ಶನಿವಾರ, ಆಗಸ್ಟ್ 8, 2020
22 °C

ಚುಂಬಿಸಿ ಶುಭ ಕೋರಿದ್ದಕ್ಕೆ ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವರ್ಷದ ಶುಭಾಶಯ ಹೇಳುವಾಗ ಸಹೋದ್ಯೋಗಿ ಯುವತಿಗೆ ಚುಂಬಿಸಿದ ಆರೋಪದಡಿ ಖಾಸಗಿ ಕಂಪೆನಿ ಉದ್ಯೋಗಿ ಪಾಲ್ ರಾಜ್ (34) ಎಂಬುವರನ್ನು ಬಂಧಿಸಿದ ಕಬ್ಬನ್‌ಪಾರ್ಕ್‌ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

‘ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಕಂಪೆನಿಯೊಂದರಲ್ಲಿ 2013ರಿಂದ ಕೆಲಸ ಮಾಡುತ್ತಿದ್ದೇನೆ. ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಎಲ್ಲ ಸಹೋದ್ಯೋಗಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ನನ್ನನ್ನು ತಬ್ಬಿ ಶುಭ ಕೋರಿದ ಪಾಲ್, ನಂತರ ಚುಂಬಿಸಿ ಅನುಚಿತವಾಗಿ ವರ್ತಿಸಿದರು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

ಲೈಂಗಿಕ ಕಿರುಕುಳ (ಐಪಿಸಿ 354) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದೆವು. ‘ನಾವಿಬ್ಬರೂ ನಾಲ್ಕು ವರ್ಷಗಳಿಂದ ಸ್ನೇಹಿತರು. ಇತ್ತೀಚೆಗೆ ಗೆಳೆತನದಲ್ಲಿ ಬಿರುಕು ಉಂಟಾಯಿತು. ಶುಭ ಕೋರಿ ಮತ್ತೆ ಆಕೆಗೆ ಹತ್ತಿರವಾಗಲು ಬಯಸಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ಪ್ರತಿಯೊಬ್ಬ ಸಹೋದ್ಯೋಗಿಯನ್ನೂ ಅಪ್ಪಿಕೊಂಡೇ ಶುಭಾಶಯ ಹೇಳಿದ್ದೆ. ಅದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಅಂತೆಯೇ ಈ ಗೆಳತಿಯನ್ನೂ ತಬ್ಬಿ ಶುಭ ಕೋರಿದ್ದೆ. ಚುಂಬಿಸಿದೆ ಎಂಬ ಆರೋಪ ಸುಳ್ಳು’ ಎಂದು ಪಾಲ್ ಹೇಳಿಕೆ ನೀಡಿದ್ದಾರೆ.

ಹಲ್ಲೆ ಮಾಡಿದ್ದವರ ಬಂಧನ: ಕುಂಬ್ಳೆ ವೃತ್ತದಲ್ಲಿ ಡಿ.31ರ ರಾತ್ರಿ ಕ್ಯಾಬ್ ಚಾಲಕ ರಾಜೇಶ್‌ ಕುಮಾರ್ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪರಾರಿಯಾಗಿದ್ದ ಮೂವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

‘ಆರ್‌.ಟಿ. ನಗರದ ಉವೇಜ್ ಖಾನ್, ಮಹಮದ್ ನಹೀಮ್ ಹಾಗೂ ಸೈಯದ್ ಮೋಹಿದ್ ಎಂಬುವರನ್ನು ಬಂಧಿಸಿದ್ದೇವೆ. ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಬ್ರಿಗೇಡ್ ರಸ್ತೆಗೆ ಬಂದಿದ್ದ ಆರೋಪಿಗಳು, ಆಚರಣೆ ಮುಗಿಸಿಕೊಂಡು ರಾತ್ರಿ 1 ಗಂಟೆಗೆ ಬೈಕ್‌ನಲ್ಲಿ ಮನೆಗೆ ಹೊರಟಿದ್ದರು. ಅನಿಲ್‌ ಕುಂಬ್ಳೆ ವೃತ್ತದಲ್ಲಿ ಅವರ ಬೈಕ್‌ಗೆ ಕ್ಯಾಬ್ ಡಿಕ್ಕಿಯಾಗಿತ್ತು. ಚಾಲಕನೊಂದಿಗೆ ಗಲಾಟೆ ಶುರು ಮಾಡಿದ್ದ ಆರೋಪಿಗಳು, ಬೈಕ್‌ನಲ್ಲಿ ಇಟ್ಟುಕೊಂಡಿದ್ದ ಸಲಾಕೆಯಿಂದ ಚಾಲಕನ ತಲೆಗೆ ಹೊಡೆದಿದ್ದರು’ ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ತಿಳಿಸಿದ್ದಾರೆ.

‘ಉವೇಜ್ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಉಳಿದಿಬ್ಬರು ಮೆಕ್ಯಾನಿಕ್‌ಗಳು. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಅವರನ್ನು ಪತ್ತೆ ಮಾಡಲಾಯಿತು. ಸಲಾಕೆಯನ್ನು ಏಕೆ ಜತೆಗಿಟ್ಟುಕೊಂಡಿದ್ದರು ಎಂಬುದು ಗೊತ್ತಾಗಿಲ್ಲ. ಆ ಬಗ್ಗೆ ಆರೋಪಿಗಳು ಬಾಯ್ಬಿಡುತ್ತಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.