ಶನಿವಾರ, ಫೆಬ್ರವರಿ 27, 2021
31 °C
ಪಿಯುಸಿ ನಂತರ ಮುಂದೇನು ಎಂದು ಎನ್ನುವವರಿಗೆ ಇಲ್ಲುಂಟು ಮಾರ್ಗದರ್ಶನ

ಕಲಾ ಪದವೀಧರರಿಗೂ ಉಂಟು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾ ಪದವೀಧರರಿಗೂ ಉಂಟು ಅವಕಾಶ

ರಾಮನಗರ: ಕಲಾ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾನೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಭಾಷಾ ವಿಷಯಗಳಲ್ಲಿ ಪದವಿ ಪೂರೈಸಿದವರಿಗೆ ಇರುವಷ್ಟು ಅವಕಾಶಗಳು ಬೇರೆ ಯಾವ ಕ್ಷೇತ್ರಗಳಲ್ಲೂ ಇಲ್ಲ ಎನ್ನುತ್ತಾರೆ ಹಲವು ಅಧ್ಯಾಪಕರು.

ವಿಜ್ಞಾನ ಮತ್ತು ವಾಣಿಜ್ಯ ಪದವಿ ಅಧ್ಯಯನ ಮಾಡಿದಲ್ಲಿ ಶೀಘ್ರ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಕಲಾ ಪದವಿ ಅಧ್ಯಯನದಿಂದ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶ ಸಿಗುವುದಲ್ಲದೇ ಉತ್ತಮ ಭವಿಷ್ಯಕ್ಕೆ ಪೂರಕವಾಗಿ ಜ್ಞಾನವೂ ವೃದ್ಧಿಯಾಗುತ್ತದೆ.ವಿಜ್ಞಾನ ಮತ್ತು ವಾಣಿಜ್ಯ ಪದವೀಧರರು ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಹುದು. ಆದರೆ ಕಲಾ ಪದವೀಧರರು ಇತಿಹಾಸ, ಸಮಾಜ, ರಾಜ್ಯಶಾಸ್ತ್ರ, ಮನಶಾಸ್ತ್ರ, ಭಾಷಾಶಾಸ್ತ್ರ ಮುಂತಾದ ವಿಷಯಗಳಲ್ಲಿ ವಿಶಿಷ್ಟ ಸಾಧನೆ ಮಾಡಬಹುದು. ಆಸಕ್ತ ವಿಷಯಗಳಲ್ಲಿ ಸಂಶೋಧನೆ ಕೈಗೊಳ್ಳಬಹುದು.

ಕಲಾ ಪದವೀಧರರು ಉನ್ನತ ಶಿಕ್ಷಣ ಅಧ್ಯಯನಕ್ಕೆ ಆದ್ಯತೆ ನೀಡಬಹುದು ಇಲ್ಲವೇ ಪದವಿ ಆಧಾರದ ಮೇಲೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಗಳಿಸಬಹುದು. ಶಾಲಾ ಶಿಕ್ಷಕ ಅಥವಾ ಕಾಲೇಜು ಪ್ರಾಧ್ಯಾಪಕರಾಗಿ ಬೋಧನಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಳ್ಳಬಹುದು ಎನ್ನುತ್ತಾರೆ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಧುಸೂದನಾಚಾರ್ಯ ಜೋಷಿ.

ವಿಜ್ಞಾನ, ವಾಣಿಜ್ಯ ಪದವೀಧರರಿಗೆ ತಾಂತ್ರಿಕ ಅಥವಾ ವಿಜ್ಞಾನ ಕ್ಷೇತ್ರದಲ್ಲೇ ಮುಂದುವರಿಯುವುದು ಅನಿವಾರ್ಯ. ಕಲಾ ಪದವೀಧರರು ಅಂತಹ ಯಾವ ಒತ್ತಡಕ್ಕೂ ಒಳಗಾಗದೇ ಆಸಕ್ತಿ ಮತ್ತು ಭವಿಷ್ಯಕ್ಕೆ ಪೂರಕವಾಗಿ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ವಿಷಯಗಳ ಕುರಿತಾದ ಜ್ಞಾನದಿಂದ ಉದ್ಯೋಗ ಪಡೆಯಬಹುದು ಎಂದರು.

ಬಹುತೇಕ ಸಾಧಕರು ಕಲಾ ಪದವೀಧರರು: ‘ಕಲಾ ಪದವಿ ಇತರೆ ಪದವಿಗಳಷ್ಟೇ ಉತ್ಕೃಷ್ಟವಾದದ್ದು. ದೇಶ, ಸಮಾಜ ಮತ್ತು ಸಂಸ್ಕೃತಿ ಅಧ್ಯಯನ ದೃಷ್ಟಿಯಿಂದ ಈ ಪದವಿ ಉಪಯುಕ್ತ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಅಲ್ಲದೇ ಇನ್ನಿತರ ಕ್ಷೇತ್ರಗಳಲ್ಲಿನ ಬಹುತೇಕ ಸಾಧಕರು ಕಲಾ ಪದವೀಧರರು ಎಂಬುದು ಗಮನಾರ್ಹ’ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಟಿ.ಡಿ. ಕನಕಾ.ಕಲಾ ಪದವೀಧರರು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಮುಂದಾಗಬಹುದು. ಕವನ, ಲೇಖನ ಅಥವಾ ಸಂಶೋಧನಾತ್ಮಕ ಬರಹಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ತಿಳಿಸಿದರು.

ಕಲಾ ಪದವಿಗೆ ಪೂರಕವಾಗಿ ಕಾನೂನು ಪದವಿ ಗಳಿಸಿದಲ್ಲಿ ವಕೀಲರಾಗಬಹುದು. ಕಂಪ್ಯೂಟರ್‌ ಅಥವಾ ಬೆರಳಚ್ಚು ತರಬೇತಿ ಪಡೆದು ಸ್ವಯಂ–ಉದ್ಯೋಗ ಕಂಡುಕೊಳ್ಳಬಹುದು. ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರ ಕಷ್ಟವೆಂದು ಭಾವಿಸುವವರು ಕಲಾ ಅಧ್ಯಯನದಿಂದ ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರಯತ್ನಿಸಬಹುದು ಎಂದು ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಬಿ.ಟಿ. ನೇತ್ರಾವತಿಗೌಡ ತಿಳಿಸಿದರು.

ಯಾವುದೇ ಪದವಿಯಲ್ಲಿ ಪಡೆದ ಶಿಕ್ಷಣ ಅಥವಾ ಗಳಿಸಿದ ಜ್ಞಾನ ವ್ಯರ್ಥವಾಗುವುದಿಲ್ಲ. ಒಂದಿಲ್ಲೊಂದು ಹಂತದಲ್ಲಿ ಅದು ಪ್ರಯೋಜನಕ್ಕೆ ಬರುತ್ತದೆ. ವೈದ್ಯರು ಅಥವಾ ಎಂಜಿನಿಯರರು ಸಮಾಜದಲ್ಲಿ ಒಂದು ರೀತಿಯ ಸ್ಥಾನಮಾನ ಗಳಿಸಿದರೆ, ಕಲಾ ಪದವೀಧರರು ಹೆಚ್ಚಿನ ಅಧ್ಯಯನದಿಂದ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಎ.ಎಸ್. ಸಾವಿತ್ರಮ್ಮ ತಿಳಿಸಿದರು.

ಸಮಾಜದಲ್ಲಿ ಸಾಧನೆ ತೋರಿದ ಮಹನೀಯರಲ್ಲಿ ಕಲಾ ಪದವೀಧರರು ಹೆಚ್ಚು. ಭಾಷೆಯ ಮೇಲೆ ಹಿಡಿತ ಸಾಧಿಸಿದ ವ್ಯಕ್ತಿ, ಪತ್ರಿಕೋದ್ಯಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಹುದು. ಶಿಕ್ಷಕರೂ ಆಗಬಹುದು. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಭಾಷೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

–ಎಸ್. ರುದ್ರೇಶ್ವರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.