ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸೌಲಭ್ಯಕ್ಕೆ ಶ್ರಮಿಸಿದ ಗ್ರಾಮಸ್ಥರು

Last Updated 3 ಜನವರಿ 2018, 10:02 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಗೋಳಾ (ಬಿ) ಸರ್ಕಾರಿ ಪ್ರೌಢಶಾಲೆ ನವೀಕರಣಗೊಂಡಿದೆ. ಅದಕ್ಕೆ ಮುಖ್ಯ ಕಾರಣ ಗ್ರಾಮಸ್ಥರು. ತನು, ಮನ, ಧನದ ಜೊತೆಗೆ ಅಭಿಮಾನದಿಂದ ಗ್ರಾಮಸ್ಥರು ಶಾಲೆಗೆ ಹೊಸ ಸ್ವರೂಪ ನೀಡಿದ್ದಾರೆ. ಸಕಲ ಸೌಲಭ್ಯವುಳ್ಳ ಶಾಲೆಯಲ್ಲಿ ಓದುವಂತೆ ಮಕ್ಕಳನ್ನು ಪ್ರೇರೇಪಿಸಿದ್ದಾರೆ.

ತಾಲ್ಲೂಕು ಕೇಂದ್ರದಿಂದ 24 ಕಿ.ಮೀ ದೂರವಿರುವ ಗೋಳಾ (ಬಿ) ಗ್ರಾಮದಲ್ಲಿ ಕೆಲ ಸೌಲಭ್ಯಗಳ ಕೊರತೆಯಿದೆ. ಆದರೆ ಅವುಗಳ ಪಟ್ಟಿಯಲ್ಲಿ ಶಾಲೆಯನ್ನು ಸೇರಿಸಲು ಗ್ರಾಮಸ್ಥರು ಇಷ್ಟಪಡಲಿಲ್ಲ. ಅದಕ್ಕೆಂದೇ ಅದರ ಅಭಿವೃದ್ಧಿ ವಿಷಯದಲ್ಲಿ ಅವರು ತಡ ಮಾಡಲಿಲ್ಲ. ಶಾಲೆಯಲ್ಲಿ ಒಟ್ಟು 112 ವಿದ್ಯಾರ್ಥಿಗಳಿದ್ದು, ಅವರಿಗೆ ಸೌಲಭ್ಯ ಕೊರತೆ ತಲೆದೋರಲಿಯೆಂದು ಒಗ್ಗಟ್ಟಿನಿಂದ ಮುನ್ನಡೆದರು.

ಈ ಬೆಳವಣಿಗೆ ಹಿಂದೆ ಮುಖ್ಯ ಶಿಕ್ಷಕ ರವಿ ಕುಲಕರ್ಣಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಲೆಯಲ್ಲಿನ ಸಮಸ್ಯೆ ಕಂಡು ಬೇಸರಗೊಂಡ ಅವರು ಒಂದು ದಿನ ವಿದ್ಯಾರ್ಥಿಗಳ ಪೋಷಕರ ಸಭೆ ಕರೆದರು. ಸಮಸ್ಯೆಗಳನ್ನು ಬಿಚ್ಚಿಟ್ಟ ಅವರು ಏನೂ ಬೇಕು, ಬೇಡವೆಂದು ವಿವರಿಸಿದರು. ಹೇಗೆ ಪರಿಹರಿಸಿಕೊಳ್ಳಬಹುದೆಂದು ಉಪಾಯವೂ ತಿಳಿಸಿದರು.

‘ಸುಮಾರು 25 ವರ್ಷಗಳಷ್ಟು ಹಳೆಯ ಪ್ರೌಢಶಾಲೆಯು ಏಳು ಕೋಣೆ ಮತ್ತು ಒಂದು ಸಭಾಂಗಣ ಹೊಂದಿದೆ. ಬಾಗಿಲು, ಕಿಟಕಿಗಳು ಮುರಿದಿವೆ, ನೆಲಹಾಸಿಗೆಯ ಪರ್ಸಿ ಒಡೆದಿದೆ, ಗೋಡೆಯ ಬಣ್ಣ ಮಾಸಿದೆ, ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ. ಇವೆಲ್ಲದರ ಮಧ್ಯೆ ಮಕ್ಕಳು ಹೇಗೆ ಉತ್ತಮ ರೀತಿಯಲ್ಲಿ ಓದಲು ಸಾಧ್ಯ’ ಎಂದು ರವಿ ಕುಲಕರ್ಣಿ ಅವರು ಪೋಷಕರಿಗೆ ವಾಸ್ತವಾಂಶ ತಿಳಿಸಿದರು. ಸೌಲಭ್ಯದ ಬಗ್ಗೆ ಮನದಟ್ಟು ಮಾಡಿಸಿದರು.

ನಮ್ಮೂರಿನ ಶಾಲೆಯಲ್ಲಿ ಯಾವುದೇ ರೀತಿಯ ಸೌಕರ್ಯ ಇರಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು’ ಎಂದು ಗ್ರಾಮಸ್ಥರು ಪಣತೊಟ್ಟರು. ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡರು. ದೇಣಿಗೆ ಸಂಗ್ರಹಕ್ಕೆ ಮುಂದಾದರು. ಶಾಲೆಗಾಗಿ ಎಲ್ಲರೂ ಒಂದಾದರು.

ಮುಖಂಡರಾದ ಜಗನ್ನಾಥ ವಾರದ, ಅಶೋಕ ಚಿಂಚೋಳಿ, ಮಲ್ಲಿಕಾರ್ಜುನ ಚಿಂಚೋಳಿ, ಶರಣು ಕುಮಸಿ, ಡಾ.ಲಕ್ಷ್ಮಣ ಪೂಜಾರಿ, ಬಸವರಾಜ ಪೂಜಾರಿ, ರವಿ ಪಾಟೀಲ, ಶಿವಾ ರಾಠೋಡ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸೈಫಾನ್, ಪ್ರವೀಣ ಶಿಕ್ಷಕರೊಂದಿಗೆ ಮನೆಮನೆಗೆ ಹೋದರು.

ಅದಕ್ಕಾಗಿ ಸಮಯವನ್ನು ಮೀಸಲಿಟ್ಟರು. ಮುಖ್ಯಶಿಕ್ಷಕ ರವಿ ಕುಲಕರ್ಣಿ ಹಾಗೂ ಶಿಕ್ಷಕರಾದ ಶಿವಲಿಂಗಪ್ಪ ಕೊಡ್ಲಿ, ಶರಣು ಬಿರಾದಾರ, ದೇವೀಂದ್ರ ಬಿರಾದಾರ ಅವರು ಪ್ರತಿದಿನ ಬೆಳಿಗ್ಗೆ 7ಕ್ಕೆ ಗ್ರಾಮದಲ್ಲಿ ಸಂಚರಿಸಿ ದೇಣಿಗೆ ಸ್ವೀಕರಿಸಿ, ಮತ್ತೆ 10ಕ್ಕೆ ಶಾಲಾ ಕರ್ತವ್ಯಕ್ಕೆ ಹಾಜರಾದರು.

ಸತತ ಒಂದೂವರೆ ತಿಂಗಳವರೆಗೆ ಈ ಕಾರ್ಯ ನಡೆದಿದ್ದರಿಂದ ₹2 ಲಕ್ಷಕ್ಕೂ ಹೆಚ್ಚು ಮೊತ್ತ ಸಂಗ್ರಹವಾಯಿತು. ಇದರಿಂದ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇರಲಿಲ್ಲ. ಕೆಲವರು ಫ್ಯಾನ್‌, ಸಿಮೆಂಟ್‌ ಹಾಗೂ ಅಗತ್ಯ ವಸ್ತುಗಳನ್ನು ನೀಡಿದರು. ಈ ಎಲ್ಲಾ ಪ್ರಕ್ರಿಯೆ ಅಂತಿಮ ಹಂತಕ್ಕೆ ಬರುವ ವೇಳೆಗೆ ಶಾಲೆಯ ಚಿತ್ರಣವೇ ಬದಲಾಯಿತು. ಇಡೀ ಆವರಣ ಅಂದವಾಯಿತು. ಗಿಡಗಳನ್ನು ನೆಡಲಾಯಿತು.

ಪ್ರತಿ ಕೋಣೆಗೆ ಹೊಸ ಕಿಟಕಿ, ಬಾಗಿಲು, ನೆಲಹಾಸಿಗೆಯ ಪರ್ಸಿಗಳು, ಬೋಧನಾ ವೇದಿಕೆ, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಕೋಣೆಗೆ ಎರಡರಂತೆ ಫ್ಯಾನ್‌, ಶ್ವೇತ ಫಲಕ, ಪ್ರತ್ಯೇಕ ಗ್ರಂಥಾಲಯ ವ್ಯವಸ್ಥೆ, ಒಂದು ಸ್ಮಾರ್ಟ್‌ಕ್ಲಾಸ್‌, ಧ್ವಜ ಕಟ್ಟೆ, ಇಡೀ ಶಾಲಾ ಕಟ್ಟಡ ಹೊಸ ಸ್ವರೂಪ ಪಡೆದಿದೆ’ ಎಂದು ರವಿ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ ಪ್ರತಿ ವರ್ಷ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 90ಕ್ಕಿಂತ ಹೆಚ್ಚು ಇರುತ್ತದೆ. ಶಾಲೆಯ ಸೌಲಭ್ಯ ಮತ್ತು ನವೀಕರಣದಿಂದ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಅಲ್ಲದೇ ನಮ್ಮಲ್ಲೂ ಉತ್ಸಾಹ ಮೂಡಿದೆ. ಶಾಲೆಗೆ ಬರಲು ಖುಷಿಯಾಗುತ್ತದೆ. ಗ್ರಾಮಸ್ಥರ ಸಹಕಾರ ಮತ್ತು ಒಗ್ಗಟ್ಟು ಎಂದಿಗೂ ಮರೆಯಲಾಗದು. ಸರ್ಕಾರದ ಅನುದಾನದಿಂದ ಶಾಲೆಗೆ ಆವರಣ ಗೋಡೆ ನಿರ್ಮಾಣವಾದರೆ, ಇನ್ನಷ್ಟು ಅನುಕೂಲವಾಗುತ್ತದೆ’ ಎಂದರು.

* * 

ಮಕ್ಕಳು ಉತ್ಸಾಹದಿಂದ ಶಿಕ್ಷಣ ಪಡೆಯಲು ಗ್ರಾಮಸ್ಥರು ಧನಸಹಾಯ ಮಾಡಿದ್ದೇವೆ. ಕ್ರಿಯಾಶೀಲ ಶಿಕ್ಷಕರಿದ್ದ ಕಾರಣ ಶಾಲೆಗೆ ಹೊಳಪು ಬರಲು ಸಾಧ್ಯವಾಗಿದೆ.
ಡಾ.ಲಕ್ಷ್ಮಣ ಪೂಜಾರಿ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT