ಮಂಗಳವಾರ, ಜೂಲೈ 7, 2020
24 °C
ಸಂಗಮ: ಕಾಂಗ್ರೆಸ್‌ ಕಾರ್ಯಕರ್ತರ ಸಭೆ, ಮುಖಂಡರೊಂದಿಗೆ ಚರ್ಚೆ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಮಾಲಕರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಮಾಲಕರಡ್ಡಿ

ಯಾದಗಿರಿ:‘ಜನಪರ ಕಾರ್ಯ ಮಾಡಿರುವ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.ವಡಗೇರಾ ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ಬುಧವಾರ ವಡಗೇರಾ, ತುಮಕೂರು, ಹಯ್ಯಾಳ (ಬಿ) ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಯಾದಗಿರಿ ಮತಕ್ಷೇತ್ರದಿಂದ ನಾಲ್ಕು ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಬೇಕಿದೆ. ಅದಕ್ಕಾಗಿ ಮುಖಂಡರು ಬೂತ್‌ಮಟ್ಟದಲ್ಲಿ ಸಂಘಟನೆ ಮಾಡಬೇಕು’ ಎಂದರು.‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಸಮರ್ಥ ಆಡಳಿತ ನೀಡಿದ್ದಾರೆ. ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರ ಲಾಭ ಪ್ರತಿಯೊಬ್ಬ ಮತದಾರರಿಗೆ ತಲುಪಿದೆ’ ಎಂದರು.

‘ಯಾದಗಿರಿ ಮತಕ್ಷೇತ್ರದಲ್ಲಿ ಭೀಮಾ ನದಿಗೆ ಐದು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಕೊಂಗಂಡಿ ಏತನೀರಾವರಿ ಹಾಗೂ ಗುಂಡ್ಲೂರು ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿರುವುದರಿಂದ ರೈತಾಪಿ ವರ್ಗದ ಜಮೀನು ನೀರಾವರಿಯಾಗಿ ಆಹಾರ ಉತ್ಪನ್ನ ಹೆಚ್ಚಾಗಿದೆ. ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಸಹಾಯಕವಾಗಿದೆ’ ಎಂದು ಹೇಳಿದರು.

‘ಬಿಜೆಪಿ ಮತ್ತು ಜೆಡಿಎಸ್‌ನವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ರಾಮೀಣ ಭಾಗಕ್ಕೆ ಬರುತ್ತಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜೆಡಿಎಸ್ ಒಂದು ಪ್ರಾಂತೀಯ ಪಕ್ಷವಾಗಿದೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸೀಮಿತವಾಗಿರುವ ಕುಟುಂಬ ರಾಜಕಾರಣದ ಪಕ್ಷವಾಗಿದೆ’ ಎಂದರು.ಮುಖಂಡ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ,‘ಕಳೆದ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಪ್ರಾಮಾಣಿಕವಾಗಿ ಈಡೇರಿಸಿದೆ. ಆದ್ದರಿಂದ, ಜನರು ಕಾಂಗ್ರೆಸ್ ಅನ್ನು ಮುಂದಿನ ಬಾರಿ ಅಧಿಕಾರಕ್ಕೆ ತಂದು ಉಳಿದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಸಹಕರಿಸಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಗೌಡ ಹುಲ್ಕಲ್ ಮಾತನಾಡಿ,‘ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ರೈತರು ಸಂಕಷ್ಟದಲ್ಲಿ ಇದ್ದಾಗ ಸರ್ಕಾರ ಒಟ್ಟು ₹ 8 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದೆ’ ಎಂದು ತಿಳಿಸಿದರು.‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಮತದಾರರು ಜಾಗೃತರಾಗಿ ವಾಸ್ತವಿಕ ಪರಿಸ್ಥಿತಿ ನೋಡಿ ಕಾಂಗ್ರೆಸ್ ಬೆಂಬಲಿಸಬೇಕು’ಎಂದರು.

ಮುಖಂಡರಾದ ಶ್ರೀನಿವಾಸರಡ್ಡಿ ಕಂದಕೂರ, ಡಾ.ಸುಭಾಷ್ ಕರಣಿಗಿ, ಮಲ್ಲಿಕಾರ್ಜುನ ಪೂಜಾರಿ, ಬಸವರಾಜಪ್ಪಗೌಡ ವಡಗೇರಾ, ಅಶೋಕರೆಡ್ಡಿ ಗೋನಾಲ, ಶಾಂತರೆಡ್ಡಿ ದೇಸಾಯಿ, ಸಿದ್ದಲಿಂಗರೆಡ್ಡಿ ಉಳ್ಳೆಸೂಗುರು, ಮರೆಪ್ಪ ಬಿಳ್ಹಾರ, ನಾಗರಾಜಗೌಡ ಬಿಳ್ಹಾರ, ಡಾ. ಅಮರಣ್ಣ ಗಡ್ಡೆಸೂಗೂರು, ಮಾಣಿಕರೆಡ್ಡಿ ಕುರುಕುಂದಿ ಇದ್ದರು.

ಚನ್ನಾರಡ್ಡಿ ಪಾಟೀಲ ತುನ್ನೂರು ಅಸಮಾಧಾನ

‘ನಾನು ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ. ಪ್ರತಿ ಸಲ ಟಿಕೆಟ್‌ ಗಾಗಿ ಅರ್ಜಿ ಸಲ್ಲಿಸುವಾಗ ಹಿರಿಯರಾದ ಡಾ.ಎ.ಬಿ.ಮಾಲಕರಡ್ಡಿ ಅವರು ಈ ಸಲ ಸುಮ್ಮನಿರಿ. ಮುಂದಿನ ಬಾರಿ ನೀವೇ ಅಭ್ಯರ್ಥಿ ಎನ್ನುತ್ತಾ ಬಂದಿದ್ದಾರೆ. ಹಿರಿಯರಿಗೆ ಗೌರವ ಸೂಚಿಸುತ್ತಾ ಬಂದಿದ್ದೇನೆ. ಈ ಬಾರಿಯೂ ಅವರು ಅರ್ಜಿ ಸಲ್ಲಿಸಿದ್ದಾರೆ. ನಾನೂ ಅರ್ಜಿ ಸಲ್ಲಿಸಿದ್ದೇನೆ. ನಾನು ಈ ಬಾರಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಚನ್ನಾರಡ್ಡಿ ಪಾಟೀಲ ತುನ್ನೂರ ಭಾಷಣದಲ್ಲಿ ಅಸಮಾಧಾನ ಹೊರಹಾಕಿದರು.

**

ಈ ಬಾರಿ ನನಗೆ ಟಿಕೆಟ್‌ ಕೊಡಿಸಿ. ಪ್ರತಿಸಲ ಚುನಾವಣೆಯಲ್ಲಿ ನನಗೆ ಮುಂದಿನ ಬಾರಿ ನೀಡುವ ಭರವಸೆ ನೀಡಿದ್ದೀರಿ. ಈ ಬಾರಿ ನ್ಯಾಯ ಕೊಡಿಸಿ – ಚನ್ನಾರಡ್ಡಿ ಪಾಟೀಲ ತುನ್ನೂರ, ಕಾಂಗ್ರೆಸ್ ಹಿರಿಯ ಮುಖಂಡ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.