ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ಮನಸಿಗೆ ವಾಯುವಿಹಾರ

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ನೀವು ದಿನವಿಡೀ ಫ್ರೆಶ್‌ ಆಗಿ ಇರ್ತೀರಲ್ಲಾ? ಅದು ಹೇಗೆ’ ಎಂದು ನನ್ನ ಸ್ನೇಹಿತರೊಬ್ಬರು ಕೇಳಿದರು.

‘ಓ ಅದಾ... ಓಪನ್‌ ಸೀಕ್ರೇಟ್‌. ಮಾರ್ನಿಂಗ್‌ ವಾಕ್‌’ ಅಂದೆ.

‘ಬರೀ ವಾಕಿಂಗ್‌ ಮಾಡೋದ್ರಿಂದನಾ...’ ಅಂತ ರಾಗ ತೆಗೆದರು. ‘ಹೂಂ’ ಎಂದು ತಲೆಯಾಡಿಸಿದೆ. ಅವರ ಕುತೂಹಲ, ಆಸಕ್ತಿಗೆ ಸೋತು ಬೆಳಗಿನ ವಾಯುವಿಹಾರದಿಂದ ನಮಗಾಗುವ ಪ್ರಯೋಜನಗಳನ್ನು ಹಂತಹಂತವಾಗಿ ವಿವರಿಸಬೇಕಾಯಿತು.

ನಾವು ದಿನಪೂರ್ತಿ ಲವಲವಿಕೆಯಿಂದ ಇರಬೇಕೆಂದರೆ ರಾತ್ರಿಹೊತ್ತು ನಿದ್ದೆ ಚೆನ್ನಾಗಿ ಮಾಡಬೇಕು. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗಿಲ್ಲ ಅಂದರೆ ತಲೆ ಭಾರ ಎನಿಸುತ್ತದೆ. ಆಲಸ್ಯವೂ ಸಹಜ. ತಲೆಭಾರ ಮುಂದುವರಿದು ಮೈಗ್ರೇನ್‌ಗೆ ಜಾರಿತೆಂದರೆ ಆ ದಿನವೇನು; ಕನಿಷ್ಠ ಎರಡು ಮೂರು ದಿನಗಳೇ ಬೇಕು ಸುಧಾರಿಸಿಕೊಳ್ಳಲು. ಇಷ್ಟೆಲ್ಲ ಪಾಡು ಪಡುವ ಬದಲು ನಿದ್ದೆಯೊಂದನ್ನು ಸರಿಯಾಗಿ ಮಾಡಿಬಿಟ್ಟರೆ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ.

ಬೆಳಗಿನ ವೇಳೆ ವಾಯುವಿಹಾರವನ್ನು ತಪ್ಪಿಸದೇ ರೂಢಿಸಿಕೊಂಡಲ್ಲಿ ನಿದ್ರಾಹೀನತೆ ಸಹಿತ ನಿದ್ದೆಯ ಹಲವು ಸಮಸ್ಯೆಗಳನ್ನು ದೂರವಿಡಬಹುದು. ರಾತ್ರಿ ಮಲಗಿದ ಕೆಲವೇ ನಿಮಿಷಗಳಲ್ಲಿ ನಿದ್ರಾದೇವಿಯ ತೆಕ್ಕೆಗೆ ಜಾರಬಹುದು. ನಿದ್ದೆ ನಡುವೆ ಪದೇಪದೆ ಎಚ್ಚರವಾಗುವುದು ತಪ್ಪಲಿದೆ. ನಿದ್ದೆ ಮಾಡುವ ಸಮಯ ಕೊಂಚ ಕಡಿಮೆಯಾದರೂ ನಿದ್ದೆಯ ತೃಪ್ತಿಯನ್ನು ಚೆನ್ನಾಗಿ ಪಡೆಯಬಹುದು. ನಿದ್ದೆಯ ಹಿಂದೆ ವಾಕಿಂಗ್‌ನ ಗುಟ್ಟಡಗಿದೆ. ಇದು ನಿದ್ದೆ ವಿಚಾರ ಆಯ್ತು. ಮತ್ತೆ ವಾಕಿಂಗ್‌ ವಿಚಾರಕ್ಕೆ ಬರೋಣ.

ಇಡೀ ಶರೀರಕ್ಕೆ ಉತ್ತಮ ವ್ಯಾಯಾಮ ನೀಡುವ ಒಳ್ಳೇ ಹವ್ಯಾಸ ಇದು. ಬೆಳಗಿನ ವೇಳೆ ವಾಕಿಂಗ್‌ಗೆ ಹೇಳಿ ಮಾಡಿಸಿದ ಸಮಯ. ಒಂದು ದೊಡ್ಡ ಲೋಟದಲ್ಲಿ ಕುಡಿಯಲು ಸಾಧ್ಯವಾಗುವಷ್ಟು ಬಿಸಿನೀರಿಗೆ ಒಂದು ಹೊಳು ನಿಂಬೆಹಣ್ಣು ಹಿಂಡಿ ಖಾಲಿ ಹೊಟ್ಟೆಯಲ್ಲಿ ಕುಡಿದು ನಡೆಯಲು ಆರಂಭಿಸಬೇಕು. ಅತ್ತ ಬಿರುಸೂ ಅಲ್ಲದ, ಇತ್ತ ನಿಧಾನವೂ ಅಲ್ಲದ ಒಂದಳತೆಯಲ್ಲಿ ನಡೆಯಬೇಕು. ಹೀಗೆ ನಡೆಯುವಾಗ ಮನಸ್ಸಿನಲ್ಲಿ ಏನೇನೋ ಯೋಚಿಸುವುದ ಬಿಟ್ಟು ಪ್ರಕೃತಿಯೆಡೆಗೆ ಪೂರ್ಣ ಗಮನ ಹರಿಸಿರಿ.

ಆಗ ತಾನೆ ಹೊರಹೊಮ್ಮುವ ನೇಸರನ ಎಳೇ ಕಿರಣಗಳನ್ನು ದಿಟ್ಟಿಸಿ ನೋಡಿ. ಆ ಸೂರ್ಯರಶ್ಮಿ ನಡೆಯುವ ದಾರಿಯಲ್ಲಿರುವ ಗಿಡ ಮರಗಳ ಎಳೆ ಎಲೆಗಳ ಮೂಲಕ ತೂರಿದಾಗ ಕಾಣುವ ಸೌಂದರ್ಯವನ್ನು ಆಸ್ವಾದಿಸಿ. ಮರಗಳ ಸಂದಿನಿಂದ ಪಕ್ಷಿಗಳ ಚಿಲಿಪಿಲಿ ಉಲಿಯನ್ನು ಆಲಿಸಿ. ಕೋಗಿಲೆಯ ಇಂಪಾದ ದನಿಗೆ ಕಿವಿಯ ತೆರೆದುಬಿಡಿ.

ಹೂಬಿಟ್ಟ ಮರಗಳಲ್ಲಿ ಮಕರಂದ ಹೀರಲು ಬಂದ ಜೇನ್ನೋಣಗಳು ಹೊಮ್ಮಿಸುವ ನಾದಕ್ಕೆ ಮನಸ್ಸು ಕೊಡಿ. ಸುಯ್ಯನೆ ಬೀಸುವ ತಂಪಾದ ಗಾಳಿ ಮೈಮನ ಸೋಕಿದಾಗ ಆಗುವ ಸಂತಸವನ್ನು ಮನಸಾರೆ ಅನುಭವಿಸಿ. ಇಷ್ಟೆಲ್ಲವನ್ನು ನೀವು ನಡೆಯುತ್ತ ಮಾಡಿದಲ್ಲಿ ಒತ್ತಡ ದೂರವಾಗಿ ಮನಸ್ಸು ಹಗುರವಾಗಲಿದೆ. ಮೈಮನ ಉಲ್ಲಸಿತವಾಗಲಿದೆ.

(ಸಾಂದರ್ಭಿಕ ಚಿತ್ರ)

ನಡಿಗೆಯುದ್ದಕ್ಕೂ ಬೋನಸ್‌ ಎಂಬಂತೆ ಆಕಾಶ ಮುದ್ರೆ, ವಾಯು ಮುದ್ರೆ, ಪೃಥ್ವಿ ಮುದ್ರೆ, ಶೂನ್ಯ ವಾಯು ಮುದ್ರೆಗಳನ್ನೂ ಅನುಸರಿಸಬಹುದು. ಆಕಾಶ ಮುದ್ರೆಯು ಹೃದಯ ಸುರಕ್ಷೆಗೆ, ಶ್ರವಣ ಶಕ್ತಿ ಸಮೃದ್ಧಿಗೆ ಸಹಾಯಕ. ಮೈಗ್ರೇನ್‌ಗೂ ಇದು ಮದ್ದು. ಎಲುಬುಗಳನ್ನು ಸದೃಢಗೊಳಿಸಲಿದೆ. ಶೂನ್ಯ ವಾಯು ಮುದ್ರೆ ಕೂಡ ತಲೆನೋವು ಸಮಸ್ಯೆಯಿಂದ ಮುಕ್ತಿನೀಡಲಿದೆ. ಪೃಥ್ವಿ ಮುದ್ರೆ ಮಾಡುವುದರಿಂದ ಆಯಾಸವನ್ನು ನೀಗಿಸಿಕೊಳ್ಳಬಹುದು. ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲಿದೆ. ಸ್ನಾಯುಗಳು ಬಲಗೊಳ್ಳಲು ಸಹಕಾರಿ. ವರುಣ ಮುದ್ರೆಯಿಂದ ಒಣ ಕೆಮ್ಮು ನಿವಾರಣೆಯಾಗಲಿದೆ. ಶುಷ್ಕ ತ್ವಚೆ ಸಮಸ್ಯೆಗೂ ಪರಿಹಾರ ಸಿಗಲಿದೆ.

ಉದ್ಯಾನದಲ್ಲಿ ನಡೆಯುತ್ತಿದ್ದರೆ ವಾಕಿಂಗ್‌ ಮುಗಿಸಿ ಎಳೆಬಿಸಿಲಿಗೆ ಕುಳಿತುಕೊಳ್ಳಿ. ಇದರಿಂದ ನೈಸರ್ಗಿಕವಾಗಿ ವಿಟಮಿನ್‌ ಡಿ ನಮ್ಮ ದೇಹಕ್ಕೆ ಪೂರೈಕೆಯಾಗಲಿದೆ. ಒಂದೈದು ನಿಮಿಷ ಧ್ಯಾನಮುದ್ರೆಯಲ್ಲಿ ಓಂಕಾರವನ್ನು ಉಚ್ಚರಿಸಿ. ದೀರ್ಘ ಉಸಿರಾಟ ನಡೆಸಿ. ಇಷ್ಟು ಮಾಡಿದ ಮೇಲೆ ದಿನಪೂರ್ತಿ ಲವಲವಿಕೆ ಇರದಿದ್ದರೆ ಹೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT