ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಕುಟುಂಬದ ಆಸ್ತಿ ವಿವರ: ಕಣ್ಣೊರೆಸುವ ತಂತ್ರ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ನೌಕರರು ಮತ್ತು ಜನಪ್ರತಿನಿಧಿಗಳು ಇನ್ನು ಮುಂದೆ ತಾವಷ್ಟೇ ಅಲ್ಲ; ಅವಲಂಬಿತ ತಂದೆ ತಾಯಿ ಮತ್ತು ಮಕ್ಕಳ ಆಸ್ತಿಪಾಸ್ತಿ ವಿವರಗಳನ್ನು ಕೂಡ ಪ್ರತಿವರ್ಷ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಆದರೆ ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ ಸರ್ಕಾರದ ಈ ತೀರ್ಮಾನದ ಬಗ್ಗೆ ನಾಗರಿಕರು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಭಾರಿ ಸಂಭ್ರಮಪಡುವ ಅಗತ್ಯವೇನಿಲ್ಲ. ಏಕೆಂದರೆ, ನೌಕರರ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿ ಅರ್ಜಿ ಹಾಕಿ ಪಡೆದುಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಇಲ್ಲ. ಲಕ್ಷಾಂತರ ನೌಕರರ ಆಸ್ತಿ ಘೋಷಣಾ ಪತ್ರಗಳು ಲೋಕಾಯುಕ್ತ ಕಚೇರಿಯಲ್ಲಿ ಭದ್ರವಾಗಿ ಇರುತ್ತವೆ ಅಷ್ಟೆ.

ಅದೇ ರೀತಿ ನಿಗದಿತ ಗಡುವಿನ ಒಳಗೆ, ಅಂದರೆ ಜೂನ್‌ ಅಂತ್ಯದ ಒಳಗೆ ಆಸ್ತಿ ವಿವರ ಸಲ್ಲಿಸದೇ ಇರುವ ಶಾಸಕರ ಹೆಸರುಗಳುಳ್ಳ ಪಟ್ಟಿಯನ್ನು ಲೋಕಾಯುಕ್ತರು ಪ್ರತಿವರ್ಷ ಪ್ರಕಟಿಸುವುದು ವಾಡಿಕೆ. 2017ರಲ್ಲಿ 67 ಶಾಸಕರು ವಿವರ ಕೊಟ್ಟಿರಲಿಲ್ಲ. ಈ ವಿಷಯದಲ್ಲಿ ಐಎಎಸ್, ಐಪಿಎಸ್‌ ಮತ್ತಿತರ ಅಧಿಕಾರಿಗಳೇನೂ ಕಮ್ಮಿಯಿಲ್ಲ. 2017ರ ಮೇ ಅಂತ್ಯದ ವರೆಗಿನ ಮಾಹಿತಿ ಪ್ರಕಾರ ನಮ್ಮ ರಾಜ್ಯದ 82 ಐಎಎಸ್‌ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ತಮ್ಮ ಆಸ್ತಿಯ ಮಾಹಿತಿ ಸಲ್ಲಿಸಿರಲಿಲ್ಲ. ಇದೆಲ್ಲ ಏನನ್ನು ತೋರಿಸುತ್ತದೆ? ಮಾಹಿತಿ ಸಲ್ಲಿಸದೇ ಇರುವ ಮೂಲಕ ಕಾನೂನು ಉಲ್ಲಂಘಿಸಿದ ತಪ್ಪಿಗಾಗಿ ಯಾರ ಮೇಲಾದರೂ ಕಠಿಣ ಕ್ರಮ ತೆಗೆದುಕೊಂಡ ಉದಾಹರಣೆಯಿದೆಯೇ? ಅಂತಹುದು ಯಾವುದೂ ಕಾಣಿಸುತ್ತಿಲ್ಲ. ಶಿಕ್ಷೆ ಇಲ್ಲ ಎಂದ ಮೇಲೆ ಭಯವೂ ಇರುವುದಿಲ್ಲ. ಆದ್ದರಿಂದ ಸಂಪುಟದ ಈ ಘೋಷಣೆ ಸಹ ಕಣ್ಣೊರೆಸುವ ತಂತ್ರ ಎಂದು ಜನ ಭಾವಿಸಿದರೆ ಅದೇನೂ ತಪ್ಪಲ್ಲ.

ಆಸ್ತಿ ವಿವರ ಘೋಷಣೆ ಕಡ್ಡಾಯ ಎನ್ನುವುದು ಭ್ರಷ್ಟಾಚಾರ ನಿವಾರಣೆಯ ಹಾದಿಯಲ್ಲಿ ದೊಡ್ಡ ಹೆಜ್ಜೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಅದು ಅಷ್ಟೇನೂ ಪರಿಣಾಮಕಾರಿ ಅಲ್ಲ. ಏಕೆಂದರೆ, ಆಸ್ತಿ ಘೋಷಣೆ ಕಡ್ಡಾಯವಾಗಿದ್ದರೂ ಭ್ರಷ್ಟಾಚಾರವೇನೂ ಕಡಿಮೆ ಆಗಿಲ್ಲ ಎನ್ನುವುದು ಜನರ ಅನುಭವ. ಎಸಿಬಿ ಮತ್ತು ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳಿಗೆ– ನೌಕರರಿಗೆ ಹುಲುಸಾದ ಆದಾಯ ಬರುವ ಇನ್ನಷ್ಟು ಒಳ್ಳೆಯ ಮತ್ತು ಫಲವತ್ತಾದ ಹುದ್ದೆಗಳನ್ನು ಕೊಟ್ಟ ಉದಾಹರಣೆಗಳು ಜನರ ಕಣ್ಣಮುಂದೆ ಇವೆ. ಅದರಲ್ಲೂ ಈಗಿನ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಪ್ರಯತ್ನದ ಸಣ್ಣ ಸುಳಿವು ಕೂಡ ಸಿಗುವುದಿಲ್ಲ. ಜನಸಾಮಾನ್ಯರ ಪಾಲಿಗೆ ಒಂದಿಷ್ಟು ವರದಾನವಾಗಿದ್ದ ಸಕಾಲ ವ್ಯವಸ್ಥೆಯನ್ನು ಮೂಲೆಗುಂಪು ಮಾಡಲಾಗಿದೆ. ಎಸಿಬಿಯಂತೂ, ಅಧಿಕಾರದ ಸೂತ್ರ ಹಿಡಿದವರ ಕೈಗೊಂಬೆಯಂತೆ ವರ್ತಿಸಿ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಗುರುತರ ಆರೋಪವೂ ಈ ಸರ್ಕಾರದ ಮೇಲಿದೆ.

ಹೋಗಲಿ, ಭ್ರಷ್ಟರು ಯಾರಾದರೂ ತಮ್ಮ ಹೆಸರಲ್ಲಿ ಮತ್ತು ತಮ್ಮ ಕುಟುಂಬದವರ ಹೆಸರಲ್ಲಿ ಆಸ್ತಿ ಮಾಡುತ್ತಾರಾ? ಅವರದೇನಿದ್ದರೂ ಬೇನಾಮಿ ಖರೀದಿ. ಅಂದಮೇಲೆ ಅವರ ಪೋಷಕರು, ಮಕ್ಕಳ ಆಸ್ತಿ ವಿವರದಿಂದ ಏನು ಪ್ರಯೋಜನ? ನಿಯಮ ತಿದ್ದುಪಡಿಯು ಭ್ರಷ್ಟಾಚಾರ ತಡೆಯ ಹಾದಿಯಲ್ಲಿ ಸಣ್ಣ ಉಪಕ್ರಮ ಮಾತ್ರ. ಆದರೆ ಭ್ರಷ್ಟರನ್ನು ಸದೆ ಬಡಿಯಬೇಕಾದರೆ ಈ ರೀತಿಯ ಸಣ್ಣಪುಟ್ಟ ತೋರಿಕೆಯ ಕ್ರಮಗಳಿಂದ ಸಾಧ್ಯವಿಲ್ಲ. ಅದಕ್ಕೆ ನಿರಂತರ ಪ್ರಯತ್ನ ಬೇಕು, ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆ ಬೇಕು. ನೌಕರಶಾಹಿಯ ಕಾರ್ಯಶೈಲಿ ಬದಲಾಗಬೇಕು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರಿಗೆ ಇರುವ ವಿವೇಚನಾ ಅಧಿಕಾರವೇ ಭ್ರಷ್ಟಾಚಾರದ ತಾಯಿಬೇರು. ಅಧಿಕಾರದ ಅಮಲು ಏರಿಸಿಕೊಂಡ ನೌಕರಶಾಹಿಯ ಪಾಲಿಗೆ ನಾಗರಿಕರನ್ನು ಪೀಡಿಸಲು, ಕಾಡಿಸಲು, ಕಚೇರಿಯಿಂದ ಕಚೇರಿಗೆ ಅಲೆದಾಡಿಸಲು ಮತ್ತು ಆ ಮೂಲಕ ಹಣ ಕಿತ್ತುಕೊಳ್ಳಲು ಇದೊಂದು ದೊಡ್ಡ ಅಸ್ತ್ರ. ಬೆಂಗಳೂರಿನಲ್ಲಿ ಮನೆ ಖಾತಾ ಪಡೆಯಲು ಬಿಬಿಎಂಪಿ ಅಧಿಕಾರಿಗಳು ಸತಾಯಿಸಿದ್ದರಿಂದ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಅಂದರೆ ಎಷ್ಟರಮಟ್ಟಿಗೆ ಅವರು ಕಿರುಕುಳ ಅನುಭವಿಸಿರಬಹುದು? ಪ್ರಮಾಣ ಪತ್ರ, ಪರವಾನಗಿ ಪತ್ರ, ಮಂಜೂರಾತಿ ಪತ್ರ, ವಿವಿಧ ದಾಖಲಾತಿಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಹೋದರೆ ಹೇಗೆ ಸುಲಿಗೆ ಮಾಡಲಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ದರಿಂದ ನೌಕರಶಾಹಿಗೆ ಕೊಟ್ಟಿರುವ ವಿವೇಚನಾಧಿಕಾರಕ್ಕೆ ಕಡಿವಾಣ ಹಾಕಬೇಕು. ಅದಕ್ಕಾಗಿ ಕಾನೂನು, ನಿಯಮಗಳಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಬಿಗಿ ಮಾಡಬೇಕು. ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಿಸಿ, ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವ ಮತ್ತು ಉತ್ತರ ಪಡೆಯುವ ವ್ಯವಸ್ಥೆ ಜಾರಿಗೊಳಿಸಬೇಕು. ಕಾಲಮಿತಿಯೊಳಗೆ ಕೆಲಸ ಮಾಡಿಕೊಡದ ನೌಕರರನ್ನು ಕಠಿಣವಾಗಿ ಶಿಕ್ಷಿಸಬೇಕು. ಇಷ್ಟೆಲ್ಲ ಮಾಡಿದರೆ ಮಾತ್ರ ನೌಕರರ ಕುಟುಂಬ ವರ್ಗದ ಆಸ್ತಿ ವಿವರ ಸಲ್ಲಿಕೆ ಕಡ್ಡಾಯಕ್ಕೆ ಒಂದು ಅರ್ಥ, ಮರ್ಯಾದೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT