ಭಾನುವಾರ, ಸೆಪ್ಟೆಂಬರ್ 26, 2021
28 °C

ವಿಶಿಷ್ಟ ಬಗೆಯ ಚಂದ್ರ ಗ್ರಹಣ

ಡಾ.ಎಸ್.ಎ.ಮೋಹನ್ ಕೃಷ್ಣ Updated:

ಅಕ್ಷರ ಗಾತ್ರ : | |

ವಿಶಿಷ್ಟ ಬಗೆಯ ಚಂದ್ರ ಗ್ರಹಣ

ಆಕಾಶದಲ್ಲಿ ನಡೆಯುವ ವಿದ್ಯಮಾನಗಳು ತುಂಬ ಕುತೂಹಲಕಾರಿ ಆಗಿರುತ್ತವೆ. ಪ್ರತಿಯೊಂದು ಪ್ರಕ್ರಿಯೆಯ ಒಳಾರ್ಥ ಅರಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ನಭೋಮಂಡಲದಲ್ಲಿ ಗೋಚರಿಸುವ ಅಸಂಖ್ಯಾತ ಆಕಾಶಕಾಯಗಳು ನಮ್ಮನ್ನು ಪದೇ ಪದೇ  ಆಕರ್ಷಿಸುತ್ತವೆ. ಪ್ರತಿಯೊಂದು ಆಕಾಶಕಾಯ ಬಹಳ ವಿಶಿಷ್ಟವಾಗಿದ್ದು, ರಚನೆ ಮತ್ತು ಸ್ವರೂಪವು ಕ್ಲಿಷ್ಟಕರವು ಆಗಿರುತ್ತದೆ. ಅನಾದಿಕಾಲದಿಂದಲೂ ಈ ನಿಗೂಢ ಆಕಾಶಕಾಯಗಳು ಮನುಕುಲವನ್ನು ತಮ್ಮತ್ತ ಸೆಳೆಯುತ್ತಲೇ ಇವೆ. ನಭೋಮಂಡಲದಲ್ಲಿ ಹಲವಾರು ಸ್ಮರಣೀಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಈ ರೀತಿಯ ಚಟುವಟಿಕೆಗಳಲ್ಲಿ ‘ಗ್ರಹಣ’ (Eclipse) ಬಹಳ ಪ್ರಮುಖವಾದದ್ದು.

‘ಗ್ರಹಣ’ವೆಂದರೆ ಹಲವರು ನಡುಗುತ್ತಾರೆ, ಇನ್ನಿತರರು ಭಯ ಬೀಳುತ್ತಾರೆ. ಏಕೆ? ಏನಿದರ ಗುಟ್ಟು? ಈ ‍ಪ್ರಶ್ನೆಗಳಿಗೆ ಖಚಿತ ಉತ್ತರ ಸಿಗುವುದು ಕಷ್ಟ. ಖಗೋಳ ಭಾಷೆಯಲ್ಲಿ ವಿವರಿಸಬೇಕಾದರೆ, ಇದೊಂದು ಸಹಜ ಹಾಗೂ ಸರಳ ಪ್ರಕ್ರಿಯೆ. ಸೂರ್ಯ, ಚಂದ್ರ ಮತ್ತು ಭೂಮಿಯ ಚೆಲ್ಲಾಟದ ಮೂಲವೇ ಗ್ರಹಣ. ಈ ರೀತಿಯ ಪ್ರಕ್ರಿಯೆ ಖಗೋಳ ವಿಜ್ಞಾನಿಗಳನ್ನು ಆಕರ್ಷಿಸಿ, ಅನೇಕ ವೈಜ್ಞಾನಿಕ ಅಂಶಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಣಗಳು ಪ್ರತಿ ವರ್ಷವೂ ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳ ಹೊಸ ಹೊಸ ಅನ್ವೇಷಣೆಗಳಿಗೆ ಸಹಾಯ ಮಾಡುತ್ತಿರುತ್ತವೆ.

ಇದೇ ಜನವರಿ 31ರಂದು ವಿಶಿಷ್ಟ ರೀತಿಯ ಚಂದ್ರ ಗ್ರಹಣ ಸಂಭವಿಸಲಿದೆ. ಇದು ಅನ್ಯ ರೀತಿಯ ಚಂದ್ರ ಗ್ರಹಣಕ್ಕಿಂತಲೂ ಬಹಳ ವೈಶಿಷ್ಟ್ಯ ಪೂರ್ಣ. ಈ ಗ್ರಹಣವನ್ನು ‘ಪ್ರಕಾಶಮಾನ ರಕ್ತಚಂದ್ರ ಸಂಪೂರ್ಣ ಖಂಡಗ್ರಾಸ ಚಂದ್ರ ಗ್ರಹಣ (Super Blood Blue Moon Total Lunar Eclipse) ಎಂದು ಕರೆಯುತ್ತಾರೆ.

ಈ ರೀತಿಯ ಸಂಪೂರ್ಣ ಚಂದ್ರ ಗ್ರಹಣ 150 ವರ್ಷಗಳ ನಂತರ ಸಂಭವಿಸುತ್ತಿದೆ. ಮಾರ್ಚ್ 31, 1866 ರಲ್ಲಿ ಖಂಡಗ್ರಾಸ ಚಂದ್ರಗ್ರಹಣವು ಸಂಭವಿಸಿತ್ತು. ಜನವರಿ 31– ಈ ವರ್ಷದ ಬಹಳ ಸ್ಮರಣೀಯ ದಿನ. ಇದೇ ತಿಂಗಳು, ಎರಡು ಹುಣ್ಣಿಮೆಯ ಜೊತೆಗೆ ಅತಿ ಪ್ರಕಾಶಮಾನವಾದ ಪೂರ್ಣ ಚಂದ್ರವೂ ಇದಾಗಿದೆ. ಇದನ್ನು ‘Super moon'  ಮತ್ತು ‘Blue moon’ ಎಂದೂ ಕರೆಯುತ್ತಾರೆ.   ‘Blue moon’ ಎಂದರೆ, ಚಂದ್ರನ ಬಣ್ಣ ‘ನೀಲಿ’ಯೆಂದು ತಿಳಿಯುವುದು ತಪ್ಪು. ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಸಂಭವಿಸಿದರೆ ‘Blue moon’  ಎನ್ನುತ್ತಾರೆ.

ಈ ಬಗೆಯ ವೈಶಿಷ್ಟ್ಯಪೂರ್ಣ ಚಂದ್ರಗ್ರಹಣವನ್ನು ಏಷ್ಯಾ, ಆಸ್ಟ್ರೇಲಿಯಾ, ಇಂಡೊನೇಷ್ಯಾ, ಅಮೆರಿಕ ಹಾಗೂ ಇನ್ನೂ ಹಲವು ದೇಶಗಳಲ್ಲಿ ವೀಕ್ಷಿಸಬಹುದು.  ಸಂಜೆ 6:21ಕ್ಕೆ ಗೋಚರಿಸಲು ಪ್ರಾರಂಭವಾದರೆ, 7:37ರವರೆಗೂ ವೀಕ್ಷಿಸಬಹುದು.

ಆದರೆ ನೆನಪಿಡಿ, ಚಂದ್ರ ಗ್ರಹಣದ ಬಗ್ಗೆ ಅರಿವಿರಬೇಕಾದರೆ, ಅರ್ಧ ಛಾಯಾ ಹಾಗು ಪೂರ್ಣಛಾಯಾ (Penumbra and Umbra) ಪ್ರವೇಶಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಜನವರಿ 31 ರಂದು, ಅರ್ಧಛಾಯಾ ಪ್ರವೇಶ ಸಂಜೆ 4:21ಕ್ಕೆ ಮಾಡಿದರೆ, ಬಿಡುವುದು ರಾತ್ರಿ 9:38. ಗ್ರಹಣದ ಸಂಪೂರ್ಣ ಅವಧಿ 3 ಗಂಟೆ 18 ನಿಮಿಷಗಳು.

ಚಂದ್ರ ಗ್ರಹಣ ವೀಕ್ಷಿಸಲು ಯಾವುದೇ ಬಗೆಯ ಕ್ಲಿಷ್ಟಕರ ಸಾಧನಗಳ ಅವಶ್ಯಕತೆಯಿರುವುದಿಲ್ಲ. ನಮ್ಮ ಬರಿಗಣ್ಣಿನಿಂದ ನೋಡಬಹುದು. ದೂರದರ್ಶಕದ ಸಹಾಯದಿಂದಾದರೆ, ಇನ್ನೂ ಅದ್ಭುತ. ಹಲವರಿಗೆ, ಚಂದ್ರಗ್ರಹಣವಾದಾಗ ‘ಕೆಂಪು’ ಬಣ್ಣದ ಕಂಪೇನು ಎಂದು ಪ್ರಶ್ನೆ ಉದ್ಭವಿಸುವುದು ಸಹಜ.  ಬೆಳಕಿನ ಚೆದುರುವಿಕೆಯ (Ray leigh’s Scattering) ಕಾರಣ, ಚಂದ್ರ ರಕ್ತವರ್ಣವಾಗಿ ಕಾಣುತ್ತದೆ.

ಚಂದ್ರಗ್ರಹಣದ ವೀಕ್ಷಣೆ ಮಾಡುವುದಕ್ಕೆ ಆತಂಕಬೇಡ. ಬರೀ ಕಣ್ಣಿನಿಂದಲೇ ನೋಡಿ ಆನಂದ ಪಡಬಹುದು. ಸೂರ್ಯಗ್ರಹಣವಾದರೆ ಕಣ್ಣು ಅಥವಾ ಅಕ್ಷಿಪಟನಾಶ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಉತ್ತಮ ಗುಣಮಟ್ಟದ ದೂರದರ್ಶಕವಾದರೆ, ಅನೇಕ ಮಾಹಿತಿ ತಿಳಿಯುವುದಕ್ಕೆ ಸಹಾಯವಾಗುತ್ತದೆ. ಛಾಯಾಗ್ರಹಣಕ್ಕೆ ಒಂದು ಸುವರ್ಣಾವಕಾಶ. ಈ ಬಗೆಯ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಬೆಳಕಿಲ್ಲದೆಯಿರುವ ಪ್ರದೇಶದಲ್ಲೋ ‘ಯಾ‘ ಬೆಟ್ಟದ ಮೇಲೆ ವೀಕ್ಷಿಸಿದರೆ ಹೆಚ್ಚು ಪ್ರಯೋಜನಕಾರಿ.

ಈ ವರ್ಷದ ಜುಲೈ 27 ರಂದು ಚಂದ್ರ ಗ್ರಹಣ ವೀಕ್ಷಿಸಬಹುದು. ಆದರೆ ರಕ್ತವರ್ಣ, ನೀಲಿಚಂದ್ರ ಗ್ರಹಣ ಸಂಪೂರ್ಣ ಗ್ರಹಣವನ್ನು 2028 ಹಾಗು 2037ರಲ್ಲಿ ವೀಕ್ಷಿಸಲು ಸಾಧ್ಯ. ಹಾಗಾದರೆ ಜನವರಿ 31 ರಂದು ವೀಕ್ಷಿಸಲು ಮರೆಯಬೇಡಿ.

(ಹವ್ಯಾಸಿ ಖಗೋಳ ತಜ್ಞ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು