ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋದರೂ ಜಾತಿಯದೇ ಜಪ

ಪ್ರಬಲ ಸಮುದಾಯಗಳ ಮತ ಧ್ರುವೀಕರಣದತ್ತ ಪ್ರಮುಖ ಅಭ್ಯರ್ಥಿಗಳ ಚಿತ್ತ; ಎಲ್ಲೆ ಮೀರಿದ ಓಲೈಕೆ ರಾಜಕಾರಣ, ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?
Last Updated 6 ಮೇ 2018, 8:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವನ್ನು ಒಳಗೊಂಡ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಗಲ್ಲಿ ಗಲ್ಲಿಗಳಲ್ಲಿ ಜಾತಿಯದೇ ಮಾತುಕತೆ, ಲೆಕ್ಕಾಚಾರ. ಅಭ್ಯರ್ಥಿಗಳು ಎನಿಸಿಕೊಂಡವರು ತಲೆ ಸುಡುವ ಬಿಸಿಲು ಲೆಕ್ಕಿಸದೆ ಕೊಳೆಗೇರಿ ಮೊದಲುಗೊಂಡು ಸಂದಿಗೊಂದಿಗಳಿಗೆ ನುಗ್ಗಿ ಕೈ ಮುಗಿದಿದ್ದೇ ಮುಗಿದದ್ದು! ಮತದಾರ ಮಾತ್ರ ಗುಟ್ಟು ಬಿಟ್ಟುಕೊಡಲೊಲ್ಲ.

ಇತಿಹಾಸ ಅವಲೋಕಿಸಿದರೆ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಪಾಳೆಯದ ಭದ್ರಕೋಟೆಯಾಗಿದೆ. ರಾಜಕೀಯವಾಗಿ ನಿರ್ಣಾಯಕರು ಎನ್ನಬಹುದಾದವರೆಲ್ಲರೂ ‘ಕೈ’ನ ಸಾಂಪ್ರದಾಯಿಕ ಮತಗಳಾಗುತ್ತ ಬಂದಿದ್ದಾರೆ. ಈ ನಿರ್ಣಾಯಕರು ಎನಿಸಿಕೊಂಡವರು ಪ್ರಸ್ತುತ ಚುನಾವಣೆಯಲ್ಲೂ ‘ಕೈ’ ಹಿಡಿಯುತ್ತಾರಾ ಎಂಬ ಪ್ರಶ್ನೆಗೆ ನಿಖರ ಉತ್ತರ ಸಿಗುವುದು ಬಲು ಕಷ್ಟ.

ಇಲ್ಲಿ ಮೇಲ್ನೋಟಕ್ಕೆ ಒಂದು ಪಕ್ಷದ ಪರವಾದ ಒಲವು ಗೋಚರಿಸಿದರೂ, ಒಳಹೊಕ್ಕು ನೋಡಿದರೆ ಪಕ್ಷಕ್ಕಿಂತಲೂ ವ್ಯಕ್ತಿ ಆಧಾರಿತ ಗೆಲುವೇ ಹೆಚ್ಚಾಗಿರುವುದು ಗೋಚರಿಸುತ್ತದೆ. ಒಂದು ಬಾರಿ ಗೆದ್ದು ಶಾಸಕರಾದವರು ಮರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಶಾಸಕರಾದ ಉದಾಹರಣೆ ಇಲ್ಲಿಲ್ಲ. ಅದೇ ಈ ಕ್ಷೇತ್ರದ ವೈಶಿಷ್ಟ್ಯ ಕೂಡ ಆಗಿದೆ.

ಕಸಬಾ, ಮಂಚೇನಹಳ್ಳಿ, ನಂದಿ ಮತ್ತು ಮಂಡಿಕಲ್ಲು ಹೋಬಳಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಒಕ್ಕಲಿಗರು, ಬಲಿಜ ಸಮುದಾಯಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೊದಲ ಸಾರ್ವತ್ರಿಕ ಚುನಾವಣೆಯಿಂದ ಈವರೆಗೆ ನಡೆದ 14 ಚುನಾವಣೆಗಳ ಪೈಕಿ ಇಲ್ಲಿ ಕಾಂಗ್ರೆಸ್‌ನ 10 ಅಭ್ಯರ್ಥಿಗಳು, ಇಂದಿರಾ ಕಾಂಗ್ರೆಸ್, ಜನತಾಪಕ್ಷ, ಜೆಡಿಎಸ್‌ನ ತಲಾ ಒಬ್ಬ ಅಭ್ಯರ್ಥಿ ಮತ್ತು ಮೂರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಸುಮಾರು 30 ವರ್ಷಗಳ ಕಾಲ (1978ರಿಂದ 2008ರ ವರೆಗೆ) ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಮೂರು ದಶಕಗಳ ಸುದೀರ್ಘ ಅವಧಿಯಲ್ಲಿ 25 ವರ್ಷಗಳ ಕಾಲ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಪ್ರಜಾಪ್ರಭುತ್ವದ ಆಶಯದಂತೆ ಅಧಿಕಾರದ ಪಾಲು ಪಡೆದಿದ್ದಾರೆ.

ಪ್ರಸ್ತುತ ಚುನಾವಣೆ ಸ್ಪರ್ಧಾ ಕಣದಲ್ಲಿ 12 ಹುರಿಯಾಳುಗಳು ‘ಅದೃಷ್ಟ’ ಪರೀಕ್ಷೆಗೆ ಇಳಿದಿದ್ದಾರೆ. ಈ ಪೈಕಿ ಕೆ.ಪಿ.ಬಚ್ಚೇಗೌಡ (ಜೆಡಿಎಸ್), ಡಾ.ಕೆ.ಸುಧಾಕರ್ (ಕಾಂಗ್ರೆಸ್), ಡಾ.ಜಿ.ವಿ.ಮಂಜುನಾಥ್ (ಬಿಜೆಪಿ) ಮತ್ತು ಕೆ.ವಿ.ನವೀನ್ ಕಿರಣ್ (ಪಕ್ಷೇತರ) ಪ್ರಮುಖ ಅಭ್ಯರ್ಥಿಗಳು.

ಇವರ ಪೈಕಿ ಬಚ್ಚೇಗೌಡ ಮತ್ತು ಸುಧಾಕರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದರೆ, ಮಂಜುನಾಥ್ ಮತ್ತು ನವೀನ್ ಕಿರಣ್ ಬಲಿಜ ಸಮುದಾಯದವರು. ಹೀಗಾಗಿ ಸದ್ಯ ಕ್ಷೇತ್ರದಲ್ಲಿ ಜಾತಿ ಮತಗಳ ಒಲವಿನ ವ್ಯವಕಲನ, ಸಂಕಲನದ ಲೆಕ್ಕಾಚಾರ ಹಿಂದೆಂದಿಗಿಂತಲೂ ಜೋರಾಗಿ ನಡೆದಿದೆ.

ಕಳೆದ ಚುನಾವಣೆಯಲ್ಲಿ 15,048 ಮತಗಳ ಅಂತರದಿಂದ ಗೆದ್ದ ಸುಧಾಕರ್ ಶಾಸಕರಾಗಿ ಐದು ವರ್ಷ ಪೂರೈಸಿ ಮತ್ತೆ ಬಚ್ಚೇಗೌಡರ ಎದುರು ತೊಡೆ ತಟ್ಟಿದ್ದಾರೆ. ಈ ಬಾರಿ ಯಾರ ಜನಬಲ ಮೇಲಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಬಚ್ಚೇಗೌಡ, ಸುಧಾಕರ್ ಮತ್ತು ನವೀನ್ ಕಿರಣ್ ಅವರ ನಡುವೆ ಪೈಪೋಟಿ ಕಂಡುಬರುತ್ತಿದೆ. ಹೀಗಾಗಿ ಗೆಲುವಿನ ವ್ಯಾಖ್ಯಾನಗಳು ಹಲವು ಬಗೆಯಲ್ಲಿ ಹೊರಹೊಮ್ಮುತ್ತಿವೆ. ಈ ಮೂರು ಹುರಿಯಾಳುಗಳು ಇವತ್ತು ತಮ್ಮ ಸಮುದಾಯಗಳ ಮತಕ್ಕಿಂತಲೂ ಹೆಚ್ಚಾಗಿ ಅನ್ಯ ಕೋಮುಗಳ, ಅದರಲ್ಲೂ ‘ಅಹಿಂದ’ ಮತಗಳತ್ತ ಹೆಚ್ಚು ದೃಷ್ಟಿ ನೆಟ್ಟಿದ್ದಾರೆ. ಮೂವರ ನಡುವೆ ಸಮಬಲದ ಹೋರಾಟ ಕಂಡುಬರುತ್ತಿರುವುದರಿಂದ ನಿಖರ ‘ಭವಿಷ್ಯ’ ನುಡಿಯುವುದು ಭಾರಿ ಕಷ್ಟ.

ಇತರ ಅಭ್ಯರ್ಥಿಗಳು

ಎಂ.ಬಿ.ಅಶೋಕ್ (ಅಂಬೇಡ್ಕರ್ ಸಮಾಜ ಪಾರ್ಟಿ), ಎನ್.ನರಸಿಂಹಮೂರ್ತಿ (ಕನ್ನಡ ಪಕ್ಷ), ಎಸ್.ಎನ್.ತಬ್ಸುಮ್ (ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ) ಪಕ್ಷೇತರರಾಗಿ ನವೀನ್ ಕುಮಾರ್, ಜಿ.ನವೀನ್ ಕುಮಾರ್, ಸುಧಾಕರ್, ಸುಧಾಕರ್, ಸುಧಾಕರ್ ಅವರು ಸ್ಪರ್ಧಾ ಕಣದಲ್ಲಿ ಇರುವ ಇತರ ಅಭ್ಯರ್ಥಿಗಳು.

ಹಲವು ಬಗೆಯ ಗೆಲುವಿನ ವ್ಯಾಖ್ಯಾನ

ಬಚ್ಚೇಗೌಡರು ಸೌಮ್ಯ ಸ್ವಭಾವದವರು. ಅವರ ಆಡಳಿತದಲ್ಲಿ ಜಿಲ್ಲೆಗೆ ಸಾಕಷ್ಟು ಯೋಜನೆ ತಂದಿದ್ದಾರೆ. ಸರಳ ವ್ಯಕ್ತಿತ್ವ. ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಇವತ್ತು ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆಡಳಿತ ವಿರೋಧಿ ಅಲೆ ಅತಿಯಾಗಿದೆ. ಹೀಗೆ ಅನೇಕ ಅಂಶಗಳನ್ನು ಮುಂದಿಡುವ ಜೆಡಿಎಸ್ ಬೆಂಬಲಿಗರು ಜತೆಗೆ ಗೌಡರ ಸಮುದಾಯ ಮತ್ತು ಜೆಡಿಎಸ್ ಪ್ರಣಾಳಿಕೆ ತೋರಿಸಿ ‘ಈ ಸಲ ಕಪ್ ನಮ್ದೆ’ ಎನ್ನುತ್ತಾರೆ.

ಸುಧಾಕರ್ ಅವರ ಆಡಳಿತದಲ್ಲಿ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ. ಸಾಕಷ್ಟು ಅನುದಾನ ತಂದಿದ್ದಾರೆ. ಮೂಲ ಸೌಕರ್ಯಗಳಿಗೆ, ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ನಗರವನ್ನು ಹೈಟೆಕ್ ಮಾಡಲು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ, ಅವರು ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.. ಎಂದೆಲ್ಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮದೇ ಆದ ಗೆಲುವಿನ ವಾದ ಮಂಡಿಸುತ್ತಾರೆ.

ಇನ್ನು ನವೀನ್ ಕಿರಣ್ ಬೆಂಬಲಿಗರು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನೇಕ ಬಗೆಯಲ್ಲಿ ನೆರವಾಗಿದ್ದಾರೆ. ಸಂಕಷ್ಟ ಎಂದು ಹೋದವರನ್ನು ಬರಿಗೈಯಲ್ಲಿ ಕಳಿಸದ ದಾನಿ. ಹೀಗೆ ಗೆಲುವಿಗೆ ಪೂರಕವಾಗುವ ಅಂಶಗಳನ್ನು ಮುಂದಿಡುತ್ತಾರೆ. ಆದರೆ ಈ ಮೂವರ ಪೈಕಿ ‘ವಿಜಯಲಕ್ಷ್ಮೀ’ ಯಾರಿಗಾಗಿ ಎದುರು ನೋಡುತ್ತಿದ್ದಾಳೆ ಎನ್ನುವುದು ಮೇ 15ರಂದು ತಿಳಿಯಲಿದೆ.

ಮಗ್ಗಲು ಮುಳ್ಳಾದ ‘ಬಂಡಾಯ’

ಈ ಬಾರಿ ಕಾಂಗ್ರೆಸ್ ಮುಖಂಡ ನವೀನ್ ಕಿರಣ್ ಅವರು ಸ್ವಪಕ್ಷೀಯರ ವಿರುದ್ಧವೇ ಬಂಡೆದ್ದು ಪಕ್ಷೇತರರಾಗಿ ಕಣಕ್ಕಿಳಿದದ್ದು ಸುಧಾಕರ್‌ಗೆ ನುಂಗಲಾರದ ತುತ್ತಾಗಿದೆ. ಅವರಿಗೆ ಕಳೆದ ಚುನಾವಣೆಯಲ್ಲಿ ಹೆಗಲಿಗೆ ಹೆಗಲು ನೀಡಿ ಗೆಲುವಿನ ಗೆಲುವಿನ ದಡ ಸೇರಿಸಿದ ಗೆಳೆಯರಲ್ಲಿ ಒಬ್ಬರಾಗಿದ್ದ ನವೀನ್ ಕಿರಣ್ ಇವತ್ತು ತನ್ನ ಪ್ರತಿಸ್ಪರ್ಧಿಗಳಲ್ಲಿ ಸುಧಾಕರ್ ಅವರನ್ನು ಮೊದಲಿಗರನ್ನಾಗಿ ಮಾಡಿಕೊಂಡು ತೊಡೆ ತಟ್ಟುತ್ತಿದ್ದಾರೆ.

ಈ ಭಾಗದ ಪ್ರಭಾವಿ ರಾಜಕಾರಣಿ ಸಿ.ವಿ.ವೆಂಕಟರಾಯಪ್ಪ ಅವರ ಮೊಮ್ಮಗ, ದತ್ತು ಪುತ್ರ ನವೀನ್ ಕಿರಣ್. ವೆಂಕಟರಾಯಪ್ಪ ಅವರು 23 ವರ್ಷ 8 ತಿಂಗಳು ಕಾಲ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ದಾಖಲೆಯನ್ನೇ ನಿರ್ಮಿಸಿದವರು.

ಈ ಕ್ಷೇತ್ರ 1962ರ ಚುನಾವಣೆಯಲ್ಲಿ ಪ್ರತ್ಯೇಕ ಕ್ಷೇತ್ರವಾದಾಗ ಪಕ್ಷೇತರ ಅಭ್ಯರ್ಥಿಯಾಗಿ, 1972ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಗಂಡು ಮಕ್ಕಳು ಇಲ್ಲದ ಕಾರಣಕ್ಕೆ ಅವರು ಅವರು ತಮ್ಮ ಹೆಣ್ಣು ಮಕ್ಕಳಲ್ಲಿ ಒಬ್ಬರಾದ ನಿರ್ಮಲಾ ಪ್ರಭು (ನಗರಸಭೆ ಸದಸ್ಯೆ) ಅವರ ಪುತ್ರ ನವೀನ್ ಕಿರಣ್ ಅವರನ್ನು ದತ್ತು ಪಡೆದು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡವರು.

ಇವತ್ತು ನವೀನ್ ಕಿರಣ್ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಮೊದಲ ಬಾರಿ ಅವರು ತಾತನ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಆರಂಭದಲ್ಲಿಯೇ ಅವರಿಗೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗಿದ್ದು ಚುನಾವಣಾ ಕಣ ರಂಗೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT