ಸೋಮವಾರ, ಜೂಲೈ 6, 2020
21 °C

ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆಗಾಗಿ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ, ಮೃತನ ಸಂಬಂಧಿಕರು ಹಾಗೂ ಬಿಜೆಪಿ ಮುಖಂಡರು ಕಿಮ್ಸ್ ನಿರ್ದೇಶಕರ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಗಬ್ಬೂರು ಬೈಪಾಸ್ ಸಮೀಪದ ನೇಕಾರನಗರ ಸೇತುವೆ ಬಳಿ ಸೋಮವಾರ ನಸುಕಿನ 3.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದ ಪರಿಣಾಮ ಹುಬ್ಬಳ್ಳಿಯ ಪ್ರವೀಣ ಮುಳೆ(23), ಅನಿಲ್ ರೇಣುಕೆ(23) ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ತಿಳಿಸಿದ್ದಾರೆ.

ಬಳಿಕ ಶವಗಳನ್ನು ಶವಾಗಾರದಲ್ಲಿ ಇಟ್ಟಿದ್ದಾರೆ. ಬೆಳಿಗ್ಗೆ ಸಂಬಂಧಿಕರು ಶವಗಳನ್ನು ನೋಡಲು ಬಂದಾಗ ಪ್ರವೀಣ ಮುಳೆ ಕೈಕಾಲು ಅಲ್ಲಾಡಿಸಿದ್ದಾನೆ. ಆತನಿಗೆ ಜೀವ ಇತ್ತು ಎಂದು ಸಂಬಂಧಿಕರು ತಕ್ಷಣ ವೈದ್ಯರಿಗೆ ತಿಳಿಸಿದ್ದಾರೆ. ಆದರೆ, ವೈದ್ಯರು ಸ್ಪಂದಿಸದ ಕಾರಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರು, ಪ್ರವೀಣ ಮುಳೆ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ.

ಪ್ರವೀಣಗೆ ಕಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಬದುಕುತ್ತಿದ್ದ, ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದು, ಚಿಕಿತ್ಸೆ ನೀಡದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಜತೆಗೆ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಆದರೆ, ಆರೋಪವನ್ನು ತಳ್ಳಿಹಾಕಿರುವ ಕಿಮ್ಸ್ ವೈದ್ಯರು, ‘ಆಸ್ಪತ್ರೆಗೆ ಬರುವ ಮೊದಲೇ ಗಾಯಾಳು ಮೃತಪಟ್ಟಿದ್ದಾನೆ. ವೈದ್ಯರಿಂದ ಯಾವುದೇ ಲೋಪವಾಗಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.