ಗುರುವಾರ , ಜೂಲೈ 9, 2020
26 °C

ಕಾರ್ಮಿಕರ ಸಮಸ್ಯೆ: ಪಾರಾಗಲು ಉಪಾಯ

ಸಿ.ಎಸ್‌.ಸುರೇಶ್‌ Updated:

ಅಕ್ಷರ ಗಾತ್ರ : | |

ಕಾರ್ಮಿಕರ ಸಮಸ್ಯೆ: ಪಾರಾಗಲು ಉಪಾಯ

ನಾಪೋಕ್ಲು: ಕಾಫಿ ಕೊಯ್ಲಿನ ಬಿರುಸಿನ ಈ ದಿನಗಳಲ್ಲಿ ಕಾಫಿ ಬೆಳೆಗಾರರು ಕಾರ್ಮಿಕರ ಕೊರತೆಯಿಂದ ಪರದಾಡುವಂತಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ರೋಬಸ್ಟಾ ಕಾಫಿ ಹಣ್ಣಾಗಿದ್ದು ಕೊಯ್ಲು ಮಾಡಲು ಕಾರ್ಮಿಕರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ನಿಗದಿತ ಅವಧಿಯಲ್ಲಿ ಕೊಯ್ಲು ಮಾಡಲು ಈ ವರ್ಷ ಸಾಧ್ಯವಾಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು. ಜೊತೆಗೆ ಕಾರ್ಮಿಕರ ಕೊರತೆಯಿಂದ ಕಾಫಿ ಕೊಯ್ಲು ಮಾಡಲು ಅಧಿಕ ಕೂಲಿ ನೀಡುವ ಪರಿಸ್ಥಿತಿಯಿದೆ.

ವರ್ಷಗಳ ಹಿಂದೆ ಕಾಫಿ ಬೆಳೆಗಾರರು ಕಾಫಿ ಕೊಯ್ಲಿನ ಅವಧಿಯಲ್ಲಿ ಕಾರ್ಮಿಕರ ಬಿಕ್ಕಟ್ಟನ್ನು ಎದುರಿಸಿದ್ದರು. ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರ ಜೊತೆಗೆ ಹೊರಜಿಲ್ಲೆಗಳಿಂದಲೂ ಆಗಮಿಸುವ ಕಾರ್ಮಿಕರೂ ಕಾಫಿ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದರೂ ಕೂಲಿ ಕಾರ್ಮಿಕರ ಸಂಬಳ, ವಾಹನ ಬಾಡಿಗೆ, ತಂಗಲು ವ್ಯವಸ್ಥೆ, ಪ್ರಯಾಣ ಖರ್ಚು ಸೇರಿದಂತೆ ಕಾರ್ಮಿಕರ ಹತ್ತು ಹಲವು ಬೇಡಿಕೆಗಳನ್ನು ಪೂರೈಸಿ, ಕಾಫಿ ಕೊಯ್ಲು ಪೂರೈಸುವ ವೇಳೆಗೆ ಬೆಳೆಗಾರ ಹೈರಾಣಾಗುತ್ತಿದ್ದ ದಿನಗಳವು.

ಉತ್ತರ ಭಾಗದಿಂದ ಅಸ್ಸಾಂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಇಲ್ಲಿನ ತೋಟಗಳಲ್ಲಿ ಕೆಲಸ ಅರಸುತ್ತಾ ಬರತೊಡಗಿದಂತೆ ಬೆಳೆಗಾರರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿತ್ತು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ತೋಟಗಳಲ್ಲಿ ಅಧಿಕ ಸಂಖ್ಯೆಯ ಕಾರ್ಮಿಕರು ನೆಲೆಸಿ, ಕಾಫಿ ತೋಟದ ಹೆರತೆ, ಕಾಫಿ ಕೊಯ್ಲು, ಕಾಳುಮೆಣಸಿನ ಕೊಯ್ಲು ಮತ್ತಿತರ ಕೆಲಸಗಳನ್ನು ಪೂರೈಸುತ್ತಿದ್ದರು. ಪ್ರಸಕ್ತ ವರ್ಷ ವಲಸೆ ಕಾರ್ಮಿಕರು ಕೆಲಸಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದಂತೆ ಕಾಫಿತೋಟಗಳಲ್ಲಿ ಕೆಲಸಕ್ಕೆ ಸಮಸ್ಯೆ ಎದುರಾಯಿತು. ಸ್ಥಳೀಯ ಕಾರ್ಮಿಕರಿಗೆ ಅಧಿಕ ಕೂಲಿ ನೀಡಿ ಕೆಲಸಪೂರ್ಣಗೊಳಿಸಿದವರು ಹಲವರು.

ಕಾಫಿ ಕೊಯ್ಲಿನ ಈ ಹಂತದಲ್ಲಿ ಸಮಸ್ಯೆ ಉಲ್ಪಣಗೊಂಡಿದೆ. ಕಾಫಿ ಸಂಪೂರ್ಣ ಹಣ್ಣಾಗಿದ್ದು ನಿಗದಿತ ಅವಧಿಯಲ್ಲಿ ಕೊಯ್ಲು ಕೆಲಸ ಪೂರೈಸುವ ಒತ್ತಡದಲ್ಲಿ ಬೆಳೆಗಾರರು ಇದ್ದಾರೆ. ಕಾಫಿ ಒಣಗಿಸಲು ಬಿಸಿಲಿನ ಕೊರತೆ ಉಂಟಾಗಿದೆ.

ಮೋಡ ಕವಿದ ವಾತಾವರಣ ಬೆಳೆಗಾರರನ್ನು ಚಿಂತೆಗೆ ದೂಡಿದೆ. ಕಾಫಿ ಫಸಲು ಕಡಿಮೆ ಇರುವುದರಿಂದ ಕೊಯ್ಲಿಗೆ ಅಧಿಕ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಾಫಿಯ ದರದಲ್ಲಿ 50 ಕೆ.ಜಿ ಚೀಲವೊಂದಕ್ಕೆ ₹1,000 ಕಡಿಮೆ ದರವಿದೆ.

‘ಕಾರ್ಮಿಕರಿಗೆ ಕೂಲಿ ಕೊಟ್ಟು ಹೇಗಾದರೂ ಕೊಯ್ಲು ಕೆಲಸ ಪೂರೈಸಬಹುದು. ಆದರೆ, ತೋಟದಿಂದ ಕಾಫಿ ಸಾಗಾಟ ಮಾಡಲು, ಅಂಗಳದಲ್ಲಿ ಕಾಫಿ ಹರಡಲು, ಒಣಗಿಸಲು, ಒಣಗಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲು ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಕಾಫಿ ಫಸಲನ್ನು ವ್ಯಾಪಾರಸ್ಥರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಧರಿಸಿದ್ದೇವೆ. ಅಂದಾಜು ದರ ಸಿಕ್ಕರೆ ಸಾಕು. ಕೊಯ್ಲು ತಾಪತ್ರಯ, ಮಾರಾಟ ರಗಳೆ ಯಾವುದೂ ಇಲ್ಲದೇ ನಿರಾಳವಾಗಿರಬಹುದು’ ಎಂಬ ಅಭಿಪ್ರಾಯ ಕಾಫಿ ಬೆಳೆಗಾರ ಸುಬ್ರಮಣ್ಯ ಅವರದ್ದು.

ಸುಬ್ರಮಣ್ಯ ಅವರಂತೆ ಕಾರ್ಮಿಕರ ಕೊರತೆಯಿಂದಾಗಿ ಹಲವು ಬೆಳೆಗಾರರು ಈ ವರ್ಷ ಕಾಫಿ ಫಸಲನ್ನು,ಕಾಫಿ ತೋಟವನ್ನು ಗುತ್ತಿಗೆ ನೀಡಿದ್ದಾರೆ. ‘ಮೂರೂವರೆ ಎಕರೆ ಕಾಫಿ ತೋಟದ ಫಸಲನ್ನು ₹3.5 ಲಕ್ಷಕ್ಕೆ ಈ ವರ್ಷ ಗುತ್ತಿಗೆ ನೀಡಿದ್ದೇನೆ. ಕಾರ್ಮಿಕರ ಸಮಸ್ಯೆಯಲ್ಲಿ ತೊಳಲಾಡುವುದಕ್ಕಿಂತ ಕಾಫಿ ತೋಟವನ್ನು ಗುತ್ತಿಗೆ ನೀಡಿದರೆ ಹಲವು ಸಮಸ್ಯೆ ಪರಿಹಾರವಾದಂತೆ. ಒಂದಷ್ಟು ನಷ್ಟವಾದರೂ ಚಿಂತೆಯಿಲ್ಲ. ನಿರಾಳವಾಗಿರಬಹುದು.’ ಎನ್ನುತ್ತಾರೆ ಕಾಫಿ ಬೆಳೆಗಾರ ಅಪ್ಪಂಗಳದ ವಿಕ್ರಂ.

* * 

ಮೂರೂವರೆ ಎಕರೆ ಕಾಫಿ ತೋಟದ ಫಸಲನ್ನು ₹3.5 ಲಕ್ಷಕ್ಕೆ ಈ ವರ್ಷ ಗುತ್ತಿಗೆ ನೀಡಿದ್ದೇನೆ

ಅಪ್ಪಂಗಳದ ವಿಕ್ರಂ, ಕಾಫಿ ಬೆಳೆಗಾರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.