ಭಾನುವಾರ, ಮೇ 31, 2020
27 °C

ಕೋಟಿಪುರದ ಕೈಠಭೇಶ್ವರ ಜಾತ್ರೆಗೆ ದಿನಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟಿಪುರದ ಕೈಠಭೇಶ್ವರ ಜಾತ್ರೆಗೆ ದಿನಗಣನೆ

ಆನವಟ್ಟಿ: ಕೋಟಿಪುರಕ್ಕೆ ಕುಬತ್ತೂರು ಎಂಬ ಹೆಸರಿತ್ತು. ಈಗ ಕರೆಯುವ ಕೈಟಭೇಶ್ವರ ದೇವರಿಗೆ ಕೋಟೀಶ್ವರ, ಕೈಟಭೇಶ್ವರ ಎನ್ನುತ್ತಿದ್ದರು ಎಂದು ರಾಜವಂಶಗಳ ಆಳ್ವಿಕೆ ಕಾಲದ ಇತಿಹಾಸದಿಂದ ತಿಳಿದು ಬರುತ್ತದೆ. ಈಗ ಈ ಕ್ಷೇತ್ರದಲ್ಲಿ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಫೆ. 12ರಂದು ಹೊಸ ತೇರಿನ ಹಸ್ತಾಂತರವಾಗಲಿದೆ.

ಬನವಾಸಿ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ಹಾಗೂ ಕೆಳದಿಯ ನಾಯಕರ ರಾಜವಂಶಗಳು ಕ್ರಿ.ಶ. 3ರಿಂದ 16ನೇ ಶತಮಾನದವರೆಗೆ ಆಳಿದ ಪ್ರದೇಶ ಇದಾಗಿದೆ. ಹೊಯ್ಸಳರ ಪ್ರಮುಖ ದೊರೆ ವಿನಯಾದಿತ್ಯನ ಕಾಲದಲ್ಲಿ ಕ್ರಿ,ಶ. 1100ರಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿತಗೊಂಡಿದೆ ಎಂದು ಶಾಸನದಿಂದ ತಿಳಿದುಬರುತ್ತದೆ.

ಜಾತ್ರೆಯ ವಿಶೇಷ: ಅಲಂಕೃತಗೊಂಡ ರಥದಲ್ಲಿ ಶಿವ ಪಾರ್ವತಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಬಳಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ನಂತರ ಭಕ್ತರು ತೇರು ಎಳೆಯುತ್ತಾರೆ. ಬಹಳ ದಿನಗಳಿಂದ ಕಂಕಣ ಭಾಗ್ಯ ಕೂಡಿ ಬರದೇ ಇರುವವರು ಈ ವಿವಾಹ ದಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಅಕ್ಷತೆ ಹಾಕಿದರೆ, ಅವರಿಗೂ ಕಂಕಣ ಭಾಗ್ಯ ಕೂಡಿಬರುತ್ತದೆ ಎನ್ನುವುದು ನಂಬಿಕೆ.

ನೂತನ ರಥ: 80 ವರ್ಷಗಳಷ್ಟು ಹಳೆಯದಾಗಿದ್ದ ರಥ ಸಂಪೂರ್ಣ ಶಿಥಿಲಗೊಂಡಿತ್ತು. ಕಳೆದ ವರ್ಷ ಸಮಿತಿಯ ಸದಸ್ಯರು ಕೂಡಿ ತೀರ್ಮಾನಿಸಿ, ಹೊಸ ರಥ ನಿರ್ಮಿಸಲು ನಿರ್ಧರಿಸಿದರು. ದಾನಿಗಳು ಹಾಗೂ ಗ್ರಾಮಸ್ಥರು ನೆರವು ನೀಡಿದರು. ಶಿಲ್ಪಿಗಳಾದ ವಿಶ್ವನಾಥ ಮತ್ತು ಅವರ ಮಕ್ಕಳು ಸುಂದರ ಕಲಾಕೃತಿಯೊಂದಿಗೆ ರಥವನ್ನು ನಿರ್ಮಿಸಿದ್ದಾರೆ.

ಫೆಬ್ರುವರಿ 12ಕ್ಕೆ ಶಿಲ್ಪಿಗಳು ಪ್ರಥಮ ಪೂಜೆ ನೆರವೇರಿಸಿ, ಸಮಿತಿಗೆ ರಥವನ್ನು ಹಸ್ತಾಂತರಿಸಲಿದ್ದಾರೆ. ನಂತರ ಪಲ್ಲಕ್ಕಿಯೊಂದಿಗೆ ನೂತನ ರಥವನ್ನು ದೇವಸ್ಥಾನದ ಸನ್ನಿಧಿಗೆ ತರಲಾಗುವುದು. ಹೊಸ ತೇರುಮನೆ ಉದ್ಘಾಟನೆ ಜಾತ್ರೆಯ ಮರುದಿನ ನೆರವೇರಲಿದೆ ಎಂದು ಶ್ರೀ ಕೈಟಭೇಶ್ವರ ಸೇವಾ ಸಮಿತಿ ಅಧ್ಯಕ್ಷ ಎನ್‌.ಎಂ ನಾಗೇಂದ್ರಪ್ಪ ತಿಳಿಸಿದರು.

ಕದಂಬೋತ್ಸವದ ಮಾದರಿ: ಜಾತ್ರೆಗೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದು. ಪ್ರತಿ ವರ್ಷದಂತೆ ಇರದೆ ಈ ಬಾರಿ ಕದಂಬೋತ್ಸವದ ಮಾದರಿಯಲ್ಲಿ ಕೈಟಭೇಶ್ವರೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ.

ಫೆಬ್ರುವರಿ 14ಕ್ಕೆ ಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಪೂಜೆಗಳು ನಡೆಯುತ್ತವೆ. 15ರ ಬೆಳಿಗ್ಗೆ 10.30ಕ್ಕೆ ಡೋಳು ಕುಣಿತ, ವೀರಗಾಸೆ, ಕಂಸಾಳೆ ಮುಂತಾದ ಕಾರ್ಯಕ್ರಮಗಳೊಂದಿಗೆ ಕೈಟಭೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ. ಸಂಜೆ ನೃತ್ಯ ಕಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ. ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 16ರ ಸಂಜೆ ‘ಭೀಷ್ಮವಿಜಯ’ ಯಕ್ಷಗಾನ ಪ್ರದರ್ಶನ ಇರುತ್ತದೆ. 17ರಂದು ಚಂದನ್‌ ಮೆಲೋಡೀಸ್ ಆರ್ಕೆಸ್ಟ್ರಾ, ಭದ್ರಾವತಿ ಇವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಶಿವಕುಮಾರ ತಿಳಿಸಿದರು.

500 ವರ್ಷದ ಮಂಟಪ

ಉತ್ಸವ ಮುಗಿಸಿ ಬಂದ ದೇವರ ಮೂರ್ತಿ ಕೂರಿಸುವ ಮಂಟಪವಿದ್ದು. ಅದರಲ್ಲಿ ರಾಜವಂಶ ಅಳ್ವಿಕೆ ಶೈಲಿಯ ಶಿಲ್ಪಕಲೆಗಳಿವೆ. ಮಂಟಪದ ಒಳ ಚಾವಣಿ ಮೇಲೆ ಹೂವಿನ ಆಕಾರದ ಶಿಲ್ಪಕಲೆ ಇದೆ ಎಂದು ಸಮಿತಿಯ ಖಜಾಂಚಿ ವಿನಾಯಕ ಡೋಂಗ್ರೆ ಮಾಹಿತಿ ನೀಡಿದರು.

ರವಿ ಆರ್. ತಿಮ್ಮಾಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.