ಬುಧವಾರ, ಜೂಲೈ 8, 2020
21 °C

ಒಪಿಡಿ ಬಂದ್: ರೋಗಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಧಾರವಾಡದಲ್ಲಿಯೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಆಸ್ಪತ್ರೆ ಹಾಗೂ ಎಸ್‌ಡಿಎಂ ಆಸ್ಪತ್ರೆಗಳನ್ನು ಹೊರತುಪಡಿಸಿ ಬಹುತೇಕ ಆಸ್ಪತ್ರೆಗಳು ಮಂಗಳವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಹೊರ ರೋಗಿ ವಿಭಾಗ (ಒಪಿಡಿ)ಗಳನ್ನು ಬಂದ್‌ ಮಾಡಿದ್ದವು.

ಹೀಗಾಗಿ ಈ ಎರಡು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕಂಡುಬಂದಿತು. ಆದರೂ ನಿರ್ದಿಷ್ಟ ಆಸ್ಪತ್ರೆ ಹಾಗೂ ವೈದ್ಯರನ್ನು ಅಪೇಕ್ಷಿಸಿ ಬಂದ ರೋಗಿಗಳಲ್ಲಿ ಕೆಲವರು ಮನೆಗೆ ಮರಳಿದರೆ, ಇನ್ನೂ ಕೆಲವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಈ ಹಿಂದೆ ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ದಿನಗಳ ಕಾಲ ನಡೆಸಿದ ಧರಣಿಯಿಂದ ಜನರು ಸಾಕಷ್ಟು ಪರದಾಡಿದ್ದರು. ನಗರದ ವಿಠ್ಠಲ ಆಸ್ಪತ್ರೆ, ಜರ್ಮನ್ ಆಸ್ಪತ್ರೆ, ಶ್ರೀಯಾ ಆಸ್ಪತ್ರೆ, ಡಾ. ರಾಮನಗೌಡರ ಆಸ್ಪತ್ರೆ ಸೇರಿದಂತೆ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಕೇವಲ ಒಳರೋಗಿಗಳಾಗಿ ದಾಖಲಾದವರಿಗೆ ಮಾತ್ರ ಚಿಕಿತ್ಸೆ ನೀಡಿದರು. ಸಂಜೆ 6ರ ನಂತರ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್‌.ಎಂ.ದೊಡ್ಡಮನಿ, ‘ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಕುರಿತು ವರದಿಯಾಗಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳಲ್ಲಿ ಶೇ 10ರಷ್ಟು ಹೆಚ್ಚಿನ ಸಂಖ್ಯೆ ಕಂಡುಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ 6ರವರೆಗೆ 741 ಜನ ಚಿಕಿತ್ಸೆ ಪಡೆದಿದ್ದಾರೆ. ಕಲಘಟಗಿಯಲ್ಲಿ 360, ಕುಂದಗೋಳದಲ್ಲಿ 410 ಜನ ಚಿಕಿತ್ಸೆ ಪಡೆದಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.