ಸೋಮವಾರ, ಮೇ 25, 2020
27 °C

ಪ್ರಭಾವ ಬೀರೀತೇ ಮಹದಾಯಿ, ಲಿಂಗಾಯತ ಚಳವಳಿ?

ವಿಶಾಲಾಕ್ಷಿ ಅಕ್ಕಿ Updated:

ಅಕ್ಷರ ಗಾತ್ರ : | |

ಪ್ರಭಾವ ಬೀರೀತೇ ಮಹದಾಯಿ, ಲಿಂಗಾಯತ ಚಳವಳಿ?

ಮುಂಬೈ ಕರ್ನಾಟಕ ಭಾಗದಲ್ಲಿ ನಡೆದ ಚಳವಳಿಗಳು, ಹೋರಾಟದ ವಿವಿಧ ಆಯಾಮಗಳು ರಾಜಕೀಯ ಪ್ರಜ್ಞೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅರಸು ಕಾಲದ ಕಾಂಗ್ರೆಸ್‌ ರಾಜಕಾರಣ, ನಂತರದ ಜನತಾ ಪಕ್ಷದ ರಾಜಕಾರಣ, ಆಮೇಲೆ ರೈತ ಚಳವಳಿಯ ರಾಜಕಾರಣದಲ್ಲಿ ಪ್ರಮುಖ ಛಾಪು ಮೂಡಿಸಿದ್ದು ಈ ಭಾಗವೇ.

ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ನರಗುಂದ ಬಂಡಾಯ ಹಾಗೂ ರೈತ ಚಳವಳಿ, ಈಗ ಮಹದಾಯಿ ರೂಪದಲ್ಲಿ ಮತ್ತೆ ಇಲ್ಲಿ ಎದುರಾಗಿದೆ. ಜಾತಿ ವಿಷಯವಾಗಿ ಮೇಲೆದ್ದ ಮತ್ತೊಂದು ಚಳವಳಿಯೂ (ಲಿಂಗಾಯತ ಸ್ವತಂತ್ರ ಧರ್ಮ) ಮುಂಬೈ ಕರ್ನಾಟಕದ ಮುಂದಿದೆ.

ಇಂಥ ಹೊತ್ತಿನಲ್ಲಿ ಚುನಾವಣೆ ಎದುರಾಗಿದೆ. ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಉತ್ತರ ಕರ್ನಾಟಕದ ಏಣಿಯನ್ನು ಏರಬೇಕಾದುದು ಎಲ್ಲ ರಾಜಕೀಯ ಪಕ್ಷಗಳಿಗೆ ಅನಿವಾರ್ಯ ಎನಿಸಿದೆ. ಈ ಭಾಗದಲ್ಲಿನ ಅರ್ಧಕ್ಕಿಂತಲೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡ ಪಕ್ಷವೇ ಸರ್ಕಾರ ರಚಿಸಿರುವುದು ಈ ಹಿಂದಿನ ಚುನಾವಣೆಗಳಿಂದ ವೇದ್ಯವಾಗಿದೆ. ಅದಕ್ಕಾಗಿ, ಹಿಂದೊಮ್ಮೆ ದೇಶ ಹಾಗೂ ರಾಜ್ಯದ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ, ಹೊಸ ಹೊಸ ನಾಯಕರ ಹುಟ್ಟಿಗೆ ಕಾರಣವಾದ ಮುಂಬೈ ಕರ್ನಾಟಕ ಪ್ರದೇಶದತ್ತಲೇ ಎಲ್ಲ ರಾಜಕೀಯ ಪಕ್ಷಗಳೂ ದೃಷ್ಟಿ ನೆಟ್ಟಿವೆ.

ಅದಕ್ಕೆ ಕಾರಣ; ಮತ್ತೆ ರೂಪ ಬದಲಿಸಿ ಬಂದ ಈ ಭಾಗದ ಜಾತಿ ಮತ್ತು ರೈತ ಹೋರಾಟ. ಇದನ್ನೇ ವಿಷಯವಾಗಿಸಿಕೊಂಡು ಪ್ರಮುಖ ರಾಜಕೀಯ ಪಕ್ಷಗಳು ಈ ಸಲ ಚುನಾವಣೆ ಎದುರುಗೊಳ್ಳುತ್ತಿವೆ. ಜಾತಿ, ಹಣ, ಜಮೀನ್ದಾರಿಕೆ, ಉದ್ಯಮ, ಶಿಕ್ಷಣ ಸಂಸ್ಥೆಗಳು, ವ್ಯಕ್ತಿ ಪ್ರತಿಷ್ಠೆ ಎಲ್ಲವನ್ನೂ ಹಾಸು– ಹೊಕ್ಕಾಗಿಸಿಕೊಂಡಿರುವ ಸದ್ಯದ ರಾಜಕಾರಣಕ್ಕೆ ಮುಂಬೈ ಕರ್ನಾಟಕ ಭಾಗದ ಜನರು ಪ್ರತಿಕ್ರಿಯಿಸುವ ರೀತಿ ರಾಜ್ಯದ ಜೊತೆಗೆ ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರಿದೆ.

ನಾಯಕರು ಹುಟ್ಟಿಕೊಂಡ ಬಗೆ: 1969ರಲ್ಲಿ ಕಾಂಗ್ರೆಸ್‌ ಪಕ್ಷವು ಕಾಂಗ್ರೆಸ್‌ (ಇಂದಿರಾ) ಹಾಗೂ ಸಂಸ್ಥಾ ಕಾಂಗ್ರೆಸ್‌ ಎಂದು ಹೋಳಾದಾಗ, ಉತ್ತರ ಕರ್ನಾಟಕದ ಬಹುತೇಕ ಜಮೀನ್ದಾರರು ಸಂಸ್ಥಾ ಕಾಂಗ್ರೆಸ್‌ ಸೇರಿದರು.

ದೇವರಾಜ ಅರಸು ಮುಖ್ಯಮಂತ್ರಿ ಆದ ಮೇಲೆ ಕಾಂಗ್ರೆಸ್‌ (ಐ)ನೊಳಗೆ ಹಿಂದುಳಿದ ಜನಾಂಗದವರು, ದಲಿತರು ಸೇರಿದರು. ಆಗ ನಿಜಲಿಂಗಪ್ಪ ನಾಯಕತ್ವದಲ್ಲಿ ಅನೇಕರು ಸಂಸ್ಥಾ ಕಾಂಗ್ರೆಸ್‌ಗೆ ಹೋಗಿಬಿಟ್ಟರು. ಬಾಗಲಕೋಟೆ, ಶಿಗ್ಗಾವಿಯಿಂದ ಸ್ಪರ್ಧಿಸಿದ್ದ ನಿಜಲಿಂಗಪ್ಪ ಆ ಭಾಗದಲ್ಲಿ ಪ್ರಭಾವಿಯಾಗಿದ್ದರು. ಆದರೆ ಅವರು ಹೋದ ಮೇಲೆ ಇನ್ನುಳಿದ ಸಣ್ಣ ಪುಟ್ಟವರನ್ನು ಹಿಡಿದುಕೊಂಡು ಅರಸು ಸ್ಪರ್ಧೆ ಮಾಡಬೇಕಾಯಿತು. ಆಗ ಅವರು, ಬಾಗಲಕೋಟೆಯ ಚಿಮ್ಮನಕಟ್ಟಿ, ವಿಜಯಪುರ ಭಾಗದ ಕೆ.ಪಿ. ರಾಠೋಡರಂಥವರನ್ನು, ಧಾರವಾಡದಲ್ಲಿ ಡಿ.ಕೆ. ನಾಯ್ಕರ ಅಂಥವರನ್ನು ಇಟ್ಟುಕೊಂಡು ರಾಜಕಾರಣಕ್ಕೆ ಮುಂದಾದರು. ಇದೇ ಸಮಯಕ್ಕೆ ಬಹು ದೊಡ್ಡ ಬದಲಾವಣೆ ತಂದ ಗರೀಬಿ ಹಟಾವೋ ಘೋಷಣೆ ಹಾಗೂ ಉಳುವವನೇ ನೆಲದ ಒಡೆಯ ಎಂಬ ಕಾನೂನು ಮುಂಬೈ ಕರ್ನಾಟಕ ಭಾಗದಲ್ಲಿ ಬಹಳಷ್ಟು ಪ್ರಭಾವ ಬೀರಿತು. ಅಷ್ಟೇ ಅಲ್ಲದೆ ಇದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಎದುರಿಸಲು ಕಾಂಗ್ರೆಸ್‌ಗೆ ಸಾಧ್ಯವಾಯಿತು. ಇದನ್ನೇ ಮೆಟ್ಟಿಲಾಗಿಟ್ಟುಕೊಂಡು ತನ್ನ ಕಾರ್ಯಕ್ರಮದ ರೂಪುರೇಷೆಯನ್ನೇ ಅದು ಸಮಗ್ರವಾಗಿ ಬದಲಿಸಿತು.

ಈ ವೇಳೆಗಾಗಲೇ ಸಂಸ್ಥಾ ಕಾಂಗ್ರೆಸ್‌ ಲಿಂಗಾಯತರು ಮತ್ತು ಮೇಲ್ಜಾತಿಯವರ ಪಕ್ಷವಾಗಿತ್ತು. ಜನತಾ ಪಕ್ಷಕ್ಕೆ ಈ ಭಾಗದಲ್ಲಿ ಮುಖ್ಯವಾಗಿ ಇದ್ದ ಅಸ್ಮಿತೆ ಅಂದರೆ, ಅದು ಸಾಹುಕಾರರು ಮತ್ತು ಗೌಡರದ್ದು ಎನ್ನುವುದು. ಇದಕ್ಕೆ ಪರ್ಯಾಯವಾಗಿ ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ರಾಜಕಾರಣ ಬೆಳೆಯಿತು.

ಆಗ ಈ ಭಾಗದಿಂದ ಹಿಂದುಳಿದ, ಅಲಕ್ಷಿತ ಸಮುದಾಯದಿಂದ ಬಂದ ನಾಯಕರು ವಿಧಾನಸಭೆಗೆ ಆಯ್ಕೆಯಾದರು ಮತ್ತು ಸಚಿವರೂ ಆದರು.

ದೇವರಾಜ ಅರಸು ಅವರದು ಒಂದು ರೀತಿಯ ಪ್ರಾದೇಶಿಕ ರಾಜಕಾರಣ. ಅದಕ್ಕೆ ಅವರು ರಕ್ಷಣೆಯಾಗಿ ನಿಂತಿದ್ದರು. ಇಡೀ ದೇಶದಲ್ಲಿ ಇಂದಿರಾ ಗಾಂಧಿ ಪ್ರಭಾವ ಇದ್ದಾಗ ಅವರ ಜೊತೆ ಅರಸು ಪ್ರಭಾವವೂ ಬಂತು. ಇದು ಮುಂಬೈ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ರಾಜಕಾರಣದ ಚಿಮ್ಮುಹಲಗೆಯಾಯಿತು.

ಆಗ, ಗದಗ ಭಾಗದಲ್ಲಿ ಕೆ.ಎಚ್. ಪಾಟೀಲ ಅವರು ರೆಡ್ಡಿ ಕಾಂಗ್ರೆಸ್ ಎಂದು ಆರಂಭ ಮಾಡಿದರು. ಇನ್ನೊಂದು ಕಡೆ ಜನತಾಪಕ್ಷ ಬೆಳೆಯಿತು. ಜಮೀನ್ದಾರಿ ಹಿನ್ನೆಲೆ ಇದ್ದರೂ ವಿಜಯಪುರದಲ್ಲಿ ಬಿ.ಎಂ.ಪಾಟೀಲ (ಈಗಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರ ತಂದೆ) ಶಾಸಕರಾಗಿದ್ದರು. ಆ ಭಾಗದಲ್ಲಿ ಅವರು ದೊಡ್ಡ ರಾಜಕಾರಣಿ. ಇತ್ತ ಹುಲಕೋಟಿಯಲ್ಲಿ ಕೆ.ಎಚ್. ಪಾಟೀಲ. ಇವರೆಲ್ಲ ಅರಸು ಜೊತೆ ಕಾಂಗ್ರೆಸ್‌ನಲ್ಲಿಯೇ ಉಳಿದರು. ನಿಜಲಿಂಗಪ್ಪ ಜೊತೆ ಅವರು ಹೋಗಲಿಲ್ಲ. ಹೆಚ್ಚು ಕಡಿಮೆ, ಲಿಂಗಾಯತರು ಈ ವೇಳೆಗಾಗಲೇ ಜನತಾಪಕ್ಷಕ್ಕೆ ಹೋಗಿದ್ದರು.

ರೈತ ಚಳವಳಿಯ ಹುಟ್ಟು:  ‘ಗುಂಡೂರಾವ್‌ ಬಂದಾಗ ಅರಸು ಕಾಲದ ರಾಜಕಾರಣ ಹೋಯಿತು. ದೊಡ್ಡ ಪ್ರಮಾಣದಲ್ಲಿ ಪ್ರಭುತ್ವ ವಿರೋಧ ಎದುರಾಯಿತು. ರೈತರ ಮೇಲೆ ನಡೆಸಿದ ಗೋಲಿಬಾರ್‌, ನರಗುಂದ ಹಾಗೂ ನವಲಗುಂದ ಬಂಡಾಯಕ್ಕೆ ಕಾರಣವಾಯಿತು. ಅದು ಮಾಡಿದ ಪರಿಣಾಮವೂ ಅಷ್ಟೇ ದೊಡ್ಡದಾಗಿತ್ತು. ಈ ಭಾಗದ ರೈತ ಚಳವಳಿಗೂ ಬೀಜವಾಯಿತು’ ಎನ್ನುತ್ತಾರೆ ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲ.

‘ಅಲ್ಲಿಯವರೆಗೂ ಉತ್ತರ ಕರ್ನಾಟಕದಲ್ಲಿ ರೈತ ಸಂಘ ಇರಲಿಲ್ಲ. ಶಿವಮೊಗ್ಗ ಭಾಗದಲ್ಲಿ ಕಬ್ಬು ಬೆಳೆಗಾರರ ಪರವಾಗಿ ಹೋರಾಡಲು ನಂಜುಂಡಸ್ವಾಮಿ ಅವರಿದ್ದರು. ಈ ಕಡೆ ಅವರ ಹೋರಾಟ ಇರಲಿಲ್ಲ. ನರಗುಂದ ಬಂಡಾಯವನ್ನು ನಿಜ ಅರ್ಥದಲ್ಲಿ ಆರಂಭಿಸಿದವರು ಕಮ್ಯುನಿಸ್ಟರು. ಆ ನಂತರ ಬಿ.ಆರ್‌. ಯಾವಗಲ್ ಅವರಂಥ ಪ್ರಗತಿಪರರು ಮತ್ತು ಪ್ರಗತಿಪರ ಸಂಘಟನೆಗಳು ಜತೆಗೂಡಿದವು. ಅರಸು ಕೂಡ ಸಾಥ್ ನೀಡಿದರು. ಇದರ ನಂತರ ಹಬ್ಬಿದ ಕಾಂಗ್ರೆಸ್‌ ವಿರೋಧಿ ಅಲೆಯನ್ನು ಜನತಾ ಪಕ್ಷದವರು ಉಪಯೋಗಿಸಿಕೊಂಡು ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದರು. ಈ ವೇಳೆಗೆ ಅರಸು ಇರಲಿಲ್ಲವಾದ್ದರಿಂದ ಜನತಾ ಪಕ್ಷದ ಪ್ರಭಾವವೂ ಹೆಚ್ಚಾಯಿತು’ ಎನ್ನುತ್ತಾರೆ ಅವರು.

1989ರಲ್ಲಿ ರೈತ ಸಂಘದವರೂ ಚುನಾವಣೆ ಪ್ರವೇಶ ಮಾಡಿದ್ದು, ಮುಂಬೈ ಕರ್ನಾಟಕದ ಮೂಲಕವೇ. ಕಿತ್ತೂರಿನಿಂದ ಬಾಬಾಗೌಡ ಪಾಟೀಲ ಹಾಗೂ ಧಾರವಾಡದಲ್ಲಿ ನಂಜುಂಡಸ್ವಾಮಿ ಸ್ಪರ್ಧಿಸಿ ಗೆದ್ದರು. ನರಗುಂದ, ನವಲಗುಂದ ಬಂಡಾಯದ ಸಮಯದಲ್ಲಿ ಈ ಭಾಗದ ಹೋರಾಟದಲ್ಲಿ ಭಾಗವಹಿಸದ ನಂಜುಂಡಸ್ವಾಮಿ, ಇಲ್ಲಿ ರೈತ ಹುತಾತ್ಮ ದಿನಾಚರಣೆ ಆರಂಭಿಸಿದರು.

ಮುಂದೆ, ಬೊಮ್ಮಾಯಿ ನಂತರದಲ್ಲಿ ಮುಂಬೈ ಕರ್ನಾಟಕದ ಲಿಂಗಾಯತ ನಾಯಕತ್ವದ ಕೊರತೆಯನ್ನು ಬಿಜೆಪಿಯು ಯಡಿಯೂರಪ್ಪ ಮೂಲಕ ತುಂಬಿಕೊಂಡಿತು. ಪರಿಣಾಮವಾಗಿ ಈ ಭಾಗದಲ್ಲಿ ಜಗದೀಶ ಶೆಟ್ಟರ್‌, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ ಅವರಂತಹ ನಾಯಕರು ಮುಂಚೂಣಿಗೆ ಬಂದರು. ಈ ಭಾಗದ ಜನತಾ ಪಕ್ಷದ ಬಹುಪಾಲು ನಾಯಕರು ಬಿಜೆಪಿ ಸೇರಿಕೊಂಡರು. ಹಾವೇರಿ ಭಾಗದಲ್ಲಿ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಧಾರವಾಡದಲ್ಲಿ ಚಂದ್ರಕಾಂತ ಬೆಲ್ಲದ, ವಿಜಯಪುರ ಭಾಗದಲ್ಲಿ ಬಸನಗೌಡ ಯತ್ನಾಳ ಪಾಟೀಲ ಅವರಂತಹ ನಾಯಕರು ಬಿಜೆಪಿ ಸೇರಿದರು.

ಬೆಳಗಾವಿ ಭಾಗದಲ್ಲಿ ಬಾಬಾಗೌಡ ಪಾಟೀಲ, ರೈತ ಸಂಘ ತೊರೆದು ಬಿಜೆಪಿಗೆ ಹೋದರು; ಸಂಸದರೂ ಆದರು. ಮುಂದೆ ಕೇಂದ್ರ ಸಚಿವರೂ ಆದರು. ಇದರೊಂದಿಗೆ ಮುಂಬೈ ಕರ್ನಾಟಕದಲ್ಲಿ ರೈತ ಚಳವಳಿಯೊಂದಿಗೆ ಬೆಳೆದು ಬಂದ ರಾಜಕಾರಣ ಪತನವಾಯಿತು. ರೈತ ಸಂಘಟನೆ ಒಡೆದುಹೋದ ಮೇಲೆ ನಂಜುಂಡಸ್ವಾಮಿ ಅವರೂ ಮಹತ್ವ ಕಳೆದುಕೊಂಡರು. ನರಗುಂದ, ನವಲಗುಂದ ಬಂಡಾಯದ ವೇಳೆ ಧಾರವಾಡ- ಬೆಳಗಾವಿ ಮಧ್ಯೆ ಹುಟ್ಟಿಕೊಂಡ ರೈತ ಚಳವಳಿಯೂ ಅವನತಿ ಕಂಡಿತು.

ಅಲ್ಲಿಯವರೆಗೆ ಹುಬ್ಬಳ್ಳಿ- ಧಾರವಾಡದಲ್ಲಿ ಸ್ವಲ್ಪ ನೆಲೆ ಕಂಡುಕೊಂಡಿದ್ದ ಬಿಜೆಪಿ, ಮುಂಬೈ ಕರ್ನಾಟಕದ ಎಲ್ಲ ಪ್ರಮುಖ ಲಿಂಗಾಯತರು ಪಕ್ಷಕ್ಕೆ ಸೇರಿದ ಪ್ರಬಲ ರಾಜಕೀಯ ಪಕ್ಷವಾಗಿ ಹೊಮ್ಮಿತು. ಆದರೆ, ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಭಾವವನ್ನು ಉಳಿಸಿಕೊಂಡು ಬಂದವರಲ್ಲಿ ಎಚ್.ಕೆ. ಪಾಟೀಲ ಪ್ರಮುಖರಾಗಿ ನಿಲ್ಲುತ್ತಾರೆ.

ಇದೇ ಚಕ್ರ ಐವತ್ತು ವರ್ಷಗಳ ನಂತರದಲ್ಲಿ (ಈ ಭಾಗದ ರೈತ ಚಳವಳಿ ಮತ್ತು ಧರ್ಮ ಹೋರಾಟಗಳು ತೀವ್ರತೆ ಪಡೆದದ್ದೇ ಆದಲ್ಲಿ) ಮತ್ತೊಂದು ಸುತ್ತು ಹಾಕಲಿದೆಯೇ? ಅಥವಾ ಹಣ, ಹೊಂದಾಣಿಕೆ ರಾಜಕಾರಣವು ಚಳವಳಿಗಳನ್ನೂ ಅದೇ ವೇಳೆಗೆ ನಾಯಕರನ್ನೂ ಮಟ್ಟ ಹಾಕಲಿದೆಯೇ?

**

ವ್ಯಕ್ತಿ ಪ್ರತಿಷ್ಠೆ – ಕುಟುಂಬ ರಾಜಕಾರಣ

ಅತಿ ಹೆಚ್ಚು ಕ್ಷೇತ್ರಗಳನ್ನು (18) ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಗಡಿ ವಿವಾದ ಜೀವಂತವಾಗಿದೆ. ಮರಾಠಿಗರ ಪ್ರಾಬಲ್ಯವಿದೆ. ಸಕ್ಕರೆ ರಾಜಕಾರಣ ಮತ್ತು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ರಾಜಕಾರಣವಿದೆ. ಇಷ್ಟೆಲ್ಲದರ ಜೊತೆಗೆ, ರಾಜಕೀಯ ಪಕ್ಷಗಳ ಹೆಸರಿನ ಹಂಗಿಲ್ಲದೆ ನಿಂತ ಕ್ಷೇತ್ರಗಳೆಲ್ಲವನ್ನು ತಮ್ಮದೆಂದು ಸಾಧಿಸುವ ವೈಯಕ್ತಿಕ ಪ್ರತಿಷ್ಠೆ ಇದೆ. ಕುಟುಂಬ ರಾಜಕೀಯವಿದೆ. ಜಾತಿ ಲೆಕ್ಕಾಚಾರವಿದೆ.

ಹುಕ್ಕೇರಿಯಲ್ಲಿ ಹೆಸರಿಗಷ್ಟೇ ಚುನಾವಣೆ ಎಂಬ ಮಾತಿದೆ. ಅದನ್ನು ಸಾಬೀತು ಮಾಡುವಂತೆ, ಯಾವುದೇ ಪಕ್ಷದಲ್ಲಿದ್ದರೂ ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಗೆಲ್ಲುತ್ತಾ ಬಂದವರು ಉಮೇಶ ಕತ್ತಿ.

2004ರ ಚುನಾವಣೆಯನ್ನು ಹೊರತುಪಡಿಸಿ (ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು) 1983ರಿಂದ ಹುಕ್ಕೇರಿ ಕ್ಷೇತ್ರವು ಕತ್ತಿ ಕುಟುಂಬದ ಪಾಲಾಗಿದೆ. ಅವರು ಜೆಡಿಯು, ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ... ಹೀಗೆ ಯಾವ ಪಕ್ಷದಿಂದ ಸ್ಪರ್ಧಿಸಿದಾಗಲೂ ಅವರ ಗೆಲುವಿಗೆ ತೊಡಕಾಗಿಲ್ಲ.

ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರ ಆಡಳಿತವೇ ಇದೆ. 2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದ ಬಳಿಕ ಖಾಲಿಯಾಗಿದ್ದ ವಿಧಾನಸಭಾ ಕ್ಷೇತ್ರದಲ್ಲಿ ಅವರ ಮಗ ಗಣೇಶ ಹುಕ್ಕೇರಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

ಭಿನ್ನ ಪಕ್ಷಗಳಲ್ಲಿದ್ದರೂ ಅರಭಾವಿ, ಗೋಕಾಕ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಕಿಹೊಳಿ ಸೋದರರ ಬಲ ಸ್ಥಳೀಯ ರಾಜಕಾರಣದಲ್ಲಿ ಪ್ರಭಾವ ಬೀರುತ್ತದೆ. ಬಾಲಚಂದ್ರ ಜಾರಕಿಹೊಳಿ, ಅರಭಾವಿ ಕ್ಷೇತ್ರದಿಂದ 4 ಬಾರಿ ಗೆದ್ದಿದ್ದಾರೆ. ಮೊದಲು, ಜೆಡಿಎಸ್‌ ನಂತರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದವರು. ಹೀಗಾಗಿ ಇಲ್ಲಿಯೂ ಪಕ್ಷದ ಹೆಸರು ಲೆಕ್ಕಕ್ಕೆ ಬಾರದು ಎನ್ನುವ ಸ್ಥಿತಿ ಇದೆ.

ಗೋಕಾಕದಲ್ಲಿ 1999ರಿಂದ ಸತತವಾಗಿ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಾಲ್ಕೂ ಬಾರಿ ಜಯಭೇರಿ ಬಾರಿಸಿರುವ ರಮೇಶ ಜಾರಕಿಹೊಳಿ ಹಾಗೂ ಯಮಕನಮರಡಿ ಕ್ಷೇತ್ರದ ಸತೀಶ ಜಾರಕಿಹೊಳಿ ಅವರದು ಕುಟುಂಬ ರಾಜಕಾರಣದ ಉದಾಹರಣೆ.

**

ಧಾರವಾಡವೂ ಹೊರತಲ್ಲ

ಕುಟುಂಬ ರಾಜಕಾರಣಕ್ಕೆ ಧಾರವಾಡವೂ ಹೊರತಲ್ಲ. ಮೂರು ಅವಧಿಯವರೆಗೆ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಚಂದ್ರಕಾಂತ ಬೆಲ್ಲದ, ಕಳೆದ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಪುತ್ರ ಅರವಿಂದ ಬೆಲ್ಲದ ಅವರಿಗೆ ಬಿಟ್ಟುಕೊಟ್ಟರು.

1994ರಿಂದ ಸತತ ಗೆಲುವು ಕಾಣುತ್ತಲೇ ಬಂದ, ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್‌ ಹತ್ತು ತಿಂಗಳು ಮುಖ್ಯಮಂತ್ರಿಯೂ ಆಗಿದ್ದರು. ಇವರ ತಂದೆ ಎಸ್‌.ಎಸ್‌. ಶೆಟ್ಟರ್‌ ಮಹಾನಗರ ಪಾಲಿಕೆಯ ಮೇಯರ್‌ ಆಗಿದ್ದವರು. ಸೋದರ ಪ್ರದೀಪ ಶೆಟ್ಟರ್‌ ವಿಧಾನಪರಿಷತ್‌ ಸದಸ್ಯ.

ಮೂರೂವರೆ ದಶಕಗಳಿಂದ ವಿಧಾನಪರಿಷತ್‌ ಸದಸ್ಯರಾಗಿ ರಾಜಕಾರಣದ ಒಳಸುಳಿಗಳನ್ನು ಬಲ್ಲವರು ಬಸವರಾಜ ಹೊರಟ್ಟಿ. ಅವರ ಪುತ್ರ ವಸಂತ ಹೊರಟ್ಟಿ ಕೂಡ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಹುಬ್ಬಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಆಗಿದ್ದವರು ಎಸ್‌.ಆರ್. ಬೊಮ್ಮಾಯಿ. ಅವರ ಪುತ್ರ ಬಸವರಾಜ ಬೊಮ್ಮಾಯಿಗೆ ಈ ಕ್ಷೇತ್ರ ಒಲಿಯಲಿಲ್ಲ. ನಂತರ ಅವರು, ಬಿಜೆಪಿ ಅಭ್ಯರ್ಥಿಯಾಗಿ ನೆಲೆ ಕಂಡುಕೊಂಡಿದ್ದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ.

**

ರಾಜಕಾರಣದಲ್ಲಿ ಜಮೀನ್ದಾರಿ ಪಳಯುಳಿಕೆಗಳ ಪ್ರಭಾವ

ಹೈದರಾಬಾದ್ ಕರ್ನಾಟಕ ಪ್ರದೇಶದ ಜಮೀನ್ದಾರಿ ಪಳೆಯುಳಿಕೆಗಳ ಪ್ರಭಾವ ಪಕ್ಕದ ಮುಂಬೈ ಕರ್ನಾಟಕ ಪ್ರದೇಶದ ಅವಿಭಜಿತ ವಿಜಯಪುರ ಜಿಲ್ಲೆಗೂ ಚಾಚಿದೆ.

ಹಿಂದಿನ ಚುನಾವಣೆಗಳ ಇತಿಹಾಸ ಗಮನಿಸಿದರೆ ಕೃಷ್ಣಾ ತೀರದಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಯ ಜಾತಿ, ಹಣ ಬಲವೇ ನಿರ್ಣಾಯಕ. ಇದೇ ಕಾರಣಕ್ಕೆ ಹಿಂದೊಮ್ಮೆ ಈ ಭಾಗದ ಜನರ ಹೃದಯ ಸಾಮ್ರಾಟ ಎನಿಸಿ ಜನತಾ ಪರಿವಾರದ ಬೇರುಗಳನ್ನು ಹರಡಿದ್ದ ರಾಮಕೃಷ್ಣ ಹೆಗಡೆ ಇಲ್ಲಿನ ಪ್ರಬಲ ಗಾಣಿಗ ಸಮುದಾಯದ ಹೊಸ ಮುಖ ಸಿದ್ದುನ್ಯಾಮಗೌಡ ಎದುರು ಸೋಲಬೇಕಾಯಿತು.

(ರಮೇಶ ಜಿಗಜಿಣಗಿ)

ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಸೋತಿದ್ದ ಎಸ್‌.ನಿಜಲಿಂಗಪ್ಪ ಅವರನ್ನು ಬಾಗಲಕೋಟೆಗೆ ಕರೆತಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೇಲ್ಜಾತಿ ಧಣಿಗಳ ಮನೆ ಜಗುಲಿಯ ಮೇಲಷ್ಟೇ ಕುಳಿತು ತಗ್ಗಿ ಬಗ್ಗಿ ನಡೆದುಕೊಂಡು ಹೋಗುವ ಕಾರಣಕ್ಕೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಗೆಲುವು ಅಬಾಧಿತವಾಗಿ ಮುಂದುವರಿದು ಕೇಂದ್ರ ಸಚಿವ ಸ್ಥಾನಕ್ಕೆ ಕರೆದೊಯ್ದಿದೆ.

(ಗೋವಿಂದ ಕಾರಜೋಳ)

ಮುಧೋಳ ಮೀಸಲು ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವಿನ ಶ್ರೇಯದ ಜೊತೆಗೆ ಬಿಜೆಪಿಯಲ್ಲಿ ಪ್ರಬಲ ನಾಯಕನಾಗಿ ಹೊರಹೊಮ್ಮಲು ಗೋವಿಂದ ಕಾರಜೋಳ ಅವರಿಗೆ ಸಾಧ್ಯವಾಗಿದೆ. ವಿಜಯಪುರದ ಕುಟುಂಬದ ಬಳುವಳಿ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಜೊತೆಗೆ ರಾಜಕೀಯ ಉತ್ತರಾಧಿಕಾರವನ್ನು ಮುಂದುವರಿಸಿಕೊಂಡು ಹೋಗಲು ಸಚಿವ ಎಂ.ಬಿ.ಪಾಟೀಲ ಅವರಿಗೆ ಸಾಧ್ಯವಾಗಿದೆ. ವಿಶೇಷವೆಂದರೆ ಎಂ.ಬಿ.ಪಾಟೀಲ ಲಿಂಗಾಯತ ಉಪಪಂಗಡ ಕುಡುಒಕ್ಕಲಿಗ ಸಮುದಾಯದವರು. ಅವರ ಸಂಖ್ಯೆ ಕ್ಷೇತ್ರದಲ್ಲಿ ಅಷ್ಟಾಗಿ ಇಲ್ಲದಿದ್ದರೂ, ಕುಟುಂಬದಿಂದ ಬಂದ ‘ಬಲಾಢ್ಯತನ’ದ ಬಳುವಳಿ, ಸಮುದಾಯದ ಕೆಲಸ, ಜನರೊಡನೆ ಒಡನಾಟ ಅವರನ್ನು ಲಿಂಗಾಯತ ನಾಯಕರಾಗಿ ಹೊರಹೊಮ್ಮಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.