ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಶಿಬಿರಕ್ಕೆ ಬಾಬಾ ರಾಮದೇವ್‌ ಚಾಲನೆ

Last Updated 5 ಫೆಬ್ರುವರಿ 2018, 9:41 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಉಚಿತ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರಕ್ಕೆ ಯೋಗ ಗುರು, ಪತಂಜಲಿಯ ಯೋಗ ಶಿಕ್ಷಣ ಸಮಿತಿ ಮುಖ್ಯಸ್ಥ ಬಾಬಾ ರಾಮದೇವ್‌ ಅವರು ಭಾನುವಾರ ಚಾಲನೆ ನೀಡಿದರು.

ಬೆಳಿಗ್ಗೆ 5 ರಿಂದ ಶಿಬಿರ ಆರಂಭವಾಯಿತು. ಮಹಿಳೆಯರು, ಪುರುಷರು, ಸಣ್ಣ ಮಕ್ಕಳು, ಯುವಕ–ಯುವತಿಯರು, ವೃದ್ಧರು ಯೋಗಾಸನಗಳನ್ನು ಮಾಡಿದರು. ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಜನರು ಭಾಗವಹಿಸಿದ್ದರು.

ರಾಮದೇವ್ ಅವರು ಒಂದೊಂದು ಯೋಗಾಸನ ಮಾಡುತ್ತಾ, ಅದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತಿದ್ದರು. ಅನುಲೋಮ ವಿಲೋಮ ಪ್ರಾಣಾಯಾಮ, ವಜ್ರಾಸನ, ಪವನ ಮುಕ್ತಾಸನ, ಹಾಲಾಸನ, ಭುಜಂಗಾಸನ, ಗರುಡಾಸನ, ಪರಿಪೂರ್ಣಾಸನ, ಅನಂತಾಸನ, ಮಾಲಾಸನ, ಚತುರಂಗ ದಂಡಾಸನ ಸೇರಿ ವಿವಿಧ ಯೋಗಭಂಗಿಗಳನ್ನು ಪ್ರದರ್ಶಿಸಿದರು. ಯೋಗಾಸನದ ಮಧ್ಯೆ ಹಾಸ್ಯ ಚಟಾಕಿಯನ್ನೂ ಹಾರಿಸುತ್ತಿದ್ದರು. ಯೋಗ ಶಿಕ್ಷಣ ಸಮಿತಿಯವರು ದೇಶಭಕ್ತಿ ಗೀತೆಗಳನ್ನು ಹಾಡಿ ಶಿಬಿರಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು.

ನಿರಂತರ ಮೂರು ತಾಸು ಶಿಬಿರ ನಡೆಯಿತು. ಕ್ರೀಡಾಂಗಣ ಸಂಪೂರ್ಣ ಯೋಗಮಯವಾಗಿತ್ತು. ವೇದಿಕೆ ಮುಂಭಾಗದ ಎಡ ಮತ್ತು ಬಲ ಭಾಗಗಳಲ್ಲಿ ದೊಡ್ಡ ಗಾತ್ರದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಯೋಗಾಸನದ ಬಳಿಕ ಪ್ರಕೃತಿಯಿಂದ ದೊರೆಯುವ ನೈಸರ್ಗಿಕ ಗಿಡಮೂಲಿಕೆಗಳ ಮಹತ್ವ ತಿಳಿಸಿದರು. ನಂತರ ರಾಮದೇವ ಅವರನ್ನು ಶಿಬಿರಾರ್ಥಿಗಳು ಮೊಬೈಲ್ ಪೋನ್‌ನಲ್ಲಿ ಸೆರೆ ಹಿಡಿದರು.

ಬಳಿಕ ಮಾತನಾಡಿ, ‘ ಯೋಗ ಮಾಡಿದವರು ನಿರೋಗಿಗಳು. ರಕ್ತದೊತ್ತಡ, ಕ್ಯಾನ್ಸರ್, ಥೈರಾಡ್, ಅಸ್ತಮಾ ಮತ್ತಿತರ ಕಾಯಿಲೆಗಳಿಗೆ ಆಲೋಪಥಿಕ್ ಔಷಧಿ ಇಲ್ಲ. ಆದರೆ, ಇವೆಲ್ಲವೂಗಳನ್ನು ಕೇವಲ ಯೋಗದ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ’ ಎಂದರು.

‘ಗುಟ್ಕಾ ಹಾಗೂ ಮದ್ಯಪಾನ, ತಂಪು ಪಾನೀಯ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಇವುಗಳಿಂದ ಆದಷ್ಟು ದೂರ ಇರಬೇಕು. ಗೋ ಮೂತ್ರ ಸೇವನೆಯಿಂದ ಹಲವಾರು ರೋಗಗಳು ಗುಣಪಡಿಸಬಹುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ ಅಡಗಿದೆ’ ಎಂದು ಹೇಳಿದರು.

ಮುಗಳಖೋಡು ಮಠದ ಮುರುಘರಾಜೇಂದ್ರ ಸ್ವಾಮೀಜಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಪತಂಜಲಿ ಯೋಗ ಸಮಿತಿಯ ಕರ್ನಾಟಕ ಪ್ರಭಾರಿ ಭವರಲಾಲ್ ಜೀ ಇದ್ದರು. ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯುವ ಭಾರತ, ಪತಂಜಲಿ ಕಿಸಾನ್ ಸೇವಾ ಸಮಿತಿ ಶಿಬಿರವನ್ನು ಆಯೋಜಿಸಿದ್ದವು. ಯೋಗ ಚಿಕಿತ್ಸಾದಲ್ಲಿ ಬೆಳಿಗ್ಗೆ 10.30ಕ್ಕೆ ಸುಮಾರು 32 ಜನರು ತೋರಿಸಿಕೊಂಡರು. ಇಬ್ಬರು ವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಹೊಸಪೇಟೆ: ‘ನಮ್ಮ ದೇಶದ ಹಣ ನಮ್ಮ ದೇಶದಲ್ಲೇ ಇರಬೇಕು. ಹಾಗಾಗಿ ಎಲ್ಲರೂ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು’ ಎಂದು ಪತಂಜಲಿ ಯೋಗ ಸಮಿತಿ ಮುಖ್ಯಸ್ಥ ಬಾಬಾ ರಾಮದೇವ್‌ ಹೇಳಿದರು. ಪತಂಜಲಿ ಯೋಗ ಸಮಿತಿ ತಾಲ್ಲೂಕು ಘಟಕದಿಂದ ಭಾನುವಾರ ಸಂಜೆ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ದೀಕ್ಷೆ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ವಿದೇಶಿ ಕಂಪನಿಗಳ ಉತ್ಪನ್ನಗಳನ್ನು ಉಪಯೋಗಿಸಿದರೆ ನಮ್ಮ ಹಣ ಹೊರದೇಶಕ್ಕೆ ಹೋಗುತ್ತದೆ. ಅವರೇಕೇ ಇಲ್ಲಿ ಅದನ್ನು ಖರ್ಚು ಮಾಡುತ್ತಾರೆ. ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸಿದರೆ ದೇಶದ ಅಭಿವೃದ್ಧಿಗೆ ಬಳಸಬಹುದು. ಆ ನಿಟ್ಟಿನಲ್ಲಿ ಪತಂಜಲಿ ಯೋಗ ಸಮಿತಿ ಕೆಲಸ ಮಾಡುತ್ತಿದೆ. ಸಮಿತಿಯ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಗೋಶಾಲೆ, ಗೋ ಸಂರಕ್ಷಣೆ ಸೇರಿ ದೇಶ ನಿರ್ಮಾಣ ಕೆಲಸಕ್ಕೆ ವಿನಿಯೋಗಿಸುತ್ತಿದ್ದೇವೆ. ಹಾಗಾಗಿ ಜನ ಪತಂಜಲಿಯ ಉತ್ಪನ್ನಗಳನ್ನು ಉಪಯೋಗಿಸಬೇಕು. ಸ್ವದೇಶಿ ಉಳಿಸಿ, ದೇಶ ಉಳಿಸಿ ಎಂಬ ಮಂತ್ರದಂತೆ ಎಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ಕೊಡಬೇಕು’ ಎಂದು ತಿಳಿಸಿದರು.

‘ಇಂದು ತಂತ್ರಜ್ಞಾನದ ಅಭಿವೃದ್ಧಿಯಿಂದ ಸಾಕಷ್ಟು ಮುಂದುವರೆದಿದ್ದೇವೆ. ಆದರೆ, ಬಹುತೇಕ ಜನ ಅಂತರ್ಜಾಲದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡು
ತ್ತಿದ್ದಾರೆ. ಯಾವಾಗಲೂ ಒಳ್ಳೆಯದನ್ನು ಕೇಳಬೇಕು. ಒಳ್ಳೆಯದನ್ನು ನೋಡಿ ಉತ್ತಮರಾಗಿ ಇರಬೇಕು. ಜೀವನದಲ್ಲಿ ಆಸೆ ಇರಬೇಕು. ಆದರೆ, ನಿರಾಸೆ ಇರಬಾರದು. ಅದು ಮೃತ್ಯುವಿಗೆ ಕಾರಣವಾಗುತ್ತದೆ. ದೇಶದಲ್ಲಿ ಅನೇಕ ಧರ್ಮಗಳಿವೆ. ಆದರೆ, ಅವುಗಳ ತತ್ವವೊಂದೆ. ಅದನ್ನು ಅರಿತು ಎಲ್ಲರೂ ಸಹೋದರರಂತೆ ಬದುಕಬೇಕು’ ಎಂದು ಹೇಳಿದರು.

‘ಮನುಷ್ಯನಲ್ಲಿ ಸಿಟ್ಟು ಇರಬಾರದು. ಸಿಟ್ಟಿನಿಂದ ನಮ್ಮ ಮಿದುಳು, ಹೃದಯ ದುರ್ಬಲಗೊಳ್ಳುತ್ತವೆ. ಒತ್ತಡರಹಿತ ಬದುಕು ನಡೆಸಬೇಕು. ಯಾವುದೇ ರೀತಿಯ ಗೊಂದಲ, ನಕರಾತ್ಮಕ ಅಂಶಗಳಿಗೆ ಮನಸ್ಸು ಹಾಗೂ ತಲೆಯಲ್ಲಿ ಜಾಗ ನೀಡಬಾರದು. ನಿತ್ಯ ಕನಿಷ್ಠ ಅರ್ಧ ಗಂಟೆ ಯೋಗ ಮಾಡಿದರೆ ಆರೋಗ್ಯವಂತರಾಗಿರಬಹುದು’ ಎಂದು ತಿಳಿಸಿದರು. ಭಾರತ ಸ್ವಾಭಿಮಾನ್‌ ಸಂಘಟನೆಯ ರಾಜ್ಯ ಖಜಾಂಚಿ ಬಾಲಚಂದ್ರ ಶರ್ಮಾ, ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಜಿಲ್ಲಾ ಪ್ರಭಾರಿ ಗೌರಮ್ಮ ಬ್ಯಾಳಿ, ಯುವ ಭಾರತ ಸಂಘಟನೆ ಜಿಲ್ಲಾ ಅಧ್ಯಕ್ಷ ಕಿರಣ್‌ ಕುಮಾರ್‌, ಯಶವಂತ, ವೀರೇಶಬಾಬು ಇದ್ದರು.

‘ಯೋಗ ಮಾಡಿದವರು ನಿರೋಗಿಗಳು. ರಕ್ತದೊತ್ತಡ, ಕ್ಯಾನ್ಸರ್, ಥೈರಾಡ್, ಅಸ್ತಮಾ ಮತ್ತಿತರ ಕಾಯಿಲೆಗಳಿಗೆ ಆಲೋಪಥಿಕ್ ಔಷಧಿ ಇಲ್ಲ. ಆದರೆ, ಇವೆಲ್ಲವೂ ಯೋಗದ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ’ ಎಂದು ಬಾಬಾ ರಾಮದೇವ್‌ ಹೇಳಿದರು.

‘ಗುಟ್ಕಾ ಹಾಗೂ ಮದ್ಯಪಾನ, ತಂಪು ಪಾನೀಯ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಇವುಗಳಿಂದ ಆದಷ್ಟು ದೂರ ಇರಬೇಕು. ಗೋ ಮೂತ್ರ ಸೇವನೆಯಿಂದ ಹಲವಾರು ರೋಗಗಳು ಗುಣಪಡಿಸಬಹುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ ಅಡಗಿದೆ’ ಎಂದರು.

* * 

ಶಿಬಿರದಲ್ಲಿ 50 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಎರಡು ರಿಂದ ಮೂರು ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಚಳಿಗೆ ತತ್ತರಿಸಿದ ಜನರು ಕ್ರೀಡಾಂಗಣದತ್ತ ಕಡೆ ಹಜ್ಜೆ ಹಾಕದಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT