ಬುಧವಾರ, ಜುಲೈ 15, 2020
22 °C

ಮಂದಹಾಸ ಮಿನುಗುತಿರಲಿ...

ಸೋಮು ಕುದರಿಹಾಳ Updated:

ಅಕ್ಷರ ಗಾತ್ರ : | |

ಮಂದಹಾಸ ಮಿನುಗುತಿರಲಿ...

ಪ್ರಸ್ತುತ ದಿನಮಾನಗಳಲ್ಲಿ ಚಕ್ರದಂತೆ ತಿರುಗುವ ಕಾಲದೊಡನೆ ಜಿದ್ದಿಗೆ ಬಿದ್ದವರಂತೆ ಓಡುತ್ತಿರುವ ಪ್ರತಿಯೊಬ್ಬರ ಮುಖದಲ್ಲೂ ಸದಾ ಒಂದಿಲ್ಲೊಂದು ಚಿಂತೆಯ ಭಾವ, ಅನುಭವಿಸಲಾಗದ ನೋವು, ಸಹಿಸಿಕೊಳ್ಳಲಾಗದ ಸಂಕಟ. ಇದನ್ನು ನೋಡಿದಾಗ ತಾನಾಗಿಯೇ ವಿಷಾದದ ಭಾವ ಆವರಿಸುತ್ತದೆ.

ಲವಲವಿಕೆ, ಚುರುಕುತನದ ಬದಲಿಗೆ ಬರಿಯ ಅವಸರವನ್ನೇ ಮೈಗಂಟಿಸಿಕೊಂಡಿರುತ್ತಾರೆ. ಗುಂಪಿನಲ್ಲಿದ್ದರೂ ಒಬ್ಬಂಟಿಯಂತಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಮಾನಸಿಕ ತೊಳಲಾಟ ದಿನೇ ದಿನೇ ಹೆಚ್ಚುತ್ತಿದೆ. ಮಾನಸಿಕ ಒತ್ತಡವು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. 

ಹಾಗಾದರೆ ನಮ್ಮ ಹಿಂದಿನ ತಲೆಮಾರಿನವರಿಗೆ ಕೆಲಸ ಕಾರ್ಯಗಳಿರಲಿಲ್ಲವೇ? ಹಗಲಿರುಳೆನ್ನದೆ ದುಡಿಯುತ್ತಿರಲಿಲ್ಲವೇ? ನೋವುಗಳಿರಲಿ

ಲ್ಲವೇ? ಅವುಗಳೆಲ್ಲವನ್ನೂ ಮೀರಿ ಅವರು ನಗುತ್ತಿದ್ದರು. ಇಷ್ಟೆಲ್ಲಾ ಒತ್ತಡದ ನಡುವೆಯೂ ಅವರೊಳಗೆ ನೆಮ್ಮದಿಯ ಭಾವವಿತ್ತು. ಮನೆ–ಮನಗಳಲ್ಲಿ ಸದಾ ಸಂತೋಷವೇ ಇರುತ್ತಿತ್ತು. ಹಾಗಾದರೆ ಇಂದಿನ ಜನರೇಕೆ ನಗುವಿನಿಂದ ದೂರ ಉಳಿದಿದ್ದಾರೆ? ಇಂದಿನ ಇಂತಹ ಸ್ಥಿತಿಗೆ ಕಾರಣವೇನು?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡತೊಡಗಿದರೆ ನಾವೂ ನಗುವನ್ನು ಮರೆತು ಚಿಂತೆಯಲ್ಲೇ ಮುಳುಗಬೇಕಾಗುತ್ತದೆ. ಕೊನೆಗೆ ಉತ್ತರವಾಗಿ ಹಲವಾರು ಕಾರಣಗಳು ಎದುರಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲದಕ್ಕೂ ಎದೆಗೊಟ್ಟು ಹೋರಾಡಲೇಬೇಕಾದ ಅನಿವಾರ್ಯತೆ, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಪಡುತ್ತಿರುವ ಹರಸಾಹಸ, ಬದುಕಿನ ಕುರಿತ ಅತಿಯಾದ ನಿರೀಕ್ಷೆ, ಎಲ್ಲಾ ಸಂದರ್ಭಗಳಲ್ಲೂ ಗೊಂದಲಮಯ ಮನೋಭಾವ, ತಮ್ಮ ಸಾಮರ್ಥ್ಯದ ಮೇಲೆ ಹುಚ್ಚು ನಂಬಿಕೆ, ಹಣ-ಗುಣದಲ್ಲಿ ಪರಸ್ಪರ ಹೋಲಿಕೆ, ಎದುರಾಗುವ ಸಮಸ್ಯೆಗಳನ್ನು ಸೂಕ್ತವಾಗಿ ನಿರ್ವಹಿಸಲಾಗದ ದೌರ್ಬಲ್ಯ, ಯಾವುದೇ ಕೆಲಸದಲ್ಲಿ ದೃಢವಾಗಿ ನಿಲ್ಲಲಾಗದ ಚಾಂಚಲ್ಯ, ಆಹಾರ ಸೇವನೆಯ ವಿಧಾನ ಮತ್ತು ಸೇವಿಸುವ ಆಹಾರದ ಗುಣಮಟ್ಟ ಮುಂತಾದವುಗಳು.

ಇವುಗಳೆಲ್ಲದರ ಮಧ್ಯೆ ಸಿಲುಕಿರುವ ಮನಸ್ಸು ಅಲ್ಪ ನೆಮ್ಮದಿಗಾಗಿ ಕಾಯುತ್ತಿರುತ್ತದೆ. ಮನದ ಬಯಕೆಯನ್ನು ಈಡೇರಿಸುವ ನೆಮ್ಮದಿಯ ನಿರಾಳತೆಯನ್ನು ನೀಡುವ ದಿವ್ಯ ಆಸರೆಯೆಂದರೆ ಪುಟ್ಟ ನಗು. ಆ ನಗುವಿಗೆ ಕಾರಣಗಳಾಗಿ ದೊಡ್ಡದೇನೂ ಬೇಕಾಗಿಲ್ಲ. ಚಿಕ್ಕದೊಂದು ತುಂಟತನದ ಗೇಲಿಮಾತು, ಕಚಗುಳಿಯಿಡುವ ಸಣ್ಣಸಾಲು, ಯಾವುದೋ ಸುಂದರ ನೆನಪು ಇತ್ಯಾದಿ ಯಾವುದಾದರೂ ಆಗಬಹುದು. ಎಲ್ಲಕ್ಕಿಂತ ಮಿಗಿಲಾಗಿ ಮನಸ್ಸು ಸ್ವಚ್ಚವಾಗಿರಬೇಕು. ಆಗ ಮಾತ್ರ ಕಣ್ಣಲ್ಲಿ ನೀರುತುಂಬುವಷ್ಟು, ಹೊಟ್ಟೆ ಹುಣ್ಣಾಗುವಷ್ಟು ನಗಲು ಸಾಧ್ಯವಾಗುತ್ತದೆ.

ಅಂತಹ ನಗುವಿನಿಂದ ಮನಸ್ಸು ಆಹ್ಲಾದಕರವಾಗುತ್ತದೆ. ಬೆಟ್ಟದಂಥ ಕಷ್ಟ ಕರಗಿಬಿಡುತ್ತದೆ. ನಗುವಿನಿಂದ ಶತ್ರುವೇ ಮಿತ್ರನಾಗುವಾಗ ನಮ್ಮೊಳಗಿನ ಚಿಂತೆ ದೂರವಾಗದೆ ಇರಲಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.