ಭಾನುವಾರ, ಡಿಸೆಂಬರ್ 8, 2019
25 °C

ಮಾವಿನಲ್ಲಿ ಬಗೆಬಗೆ ಅಡುಗೆ

Published:
Updated:
ಮಾವಿನಲ್ಲಿ ಬಗೆಬಗೆ ಅಡುಗೆ

–ವಿಜಯಾ ಗುರುರಾಜ

ಮಾವಿನಕಾಯಿ ಚಿತ್ರಾನ್ನ

ಸಾಮಗ್ರಿಗಳು: ಮಾವಿನಕಾಯಿ-1, ಹಸಿಮೆಣಸು-6, ಕಡಲೆಬೀಜ- ಕಾಲು ಕಪ್, ಕರಿಬೇವು ಸ್ವಲ್ಪ, ಒಗ್ಗರಣೆಗೆ ಎಣ್ಣೆ ಕಾಲು ಕಪ್. ಅರಿಶಿನ-ಅರ್ಧ ಚಮಚ, ಸಾಸಿವೆ, ಜೀರಿಗೆ ತಲಾ ಅರ್ಧ ಚಮಚ, ಕಡಲೆಬೇಳೆ, ಉದ್ದಿನಬೇಳೆ ತಲಾ 1 ಚಮಚ ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು, ಇಂಗು.

ವಿಧಾನ: ಮಾವಿನಕಾಯಿಯನ್ನು ಸಿಪ್ಪೆಯೊಂದಿಗೆ ತುರಿದು ಹಸಿಮೆಣಸನ್ನು ಉದ್ದಕ್ಕೇ ಸೀಳಿಕೊಂಡು ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಒಗ್ಗರಣೆ ಬಾಡಿಸಿ. ಅದಕ್ಕೆ ಹುರಿದ ಕಡಲೆಬೀಜ ಮತ್ತು ಕರಿಬೇವು ಸೇರಿಸಿ ಅರಿಶಿನ ಮತ್ತು ಮಾವಿನತುರಿ ಹಾಕಿ ಕೆದಕಿ. ಬೆಲ್ಲ, ಉಪ್ಪು, ಇಂಗು ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ಕೆಳಗಿಳಿಸಿ. ಆರಿದನಂತರ ಗೊಜ್ಜನ್ನು ಬಾಟಲಿಗೆ ತುಂಬಿಡಿ. ಬೇಕೆಂದಾಗ ಬಿಸಿ ಅನ್ನ ಮಾಡಿ ಸಿದ್ಧಗೊಳಿಸಿದ ಗೊಜ್ಜನ್ನು ಹಾಕಿ ಅನ್ನ ಕಲಸಿಕೊಂಡರೆ 10 ನಿಮಿಷದಲ್ಲಿ ಘಂ ಎನ್ನುವ ಮಾವಿನಕಾಯಿ ಚಿತ್ರಾನ್ನ ತಿನ್ನಲು ರೆಡಿ.

**

ಮಾವು ಮೆಂತೆ ಗೊಜ್ಜು

ಸಾಮಗ್ರಿಗಳು: ಮಾವಿನಕಾಯಿ 2, ಮೊಳಕೆ ಬಂದ ಮೆಂತ್ಯ 2 ಚಮಚ, ಹಸಿಮೆಣಸು 8, ಬೆಲ್ಲ– ನಿಂಬೆಗಾತ್ರದ್ದು, ಉಪ್ಪು– ರುಚಿಗೆ ತಕ್ಕಷ್ಟು. ಒಗ್ಗರಣೆಗೆ– ಎಣ್ಣೆ ಸಾಸಿವೆ.

ವಿಧಾನ: ಮಾವಿನಕಾಯಿಯ ಸಿಪ್ಪೆ ತೆಗೆಯದೆ ಸಣ್ಣ ತುಂಡುಗಳಂತೆ ಹೆಚ್ಚಿಡಿ. ಒಗ್ಗರಣೆಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಮೊಳಕೆ ಬಂದ ಮೆಂತೆಯನ್ನು ಹಾಕಿ ಬಾಡಿಸಿ, ನಂತರ ಹೆಚ್ಚಿಟ್ಟ ಮಾವಿನಕಾಯಿ ಹಾಕಿ ಸ್ವಲ್ಪ ನೀರು ಹಾಕಿ ಬೇಯಲು ಇಡಿ. ಅದಕ್ಕೆ ಸಾರಿನ ಪುಡಿ, ಉಪ್ಪು, ಬೆಲ್ಲ ಹಾಕಿ ತಕ್ಕಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ ಕೆಳಗಿಳಿಸಿದರೆ ಘಂ ಎನ್ನುವ ಗೊಜ್ಜು ನಾಲಿಗೆಗೂ ಆರೋಗ್ಯಕ್ಕೂ ಹಿತಕರ.

**

ಮಾವನಕಾಯಿ ಈರುಳ್ಳಿ ಗೊಜ್ಜು

ಸಾಮಾಗ್ರಿಗಳು: ಮಾವಿನ ಕಾಯಿ-2,  ಹಸಿಮೆಣಸು--8, ಈರುಳ್ಳಿ 3, ಉಪ್ಪು,ಬೆಲ್ಲ, ಅರಿಶಿನ-1 ಚಮಚ,  ಕರಿಬೇವು-1 ಎಸಳು, ಒಗ್ಗರಣೆಗೆ -ಎಣ್ಣೆ , ಸಾಸಿವೆ.

ಮಾಡುವ ವಿಧಾನ: ಮಾವಿನ ಕಾಯಿಯನ್ನು ಸಿಪ್ಪೆ ಸುಲಿದು ತುರಿದಿಡಿ.  ಹಸಿಮೆಣಸನ್ನು ಎಣ್ಣೆ ಹಾಕಿ ಹುರಿದು ಆರಿದ ನಂತರ ಮಾವಿನ ತುರಿ, ಹೆಚ್ಚಿದ ಎರಡು ಈರುಳ್ಳಿ, ಮೆಣಸು,  ಉಪ್ಪು ಸೇರಿಸಿ ರುಬ್ಬಿ ಕೊಳ್ಳಿ.  ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಸಣ್ಣಗೆ ಹೆಚ್ಚಿದ 1 ಈರುಳ್ಳಿ ಮತ್ತು ಕರಿಬೇವನ್ನು ಹಾಕಿ ಚೆನ್ನಾಗಿ ಬಾಡಿಸಿ. ನಂತರ ರುಬ್ಬಿಟ್ಟ ಮಾವಿನ ಮಿಶ್ರಣ ಹಾಕಿ ಅರಿಶಿನ, ಉಪ್ಪು,ಬೆಲ್ಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ ಕೆಳಗಿಳಿಸಿದರೆ ಘಮ್ ಎನ್ನುವ ಈರುಳ್ಳಿ ಮಾವಿನ ಗೊಜ್ಜು ರೆಡಿ. ಬೆಳ್ಳುಲ್ಲಿ ಬೇಕಾದರೂ ಸೇರಿಸಬಹುದು.

**

ಮಾವಿನ ಕಟ್ಟಾ ಮೀಠಾ

ಸಾಮಾಗ್ರಿಗಳು: ದೋರೆ ಮಾವಿನ ಕಾಯಿ-2, ಬೆಲ್ಲ--ಒಂದು ಅಚ್ಚು, ಮೆಣಸಿನ ಪುಡಿ-1 ಚಿಕ್ಕ ಚಮಚ, ಏಲಕ್ಕಿ-5, ತುಪ್ಪ -2 ಚಮಚ, ಗೋಡಂಬಿ-10

ಮಾಡುವ ವಿಧಾನ: ಮಾವಿನ ಕಾಯಿ ಸಿಪ್ಪೆ ತೆಗೆದು ತುರಿದಿಡಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಬೆಲ್ಲವನ್ನು ಪುಡಿ ಮಾಡಿ ಸೇರಿಸಿ ಅದಕ್ಕೆ ಮಾವಿನ ತುರಿಯನ್ನೂ ಹಾಕಿ ಚೆನ್ನಾಗಿ ಕೆದಕುತ್ತಿರಿ. ಪಾಕ ಬರುವಂತಾದಾಗ ಮೆಣಸಿನಪುಡಿ , ಎಲಕ್ಕಿ ಪುಡಿ, ತುಪ್ಪ ಹಾಕಿ 5 ನಿಮಿಷ  ಬಿಟ್ಟು ಕೆಳಗಿಳಿಸಿ. ಕರಿದಿಟ್ಟ ಗೋಡಂಬಿ ಸೇರಿಸಿ ರುಚಿಯಾದ ಈ ಕಟ್ಟಾ ಮೀಠಾ ಹಲ್ವವನ್ನು ಹಾಗೆ ತಿನ್ನಬಹುದು ಅಥವಾ ಪೂರಿ, ರೊಟ್ಟಿ,ದೋಸೆಯೊಂದಿಗೂ ತಿನ್ನಬಹುದು.

**

ಕಾಟು ಮಾವಿನ ಗೊಜ್ಜು

ಬೇಕಾಗುವ ಸಾಮಾಗ್ರಿಗಳು: ಚಿಕ್ಕದಾದ ಸಿಹಿ ಇರುವ ಕಾಟು ಮಾವಿನ ಕಾಯಿ-6, ಉದ್ದಿನಬೇಳೆ-1 ಚಮಚ, ಎಳ್ಳು-2  ಚಮಚ, ಬ್ಯಾಡಗಿ ಮೆಣಸು-10, ತೆಂಗಿನ ತುರಿ- ಒಂದು ಕಪ್, ಹಸಿ ಸಾಸಿವೆ-1 ಚಮಚ, ಎಣ್ಣೆ-5 ಚಮಚ, ಒಗ್ಗರಣೆಗೆ-ಸಾಸಿವೆ ರುಚಿಗೆ -ಬೆಲ್ಲ,ಉಪ್ಪು. 

ಮಾಡುವ ವಿಧಾನ: ಮಾವಿನ ಕಾಯಿಗಳನ್ನು ಚೆನ್ನಾಗಿ ತೊಳೆದು ಸಿಪ್ಪೆಯೊಂದಿಗೇ ಕುಕ್ಕರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಬಾಣಲೆ ಒಲೆಯ ಮೇಲಿಟ್ಟು ಮೆಣಸಿನಕಾಯಿ, ಎಳ್ಳು ಮತ್ತು ಉದ್ದಿನಬೇಳೆಯನ್ನು ಹದವಾಗಿ ಹುರಿದು ತೆಗೆದಿಡಿ. ಅದಕ್ಕೆ ತೆಂಗಿನ ತುರಿ, ಹಸಿ ಸಾಸಿವೆ ಸೇರಿಸಿ ನೀರು ಹಾಕಿ ರುಬ್ಬಿ. ಬೆಂದು ಆರಿದ ಮಾವಿನಕಾಯಿಗಳನ್ನು ಚೆನ್ನಾಗಿ ಕಿವುಚಿ ಸಿಪ್ಪೆ ಮತ್ತು ವಾಟೆಗಳನ್ನು ಅದರಲ್ಲೇ ಬಿಟ್ಟು ರುಬ್ಬಿದ ಮಿಶ್ರಣವನ್ನು ಸೇರಿಸಿ ತಕ್ಕಷ್ಟು ನೀರು ಸೇರಿಸಿ ಉಪ್ಪು ಬೆಲ್ಲ ಹಾಕಿ ಕುದಿಸಿ. ಅದಕ್ಕೆ ಎಣ್ಣೆ ಸಾಸಿವೆ ಒಗ್ಗರಣೆಯನ್ನು ಮಾಡಿ ಸೇರಿಸಿದರೆ ಪರಿಮಳಭರಿತವಾದ ಕಾಟು ಗೊಜ್ಜು ಬಿಸಿ ಅನ್ನಕ್ಕೆ ಬಹಳ ರುಚಿ.

ಪ್ರತಿಕ್ರಿಯಿಸಿ (+)