ಸೋಮವಾರ, ಜೂಲೈ 6, 2020
28 °C

ಸರ್ಕಾರದ ನೀತಿ ಉಲ್ಲಂಘಿಸಿ ಯಾಂತ್ರೀಕೃತ ಮೀನುಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ‘ಯಾಂತ್ರೀಕೃತ ಬೋಟ್‌ಗಳು ಸಮುದ್ರದಲ್ಲಿ ಕನಿಷ್ಠ 12 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶವಿದ್ದರೂ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಮುದ್ರದಲ್ಲಿ ಕೇವಲ 5 ನಾಟಿಕಲ್ ಮೈಲು ಅಂತರದಲ್ಲಿ ಮೀನುಗಾರಿಕೆ ನಡೆಸುವ ಯಾಂತ್ರೀಕೃತ ಬೋಟ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ’ ಎಂದು ಜಿಲ್ಲಾ ನಾಡ ದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ಆರೋಪಿಸಿದರು.

ಗುರುವಾರ ಪಟ್ಟಣದಲ್ಲಿ ನಡೆದ ಜಿಲ್ಲೆಯ ಕರಾವಳಿ ಭಾಗದ ಐದು ತಾಲ್ಲೂಕುಗಳ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಭೆಯಲ್ಲಿ ಅವರು ಮಾತನಾಡಿದರು. ‘ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸುವಾಗ ಅವರ ಸಮೀಪವೇ ಯಾಂತ್ರೀಕೃತ ಬೋಟ್‌ಗಳು ದೊಡ್ಡ ಹೆಡ್ ಲೈಟ್ ಹಾಕಿಕೊಂಡು ಓಡಾಡುವುದರಿಂದ ಮೀನುಗಾರಿಕೆಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದರು.

ಹಿಂದೆ ಜಿಲ್ಲೆಯ 165 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಶೇ 90 ರಷ್ಟು ಮೀನುಗಾರರು ಎಂಡಿ ಬಲೆ, ಬೀಸು ಬಲೆ ಮುಂತಾದ ಸಾಂಪ್ರದಾಯಿಕ ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿದ್ದರು. ಕಳೆದ 2–3 ವರ್ಷಗಳಿಂದ ಯಾಂತ್ರೀಕೃತ ಬೋಟ್ ಗಳ ಹಾವಳಿಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಿದೆ. ಸಮುದ್ರದ ಆಳಕ್ಕೆ ಬಲೆಯನ್ನು ಹಾಕಿ ಮೀನು ಹಿಡಿಯುವ ಬುಲ್ ಟ್ರಾಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜ. 8 ರಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆ ಬಗ್ಗೆ ಸೂಕ್ತ ಸ್ಪಂದನೆ ಸಿಗದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.

ಅಂಕೋಲಾದ ಗಣಪತಿ ತುಕಾರಾಂ ಕಾಂಬ್ಳೆ ಮಾತನಾಡಿ, ‘ ಸಮುದ್ರದಲ್ಲಿ ಮೀನು ಸಹಜವಾಗಿ ಬೆಳೆಯಲು ಸಂಬಂಧಪಟ್ಟವರು ಅವಕಾಶ ಕಲ್ಪಿಸದಿದ್ದರೆ ಮೀನು ಸಂತತಿ ಕ್ರಮೇಣ ನಶಿಸಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆದರೆ ಮೀನು ಸಂತತಿಯ ಬಗ್ಗೆ ಚಿಂತೆ ಮಾಡದೆ ಉದ್ಯಮದ ರೀತಿಯಲ್ಲಿ ಮೀನು ಹಿಡಿಯುವ ಯಾಂತ್ರೀಕೃತ ಮೀನಾಗರರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ’ ಎಂದರು.

ರಾಘವೇಂದ್ರ ಜಾಧವ್, ‘ಮೀನುಗಾರಿಕೆ ಸಚಿವ ಪ್ರಮೋದ ಮದ್ವರಾಜ್ ಅವರು ಹೇಳಿಕೆ ನೀಡಿ ಪರ್ಶಿಯನ್ ಬೋಟ್ ಬಳಸಿ ಮೀನುಗಾರಿಕೆ ನಡೆಸುವವರು ಮಾತ್ರ ಮೀನುಗಾರರ ಎಂದಿರುವುದು ತೀರಾ ಅವೈಜ್ಞಾನಿಕವಾಗಿದೆ. ಮೀನುಗಾರಿಕೆ ಸಚಿವರಿಗೆ ಮೀನುಗಾರರು ಯಾರು ಎಂಬುವುದೇ ಸರಿಯಗಿ ಗೊತ್ತಿಲ್ಲ’ ಎಂದರು.

ಜಿಲ್ಲಾ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಂಘದ ಕುಮಟಾ ತಾಲ್ಲೂಕು ಘಟಕ ಅಧ್ಯಕ್ಷ ಸುಧಾಕರ ತಾರಿ, ವೆಂಕಟೇಶ ಮೋಗೇರ, ಭಟ್ಕಳದ ಮಹಾದೇವ ಕುಮಟಾಕರ್, ಕಾರವಾರದ ಪ್ರಶಾಂತ ಮೆಹತ್, ಶಾಮ ಪಟಕುರಿ, ದೇವರಾಯ ಸೈಲ್ ಇದ್ದರು.

ಬುಲ್ ಟ್ರಾಲ್ ಹಾಗೂ ಯಾಂತ್ರೀಕೃತ ಬೋಟ್‌ಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಸರ್ಕಾರ ಗಮನ ಹರಿಸಬೇಕು

ಭಟ್ಕಳದ ಮೊಹಮದ್ ಕೊರ್ಸೆ

ಮೀನುಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.