಸೆ ಸೇವೆ ಇಂದು ಇಲ್ಲ’ ಎಂಬ ಫಲಕವನ್ನು ಪ್ರದರ್ಶಿಸಲಾಗಿತ್ತು.

ಜ್ವರ ಸಲುವಾಗಿ ಚಿಕಿತ್ಸೆ ಪಡೆಯಲು ನಗರದ ಬಿಕೆಎಸ್‌ ಆಸ್ಪತ್ರೆಗೆ ಬಂದಿದ್ದ ಮೋಕಾ ಗ್ರಾಮದ ಮಹಿಳೆಯೊಬ್ಬರು ಚಿಕಿತ್ಸೆ ದೊರಕದೇ ಆವರಣದಲ್ಲೇ ಕೊಂಚ ಕಾಲ ವಿಶ್ರಾಂತಿ ಪಡೆದು ತೆರಳಿದರು. ವೈದ್ಯರ ಮುಷ್ಕರ ಇರುವ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿದರು.

ಔಷಧ ಅಂಗಡಿ: ಖಾಸಗಿ ಆಸ್ಪತ್ರೆಗಳ ಮುಷ್ಕರದ ಲಾಭವನ್ನು ಔಷಧದ ಅಂಗಡಿಗಳ ಮಂದಿ ಪಡೆದುಕೊಂಡಿದ್ದು ಗಮನ ಸೆಳೆಯಿತು. ಸಣ್ಣ–ಪುಟ್ಟ ಕಾಯಿಲೆಗಳುಳ್ಳವರು ಅಂಗಡಿಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿ ಅವರಿಂದಲೇ ಔಷಧಿಗಳನ್ನು ಪಡೆದಿದ್ದು ಕಂಡುಬಂತು.

ಕನಕದುರ್ಗಮ್ಮ ಗುಡಿ ವೃತ್ತದ ಔಷಧ ಅಂಗಡಿಯೊಂದರ ಸಿಬ್ಬಂದಿ ಪ್ರತಿಕ್ರಿಯಿಸಿ, ‘ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಿದೆ. ಇಂಥ ಸಂದರ್ಭ ನಮಗೆ ತೋಚಿದ ಔಷಧಿ ಕೊಡುವುದು ಅನಿವಾರ್ಯ’ ಎಂದರು.

ಒಂದೇ ದಿನ ಬಿಡಿ: ‘ಮುಷ್ಕರ ಇರೋದು ಒಂದೇ ದಿನವಲ್ಲವೇ. ಅದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಎಂದಿನಂತೆ ನಾಳೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ’ ಎಂದು ಹಿರಿಯ ನಾಗರಿಕರಾದ ಬಂಡಿಹಟ್ಟಿ ರಮೇಶಪ್ಪ ಹೇಳಿದರು.

* * 

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ ಆಗಿದ್ದರಿಂದ ರೋಗಿಗಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ಎಂದಿನಂತೆ ಎಲ್ಲ ವಿಭಾಗಗಳ ವೈದ್ಯರು ಕಾರ್ಯನಿರ್ವಹಿಸಿದರು.

ಡಾ.ಮರಿರಾಜ ವಿಮ್ಸ್‌ ವೈದ್ಯಕೀಯ ಅಧೀಕ್ಷಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.