ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಸಿಯುತ್ತಿರುವ ಆರ್ಥಿಕತೆ: ಹಿಂದುತ್ವವನ್ನೇ ನೆಚ್ಚಿಕೊಳ್ಳಲು ಮುಂದಾದ ಮೋದಿ ಪಡೆ’

Last Updated 8 ಜನವರಿ 2018, 9:18 IST
ಅಕ್ಷರ ಗಾತ್ರ

ಸೂರತ್: ‘ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯು ಹಿಂದೂ ರಾಷ್ಟ್ರೀಯವಾದ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ದೇಶ ಕಟ್ಟುವ ಕುರಿತಾದ ಅವರ ಭರವಸೆಗಳ ಮೇಲೆ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆ ಕುಸಿಯುತ್ತಿದ್ದು, ಮೋದಿ ಪಡೆ ಹಿಂದುತ್ವವನ್ನೇ ಹೆಚ್ಚು ನೆಚ್ಚಿಕೊಳ್ಳಲು ಮುಂದಾಗಿದೆ’ ಎಂದು ನ್ಯೂಯಾರ್ಕ್‌ ಟೈಮ್ಸ್ ವಿಶ್ಲೇಷಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಭಾರತದ ಗ್ರಾಹಕ ವಿಶ್ವಾಸದಲ್ಲಿ ಇಳಿಕೆಯಾಗಿದೆ. ಕಟ್ಟಡ ನಿರ್ಮಾಣ ಕುಂಠಿತವಾಗಿದೆ. ನಿಶ್ಚಿತ ಹೂಡಿಕೆ ದರ ಕುಸಿದಿದೆ. ಅನೇಕ ಫ್ಯಾಕ್ಟರಿಗಳು ಮುಚ್ಚಿದ್ದು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ಉಲ್ಲೇಖಿಸಿದೆ.

ನೀತಿಗಳೇ ಕಾರಣ: ‘ಮೋದಿ ಅವರ ಪ್ರಮುಖ ನೀತಿಗಳೇ ಆರ್ಥಿಕ ಕುಸಿತಕ್ಕೆ ಕಾರಣ. ಹಠಾತ್ತಾಗಿ ದೊಡ್ಡ ಮುಖಬೆಲೆಯ ನೋಟು ರದ್ದು ನಿರ್ಧಾರ ಕೈಗೊಂಡದ್ದು, ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು (ಜಿಎಸ್‌ಟಿ) ಜಾರಿಗೆ ತಂದದ್ದರಿಂದ ಭಾರತದ ಆರ್ಥಿಕ ಬೆಳವಣಿಗೆ ಕುಂಠತಗೊಂಡಿತು ಎಂಬುದನ್ನು ಹೆಚ್ಚಿನೆಲ್ಲ ಆರ್ಥಿಕ ತಜ್ಞರು ಒಪ್ಪಿಕೊಂಡಿದ್ದಾರೆ’ ಎಂದು ಹೇಳಲಾಗಿದೆ.

‘ಪರಿಸ್ಥಿತಿ ಹದಗೆಡುತ್ತಿದೆ, ಹದಗೆಡುತ್ತಿದೆ ಮತ್ತಷ್ಟು ಹದಗೆಡುತ್ತಿದೆ’ ಎಂಬುದಾಗಿ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಿಮಾಂಶು ಹೇಳಿರುವುದನ್ನೂ ಪತ್ರಿಕೆ ಉಲ್ಲೇಖಿಸಿದೆ.

ಈ ಮಧ್ಯೆ, ಷೇರುಮಾರುಕಟ್ಟೆ ವಹಿವಾಟು ಏರುಗತಿಯಲ್ಲಿ ಸಾಗುತ್ತಿದೆ. ರೈಲು, ರಸ್ತೆ, ಬಂದರುಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳು ಅನುಷ್ಠಾನಗೊಳ್ಳಲು ಆರಂಭವಾಗಿವೆ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ₹ 16 ಲಕ್ಷ ಕೋಟಿ (25.4 ಶತಕೋಟಿ ಡಾಲರ್) ವಿದೇಶಿ ಹೂಡಿಕೆ ಹರಿದುಬಂದಿದೆ. ಇದು 2016ರ ಇದೇ ಅವಧಿಯ ವಿದೇಶಿ ಹೂಡಿಕೆಗಿಂತ ಶೇ 17ರಷ್ಟು ಹೆಚ್ಚಾಗಿದೆ. ಆದಾಗ್ಯೂ, ದೊಡ್ಡ ಮುಖಬೆಲೆಯ ನೋಟು ರದ್ದತಿ, ಜಿಎಸ್‌ಟಿ ತರಾತುರಿಯ ಜಾರಿ ಉದ್ದಿಮೆಗಳಿಗೆ ಹೊಡೆತ ನೀಡಿವೆ.

ಹೆಚ್ಚುತ್ತಿರುವ ಕೋಮು, ಜಾತಿ ಸಂಘರ್ಷ: 2017–18ನೇ ಸಾಲಿಗೆ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ 6.5 ಇರಲಿದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಕಡಿಮೆ ಜಿಡಿಪಿಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಭಾರತೀಯರ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಕಂಡುಬಂದರೂ ಆತಂಕ ಹೆಚ್ಚುತ್ತಿದೆ. ಇತ್ತೀಚೆಗೆ ಸಾಮಾಜಿಕ ಉದ್ವಿಗ್ನತೆ, ಹಿಂದೂ–ಮುಸ್ಲಿಮರ ನಡುವೆ ಒಡಕು, ಮೇಲ್ಜಾತಿ ಮತ್ತು ಕೆಳಜಾತಿ ನಡುವಣ ಸಂಘರ್ಷ ಹೆಚ್ಚುತ್ತಿದೆ. ಮೋದಿ ಅವರು ತಮ್ಮ ವರ್ಚಸ್ಸು ಹೆಚ್ಚಲು ಕಾರಣವಾದ ಮೊದಲ ಅಂಶವಾದ ಹಿಂದೂ ರಾಷ್ಟ್ರೀಯತೆಯ ಮೇಲೆಯೇ ಹೆಚ್ಚು ಅವಲಂಬಿರತಾಗುವ ಭೀತಿ ಎದುರಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ಹೇಳಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 10 ವರ್ಷಗಳಲ್ಲಿ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಬಗೆಗಿನ ವಿಶ್ವಾಸ ಕುಂದುತ್ತಿದೆ ಎಂದು ಪತ್ರಿಕೆ ತಿಳಿಸಿದೆ.

ಜವಳಿ ಉದ್ಯಮಕ್ಕೆ ಹೊಡೆತ: ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲೂ ಉದ್ದಿಮೆಗಳಿಗೆ ಹೊಡೆತ ಬಿದ್ದಿದೆ. ಆರೋಗ್ಯಕರ ರಫ್ತು ಮತ್ತು ಅತಿ ಹೆಚ್ಚು ಉದ್ಯೋಗ ಸೃಷ್ಟಿಗೆ ಹೆಸರಾಗಿದ್ದ ಗುಜರಾತಿನ ಜವಳಿ ಉದ್ಯಮ ಹಿಂದಿದ್ದುದಕ್ಕಿಂತ ಅರ್ಧದಷ್ಟು ಕುಸಿದಿದೆ. ಉದ್ಯಮಿಗಳು ಕಂಗಾಲಾಗಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿತ್ತಾದರೂ ಕಳೆದ ಬಾರಿಗಿಂತ 16 ಸ್ಥಾನ ಕಡಿಮೆ ಪಡೆದಿತ್ತು. ಇದು ಮೋದಿ ಅವರ ಪಕ್ಷಕ್ಕೆ ಗುಜರಾತ್ ಜನತೆ ನೀಡಿದ ಎಚ್ಚರಿಕೆ ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ.

‘ಮೋದಿ ಅವರು ನಮ್ಮ ಉದ್ಯಮಕ್ಕೆ ಹೊಡೆತ ನೀಡಿದ್ದಾರೆ. ನಾವೂ ಅವರನ್ನು (ಮೋದಿ) ನೋಯಿಸಬಹುದು ಎಂಬುದನ್ನು ತೋರಿಸಿಕೊಡಲು ಬಯಸುತ್ತೇವೆ’ ಎಂದು ಉದ್ಯಮಿ ಮನೀಶ್ ಪಟೇಲ್ ಹೇಳಿದ್ದನ್ನು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ. ಅಲ್ಲದೆ, ಜೀವನದಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಾಗಿ ಪಟೇಲ್ ಹೇಳಿದ್ದನ್ನೂ ಉಲ್ಲೇಖಿಸಲಾಗಿದೆ.

ಸೂರತ್‌ನಲ್ಲಿ ಕುಸಿದ ಉದ್ಯಮ ಚಟುವಟಿಕೆ: ದೊಡ್ಡ ಮುಖಬೆಲೆಯ ನೋಟು ರದ್ದತಿ ನಿರ್ಧಾರದಿಂದಾಗಿ ಶತಮಾನಗಳ ಇತಿಹಾಸವಿರುವ ಸೂರತ್‌ನ ಜವಳಿ ಉದ್ಯಮಗಳಿಗೆ ಹೊಡೆತ ಬಿದ್ದಿವೆ. ನಗದಿನ ಕೊರತೆಯಿಂದಾಗಿ ಬಟ್ಟೆ ಉದ್ಯಮಕ್ಕೆ ಆಘಾತವಾಗಿದೆ. ಎರಡು ವರ್ಷಗಳ ಹಿಂದೆ ಸೂರತ್‌ನಲ್ಲಿ ಪ್ರತಿ ದಿನ 4 ಕೋಟಿ ಮೀಟರ್‌ಗಳಷ್ಟು ಬಟ್ಟೆ ಸಿದ್ಧಪಡಿಸಲಾಗುತ್ತಿತ್ತು. ಇದು ಈಗ 2.5 ಕೋಟಿ ಮೀಟರ್‌ಗೆ ಇಳಿಕೆಯಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT