ಶನಿವಾರ, ಜೂಲೈ 4, 2020
21 °C

ಮರೆಯಾದ ಸುಗ್ಗಿ ಕಣಗಳು

ಟಿ.ಎಚ್.ಪಂಚಾಕ್ಷರಯ್ಯ Updated:

ಅಕ್ಷರ ಗಾತ್ರ : | |

ಮರೆಯಾದ ಸುಗ್ಗಿ ಕಣಗಳು

ಭೂಮಿಯಲ್ಲಿ ಬಿತ್ತನೆಯಾದ ಕಾಳೊಂದು ಸಾವಿರ ಕಾಳುಗಳಾಗಿ ವರ್ಷದ ತುತ್ತಾಗುವ ಹೊತ್ತು ಈಗಿನದು. ಅಂದರೆ ಕಣ ಸುಗ್ಗಿಯ ಸಂಭ್ರಮದ ಕ್ಷಣ. ರೈತರ ಪಾಲಿಗೆ ಹಿಗ್ಗಿನ ಸಮಯ. ಮುಯ್ಯಾಳುಗಳ ಬಳೆಯ ನಾದದಲಿ ಸರಸರನೆ ಕುಯ್ದ ಹುಲ್ಲು ಜಾನುವಾರಿಗೆ, ದವಸ ಮನುಷ್ಯರಿಗೆ ಬೇರ್ಪಡುವ ಕಾರ್ಯ ಶುರುವಾಗುವುದು ಇಲ್ಲಿಂದಲೇ.

ಬಹುತೇಕ ಕಡೆ ಸಗಣಿ ಸಾರಿಸಿದ ಕಣಗಳನ್ನು ನೋಡುವುದು ಅಪರೂಪ. ಕಾಂಕ್ರಿಟ್ ನೆಲಹಾಸು ಇಲ್ಲವೆ ಡಾಂಬರು ರಸ್ತೆಯೇ ಒಕ್ಕಣೆ ನಡೆಸುವ ತಾಣಗಳಾಗಿವೆ. ಫಸಲು ತೂರಿ, ಬಿಡಿ ಕಾಳಾಗಿ ಪರಿವರ್ತಿಸುವ ಜಾಗವೇ ಕಣ. ಹತ್ತಾರು ಕುಟುಂಬಗಳು ಕುಯ್ದ ಫಸಲನ್ನೆಲ್ಲ ಒಟ್ಟಾರೆ ತಂದು ತಮ್ಮ ತಮ್ಮ ಮೆದೆ ಅಥವಾ ಬಣವೆಗಳನ್ನು ಒಂದು ನಿಗದಿತ ಸ್ಥಳದಲ್ಲಿ ಹಾಕುತ್ತಾರೆ.

ಮೆದೆ ಅಥವಾ ಬಣವೆ ಒಟ್ಟಿದ ದಿನದ ನಂತರ ಕಣ ನಿರ್ಮಾಣದ ತಯಾರಿ ನಡೆಯುತ್ತದೆ. ವೃತ್ತಾಕಾರದ ಕಣದ ಮಧ್ಯದಲ್ಲಿ ಒಂದಾಳುದ್ದದ ಬಿದಿರು, ಆಲ, ಸುರಗಿ ಅಥವಾ ಬನ್ನಿ ಮರದ ಕಂಬವನ್ನು ಮೊದಲು ನೆಡುತ್ತಾರೆ. ಆ ಕಂಬವೇ ಮೇಟಿ. ಜನಪದರು ಇದಕ್ಕೆ ಲಕ್ಷ್ಮೀ ಎಂಬ ಭಾವನೆ ಇಟ್ಟುಕೊಂಡಿದ್ದಾರೆ. ಶುಭದಿನದಂದು ಗುಣಿತೋಡಿ ಮೇಟಿ ನೆಡುವರು. ಸಗಣಿಯ ಬೆನಕನನ್ನು ಮೇಟಿಯ ಮೇಲಿಟ್ಟು ಹಸಿಗರಿಕೆ ಸಿಕ್ಕಿಸಿ, ಮೇಟಿ ಪೂಜೆ ಮಾಡಿ ಪ್ರಸಾದ ಹಂಚುವರು. ಇಲ್ಲಿ ಮೆದೆ ಒಟ್ಟಿದವರು, ಒಕ್ಕಣೆ ಮಾಡಿಕೊಳ್ಳುವವರೆಲ್ಲರೂ ಹಾಜರಿರುತ್ತಾರೆ.

ಮೇಟಿ ಕಣದ ಕೇಂದ್ರ. ಇದರ ಸುತ್ತಣ ವೃತ್ತಾಕಾರವಾಗಿ ಸ್ವಚ್ಛಮಾಡುತ್ತಾರೆ. ಕಸವನ್ನು ಗುದ್ದಲಿಯಿಂದ ತೆಗೆದು ನೀರು ಚಿಮುಕಿಸಿ, ತಗ್ಗುದಿಣ್ಣೆ ಸಮ ಮಾಡಿ, ದನಗಳಿಂದ ತುಳಿಸಿ, ನೆಲವನ್ನು ನಯಗೊಳಿಸುತ್ತಾರೆ. ಆಮೇಲೆ ತೆಂಗು ಅಥವಾ ಅಡಿಕೆ ಗರಿಯಿಂದ ಮೇಟಿಯ ಸುತ್ತಲೂ ಸಗಣಿ ಬಗ್ಗಡ ಹಾಕಿ ಸುತ್ತುತ್ತಾ ಬಿರುಕು ಮುಚ್ಚುವಂತೆ ಸಾರಿಸಿ ಸುಂದರ ಕಣ ಮಾಡಿಕೊಳ್ಳುತ್ತಾರೆ. ಮೆದ ಹಾಕಿದವರೆಲ್ಲೂ ಒಗ್ಗೂಡಿ ಕೆಲಸ ಮಾಡುವುದು ಕಡ್ಡಾಯ. ಹಿಂದೆ ಕಣದ ವಿಸ್ತಾರ ಆಧರಿಸಿ ರೈತನ ಶ್ರೀಮಂತಿಕೆ ಅಳೆಯುತ್ತಿದ್ದರು (ನಾಲ್ಕೆತ್ತಿನ ಕಣ, ಎಂಟೆತ್ತಿನ ಕಣ – ಅವುಗಳೆಲ್ಲ ಈಗ ಮರೆಯಾಗಿವೆ).

ಒಂದುದಿನ ಕಳೆದ ಮೇಲೆ ಮೆದೆ ಕಿತ್ತು ಕಣದಲ್ಲಿ ಹರಡಿ ಗುಂಡು(ರೋಣುಗಲ್ಲು) ಕಟ್ಟುತ್ತಾರೆ. ಕೆಲ ಕಡೆ ಕಣದ ವಿಸ್ತೀರ್ಣದ ಆಧಾರದ ಮೇಲೆ ನಾಲ್ಕು ಅಥವಾ ಎಂಟು ಎತ್ತುಗಳಿಂದ ಸುತ್ತಿಸುತ್ತಾರೆ. ಗುಂಡು ಹೊಡೆದ ಹಾಗೆ ಮೆರೆಗೋಲಿನ ಸಹಾಯದಿಂದ ತಿರುವಿ ತೆನೆ ಒದರುತ್ತಾರೆ. ಹೀಗೆ ಬೇರ್ಪಟ್ಟ ಧಾನ್ಯವನ್ನು ಮಿದಿ ಮಾಡುತ್ತಾರೆ.

ಮೆದೆ ಕಂಕಿಗಳನ್ನು ವಿಂಗಡಿಸಿ, ತೂರಿ ರಾಶಿ ಮಾಡುತ್ತಾರೆ. ಹೀಗೆ ಹಸನು ಮಾಡಿದ ಧಾನ್ಯದ ರಾಶಿ, ರಾಗಿಯಾದರೆ ಜರಡಿ ಮಾಡುತ್ತಾರೆ. ನಂತರ ಎತ್ತರದ ಅಟ್ಟಣಿಗೆ ಹತ್ತಿ ಗಾಳಿಯಲ್ಲಿ ತೂರಿ ರಾಗಿ ಬೇರ್ಪಡಿಸುತ್ತಾರೆ. ಹೀಗೆ ರಾಗಿ ತೂರುವಾಗ ಗಾಳಿ ಬೀಸದಿದ್ದರೆ ಕೂಗು ಹಾಕುತ್ತಿದ್ದರು. ಕಣ ಮಾಡುವಾಗ ಹಾಡುಗಳೊಂದಿಗೆ ಸುಗ್ಗಿ ನಡೆದರೆ ರಾತ್ರಿ ಕಣ ಕಾಯುವಾಗ ನಿದ್ರೆ ದೂರವಿರಿಸಲು ಹೂಂಗುಡುವ ಮಾತುಗಾರಿಕೆ (ಕಥೆ) ನಡೆಯುತ್ತದೆ.

ತಲೆ ಮೇಲೆ ಎಲ್ಲರೂ ಬಟ್ಟೆ ಸುತ್ತಿಕೊಂಡಿರಬೇಕು. ಕಣದಲ್ಲಿರುವವರು ಹೊರಗಿನವರನ್ನು ಕೂಗಿ ಕರೆಯ ಬಾರದು. ಕೈಕಟ್ಟಿ ನಿಲ್ಲಬಾರದು. ಬೀಡಿ ಹಾಗೂ ಅಡಿಕೆ ಎಲೆ ಹಾಕುವ ಹಾಗಿಲ್ಲ. ಚಪ್ಪಲಿ ಧರಿಸುವಂತಿಲ್ಲ ಎನ್ನುವ ನಿಯಮಗಳು ಇಂದಿಗೂ ಅನ್ವಯ.

ರಾಶಿ ತುಂಬುವ ಮುಂಚೆ ರಾಶಿಪೂಜೆ ನಡೆಯುತ್ತದೆ. ರಾಶಿಯನ್ನು ಎರಡು ಅಥವಾ ಮೂರು ಗುಡ್ಡೆ ಮಾಡುತ್ತಾರೆ. ರಾಶಿಯ ಪಕ್ಕದಲ್ಲಿ ಮೊರ, ಬರಲು ಇಡುತ್ತಾರೆ. ಸಗಣಿಯಲ್ಲಿ ಬೆನಕನನ್ನು ಮಾಡಿ, ಹೂ ಸಿಕ್ಕಿಸುತ್ತಾರೆ. ರಾಶಿಗೆ ಮಾವಿನ ಎಲೆ ಸಿಕ್ಕಿಸಿ, ಕಾಯಿ ಒಡೆದು, ಕಡ್ಲೇಪುರಿಯಿಂದ ಪಲ್ಲಾರ ಮಾಡಿ ರಾಶಿಗೆ ಎಡೆ ಇಟ್ಟು ಪೂಜಿಸುತ್ತಾರೆ.

ನಂತರ ಪ್ರಸಾದ ಹಂಚುತ್ತಾರೆ. ಇದಕ್ಕೆ ರಾಶಿ ಪಲ್ಲಾರ ಎನ್ನುತ್ತಾರೆ. ಈಚೆಗೆ ಕಡೆಕಣ ಎನ್ನುವುದು ಕಣ್ಮರೆಯಾಗುತ್ತಿದೆ. ಕಾಳು ರಾಶಿ, ಕಣ ಕಟ್ಟಲು ಸಹಾಯ ಮಾಡಿದವರಿಗೆ ಊಟ ಹಾಕುವ ಸಂಪ್ರದಾಯ ಇಲ್ಲ. ಭಕ್ತಿ ಭಾವಗಳಿಂದ ರೋಣಗಲ್ಲು, ಮೇಟಿ, ರಾಶಿಗೆ ಕೃತಜ್ಞತೆಯಿಂದ ನಮಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.