ಮಂಗಳವಾರ, ಆಗಸ್ಟ್ 4, 2020
22 °C

ಕೂಚಿಪುಡಿ ಸೊಗಸಿನ ‘ಶಾಂಭವಿ’

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಕೂಚಿಪುಡಿ ಸೊಗಸಿನ ‘ಶಾಂಭವಿ’

ಕರ್ನಾಟಕದಲ್ಲಿ ಕೂಚಿಪುಡಿ ನೃತ್ಯ ಪ್ರಕಾರ ಆಗಿನ್ನೂ ಹೊಸತು. ಕಲಿಯುವ ಅವಕಾಶಗಳೂ ವಿರಳವಾಗಿದ್ದ ಕಾಲ. ಅಂಥ ಸಮಯದಲ್ಲಿ ಕೂಚಿಪುಡಿ ನೃತ್ಯದ ಸೊಗಸನ್ನು ಇಲ್ಲಿ ಬಿತ್ತುವ ಉದ್ದೇಶದಿಂದ ಹುಟ್ಟಿಕೊಂಡಿದ್ದು ಶಾಂಭವಿ ನಾಟ್ಯಶಾಲೆ.

ಕಲಾವಿದೆ ವೈಜಯಂತಿ ಕಾಶಿ ಅವರು 1993ರಲ್ಲಿ ಆರಂಭಿಸಿದ ಶಾಲೆ ಇದು. ಕೆ.ಎ. ರಾಮನ್‌ ಅವರಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿ ಸಿ.ಆರ್. ಆಚಾರ್ಯಲು, ಪ್ರಹ್ಲಾದ ಶರ್ಮ, ನಟರಾಜ ರಾಮಕೃಷ್ಣ ಮುಂತಾದ ಪ್ರಸಿದ್ಧ ನಾಟ್ಯಗಾರರ ಬಳಿ ಕೂಚಿಪುಡಿ ನೃತ್ಯದಲ್ಲಿ ಪರಿಣತಿ ಸಿದ್ಧಿಸಿಕೊಂಡವರು. ಇವರ ಕೂಚಿಪುಡಿ ನೃತ್ಯ ಪ್ರೀತಿಯ ಫಲವೇ ಶಾಂಭವಿ ನೃತ್ಯ ಶಾಲೆ.

‘ಕೂಚಿಪುಡಿ ಆಂಧ್ರ ಮೂಲದ ಶಾಸ್ತ್ರೀಯ ನಾಟ್ಯ ಪ್ರಕಾರ. ಹಿಂದೆ ಪುರುಷರಷ್ಟೇ ಇದ್ದ ಈ ಪ್ರಕಾರಕ್ಕೆ ಸ್ವಾತಂತ್ರ್ಯಾನಂತರ ಮಹಿಳೆಯರು ಹೆಜ್ಜೆ ಹಾಕಲು ಆರಂಭಿಸಿದರು. ಕೂಚಿಪುಡಿ ಆಗ ಇಲ್ಲಿ ಹೊಸ ಪ್ರಕಾರ. ಅದಕ್ಕೇ ಈ ನೃತ್ಯ ಪ್ರಕಾರ ಕಲಿಯಲು, ಕಲಿತು ಕಲಿಸಲು ಮುಂದಾದೆ. ಮೊದಲು ಮೂರು ಮಕ್ಕಳೊಂದಿಗೆ ವಿಜಯನಗರದ ಬಾಡಿಗೆ ಮನೆಯಲ್ಲಿ ಅಭ್ಯಾಸ ಆರಂಭಗೊಂಡಿತು. ನೃತ್ಯದ ಸಪ್ಪಳಕ್ಕೆ ಮನೆ ಖಾಲಿ ಮಾಡಬೇಕಾದ ಸಂದರ್ಭಗಳು ಬಂದದ್ದೇ ಹೆಚ್ಚು. ಆಗೆಲ್ಲಾ ಎಷ್ಟೋ ವಿದ್ಯಾರ್ಥಿಗಳನ್ನು ಬಿಡಬೇಕಾಗುತ್ತಿತ್ತು. ಅದಕ್ಕೆಂದೇ ಕೆಂಗೇರಿ ಬಳಿ ತೋಟದಲ್ಲಿ ನನ್ನದೇ ನೃತ್ಯ ಶಾಲೆ ತೆರೆದೆ. ಅದಕ್ಕೆ ಶಾಂಭವಿ ಎಂದು ಹೆಸರಿಟ್ಟೆ’ ಎಂದು ನೆನಪಿಸಿಕೊಳ್ಳುತ್ತಾರೆ ವೈಜಯಂತಿ ಕಾಶಿ.

ಮೂರು ಮಕ್ಕಳಿಂದ ಆರಂಭಗೊಂಡ ಶಾಲೆಯಲ್ಲಿ ಈವರೆಗೆ ಸಾವಿರಾರು ಮಕ್ಕಳು ಕಲಿತು ಹೋಗಿದ್ದಾರೆ. ಗುರುರಾಜ್, ಮಹಾಲಕ್ಷ್ಮಿ, ಮಗಳಾದ ಪ್ರತೀಕ್ಷಾ, ಶ್ರೀಲಕ್ಷ್ಮಿ ಹಲವರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಾಲ್ವರು ನೃತ್ಯ ಶಿಕ್ಷಕರಿದ್ದು, ಬೆಂಗಳೂರಿನಲ್ಲಿ ನಾಲ್ಕು ಹಾಗೂ ಧಾರವಾಡದಲ್ಲಿ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ನೃತ್ಯಕ್ಕೆ ಪ್ರಶಾಂತ ವಾತಾವರಣವಿರಬೇಕೆಂದು ತೋಟದಲ್ಲಿ ನೃತ್ಯ ಶಾಲೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಹೊರಗಿನ ಗದ್ದಲವಿಲ್ಲದೇ ನೃತ್ಯದಲ್ಲಿ ತಲ್ಲೀನವಾಗುವ ಪ್ರಾಕೃತಿಕ ವಾತಾವರಣ ಶಾಲೆಯದ್ದು. ಇಲ್ಲಿಯೇ ಇದ್ದು ನೃತ್ಯ ಕಲಿಯಲು ಬಯಸುವವರಿಗೆ ವಸತಿ ಸೌಲಭ್ಯವಿದೆ. ನೃತ್ಯದೊಂದಿಗೆ ಸಂಗೀತ, ಯೋಗ, ಕೊರಿಯೋಗ್ರಫಿ ಕಲಿಸಲಾಗುತ್ತಿದೆ. ಮಕ್ಕಳಿಗೆ, ಉದ್ಯೋಗಸ್ಥರಿಗೆ ಅನುಕೂಲಕ್ಕೆ ತಕ್ಕಂತೆ ಸಮಯಾವಧಿ ನಿಗದಿಪಡಿಸಲಾಗಿದೆ.

‘ನೃತ್ಯದ ಹಣವನ್ನು ನೃತ್ಯಕ್ಕೆ ಚೆಲ್ಲಿ ಸಂಸ್ಥೆ ಕಟ್ಟಿರುವುದು. ಪ್ರತಿ ತಿಂಗಳೂ ಪರಿಣತರನ್ನು ಕರೆಸಿ ‌ಕಾರ್ಯಕ್ರಮ ಮಾಡುತ್ತೇವೆ. ಕೂಚಿಪುಡಿಯ ಯಕ್ಷಗಾನ, ಕಲಾಪಂ, ಸೋಲೊ ಈ ಮೂರು ಪ್ರಕಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆರ್ಟ್‌ ಸಿನಿಮಾಗಳ ಪ್ರದರ್ಶನವೂ ನಡೆಯುತ್ತದೆ. ನೃತ್ಯಕ್ಕೆ ಪೂರಕವಾಗುವ ಅಪರೂಪದ ಪುಸ್ತಕಗಳುಳ್ಳ ಗ್ರಂಥಾಲಯವೂ ಇದೆ’ ಎಂದು ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವಿವರಿಸುತ್ತಾರೆ ಅವರು.ವಿದೇಶಿ ವಿದ್ಯಾರ್ಥಿಗಳೊಂದಿಗೆ ಪ್ರತೀಕ್ಷಾ ಹಾಗೂ ವೈಜಯಂತಿ ಕಾಶಿ

ಭಾರತದ ವಿವಿಧೆಡೆ ಹಾಗೂ ವಿದೇಶಗಳಲ್ಲಿ ಏಡ್ಸ್, ಪರಿಸರ ಕಾಳಜಿ, ರಕ್ತದಾನ, ಪ್ರಕೃತಿ, ವೀರ ವನಿತೆಯರು ಸೇರಿದಂತೆ ಹಲವು ಆಶಯಗಳುಳ್ಳು ನೃತ್ಯರೂಪಕಗಳನ್ನು ಈ ಶಾಲೆಯ ವಿದ್ಯಾರ್ಥಿಗಳು ಪ್ರಯೋಗಿಸಿದ್ದಾರೆ.

ಕಾಫಿಯ ಉಪಯೋಗಗಳನ್ನು ಹೇಳಲು ವಿದ್ಯಾರ್ಥಿಗಳು ನೃತ್ಯರೂಪಕವೊಂದನ್ನು ಪ್ರದರ್ಶಿಸಿದ್ದರು. ನೃತ್ಯದ ಮೂಲಕ ಯಾವುದೇ ಸಂದೇಶವನ್ನು ದಾಟಿಸಬಹುದು ಎನ್ನುವ ಮಾತಿಗೆ ಇದು ಸಾಕ್ಷಿಯಾಗಿತ್ತು.

ವಿದೇಶಿಗರ ನೃತ್ಯ ಪ್ರೀತಿ: ವಿದೇಶಿಯರಲ್ಲಿ ಭಾರತೀಯ ನೃತ್ಯ ಪ್ರಕಾರಗಳ ಕುರಿತು ಆಸಕ್ತಿ ಹೆಚ್ಚುತ್ತಿದೆ ಎಂದು ವೈಜಯಂತಿ ಕಾಶಿ ಒತ್ತಿ ಹೇಳುತ್ತಾರೆ. ಅವರ ಬಳಿ ಥಾಯ್ಲೆಂಡ್‌, ಜರ್ಮನಿ, ಇಸ್ರೇಲ್, ಇಟಲಿ, ಅಮೆರಿಕ ಹೀಗೆ ಹಲವು ದೇಶಗಳಿಂದ ಬಂದ ವಿದ್ಯಾರ್ಥಿಗಳು ನೃತ್ಯ ಕಲಿತಿದ್ದಾರೆ.

‘ವಿದೇಶಿಗರು ಗುರುವಿನ ಮೇಲೆ ಇಡುವ ಭಕ್ತಿ ಅದ್ಭುತ. ಇಲ್ಲಿಂದ ಹೋಗುವಾಗ ಇಲ್ಲಿನ ಸಂಸ್ಕೃತಿ, ನೃತ್ಯ ಪರಂಪರೆಯನ್ನೂ ಕಲಿತು ಹೋಗುತ್ತಾರೆ. ನೃತ್ಯದ ಸೊಗಡನ್ನು ಅಲ್ಲಿ ಹಂಚುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು.

ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನೃತ್ಯವೂ ಅದೇ ಹಾದಿ ಹಿಡಿಯುತ್ತಿರುವ ಬಗ್ಗೆ ಅವರಲ್ಲಿ ಬೇಸರ ಇದೆ.

‘ನೃತ್ಯದಲ್ಲಿ ಗುರು ಶಿಷ್ಯ ಪರಂಪರೆಯೇ ಮುಖ್ಯ. ಅದು ಹೆಚ್ಚಿನ ಶಾಲೆಗಳಲ್ಲಿಲ್ಲ. ಆಧುನಿಕ ಸೌಲಭ್ಯಗಳೊಂದಿಗೆ ಗುರು ಶಿಷ್ಯಪರಂಪರೆಯನ್ನು ಉಳಿಸಿ, ಬೆಳೆಸುವುದು ಶಾಂಭವಿ ವೈಶಿಷ್ಟ್ಯ. ಆ ಪರಂಪರೆಯನ್ನೇ ನಾನು ನಂಬಿರುವುದು’ ಎನ್ನುತ್ತಾರೆ.

‘ನಾಯಿಕಾ’ ರಾಷ್ಟ್ರೀಯ ವಿಚಾರ ಸಂಕಿರಣ, ಡಾನ್ಸ್ ಜಾತ್ರೆಯಂಥ ವಿಶೇಷಗಳೊಂದಿಗೆ ಇತ್ತೀಚೆಗೆ ಯುವಜನಕೇಂದ್ರಿತ ತರಗತಿಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ. ಇಂಥ ಇನ್ನಷ್ಟು ವೈಶಿಷ್ಟ್ಯಗಳನ್ನು ಸೃಷ್ಟಿಸುವ ಹಂಬಲದೊಂದಿಗೆ ಹೆಜ್ಜೆ ಇಡುತ್ತಿದೆ ಶಾಂಭವಿ ನೃತ್ಯ ಶಾಲೆ.

ಸಂಪರ್ಕ ಸಂಖ್ಯೆ– 98461 86556

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.