ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ದೂರವಾದ ‘ಏಷ್ಯಾ’

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಿವಾದದ ಪರಿಣಾಮ ಉಂಟಾದ ದ್ವೇಷ, ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮುಂತಾದ ಸಮಸ್ಯೆಗಳು ಏಷ್ಯಾಕಪ್‌ಗೆ ತಟ್ಟಿದಷ್ಟು ಬೇರೆ ಯಾವ ಕ್ರಿಕೆಟ್ ಟೂರ್ನಿಗೂ ತಟ್ಟಿಲ್ಲ ಎಂದೇ ಹೇಳಬಹುದು.

ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) 1983ರಲ್ಲಿ ಆರಂಭಿಸಿದ ಏಷ್ಯಾ ಕಪ್‌ ಈ ವರೆಗೆ ಒಟ್ಟು 13 ಟೂರ್ನಿಗಳನ್ನು ಕಂಡಿದೆ. ಅನೇಕ ಏರುಪೇರು ಉಂಟಾಗಿರುವ ಟೂರ್ನಿಯನ್ನು ವಿವಾದದ ಕಾರಣ ಒಂದು ಬಾರಿ ರದ್ದು ಮಾಡಬೇಕಾಗಿ ಬಂತು. ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ ಒಂದೊಂದು ಬಾರಿ ಟೂರ್ನಿಯಿಂದ ಹಿಂಜರಿದಿದ್ದವು.

ಇದೀಗ ಮೂರನೇ ಬಾರಿಯೂ ಟೂರ್ನಿಯ ಮೇಲೆ ಕರಿನೆರಳು ಬಿದ್ದಿದೆ. 17 ವರ್ಷಗಳ ಬಳಿಕ ಭಾರತದಲ್ಲಿ ನಡೆಯಬೇಕಾಗಿದ್ದ ಏಷ್ಯಾಕಪ್‌ ನಮ್ಮಿಂದ ದೂರವಾಗಿದೆ. ಈ ಬಾರಿಯ ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ವಿಶೇಷವೆಂದರೆ ಭಾರತಕ್ಕೆ ಈ ಬಾರಿಯ ಆತಿಥ್ಯ ವಹಿಸುವ ಅವಕಾಶ ಕೈತಪ್ಪಿಲ್ಲ. ಪಂದ್ಯಗಳು ಹೊರಗೆ ನಡೆಯುತ್ತಿದರೂ ಆತಿಥ್ಯ ಭಾರತದ್ದೇ.

ಸೆಪ್ಟೆಂಬರ್‌ 13ರಿಂದ 28ರ ವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ಟೂರ್ನಿ ನಡೆಯಲಿದೆ. ಪಾಲ್ಗೊಳ್ಳುವ ತಂಡಗಳಲ್ಲಿ ಒಂದಾದ ಪಾಕಿಸ್ತಾನಕ್ಕೆ ಭಾರತದಲ್ಲಿ ಆಡಲು ಕೇಂದ್ರ ಸರ್ಕಾರ ಅವಕಾಶ ನೀಡದ ಕಾರಣ ಎಸಿಸಿ ಮತ್ತು ಐಸಿಸಿ ಅಧಿಕಾರಿಗಳು ವಿಶೇಷ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಟೂರ್ನಿಯ ಎರಡನೇ ಆವೃತ್ತಿಯಲ್ಲೇ ವಿವಾದದ ಬಿದ್ದಿತ್ತು. 1986ರಲ್ಲಿ ಶ್ರೀಲಂಕಾ ಮೊದಲ ಬಾರಿ ಆತಿತ್ಯ ವಹಿಸಿದ್ದಾಗ ಭಾರತ ಪಾಲ್ಗೊಂಡಿರಲಿಲ್ಲ. ಹಿಂದಿನ ವರ್ಷ ಶ್ರೀಲಂಕಾ ಎದುರಿನ ಸರಣಿಯಲ್ಲಿ ಉಂಟಾಗಿದ್ದ ವಿವಾದವೇ ಇದಕ್ಕೆ ಕಾರಣ. ನಂತರ ಎರಡು ಬಾರಿ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ವೈಷಮ್ಯ ಟೂರ್ನಿಯ ಮೇಲೆ ಪರಿಣಾಮ ಬೀರಿತು. 1990ರಲ್ಲಿ ಪಾಕಿಸ್ತಾನ ಟೂರ್ನಿಯಿಂದ ಹೊರಗೆ ಉಳಿಯಿತು.


ಏಷ್ಯಾ ಕಪ್ ಪಂದ್ಯವೊಂದರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್‌ ಬ್ಯಾಟಿಂಗ್ ಮಾಡಿದ ರೀತಿ

1993ರಲ್ಲಿ ಟೂರ್ನಿ ರದ್ದು ಮಾಡಬೇಕಾಯಿತು. ಈ ಸಂದರ್ಭದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮಾತ್ರ ಟೂರ್ನಿಯಲ್ಲಿ ಆಡುತ್ತಿದ್ದವು. ಭಾರತ ಮತ್ತು ಪಾಕಿಸ್ತಾನ ಆಡದಿದ್ದರೆ ಟೂರ್ನಿಗೆ ಕಳೆ ಇಲ್ಲ ಎಂಬುದು ರದ್ದುಪಡಿಸಲು ಪ್ರಮುಖ ಕಾರಣವಾಗಿತ್ತು.

ಎರಡೇ ವರ್ಷಗಳಲ್ಲಿ ಮುಂದಿನ ಟೂರ್ನಿ ನಡೆಯಿತು. ಆಗ ಶಾರ್ಜಾ ಆತಿಥ್ಯ ವಹಿಸಿತ್ತು.
ಟೂರ್ನಿ ಈ ವರೆಗೆ 13 ಆವೃತ್ತಿಗಳನ್ನು ಕಂಡಿದ್ದರೂ ಭಾರತದಲ್ಲಿ ಒಮ್ಮೆ ಮಾತ್ರ ಪಂದ್ಯಗಳು ನಡೆದಿದ್ದವು. ಏಷ್ಯಾದ ಪ್ರಭಾವಿ ತಂಡಗಳ ನಡುವಿನ ಹೋರಾಟವಾದ್ದರಿಂದ ನೋಡಲು ಕ್ರಿಕೆಟ್‌ ಪ್ರಿಯರಿಗೆ ಏಷ್ಯಾ ಕಪ್ ಯಾವತ್ತೂ ಅಚ್ಚುಮೆಚ್ಚು. ಕ್ರಿಕೆಟ್ ಆಟವನ್ನು ಧರ್ಮದಂತೆ ಕಾಣುವ ಭಾರತದಲ್ಲಿ ಈ ಬಾರಿ ಟೂರ್ನಿ ನಡೆಯುತ್ತದೆ ಎಂಬ ನಿರೀಕ್ಷೆ ಇಲ್ಲಿನ ಕ್ರೀಡಾಪ್ರಿಯರಲ್ಲಿ ಸಂಭ್ರಮ ತಂದಿತ್ತು. ಇದಕ್ಕೆ ಈಗ ತಣ್ಣೀರು ಎರಚಿದಂತಾಗಿದೆ.

ಆರನೇ ತಂಡ ಯಾವುದು?
ಈ ಬಾರಿ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಆಡಲಿವೆ. ಎಸಿಸಿಯಲ್ಲಿ ಪೂರ್ಣಪ್ರಮಾಣದ ಸದಸ್ಯತ್ವ ಹೊಂದಿರುವ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ಸಹಜವಾಗಿ ಆಯ್ಕೆಯಾಗಿವೆ. ಆರನೇ ತಂಡವನ್ನು ಪ್ಲೇ ಆಫ್‌ ಪಂದ್ಯಗಳ ಮೂಲಕ ನಿರ್ಣಯಿಸಲಾಗುವುದು. ಯುಎಇ, ಹಾಂಕಾಂಗ್‌, ನೇಪಾಳ, ಸಿಂಗಪುರ, ಮಲೇಷ್ಯಾ ಮತ್ತು ಒಮಾನ್ ಪ್ಲೇ ಆಫ್‌ನಲ್ಲಿ ಪಾಲ್ಗೊಳ್ಳಲಿವೆ.

ಹಿಂದೆ ಟೂರ್ನಿ ರೌಂಡ್‌ ರಾಬಿನ್ ಮಾದರಿಯಲ್ಲಿ ನಡೆಯುತ್ತಿತ್ತು. ಆದರೆ ಮೊದಲ ಬಾರಿ ಯುಎಇ ಮತ್ತು ಹಾಂಕಾಂಗ್‌ ತಂಡಗಳನ್ನು 2004ರಲ್ಲಿ ಸೇರ್ಪಡೆಗೊಳಿಸಿದ ನಂತರ ಗುಂಪು ಹಂತ, ಸೂಪರ್‌ ಫೋರ್ ಮತ್ತು ಫೈನಲ್‌ ಎಂಬ ಹಂತಗಳಲ್ಲಿ ನಡೆಸಲಾಯಿತು. ಗುಂಪು ಹಂತದಲ್ಲಿ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮುಂದಿನ ಬಾರಿಯೂ ಇದೇ ಮಾದರಿಯನ್ನು ಅನುಸರಿಸಲಾಯಿತು. ನಂತರ ಹಳೆಯ ಹಳೆಯ ಮಾದರಿಗೆ ಮೊರೆ ಹೋಗಲಾಯಿತು.
***
ಮೊದಲ ಬಾರಿ ಟ್ವೆಂಟಿ–20 ಮಾದರಿ
2015ರಲ್ಲಿ ಎಸಿಸಿ ಮೇಲೆ ಐಸಿಸಿ ಆಧಿಪತ್ಯ ಸ್ಥಾಪಿಸಿದ ನಂತರ ಏಷ್ಯಾ ಕಪ್‌ ಟೂರ್ನಿಯನ್ನು ಒಂದು ಬಾರಿ ಏಕದಿನ ಮಾದರಿಯಲ್ಲೂ ಮತ್ತೊಂದು ಬಾರಿ ಟ್ವೆಂಟಿ–20ಮಾದರಿಯಲ್ಲೂ ನಡೆಸಲು ನಿರ್ಧರಿಸಲಾಯಿತು. ಹೀಗಾಗಿ 2016ರಲ್ಲಿ ಟ್ವೆಂಟಿ –20 ಮಾದರಿಯಲ್ಲಿ ನಡೆದಿದ್ದು ಈ ಬಾರಿ ಏಕದಿನ ಮಾದರಿಯಲ್ಲಿ ಆಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT