ಮಂಗಳವಾರ, ಆಗಸ್ಟ್ 4, 2020
26 °C
ನವಿಲುಗುಡ್ಡ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ನೆಲೆಸಿದ ಆತಂಕ

ಗ್ರಾನೈಟ್ ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾನೈಟ್ ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯ

ಚಿಕ್ಕಮಗಳೂರು:ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಮೃತಾಪುರ ಹೋಬಳಿ ಶಿವಪುರ ಗ್ರಾಮದ ಸರ್ವೆ ನಂ.51ರಲ್ಲಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ನಿಲ್ಲಿಸಬೇಕು ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್, ವೈಲ್ಡ್‌ ಕ್ಯಾಟ್‌ ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಒತ್ತಾಯಿಸಿದ್ದಾರೆ.

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವು ಪರಿಭಾವಿತ (ಡೀಮ್ಡ್ ಫಾರೆಸ್ಟ್) ಅರಣ್ಯವಾಗಿದೆ. ಅರಣ್ಯ ಕಾಯ್ದೆಯಂತೆ ಅರಣ್ಯೇತರ ಚಟುವಟಿಕೆಗೆ ಇಲ್ಲಿ ಅವಕಾಶ ಇಲ್ಲ. ಆದರೆ, ಯಂತ್ರಗಳನ್ನು ಬಳಸಿ ಬಂಡೆಗಳನ್ನು ಕೊರೆದು ಚೌಕಾಕಾರದ ಗ್ರಾನೈಟ್ ಕಲ್ಲುಗಳನ್ನು ತಯಾರಿಸಿ, ಲಾರಿಗಳಲ್ಲಿ ಸಾಗಣೆ ಮಾಡುವುದು ಅವ್ಯಾಹತವಾಗಿ ನಡೆದಿದೆ ಎಂದು ದೂಷಿಸಿದ್ದಾರೆ.

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವು ಪ್ರಾಕೃತಿಕ ಮಹತ್ವವುಳ್ಳ ಪ್ರದೇಶವಾಗಿದೆ. ಮುಂಡ್ರೆ, ಶಿವಪುರ, ಬಸವನಹಳ್ಳಿ, ಬಿದ್ಧಕಲ್ಲಪ್ಪ ದೇವಾಲಯ ಸುತ್ತಲ ಪ್ರದೇಶದಲ್ಲಿ ಗ್ರಾನೈಟ್ ಗಣಿಗಾರಿಕೆಗೆ 30ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಈ ಪ್ರದೇಶಗಳು ಪರಿಭಾವಿತ ಅರಣ್ಯವಾಗಿದ್ದರಿಂದ ಅರ್ಜಿ

ಗಳು ತಿರಸ್ಕಾರವಾಗಿದ್ದವು. ರಾಜಕೀಯ ಪ್ರಭಾವ ಬಳಸಿ ಶಿವಪುರ ಸರ್ವೆ ನಂ.51 ಹಾಗೂ 69ರಲ್ಲಿ ನಾಲ್ವರಿಗೆ ಗಣಿಗಾರಿಕೆಗೆ ಅವಕಾಶ ನೀಡಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಪರಿಭಾವಿತ ಅರಣ್ಯವಾದರೂ ಅದನ್ನು ಪರಿಗಣಿಸದೆ ತರೀಕೆರೆ ವಲಯದ ಆಗಿನ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರು ನಿರಾಕ್ಷೇಪಣೆ ಪತ್ರ ನೀಡಿದ್ದಾರೆ. ಈ ಗುಡ್ಡ ಪ್ರದೇಶದಲ್ಲಿ ಸಸ್ಯಸಂಪತ್ತಿನ ಜೊತೆಗೆ ವನ್ಯಜೀವಿಗಳು ಇವೆ. ಈ ಬಗ್ಗೆ ಅರಿವು ಇದ್ದರೂ ನಿರಾಕ್ಷೇಪಣೆ ಪತ್ರ ನೀಡಲಾಗಿದೆ ಎಂದು ದೂರಿದ್ದಾರೆ.

ಅರಣ್ಯದಲ್ಲಿನ ಅನೇಕ ಮರಗಳನ್ನು ಕಡಿದು ಅರಣ್ಯದ ಚಹರೆ ಹಾಳು ಮಾಡಿರುವ ಬಗ್ಗೆ ತಕ್ಷಣ ಅರಣ್ಯ ಇಲಾಖೆ ಪ್ರಕರಣ ದಾಖಲಿಸಬೇಕಿದೆ. ಜಿಲ್ಲಾಡಳಿತವು ಯಾವುದೇ ಒತ್ತಡಕ್ಕೆ ಮಣಿಯದೆ ತಕ್ಷಣ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಮಟ್ಟದ ಪರಿಸರ ಅಂದಾಜೀಕರಣ ಪ್ರಾಧಿಕಾರದ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಗಣಿಗಾರಿಕೆ ಗುತ್ತಿಗೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಕೆ

‘ಡೀಮ್ಡ್ ಅರಣ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ತರೀಕೆರೆ ವಲಯಾರಣ್ಯಾಧಿಕಾರಿಯವರು ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಕುರುಚಲು ಗಿಡಗಳು ಇವೆ. ಕರಡಿ, ಚಿರತೆ, ಪುನಗಿನಬೆಕ್ಕು, ನವಿಲು, ಕಾಡುಕುರಿ, ಕಡವೆ, ಹುಲಿ, ಪಕ್ಷಿಗಳ ಚಲನವಲನ ಕಾಣಬಹುದು. ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಸುರಕ್ಷಿತ ಪ್ರದೇಶವಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ವಿವರವನ್ನು ಪೂರಕ ದಾಖಲೆಯಾಗಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಸೂಚನೆ ನೀಡಿದರೆ ಗಣಿಗಾರಿಕೆ ಸ್ಥಗಿತಗೊಳಿಸಿ ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸಿರುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.