ಸೋಮವಾರ, ಜೂಲೈ 13, 2020
29 °C

ದೀಪಕ್‌ ರಾವ್‌ ಹತ್ಯೆ ಖಂಡಿಸಿ ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್ ಕೊಲೆ ಪ್ರಕರಣ ಖಂಡಿಸಿ ಬಜರಂಗದಳ ಕಾರ್ಯಕರ್ತರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣ ವೃತ್ತದಲ್ಲಿ ಗುರುವಾರ ರಸ್ತೆ ತಡೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪದೇಪದೇ ಬಿಜೆಪಿ ಹಾಗೂ ಸಹ ಸಂಘಟನೆಗಳ ಮುಖಂಡರ ಹತ್ಯೆಯಾಗುತ್ತಿದೆ. ಇದರ ಹಿಂದೆ ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆ ಸದಸ್ಯರ ಕೈವಾಡವಿದೆ. ಸರ್ಕಾರ ಈ ಸಂಘಟನೆಗಳನ್ನು ರಕ್ಷಿಸಲು ಯತ್ನಿಸುತ್ತಿದೆ’ ಎಂದು ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಬಾಬು ದೂರಿದರು.

ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆ ಸದಸ್ಯರು ರಾಜ್ಯದಲ್ಲಿ ಶಾಂತಿ ಕದಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಸಮಾಜಘಾತುಕರ ಬೆಂಬಲಕ್ಕೆ ನಿಂತಿದೆ. ಈ ಸಂಘಟನೆಗಳ ಸದಸ್ಯರನ್ನು ಬಳಸಿಕೊಂಡು ಕರಾವಳಿ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದಲ್ಲಿ ಸಕ್ರಿಯರಾಗಿದ್ದ ದೀಪಕ್ ರಾವ್‌ ಕೊಲೆಯ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್‌ ರೈ ಅವರ ಪಾತ್ರವಿದೆ ಎಂದು ಆರೋಪಿಸಿದರು.

ಜೀವ ಭಯ: ಸರ್ಕಾರ ಅಮಾಯಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಬಿಜೆಪಿ ಹಾಗೂ ಸಹ ಸಂಘಟನೆಗಳ ಮುಖಂಡರಿಗೆ ರಕ್ಷಣೆ ಇಲ್ಲವಾಗಿದ್ದು, ಜೀವ ಭಯದಲ್ಲಿ ಬದುಕುವಂತಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮುಸ್ಲಿಮರ ಓಲೈಕೆಗಾಗಿ ಸರ್ಕಾರ ಮೌನವಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ಆ ಸಂಘಟನೆಗಳ ಬ್ಯಾಂಕ್ ಖಾತೆ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಬಿಜೆಪಿ ಮತ್ತು ಸಹ ಸಂಘಟನೆಗಳ ಮುಖಂಡರ ಕೊಲೆ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಸದಸ್ಯರು ದೀಪಕ್‌ ರಾವ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸಂಘಟನೆಯ ಜಿಲ್ಲಾ ಘಟಕದ ಸಹ ಸಂಚಾಲಕ ಚಲಪತಿ, ಸದಸ್ಯರಾದ ಬಾಲಾಜಿ, ಆನಂದ್, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.