ಸೋಮವಾರ, ಜೂಲೈ 6, 2020
21 °C

ನಿರ್ಣಯ ಉಳಿಸಲು ನೂರೆಂಟು ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಣಯ ಉಳಿಸಲು ನೂರೆಂಟು ದಾರಿ

ಕ್ಯಾಲೆಂಡರ್‌ ಬದಲಾಗುವುದರ ಜೊತೆಗೆ ವರ್ಷವೊಂದರಲ್ಲಿ ಮಾಡಲೇಬೇಕಾದ ಕೆಲಸಗಳ ಪಟ್ಟಿಯೂ ಸಿದ್ಧವಾಗುತ್ತದೆ. ಆದರೆ ದಿನಕಳೆದಂತೆ ಆ ನಿರ್ಣಯಗಳು ನೆನೆಗುದಿಗೆ ಬಿದ್ದಿರುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ಶೇ80ರಷ್ಟು ಜನರ ನಿರ್ಣಯ ಜನವರಿ ಹೊತ್ತಿಗೇ ನಿರ್ಲಕ್ಷ್ಯಕ್ಕೊಳಗಾಗಿರುತ್ತದೆ. ಆದರೆ ಈ ವರ್ಷ ಹಾಗಾಗುವುದು ಬೇಡ. ನೀವು ಹಾಕಿಕೊಂಡ ನಿಯಮಗಳನ್ನು ವರ್ಷಾಂತ್ಯದೊಳಗೆ ಸಂಪೂರ್ಣಗೊಳಿಸಿಕೊಳ್ಳಲು ಈ ಕೆಲವು ನಿಯಮಗಳನ್ನು ಅನುಸರಿಸಿ.

ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿ: ಇದರಿಂದಾಗಿ ನಿಮ್ಮ ಮನಸ್ಸಿನ ಆಸೆಗಳನ್ನು ನೆರವೇರಿಸಿಕೊಳ್ಳಲು ಹೆಚ್ಚು ಆತ್ಮವಿಶ್ವಾಸ ಬೆಳೆಯುತ್ತದೆ. ನಿಮ್ಮೊಳಗಿನ ಸಕಾರಾತ್ಮಕ ಅಂಶಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರಿ. ಇದರಿಂದ ನಿಮ್ಮ ಮನಸ್ಸು ಹಗುರಾಗಿ, ಉಲ್ಲಸಿತವಾಗಿ ಹೆಚ್ಚೆಚ್ಚು ಕೆಲಸ ಮಾಡಲು ಪ್ರೋತ್ಸಾಹ ಸಿಗುತ್ತದೆ.

ಒಳಮನಸ್ಸು ಮುಖ್ಯ: ಯಾವುದೇ ನಿಯಮವನ್ನು ಹಾಕಿಕೊಳ್ಳುವಾಗ ನಿಮ್ಮ ಒಳ ಮನಸ್ಸು ಏನು ಹೇಳುತ್ತದೆ ಎನ್ನುವುದರ ಬಗೆಗೆ ಗಮನ ಇರಲಿ. ಮನಸ್ಸು ಅಸಾಧ್ಯ ಎಂದಷ್ಟೂ ಬುದ್ಧಿ ಸಾಧಿಸುವುದಾಗಿ ಸವಾಲು ಎಸೆಯುತ್ತದೆ. ಇದೇ ಪ್ರಕ್ರಿಯೆ ಸಾಧನೆಗೆ ದಾರಿಯಾಗುತ್ತದೆ.

ನಿರ್ಣಯಗಳ ಸ್ಪಷ್ಟ ಕಲ್ಪನೆ ಇರಲಿ: ಏನು ಸಾಧಿಸಬೇಕು ಎನ್ನುವುದರ ಸ್ಪಷ್ಟ ಚಿತ್ರಣ ಸಿಕ್ಕರೆ ಅದನ್ನು ನೀವು ಸಾಧಿಸುವ ಹಾದಿಯ ಅರ್ಧ ಭಾಗ ಕ್ರಮಿಸಿದ್ದೀರಿ ಎಂದೇ ಅರ್ಥ. ವೃತ್ತಿಗೆ ಸಂಬಂಧಿಸಿದ ನಿರ್ಣಯವಾದರೆ ಅದನ್ನು ಸಾಧಿಸಲು ಬೇಕಾದ ಕೌಶಲಗಳ ಕುರಿತು ತರಬೇತಿ ಪಡೆಯಿರಿ.

ಸ್ವಂತ ಆಲೋಚನೆಗಳಿಗೆ ಬೆಲೆಕೊಡಿ: ಕೆಲವರು ತಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ಇನ್ನೊಬ್ಬರ ಮೇಲೆ ಹೇರಲು ಪ್ರಯತ್ನಿಸುತ್ತಿರುತ್ತಾರೆ. ಅಂಥವರಿಂದ ಸಾಧ್ಯವಾದಷ್ಟೂ ದೂರವಿರಿ. ನಿಮ್ಮ ಸ್ವಂತ ಆಲೋಚನೆಗಳಿಗೇ ಹೆಚ್ಚು ಬೆಲೆ ಕೊಡಿ.

ವಾಸ್ತವದ ಕಡೆಗೆ ಗಮನಕೊಡಿ: ಕೇವಲ ಕಲ್ಪನೆಗಳಲ್ಲಿಯೇ ಕನಸಿನ ಸೌಧ ಕಟ್ಟಿಕೊಳ್ಳುವುದನ್ನು ಬಿಟ್ಟುಬಿಡಿ. ಉದಾಹರಣೆಗೆ ಈ ವರ್ಷ ನನಗೆ ಸರಿಹೊಂದುವ ಅತ್ಯುತ್ತಮ ಸಂಗಾತಿಯನ್ನು ಹುಡುಕಿಕೊಳ್ಳಬೇಕು ಎಂಬುದು ನಿಮ್ಮ ಗುರಿ ಎಂದಿಟ್ಟುಕೊಳ್ಳಿ. ಸಂಗಾತಿ ಸಿಗುವ ಕಲ್ಪನೆಯಲ್ಲೇ ಕಳೆದು ಹೋಗದೆ ಹುಡುಗ ಎಂತಿರಬೇಕು ಎನ್ನುವ ಬಗೆಗೆ ಮೊದಲು ನಿರ್ಣಯಿಸಿಕೊಳ್ಳಿ. ಅದು ನಿಮಗೊಂದು ಸ್ಪಷ್ಟ ನಿಲುವು ನೀಡುವುದಲ್ಲದೆ ಮುಂದಿನ ಬದುಕಿಗೂ ಸಹಾಯವಾಗಬಲ್ಲುದು.

ನೆನಪಿನ ಶಕ್ತಿ ವೃದ್ಧಿಸಿಕೊಳ್ಳಿ: ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ಕಾರ್ಯಕ್ಷಮತೆ ಬಹುಮುಖ್ಯ. ಹೀಗಾಗಿ ನಿಮ್ಮ ನೆನಪಿನ ಶಕ್ತಿ ಎನ್ನಾಗಿರಬೇಕು. ಬುದ್ಧಿಗೆ ಹೆಚ್ಚಿನ ಕೆಲಸ ಕೊಡಿ. ಫೋನ್‌ ನಂಬರ್‌ಗಳನ್ನು ಸುಮ್ಮನೆ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುವುದನ್ನು ಬಿಟ್ಟು ನೆನಪಿಟ್ಟುಕೊಳ್ಳಲು ಯತ್ನಿಸಿ. ಚಿಕ್ಕಪುಟ್ಟ ಲೆಕ್ಕಾಚಾರಗಳಿಗೆ ಕಾಲ್ಯುಕ್ಯುಲೇಟರ್ ಬದಲು ಬುದ್ದಿ ಉಪಯೋಗಿಸಿ.

ನಾಳೆ ಮಾಡುವ ಕೆಲಸ ಇಂದೇ ಮಾಡಿ: ನಾಳೆಯಿಂದಲೇ ಕೆಲಸ ಪ್ರಾರಂಭಿಸಬೇಕು ಎನ್ನುವುದು ಎಲ್ಲರ ನಿಲುವು. ಆದರೆ ಹೊಸತೊಂದು ನಿರ್ಣಯ ಕೈಗೊಂಡಿರಿ ಎಂದರೆ ಅದರ ಸಾಕಾರಕ್ಕೆ ಇಂದಿನಿಂದಲೇ ಪ್ರಯತ್ನ ಪ್ರಾರಂಭಿಸುವುದು ಒಳಿತು. ಹಾಗೆ ಮಾಡಬಹುದು ಹೀಗೆ ಮಾಡಬಹುದು ಎಂಬ ಯೋಚನೆಯಲ್ಲಿ ದಿನ ದೂಡುವುದಕ್ಕಿಂತ ಅದನ್ನು ಕಾರ್ಯಗತಗೊಳಿಸಲು ಬೇಕಾದ ಯೋಜನೆಯನ್ನು ಇಂದೇ ಸಿದ್ಧಪಡಿಸಿಕೊಳ್ಳಿ.

ನಿಖರ ಆಲೋಚನೆ ಬೇಕು: ಹೊಸತನ್ನು ಸಾಧಿಸುವಾಗ ಅಥವಾ ಬದುಕನ್ನೇ ಬದಲಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದಾಗ ಮೊದಲು ನಿಖರವಾದ ಆಲೋಚನೆ ಬೇಕು. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸರಿಯಾದ ಚೌಕಟ್ಟು ಹಾಕಿಕೊಂಡಾಗ ಅಂದುಕೊಂಡಿದ್ದನ್ನು ಸಾಧಿಸುವುದು ಸುಲಭವಾಗುತ್ತದೆ. ಅಲ್ಲದೆ ಸ್ಪಷ್ಟ ನಿಲುವು ಯಾವಾಗಲೂ ಮನಸ್ಸನ್ನು ನಿರಾಳವಾಗಿಸುತ್ತದೆ. ಪ್ರತಿ ಕೆಲಸಕ್ಕೂ ಸರಿಯಾದ ಸಮಯವನ್ನು ನಿಗದಿ ಮಾಡಿಕೊಳ್ಳಿ. ಆಗ ಎಲ್ಲವೂ ಸುಲಭವಾಗುತ್ತದೆ.

ಮೊಗದಲ್ಲಿ ಸದಾ ನಗುವಿರಲಿ: ಸಂಶೋಧನೆಗಳ ಪ್ರಕಾರ ಖುಷಿಖುಷಿಯಾಗಿರುವುದರಿಂದ ಹೆಚ್ಚು ಕ್ರಿಯಾಶೀಲರಾಗಿರಲು ಸಾಧ್ಯ. ನಿರ್ಣಯಗಳನ್ನು ಸಾಧಿಸುವ ಭರದಲ್ಲಿ ತೀರಾ ಗಂಭೀರವಾಗಿದ್ದಲ್ಲಿ ಮನಸು ಬಹುಬೇಗನೆ ಬಳಲುತ್ತದೆ. ಮನಸ್ಸಿಗೂ ವಿರಾಮ ಬೇಕಿರುವುದರಿಂದ ಆಗಾಗ ಹಾಸ್ಯ ಕಾರ್ಯಕ್ರಮಗಳನ್ನು ನೋಡುವುದು ಅಥವಾ ನಿಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಸ್ನೇಹಿತರೊಂದಿಗೆ ತಮಾಷೆ ಮಾಡುತ್ತಾ ಖುಷಿಯಾಗಿ ಸಮಯ ಕಳೆಯಿರಿ. ನೀವು ಕೆಲಸ ಮಾಡುವಲ್ಲಿ ಅಥವಾ ಆಗಾಗ ದೃಷ್ಟಿಗೆ ಬೀಳುವ ಸ್ಥಳದಲ್ಲಿ ಹಾಸ್ಯಮಯ ಚಿತ್ರವೊಂದನ್ನು ಅಂಟಿಸಿಕೊಳ್ಳಿ. ಇದು ಮನಸ್ಸು ತೀರಾ ಗಂಭೀರವಾಗದಂತೆ, ಲಘುವಾಗಿರುವಂತೆ ಎಚ್ಚರಿಸುತ್ತದೆ.

ಸಾಧನೆಯ ಅಭಿರುಚಿ ಎಲ್ಲರಲ್ಲಿ ಸಹಜ. ಆದರೆ ಅದನ್ನು ತಲುಪುವುದಕ್ಕೆ ಧಾವಂತ ಬೇಡ. ನಿರ್ಣಯಗಳನ್ನು ಈಡೇರಿಸಿಕೊಳ್ಳುವ ಛಲದೊಂದಿಗೆ ಸ್ವಯಂ ಪ್ರೇರಣೆಯೂ ನಿಮ್ಮೆಲ್ಲ ಆಸೆಯ ಸಾಕಾರಕ್ಕೆ ಮೆಟ್ಟಿಲು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.