ಸೋಮವಾರ, ಆಗಸ್ಟ್ 10, 2020
26 °C
ಘಟಕಗಳ ಕಾರ್ಯಾರಂಭಕ್ಕೆ ಆದೇಶ

ತ್ಯಾಜ್ಯ ವಿಲೇವಾರಿ: ಬಿಬಿಎಂಪಿಗೆ ಒಂದು ತಿಂಗಳ ಗಡುವು ನೀಡಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ಯಾಜ್ಯ ವಿಲೇವಾರಿ: ಬಿಬಿಎಂಪಿಗೆ ಒಂದು ತಿಂಗಳ ಗಡುವು ನೀಡಿದ ಹೈಕೋರ್ಟ್‌

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳು ಮುಂದಿನ ನಾಲ್ಕು ವಾರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು’ ಎಂದು ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು ಮಾಡಿದೆ.

‘ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ಹಾಜರಿದ್ದ ಆರೋಗ್ಯ ಮತ್ತು ಘನ ತ್ಯಾಜ್ಯ ವಿಲೇವಾರಿ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಕನ್ನಹಳ್ಳಿ, ಸೀಗೇಹಳ್ಳಿ, ಚಿಕ್ಕನಾಗಮಂಗಲ, ಸುಬ್ಬರಾಯನ ಪಾಳ್ಯ, ದೊಡ್ಡ ಬಿದರಕಲ್ಲು, ಕೂಡ್ಲು ಗ್ರಾಮ, ಲಿಂಗಧೀರನ ಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯ ನಿರ್ವಹಣೆಗೆ ರಕ್ಷಣೆ ನೀಡಲು ಮತ್ತು ಪೂರ್ಣ ಪ್ರಮಾಣದ ಕಾರ್ಯಾರಂಭಕ್ಕೆ ನಿರ್ದೇಶನ ಕೋರಿ ಲಿಖಿತ ಪ್ರಮಾಣ ಪತ್ರ ಸಲ್ಲಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ಘಟಕಗಳ ನಿರ್ವಹಣೆಗೆ ತಾಂತ್ರಿಕ ಸಲಹಾ ಸಮಿತಿ ರಚನೆಗೆ ಆದೇಶಿಸಿತು.

ಈ ಸಮಿತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೃಷಿ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ಎಂಟು ಜನ ತಜ್ಞರೂ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ರಚಿಸಬೇಕು’ ಎಂದು ನಿರ್ದೇಶಿಸಿದೆ.

ಈ ಸಮಿತಿಗೆ ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅಧ್ಯಕ್ಷರು ಹಾಗೂ ಜಂಟಿ ಆಯುಕ್ತ ಸರ್ಫರಾಜ್‌ ಖಾನ್ ಸಂಚಾಲಕರಾಗಿರಬೇಕು. ಸಮಿತಿಯು ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಸೂಚಿಸಿದೆ.

‘ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ವಲಯದ ಬಿಬಿಎಂಪಿ ಜಂಟಿ ಆಯುಕ್ತರೇ ಹೊರಬೇಕು’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

‘ಈ ಸಂಸ್ಕರಣಾ ಘಟಕಗಳಿಗೆ ವಲಯ ಸೂಪರಿಂಟೆಂಡೆಂಟ್‌ ವಾರಕ್ಕೆರಡು ಬಾರಿ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಘಟಕಗಳ ವ್ಯವಸ್ಥಾಪಕರು ಹಾಗೂ ಎಂಜಿನಿಯರ್‌ಗಳು, ಘಟಕ ನಿರ್ವಹಣಾಧಿಕಾರಿಗಳ ಜೊತೆ ವಾರಕ್ಕೊಮ್ಮೆ ಸಭೆ ನಡೆಸಬೇಕು. ಈ ಕುರಿತ ವರದಿಯನ್ನು ಸರ್ಫ್‌ರಾಜ್ ಖಾನ್ ಅವರಿಗೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.

ಸಿಸಿಟಿವಿ ಕ್ಯಾಮೆರಾ: ‘ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅನುಮತಿ ಇಲ್ಲದೇ ಯಾರೂ ಪ್ರವೇಶಿಸಬಾರದು. ಈ ಘಟಕಗಳಿಗೆ ತ್ಯಾಜ್ಯ ಸಾಗಿಸುವ ವಾಹನಗಳಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು. ಎಲ್ಲ ಘಟಕಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಲಾಗಿದೆ.

**

‘ವಿಚಾರಣೆಗೆ ಹಾಜರಾಗಿ’

‘ಈತನಕ ವಾರ್ಡ್ ಸಮಿತಿಯ ಸಭೆಯನ್ನೇ ನಡೆಸಿಲ್ಲ' ಎಂಬ ಆಕ್ಷೇಪಣೆ ಎದುರಿಸುತ್ತಿರುವ 38 ವಾರ್ಡ್ ಸಮಿತಿ ಸಂಚಾಲಕರ ಪಟ್ಟಿಯನ್ನು ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ ನ್ಯಾಯಾಲಯಕ್ಕೆ ಸಲ್ಲಿಸಿದರು.

‘ಕೋರ್ಟ್ ನಿರ್ದೇಶನವಿದ್ದರೂ ಸಭೆ ನಡೆಸಿಲ್ಲ ಎಂಬ ಆರೋಪ ಎದುರಿಸುತ್ತಿರುವ 38 ಸಂಚಾಲಕರು ಮುಂದಿನ ವಿಚಾರಣೆಗೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಒಂದೊಮ್ಮೆ ಮುಂದಿನ ವಿಚಾರಣೆಯೊಳಗೆ ವಾರ್ಡ್‌ ಸಮಿತಿ ಸಭೆ ನಡೆಸಿದರೆ ಅಂತಹ ವಾರ್ಡ್ ಸಮಿತಿ ಸಂಚಾಲಕರು ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

**

‘ಸಂರಕ್ಷಿತ ವಲಯ ಗುರುತಿಸಿ’

‘ಎಲ್ಲ ಘಟಕಗಳ ಸುತ್ತ ಸಂರಕ್ಷಿತ ವಲಯ (ಬಫರ್ ಝೋನ್) ಗುರುತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಪೀಠ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸರ ತಂತ್ರಜ್ಞರನ್ನು ತಕ್ಷಣ ಹುದ್ದೆಯಿಂದ ತೆರವುಗೊಳಿಸಿ, ತ್ಯಾಜ್ಯ ಸಂಸ್ಕರಣಾ ಘಟಕಗಳ ವ್ಯವಸ್ಥಾಪಕರ ಹುದ್ದೆಗೆ ನಿಯೋಜಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.