ಗುರುವಾರ , ಜೂನ್ 4, 2020
27 °C

ತೀರ್ಥಹಳ್ಳಿ: ಈ ಬಾರಿಯೂ ತ್ರಿಕೋನ ಸ್ಪರ್ಧೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಈ ಬಾರಿಯೂ ತ್ರಿಕೋನ ಸ್ಪರ್ಧೆ

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ಜೆಡಿಎಸ್ ಸೇರಿದ ಪರಿಣಾಮ ತೀರ್ಥಹಳ್ಳಿ ಕ್ಷೇತ್ರದಲ್ಲಿ 2013ರ ಚುನಾವಣೆಯ ವಾತಾವರಣ ಮರು ಸೃಷ್ಟಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆಗೆ ಕಣ ಸಿದ್ಧವಾಗಿದೆ.

ಸಮಾಜವಾದಿ ಚಿಂತನೆಯ ಈ ನೆಲ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಕಡಿದಾಳು ದಿವಾಕರ್, ಡಿ.ಬಿ. ಚಂದ್ರೇಗೌಡ, ಪಟಮಕ್ಕಿ ಅವರಂಥ ಮುತ್ಸದ್ದಿಗಳನ್ನು ಶಾಸನಸಭೆಗೆ ಕಳುಹಿಸಿಕೊಟ್ಟಿದೆ. 1952ರಿಂದ 1994ರವರೆಗೂ ಕಾಂಗ್ರೆಸ್, ಸಮಾಜವಾದಿ, ಜನತಾ ಪಕ್ಷಗಳ ನೆಲೆಯಾಗಿತ್ತು. ಈ ಅವಧಿಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್, ಮೂರು ಬಾರಿ ಸಮಾಜವಾದಿ, ಎರಡು ಬಾರಿ ಜನತಾ ಪಕ್ಷಕ್ಕೆ ಜನರು ಮನ್ನಣೆ ನೀಡಿದ್ದರು.

ಈ ಕ್ಷೇತ್ರದ ಶಾಸಕ ಕಡಿದಾಳು ಮಂಜಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1957ರ ನಂತರ ಕಾಂಗ್ರೆಸ್ ನೆಲೆ ಕಳೆದುಕೊಂಡಿತ್ತು. 1978ರಲ್ಲಿ ಕಡಿದಾಳ್ ದಿಬಾಕರ್ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ವಿಜಯಿಯಾಗುವ ಮೂಲಕ ಕಾಂಗ್ರೆಸ್‌ ಮತ್ತೆ ಚಿಗುರಿತ್ತು. ಚಿಕ್ಕಮಗಳೂರಿನ ಚಂದ್ರೇಗೌಡರು ಎರಡು ಬಾರಿ ಜನತಾಪಕ್ಷದಿಂದ ಸ್ಪರ್ಧಿಸಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶೇಷ. ಪಟಮಕ್ಕಿ ರತ್ನಾಕರ 1985ರ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಕಂಡಿದ್ದರು.

1994ರಲ್ಲಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸುವ ಮೂಲಕ ಬಿಜೆಪಿ ಖಾತೆ ತೆರೆಯಿತು. ಅಲ್ಲಿಂದ ನಿರಂತರ ಮೂರು ಬಾರಿ ಗೆಲ್ಲುವ ಮೂಲಕ ಆರಗ ಹ್ಯಾಟ್ರಿಕ್‌ ಪಡೆದಿದ್ದರು. 2008 ಹಾಗೂ 2013ರಲ್ಲಿ ಎರಡು ಬಾರಿ ಆರಗ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದು ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ. 2013ರ ಗೆಲುವಿನ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದರು. ಕಡಿದಾಳು ಮಂಜಪ್ಪ ಅವರು ಅಲ್ಪ ಸಮಯ ಮುಖ್ಯಮಂತ್ರಿಯಾಗಿದ್ದು ಬಿಟ್ಟರೆ ಈ ಕ್ಷೇತ್ರದಲ್ಲಿ ಸಚಿವ ಸ್ಥಾನ ಅಲಂಕರಿಸಿದವರು ಕಿಮ್ಮನೆ ಮಾತ್ರ.

ಒಕ್ಕಲಿಗರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ, ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಿಂದ ಸ್ಪರ್ಧೆಗೆ ಇಳಿಯುವ ಪ್ರಮುಖ ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು. ಈ ಬಾರಿ ಮೂರು ಪ್ರಮುಖ ಪಕ್ಷಗಳಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೂ ಒಕ್ಕಲಿಗರು. 1999ರಿಂದ ತೀರ್ಥಹಳ್ಳಿ ರಾಜಕೀಯ ಕಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಕಿಮ್ಮನೆ, ಆರಗ ಅವರ ಮಧ್ಯೆ ಸ್ಪರ್ಧೆ ಇತ್ತು.

2013ರಲ್ಲಿ ಮಂಜುನಾಥ ಗೌಡ ಪ್ರವೇಶದೊಂದಿಗೆ ತ್ರಿಕೋನ ಸ್ಪರ್ಧೆಗೆ ದಾರಿಯಾಗಿತ್ತು. ಆಗ ಕೆಜೆಪಿ, ಬಿಜೆಪಿ, ಕಾಂಗ್ರೆಸ್ ಮಧ್ಯೆ ನಡೆದ ಪೈಪೋಟಿಯಲ್ಲಿ ಕಿಮ್ಮನೆ ರತ್ನಾಕರ 37,160 ಮತ ಪಡೆದು ಪ್ರಯಾಸದ ಗೆಲುವು ಪಡೆದಿದ್ದರು. 34,446 ಮತ ಪಡೆದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಅದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದ್ದ ಮಂಜುನಾಥ ಗೌಡರು 35,817 ಮತ ಪಡೆದು 1,343 ಮತಗಳ ಅಂತರದಿಂದ ಸೋಲು ಕಂಡಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕೆಜೆಪಿಯು ಬಿಜೆಪಿಯಲ್ಲಿ ಲೀನವಾದ ನಂತರ ಕಾಂಗ್ರೆಸ್‌ ಸೇರಿದ್ದರು. ಈಗ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್‌ ಸೇರಿದ್ದಾರೆ. ಆ ಮೂಲಕ ಮತ್ತೆ 2013ರ ಚುನಾವಣಾ ಇತಿಹಾಸದ ಚಿತ್ರಣ ಸೃಷ್ಟಿಯಾಗಿದೆ.

ತೀರ್ಥಹಳ್ಳಿಯ ಶಾಸಕರು

1952  ಕಡಿದಾಳ್ ಮಂಜಪ್ಪ         ಕಾಂಗ್ರೆಸ್

1957 ಎ.ಆರ್. ಬದರಿನಾರಾಯಣ್   ಕಾಂಗ್ರೆಸ್

1962 ಎಸ್‌. ಗೋಪಾಲಗೌಡ         ಎಸ್‌ಒಪಿ

1967 ಎಸ್‌. ಗೋಪಾಲಗೌಡ        ಎಸ್‌ಎಸ್‌ಪಿ

1972 ಕೋಣಂದೂರು ಲಿಂಗಪ್ಪ        ಎಸ್‌ಒಪಿ

1978 ಕಡಿದಾಳ್ ದಿವಾಕರ            ಕಾಂಗ್ರೆಸ್

1983 ಡಿ.ಬಿ. ಚಂದ್ರೇಗೌಡ           ಜನತಾ ಪಕ್ಷ

1985 ಪಟ್ಟಮಕ್ಕಿ ರತ್ನಾಕರ            ಕಾಂಗ್ರೆಸ್

1989 ಡಿ.ಬಿ. ಚಂದ್ರೇಗೌಡ          ಜನತಾ ಪಕ್ಷ

1994 ಆರಗ ಜ್ಞಾನೇಂದ್ರ              ಬಿಜೆಪಿ

1999 ಆರಗ ಜ್ಞಾನೇಂದ್ರ              ಬಿಜೆಪಿ

2004 ಆರಗ ಜ್ಞಾನೇಂದ್ರ              ಬಿಜೆಪಿ

2008 ಕಿಮ್ಮನೆ ರತ್ನಾಕರ            ಕಾಂಗ್ರೆಸ್

2013 ಕಿಮ್ಮನೆ ರತ್ನಾಕರ            ಕಾಂಗ್ರೆಸ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.