ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 1ರಂದು ಕೇಂದ್ರದ ಬಜೆಟ್‌

Last Updated 5 ಜನವರಿ 2018, 19:42 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಪ್ರಸಕ್ತ ಸಾಲಿನ ಬಜೆಟ್‌ ಫೆಬ್ರುವರಿ 1ರಂದು ಮಂಡನೆಯಾಗಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ಜನವರಿ 29ರಂದು ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಅಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದು, ಫೆಬ್ರುವರಿ 9ರಂದು ಬಜೆಟ್‌ ಅಧಿವೇಶನದ ಮೊದಲಾರ್ಧ ಮುಕ್ತಾಯವಾಗಲಿದೆ. ಮಾರ್ಚ್‌ 4ರವರೆಗೆ ಹಣಕಾಸು ವಿಭಾಗದ ಸ್ಥಾಯಿ ಸಮಿತಿಯು ಬಜೆಟ್‌ ಕುರಿತು ಪರಾಮರ್ಶೆ ನಡೆಸಲಿದೆ ಎಂದು ಅವರು ತಿಳಿಸಿದರು.

ಬಜೆಟ್‌ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್‌ 5ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದ್ದು, ಒಟ್ಟು 31 ದಿನಗಳ ಕಾಲ ಬಜೆಟ್‌ ಮೇಲಿನ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.

ಶುಕ್ರವಾರ ಕೊನೆಗೊಂಡ ಚಳಿಗಾಲದ ಅಧಿವೇಶನವು ಬಹುತೇಕ ಯಶಸ್ವಿಯಾಗಿದ್ದು, ಲೋಕಸಭೆಯಲ್ಲಿ 13, ರಾಜ್ಯಸಭೆಯಲ್ಲಿ 9 ಸೇರಿದಂತೆ ಒಟ್ಟು 21 ಮಸೂದೆಗಳನ್ನು ಮಂಡಿಸಲಾಗಿದೆ. ಲೋಕಸಭೆಯಲ್ಲಿ ಶೇ 91.50 ಹಾಗೂ ರಾಜ್ಯಸಭೆಯಲ್ಲಿ ಶೇ 56.29ರಷ್ಟು ಪ್ರಮಾಣದ ಚರ್ಚೆಗಳು ನಡೆದಿದ್ದು, ಫಲಪ್ರದವಾಗಿವೆ ಎಂದು ಅನಂತಕುಮಾರ್‌ ವಿವರ ನೀಡಿದರು.

ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ– 2017’ ಅನ್ನು ಲೋಕಸಭೆ ಅನುಮೋದಿಸಿದರೂ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ವಿರೋಧದಿಂದಾಗಿ ಮುಂದಕ್ಕೆ ಹೋಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮಸೂದೆಗೆ ಅಡ್ಡಿಪಡಿಸಿದ್ದಾರೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT