ಗುರುವಾರ , ಆಗಸ್ಟ್ 13, 2020
21 °C
ರಂಗದ ಮೇಲೆ ಮಹಾನ್‌ ನಾಯಕನ ಏಳಿಗೆಗೆ ಬದುಕು ಸವೆಸಿದ ಪತ್ನಿಯ ಕಥಾ ರೂಪಕ

ಸ್ತ್ರೀಶಕ್ತಿ ಜಾಗೃತಿಗೆ ‘ರಮಾಯಿ’ ನಾಟಕ ಪ್ರದರ್ಶನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಸ್ತ್ರೀಶಕ್ತಿ ಜಾಗೃತಿಗೆ ‘ರಮಾಯಿ’ ನಾಟಕ ಪ್ರದರ್ಶನ

ಬೀದರ್: ಸ್ತ್ರೀಶಕ್ತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ರಮಾಬಾಯಿ ಅಂಬೇಡ್ಕರ್‌ ಮಹಾನಾಟಕ ಪ್ರದರ್ಶನ ಮಹಿಳಾ ಸಮಿತಿಯು ರಾಜ್ಯದಲ್ಲೇ ಮೊದಲ ಬಾರಿಗೆ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಪತ್ನಿ ರಮಾಬಾಯಿ ಅವರ ಜೀವನ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಬೃಹತ್‌ ನಾಟಕ ಪ್ರದರ್ಶನ ಆಯೋಜಿಸಿದೆ.

ದೇಶದಾದ್ಯಂತ ಪ್ರಸಿದ್ಧಿ ಪಡೆದ ‘ಜಾಣತಾ ರಾಜಾ’ ಹಾಗೂ ‘ಸಾಮ್ರಾಟ್‌ ಅಶೋಕ’ ಮಹಾನಾಟಕಗಳ ಮಾದರಿಯಲ್ಲಿಯೇ ಏಪ್ರಿಲ್‌ 7 ರಂದು ಸಂಜೆ 7 ಗಂಟೆಗೆ ’ರಮಾಯಿ’ ಪ್ರದರ್ಶನಗೊಳ್ಳಲಿದೆ. ಮಹಾರಾಷ್ಟ್ರದ ನಾಗಪುರನಿಂದ ಈಗಾಗಲೇ 40 ಮಹಿಳೆಯರು ಹಾಗೂ 10 ಬಾಲ ಕಲಾವಿದರು ಸೇರಿ 150 ಕಲಾವಿದರು ನಗರಕ್ಕೆ ಬಂದಿದ್ದಾರೆ.

ನಾಗಪುರನ ಏಳು ತಂತ್ರಜ್ಞರು ಹಾಗೂ ಕಾರ್ಮಿಕರು ನಾಲ್ಕು ದಿನಗಳಿಂದ ನೆಹರೂ ಕ್ರೀಡಾಂಗಣದಲ್ಲಿ ಮೂರು ಅಂತಸ್ತಿನ ವೇದಿಕೆಯನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ವೇದಿಕೆಯು 22 ಅಡಿ ಎತ್ತರ, 200 ಅಡಿ ಅಗಲ ಹಾಗೂ 150 ಅಡಿ ಉದ್ದ ಇದೆ. ಧ್ವನಿ ಹಾಗೂ ಬೆಳಕಿಗೆ ಪ್ರಾಮುಖ್ಯ ನೀಡಿ ಪ್ರದರ್ಶನವನ್ನು ಇನ್ನೂ ಆಕರ್ಷಕಗೊಳಿಸಲು ಸಿದ್ಧತೆಗಳು ನಡೆದಿವೆ.

ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಪ್ರೇಕ್ಷಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಲು ಸಂಘಟಕರು ಸ್ವಯಂ ಸೇವಕರನ್ನು ನಿಯೋಜಿಸಿದ್ದಾರೆ.‘ಮರಾಠಿ ಚಲನಚಿತ್ರ ನಟ ಸುಧೀರ ಪಾಟೀಲ, ಸಂಯೋನಿ ಮಿಶ್ರಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸಗಡ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರ್‌ನಲ್ಲೂ ನಾಟಕ ಯಶ ಕಾಣಲಿದೆ’ ಎಂದು ಮಹಾನಾಟಕದ ನಿರ್ದೇಶಕ ಜತಿನ್ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

‘ಮಹಾ ಪುರುಷರ ಬಗೆಗೆ ಅನೇಕ ನಾಟಕಗಳು ಬಂದಿವೆ. ಆದರೆ ಅವರ ಯಶಸ್ಸಿಗೆ ತೆರೆಮರೆಯಲ್ಲಿ ಬದುಕನ್ನು ಸವೆಸಿದ ಮಹಿಳೆಯ ಜೀವನ ಚರಿತ್ರೆಗೆ ಸಂಬಂಧಿಸಿದ ನಾಟಕಗಳು ಬಂದಿರಲಿಲ್ಲ. ಹೀಗಾಗಿ ರಮಾಬಾಯಿ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ನಾಟಕ ಪ್ರದರ್ಶಿಸಲು ನಿರ್ಧರಿಸಿ ಎರಡು ತಿಂಗಳು ಅಭ್ಯಾಸ ಮಾಡಿ ನಾಗಪುರದಲ್ಲಿ ಮೊದಲ ಪ್ರಯೋಗ ಮಾಡಿದೆವು. ಅದು ಯಶಸ್ವಿ ಆಯಿತು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

‘ರಮಾಬಾಯಿ ಅಂಬೇಡ್ಕರ್‌ ಒಬ್ಬ ಆದರ್ಶ ಮಹಿಳೆಯಾಗಿದ್ದರು. ಸಂಸಾರದ ಹೊಣೆಯನ್ನು ಹೊತ್ತುಕೊಂಡು ಪತಿ ಬಾಬಾ ಸಾಹೇಬ ಅಂಬೇಡ್ಕರ್‌ ಸಾಮಾಜಿಕ ಕಾರ್ಯದಲ್ಲಿ ತನ್ಮಯತೆಯಿಂದ ತೊಡಗುವಂತೆ ಮಾಡಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಬಾಬಾ ಸಾಹೇಬರಿಗೆ

ಪ್ರೇರಣೆ ನೀಡಿದ್ದರಿಂದಲೇ ಅವರು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ರಮಾಬಾಯಿ ಅವರ ತ್ಯಾಗವನ್ನು ಎಂದಿಗೂ ಮರೆಯಲಾಗದು’ ಎನ್ನುತ್ತಾರೆ ಸಮಿತಿಯ ಅಧ್ಯಕ್ಷೆ ಗಂಗಮ್ಮ ಫುಲೆ.

‘ನನ್ನ ಆರೈಕೆಯಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ, ನನ್ನ ಆರೈಕೆಗೆ ಅನೇಕ ವೈದ್ಯರು ದೊರೆಯಬಹುದು. ಆದರೆ, ಶೋಷಿತ ಸಮಾಜಕ್ಕೆ ಅಂಟಿಕೊಂಡಿರುವ ರೋಗ ನಿವಾರಣೆಗೆ ನೀವೊಬ್ಬರೇ ವೈದ್ಯರು ಇದ್ದೀರಿ ಎನ್ನುವ ಸತ್ಯ ಮರೆಯದಿರಿ ಎಂದು ಕ್ಷಯರೋಗದಿಂದ ಬಳಲುತ್ತಿದ್ದ ರಮಾಬಾಯಿ ಅಂಬೇಡ್ಕರ್‌ಗೆ ಹೇಳಿದ್ದರು. ರಮಾಬಾಯಿ ಅವರ ಸಾಮಾಜಿಕ ಕಳಕಳಿಯ ಮೇಲೆ ಈ ನಾಟಕ ಬೆಳಕು ಚೆಲ್ಲಲಿದೆ’ ಎಂದು ಹೇಳುತ್ತಾರೆ.

‘ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಲ್ಲಿ ಸಮರ್ಪಣಾ ಭಾವದ ಕೊರತೆ ಎದ್ದು ಕಾಣುತ್ತಿದೆ. ಮಹಿಳೆಯರು ಕುಟುಂಬಕ್ಕೆ ಸೀಮಿತರಾಗುತ್ತಿದ್ದಾರೆ. ಸಮಾಜ ಅಭಿವೃದ್ಧಿಯ ಕಲ್ಪನೆಯಿಂದ ದೂರ ಉಳಿಯುತ್ತಿದ್ದಾರೆ. ಈ ನಾಟಕದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ’

ಎನ್ನುತ್ತಾರೆ ಗಂಗಮ್ಮ.

**

ಯಶಸ್ವಿ ನಾಯಕನ ಹಿಂದಿದ್ದ ಮಹಿಳೆಯ ತ್ಯಾಗದ ಮೇಲೆ ಬೆಳಕು ಚೆಲ್ಲುವುದು ಹಾಗೂ ಮಹಿಳಾ ಶಕ್ತಿಯನ್ನು ಜಾಗೃತಗೊಳಿಸುವುದು ನಾಟಕ ಪ್ರದರ್ಶನದ ಮೂಲ ಉದ್ದೇಶ  – ಗಂಗಮ್ಮ ಫುಲೆ,ನಾಟಕ ಪ್ರದರ್ಶನ ಮಹಿಳಾ ಸಮಿತಿ ಅಧ್ಯಕ್ಷೆ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.