ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಯರ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ’

ಹೊಸಮಠ, ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹಾವೇರಿಯಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮ
Last Updated 4 ಜನವರಿ 2018, 9:27 IST
ಅಕ್ಷರ ಗಾತ್ರ

ಹಾವೇರಿ: ‘ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ದೇಶದ ಎಲ್ಲ ಮಹಿಳೆಯರ ಅಕ್ಷರ ತಾಯಿ. ಅವರ ಬಗ್ಗೆ ಎಲ್ಲ ಮಹಿಳೆಯರು ಅವಶ್ಯವಾಗಿ ಅರಿತುಕೊಳ್ಳಬೇಕು’ ಎಂದು ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಮಾನವ ಬಂಧುತ್ವ ವೇದಿಕೆ ಹಾಗೂ ಹೊಸಮಠದ ಸಹಯೋಗದಲ್ಲಿ ನಗರದ ಎಸ್‌.ಜೆ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ‘ಸಾವಿತ್ರಿಬಾಯಿ ಫುಲೆಯವರ 187ನೇ ಜನ್ಮದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಕ್ಷರ ದಾನವು ಬಹುದೊಡ್ಡ ಪುಣ್ಯದ ಕೆಲಸ. ಅವಮಾನ, ವಿರೋಧ ಗಳು ಬಂದರೂ ಸಾಕ್ಷರತೆಯ ಕೆಲಸವನ್ನು
ಮಾಡಿದ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ ಸಾಧನೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮಾತನಾಡಿ, ಭಾರತದಲ್ಲಿ ಶತ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳ ಮಹಿಳೆಯರಿಗಾಗಿಯೇ 18 ಶಾಲೆಗಳನ್ನು ತೆರೆದು ಅಕ್ಷರ ಜ್ಞಾನವನ್ನು ಫುಲೆ ದಂಪತಿ ನೀಡಿದರು’ ಎಂದರು.

ಈ ದಂಪತಿ ಶಾಲೆಗಳನ್ನು ನಡೆಸಲು ಬಹಳ ಕಷ್ಟ ಪಟ್ಟಿದ್ದರು. ಫುಲೆ ದಂಪತಿ ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿದರೂ, ತಮ್ಮ ಜೀವಿತಾವಧಿಯಲ್ಲಿ ತಳ ಸಮುದಾಯ, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಮತ್ತು ಅಭ್ಯುದಯಕ್ಕಾಗಿ ಶ್ರಮಿಸಿದರು ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ‘ಅಂದು ಮಹಾರಾಷ್ಟ್ರದ ಪೇಶ್ವೆಗಳು ಗ್ರಾಮಗಳಿಗೆ ಭೇಟಿ ನೀಡುವ ವಿಷಯ ತಿಳಿಯುತ್ತಿದ್ದಂತೆಯೇ ಎಷ್ಟೋ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರಂತೆ. ಅಂತಹ ಕಾಲಘಟ್ಟದಲ್ಲಿ ಸಾವಿತ್ರಾಬಾಯಿ ಫುಲೆಯವರ ಸಾಧನೆ ಎಲ್ಲರಿಗೂ ಮಾದರಿ ಎಂದರು.

ಅವರ ಜೀವನಾಧರಿತ ಚಲನಚಿತ್ರ ನಿರ್ಮಾಣಗೊಳ್ಳುತ್ತಿದೆ. ನಾನು ಏಳು ಹಾಡುಗಳನ್ನು ರಚಿಸಿದ್ದು, ಜಿಲ್ಲೆಯ 30ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಸನ್ಮಾನ: ನಿವೃತ್ತ ಮುಖ್ಯೋಪಾಧ್ಯಾಯಿನಿ ಶಿವಲೀಲಾ ಮರಗಾಲ, ಮುಖ್ಯ ಶಿಕ್ಷಕಿ ಶೋಭಾ ಜಾಗಟಗೇರಿ ಹಾಗೂ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರನ್ನು ಸನ್ಮಾನಿಸಲಾಯಿತು. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಂದ್ರ ಕಡಕೋಳ ಹಾಗೂ ಸನ್ಮಾನಿತರು ಮಾತನಾಡಿದರು.

ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ತಾಲ್ಲೂಕು ಘಟಕದ ಸಂಚಾಲಕ ಮಾಲತೇಶ ಅಂಗೂರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಪ್ರಾಧ್ಯಾಪಕ ರಮೇಶ ತೆವರಿ, ಉಪನ್ಯಾಸಕರಾದ ಕೃಷ್ಣಾ ಜವಳಿ ಹಾಗೂ ಶಶಿಕಲಾ ಕಮ್ಮಾರ ಇದ್ದರು.

ಸಾವಿತ್ರಿಬಾಯಿ ಫುಲೆ, ಶರಣೆ ಅಕ್ಕಮಹಾದೇವಿ, ಒನಕೆ ಓಬವ್ವ ಹಾಗೂ ಕಿತ್ತೂರ ರಾಣಿ ಚನ್ನಮ್ಮರಂತಹ ಸಾಧಕಿಯರ ಜೀವನಾಧರಿತ ಧಾರಾವಾಹಿಗಳು ಬರಬೇಕು
–ಬಸವಶಾಂತಲಿಂಗ ಸ್ವಾಮೀಜಿ ಚರಮೂರ್ತಿ, ಹೊಸಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT