ಬುಧವಾರ, ಜುಲೈ 15, 2020
22 °C
ಇದನ್ನು ಕೆಡವಿ ಬಹುಮಹಡಿ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆ ನಿರ್ಧಾರ

ಇತಿಹಾಸದ ಪುಟ ಸೇರಲಿದೆ ಜನತಾ ಬಜಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸದ ಪುಟ ಸೇರಲಿದೆ ಜನತಾ ಬಜಾರ್‌

ಬೆಂಗಳೂರು: ಕೆಂಪೇಗೌಡ ರಸ್ತೆಯ ಜನತಾ ಬಜಾರ್‌ (ಏಷಿಯಾಟಿಕ್‌ ಕಟ್ಟಡ) ಕಟ್ಟಡವನ್ನು ಕೆಡವಿ, ಅಲ್ಲಿ ಬಹುಮಹಡಿಗಳ ವಾಣಿಜ್ಯ

ಹಾಗೂ ಕಚೇರಿಗಳ ಸಂಕೀರ್ಣ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. 52 ವರ್ಷಗಳಿಂದ ಗ್ರಾಹಕರಿಗೆ ಸೇವೆ ಒದಗಿಸಿದ್ದ ಜನತಾ ಬಜಾರ್‌, ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ.

ಕಟ್ಟಡದ ಸುತ್ತಲೂ ಶೀಟುಗಳಿಂದ ಮುಚ್ಚಲಾಗಿದೆ. ಒಂದು ಕಡೆ ಮಾತ್ರ ಸಣ್ಣ ಜಾಗ ಬಿಡಲಾಗಿದೆ. ಮಳಿಗೆಗಳ ಮಾಲೀಕರು ಹಾಗೂ ಗ್ರಾಹಕರು ಈ ಜಾಗದ ಮೂಲಕ ಓಡಾಡುತ್ತಿದ್ದಾರೆ. ಶೀಟುಗಳ ಮೇಲೆ, ‘ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದರಿಂದ ಇದನ್ನು ನೆಲಸಮಗೊಳಿಸಿ, ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತದೆ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು’ ಎಂಬ ಫಲಕವನ್ನು ಹಾಕಲಾಗಿದೆ.

(ಜನತಾ ಬಜಾರ್‌ನ ಒಳನೋಟ –ಪ್ರಜಾವಾಣಿ ಚಿತ್ರಗಳು)

ಮೈಸೂರು ಸಂಸ್ಥಾನದ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ್‌ ಅವರು ಈ ಕಟ್ಟಡವನ್ನು 1935ರ ಸೆಪ್ಟೆಂಬರ್‌ 11ರಂದು ಉದ್ಘಾಟಿಸಿದ್ದರು. ಇದು ಎರಡು ಮಹಡಿಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳವು ಜನತಾ ಬಜಾರ್‌ ಶಾಖೆಯನ್ನು 1966ರಲ್ಲಿ ಆರಂಭಿಸಿತ್ತು. ನೆಲಮಹಡಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಘಟಕ, ಖಾದಿ ಬಟ್ಟೆಗಳ ಮಳಿಗೆಗಳು, ಹಾಪ್‌ಕಾಮ್ಸ್‌, ಮದ್ಯದಂಗಡಿ, ಅಪೆಕ್ಸ್ ಬ್ಯಾಂಕ್‌ ಇದೆ. ಮೊದಲ ಮಹಡಿಯಲ್ಲಿ ಕ್ರೀಡಾ ಸಾಮಗ್ರಿ ಹಾಗೂ ಆಟಿಕೆಗಳ ಮಳಿಗೆ, ಲೇಖನ ಸಾಮಗ್ರಿ, ಪ್ಲಾಸ್ಟಿಕ್‌ ಹಾಗೂ ವಿದ್ಯುತ್‌ ಉಪಕರಣಗಳ ಮಳಿಗೆ ಇದೆ. ಎರಡನೇ ಮಹಡಿಯಲ್ಲಿ ಉದ್ಯೋಗ ವಿನಿಮಯ ಕೇಂದ್ರವಿದೆ. ಆವರಣದಲ್ಲಿ ರೇಷ್ಮೆ ವಸ್ತುಗಳ ಮಳಿಗೆ ಹಾಗೂ ನಂದಿನಿ ಪಾರ್ಲರ್‌ ಇದೆ.

ಬಾಡಿಗೆ ಪರಿಷ್ಕರಣೆ ಸಂಬಂಧ 2009ರ ಡಿಸೆಂಬರ್‌ 23ರಂದು ಲೋಕೋಪಯೋಗಿ ಸಚಿವರಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. 2010ರಿಂದ 25 ವರ್ಷಗಳ ಅವಧಿಗೆ ಕಟ್ಟಡದ ಬಾಡಿಗೆಯನ್ನು ₹80 ಸಾವಿರಕ್ಕೆ ನಿಗದಿಪಡಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಒಪ್ಪಂದವನ್ನು ಐದು ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಆದರೆ, 2015ರ ಬಳಿಕ ನವೀಕರಣ ಮಾಡಿರಲಿಲ್ಲ. ಈ ಸಂಬಂಧ ಲೋಕೋಪಯೋಗಿ ಇಲಾಖೆಗೆ ಮಹಾಮಂಡಳವು ಪತ್ರ ಬರೆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮಳಿಗೆಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು 2017ರ ಅಕ್ಟೋಬರ್‌ನಲ್ಲಿ ನೋಟಿಸ್‌ ನೀಡಿದ್ದರು ಎಂದು ಜನತಾ ಬಜಾರ್‌ನ ಸಹಾಯಕ ವ್ಯವಸ್ಥಾಪಕ ಎಸ್‌.ಸಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿನ ಪ್ರತಿಯೊಬ್ಬರೂ ಬಾಡಿಗೆಯನ್ನು ಪಾವತಿಸಿದ್ದಾರೆ. ಆದರೆ, ₹83 ಲಕ್ಷ ಬಾಡಿಗೆ ಬಾಕಿ ಇದೆ. ಹೀಗಾಗಿ, ಮಳಿಗೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ ಎಂದು ದೂರಿದರು.

ಮಳಿಗೆಗಳಲ್ಲಿರುವ ವಸ್ತುಗಳನ್ನು ಮಾರಾಟ ಮಾಡುವವರೆಗೂ ಗೇಟ್‌ ತೆರೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, 15 ದಿನಗಳ ಹಿಂದೆ ರಾತ್ರೋರಾತ್ರಿ ಕಬ್ಬಿಣದ ಶೀಟುಗಳಿಂದ ಜನತಾ ಬಜಾರ್‌ ಅನ್ನು ಮುಚ್ಚಿದ್ದಾರೆ. ಬಜಾರ್‌ ಪೂರ್ಣಪ್ರಮಾಣದಲ್ಲಿ ಮುಚ್ಚಿದೆಎಂದೇ ಜನರು ಭಾವಿಸಿದ್ದಾರೆ.

ಹೀಗಾಗಿ, ಗ್ರಾಹಕರಿಲ್ಲದೆ ವ್ಯಾಪಾರ ನಡೆಯುತ್ತಿಲ್ಲ ಎಂದು ಅಳಲುತೋಡಿಕೊಂಡರು.

‘ಇನ್ನೂ 60 ವರ್ಷ ಬಾಳಿಕೆ ಬರುತ್ತದೆ’

(ದೇವರಾಜ್‌)

‘ಜನತಾ ಬಜಾರ್‌ ಕಟ್ಟಡವು ಗಟ್ಟಿಮುಟ್ಟಾಗಿದೆ. ಇನ್ನೂ 60 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಪಾರಂಪರಿಕ ಕಟ್ಟಡವನ್ನು ಅಧಿಕಾರಿಗಳು ನೆಲಸಮ ಮಾಡಲು ಹೊರಟಿದ್ದಾರೆ. ಆದರೆ, ಹೈಕೋರ್ಟ್‌, ಕೇಂದ್ರ ಗ್ರಂಥಾಲಯದ ಕಟ್ಟಡಗಳು ಹಳೆಯದಾಗಿದ್ದು, ಅವುಗಳನ್ನೂ ಕೆಡವಿ ಹಾಕಬಹುದಿತ್ತಲ್ಲವೇ’ ಎಂದು ನಂದಿನಿ ಪಾರ್ಲರ್‌ನ ದೇವರಾಜ್‌ ಪ್ರಶ್ನಿಸಿದರು.

ಪ್ರತಿದಿನ ಸುಮಾರು ₹15 ಸಾವಿರ ಮೊತ್ತದ ವ್ಯಾಪಾರ ನಡೆಯುತ್ತಿತ್ತು. ಆದರೆ, ಈಗ ₹500 ಮೊತ್ತದ ವಹಿವಾಟು ನಡೆಯುತ್ತಿಲ್ಲ. ಮೈಸೂರು ಪಾಕ್‌, ಪೇಡ ಹಾಗೆ ಉಳಿದಿದೆ. ಅದನ್ನು ಏಳು ದಿನಗಳ ಒಳಗೆ ಮಾರಾಟ ಮಾಡದಿದ್ದರೆ, ವ್ಯರ್ಥವಾಗುತ್ತದೆ ಎಂದು ಅಳಲುತೋಡಿಕೊಂಡರು.

‘ನೆಲಸಮ ಮಾಡುವುದು ತಪ್ಪಲ್ಲ’

(ಚೌಡಪ್ಪ)

‘ಜನತಾ ಬಜಾರ್‌ ಅತ್ಯಂತ ಹಳೆಯ ಕಟ್ಟಡ. ಆದರೆ, ಇದು ವ್ಯವಸ್ಥಿತವಾಗಿಲ್ಲ. ಪಾರ್ಕಿಂಗ್‌ಗೆ ಹೆಚ್ಚಿನ ಜಾಗ ಮೀಸಲಿಡಲಾಗಿದೆ. ಅಲ್ಲದೆ, ಇದರ ಸುತ್ತಲೂ ಬಹುಮಹಡಿಗಳ ಕಟ್ಟಡಗಳು ತಲೆಎತ್ತಿವೆ. ಅವುಗಳಿಗೆ ಪೈಪೋಟಿ ನೀಡುವಂತಹ ಕಟ್ಟಡವನ್ನು ನಿರ್ಮಿಸಬೇಕು. ಇದರಿಂದ ಲೋಕೋಪಯೋಗಿ ಇಲಾಖೆಗೂ ಹೆಚ್ಚಿನ ಬಾಡಿಗೆ ಬರುತ್ತದೆ. ಇಲಾಖೆಯ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚೌಡಪ್ಪ ಹೇಳಿದರು.

ಅವರು ಖಾದಿ ಬಟ್ಟೆಗಳ ಖರೀದಿಗಾಗಿ ಮಳಿಗೆಗೆ ಬಂದಿದ್ದರು.

ಅಂಕಿ–ಅಂಶ

₹4 ಲಕ್ಷ - ಜನತಾ ಬಜಾರ್‌ನಲ್ಲಿ ಪ್ರತಿದಿನ ನಡೆಯುತ್ತಿದ್ದ ಸರಾಸರಿ ವಹಿವಾಟು₹1.5 ಲಕ್ಷ -ಈಗ ಪ್ರತಿದಿನ ನಡೆಯುವ ವಹಿವಾಟು500 -ಜನತಾ ಬಜಾರ್‌ಗೆ ಪ್ರತಿದಿನ ಬರುತ್ತಿದ್ದ ಸರಾಸರಿ ಗ್ರಾಹಕರು

14- ಮಹಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.