ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 20ರಿಂದ ಶಿರಾಡಿ ರಸ್ತೆ ಬಂದ್‌

ಐದು ತಿಂಗಳು ವಾಹನ ಸಂಚಾರ ಸ್ಥಗಿತ
Last Updated 6 ಜನವರಿ 2018, 19:33 IST
ಅಕ್ಷರ ಗಾತ್ರ

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್‌ನಲ್ಲಿ ಬಾಕಿ ಉಳಿದಿರುವ 12.38 ಕಿ.ಮೀ ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಈ ಮಾರ್ಗದಲ್ಲಿ ಜ. 20ರಿಂದ ಮೇ 30ರ ವರೆಗೆ ವಾಹನಗಳ ಸಂಚಾರ ಬಂದ್‌ ಮಾಡಲಾಗುತ್ತದೆ.

ಶಿರಾಡಿ ಘಾಟ್‌ನ ಕೆಂಪು ಹೊಳೆ ಕಿ.ಮೀ 250.62ರಿಂದ ಕಿ.ಮೀ 263 ಅಡ್ಡಹೊಳೆವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಸಂಬಂಧ ಹಾಸನ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಶನಿವಾರ ಈ ವಿಷಯ ತಿಳಿಸಿದರು.

ಎರಡನೇ ಹಂತದಲ್ಲಿ ₹ 61.57 ಕೋಟಿ ವೆಚ್ಚದಲ್ಲಿ 12.38 ಕಿ.ಮೀ ಕಾಂಕ್ರೀಟ್‌ ರಸ್ತೆಯನ್ನು ಮದ್ರಾಸ್‌ನ ಜಿಯೋಟೆಕ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 13 ಕಿ.ಮೀ ರಸ್ತೆ ಕಾಮಗಾರಿ ಮುಗಿದು ವರ್ಷ ಕಳೆದಿದೆ. ಎರಡನೇ ಹಂತದ ಕಾಮಗಾರಿ ಗುತ್ತಿಗೆ ಪಡೆದಿದ್ದ ಜಿವಿಆರ್‌ ಕಂಪನಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಗುತ್ತಿಗೆ ರದ್ದುಪಡಿಸಲಾಯಿತು. ಮೊದಲು 13 ಕಿ.ಮೀ ರಸ್ತೆ ನಿರ್ಮಾಣ ಮಾಡಿರುವ ಓಷನ್‌
ಕನ್‌ಸ್ಟ್ರಕ್ಷನ್ಸ್‌ ಕಂಪನಿಗೆ ಎರಡನೇ ಹಂತದ ಕಾಮಗಾರಿ ನೀಡಲಾಗಿದೆ ಎಂದು ವಿವರಿಸಿದರು.

ಮೇ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಗಡುವು ನೀಡಲಾಗಿದ್ದು, ಆರು ಬದಲಿ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಹಾಸನ ಮಾರ್ಗದಲ್ಲಿ ‘ಎ’ ಮತ್ತು ‘ಬಿ’ ಎಂದು ವಿಂಗಡಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಕಾಂಕ್ರೀಟ್‌ ಹಾಕುವುದಕ್ಕೆ ಜರ್ಮನಿಯಿಂದ ಅತ್ಯಾಧುನಿಕ ಯಂತ್ರವನ್ನು ಗುತ್ತಿಗೆದಾರರು ತರಿಸಿದ್ದಾರೆ. ಜಲ್ಲಿ ಹಾಗೂ ಇನ್ನಿತರ ಸಲಕರಣೆಗಳನ್ನು ದಾಸ್ತಾನು ಮಾಡಲಾಗಿದೆ ಎಂದರು.

ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಯಿಂದ ಮರಳು ಪೂರೈಕೆ ಆಗುತ್ತಿಲ್ಲ ಎಂದು ಗುತ್ತಿಗೆದಾರರು ಸಭೆಯಲ್ಲಿ ಸಚಿವರ ಗಮನಕ್ಕೆ ತಂದರು. ಜಿಲ್ಲಾಡಳಿತ ಮರಳು ಪೂರೈಕೆ ಮಾಡದೆ ನಿರ್ಲಕ್ಷ್ಯ ಏಕೆ ಮಾಡುತ್ತಿದೆ ಎಂದು ಹಾಸನ ಜಿಲ್ಲಾಧಿಕಾರಿ ಪರವಾಗಿ ಸಭೆಗೆ ಬಂದಿದ್ದ ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರನ್ನು ಸಚಿವರು ಪ್ರಶ್ನಿಸಿದರು.

ಮೇ ಅಂತ್ಯದ ಒಳಗೆ ಗುತ್ತಿಗೆದಾರರು ರಸ್ತೆ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಳಿಸಬೇಕು. ಮರಳು ಹಾಗೂ ಇತರೆ ಸಲಕರಣೆಗಳ ಪೂರೈಕೆಗೆ ಜಿಲ್ಲಾಧಿಕಾರಿಗಳು, ಪೊಲೀಸ್‌, ಸಾರಿಗೆ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಿದರು.

ಮೊದಲ ಹಂತದ ಕಾಂಕ್ರೀಟ್‌ ಕಾಮಗಾರಿಗೆ ಒಂದು ವರ್ಷ ರಸ್ತೆ ಬಂದ್ ಮಾಡಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಈ ಬಾರಿ ಅದೇ ರೀತಿ ವಿಳಂಬ ಮಾಡಬೇಡಿ. ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಆಗ್ರಹಿಸಿದರು.

ರಸ್ತೆ ಸಂಚಾರ ಬಂದ್‌ ವೇಳೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಬೇಲೂರು ಮಾರ್ಗದಲ್ಲಿ ಸಂಚರಿಸಲಿವೆ.

ಎ ವರ್ಗದ ವಾಹನಗಳು ಸಾಗುವ ಮಾರ್ಗ

1. ಮಂಗಳೂರು– ಬಿ.ಸಿ.ರೋಡ್‌, ಉಜಿರೆ, ಚಾರ್ಮುಡಿ ಘಾಟ್‌, ಮೂಡಿಗೆರೆ, ಬೇಲೂರು ಹಾಗೂ ಹಾಸನ (188 ಕಿ.ಮೀ)

2. ಮಂಗಳೂರು, ಮೂಡಿಗೆರೆ, ಹಾನುಬಾಳು ಸಕಲೇಶಪುರ, ಹಾಸನ (190 ಕಿ.ಮೀ)

3. ಉಡುಪಿ– ಕಾರ್ಕಳ– ಮಾಲಘಟ್ಟ– ಕುದುರೆಮುಖ– ಕಳಸ– ಕೊಟ್ಟಿಗೆಹಾರ, ಮೂಡಿಗೆರೆ– ಬೇಲೂರು– ಹಾಸನ–ಬೆಂಗಳೂರು (390 ಕಿ.ಮೀ)

ಬಿ ವರ್ಗದ ವಾಹನ ಸಾಗುವ ಮಾರ್ಗ

1. ಬಿ.ಸಿ.ರೋಡ್‌, ಮಾಣಿ, ಪುತ್ತೂರು, ಮಡಿಕೇರಿ, ಹುಣಸೂರು, ಕೆ.ಆರ್.ನಗರ ಹೊಳೆನರಸೀಪುರ, ಹಾಸನ (309 ಕಿ.ಮೀ)

2. ಉಡುಪಿ– ಕುಂದಾಪುರ– ಸಿದ್ದಾಪುರ– ಹೊಸಅಂಗಡಿ, ಬಾಲೆಬರೆ ಘಾಟ್‌– ಮಾಸ್ತಿಕಟ್ಟೆ– ನಗರ– ಆಯನೂರು–ಶಿವಮೊಗ್ಗ– ಬೆಂಗಳೂರು (469 ಕಿ.ಮೀ)

3. ಉಡುಪಿ– ಕುಂದಾಪುರ– ಮುರುಡೇಶ್ವರ– ಹೊನ್ನಾವರ– ಸಾಗರ– ಶಿವಮೊಗ್ಗ– ನೆಲಮಂಗಲ– ಬೆಂಗಳೂರು (616 ಕಿ.ಮೀ)

ಎ ಮತ್ತು ಬಿ ವರ್ಗದ ವಾಹನಗಳು

1. ಮಂಗಳೂರು– ಬಿ.ಸಿ.ರೋಡ್‌, ಮಾಣಿ, ಪುತ್ತೂರು, ಮಡಿಕೇರಿ, ಇಲವಾಲ, ಶ್ರೀರಂಗಪಟ್ಟಣ– ಬೆಂಗಳೂರು (390 ಕಿ.ಮೀ)

2. ಉಡುಪಿ– ಕುಂದಾಪುರ– ಸಿದ್ದಾಪುರ– ಹೊಸಂಗಡಿ– ಮಸ್ತಿಕಟ್ಟೆ– ನಗರ– ಹೊಸನಗರ– ಶಿವಮೊಗ್ಗ–ಬೆಂಗಳೂರು (469 ಕಿ.ಮೀ)

* ಎ ಮತ್ತು ಬಿ ವರ್ಗದ ವಾಹನಗಳು

1. ಮಂಗಳೂರು– ಬಿ.ಸಿ.ರೋಡ್‌, ಮಾಣಿ, ಪುತ್ತೂರು, ಮಡಿಕೇರಿ, ಇಲವಾಲ, ಶ್ರೀರಂಗಪಟ್ಟಣ– ಬೆಂಗಳೂರು (390 ಕಿ.ಮೀ)
2. ಉಡುಪಿ– ಕುಂದಾಪುರ– ಸಿದ್ದಾಪುರ– ಹೊಸಂಗಡಿ– ಮಸ್ತಿಕಟ್ಟೆ– ನಗರ– ಹೊಸನಗರ– ಶಿವಮೊಗ್ಗ–ಬೆಂಗಳೂರು (469 ಕಿ.ಮೀ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT