ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಬಲ ತುಂಬಿದ ಅಭ್ಯರ್ಥಿ ಆಯ್ಕೆ, ಸಿ.ಎಂ ಜನಪ್ರಿಯತೆ

Last Updated 7 ಮೇ 2018, 17:57 IST
ಅಕ್ಷರ ಗಾತ್ರ

ಲೋಕನೀತಿ–ಸಿಎಸ್‌ಡಿಎಸ್‌ನ ಅಂತಿಮ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಯು ಕುತೂಹಲಭರಿತ ರಾಜಕೀಯ ಚಿತ್ರಣವನ್ನು ತೆರೆದಿಟ್ಟಿದೆ. ಆಡಳಿತಾರೂಢ ಕಾಂಗ್ರೆಸ್‌, ಪ್ರಮುಖ ವಿರೋಧ ಪಕ್ಷ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ ಎಂದು ಏಪ್ರಿಲ್‌ ಮಧ್ಯಭಾಗದಲ್ಲಿ ಜೈನ್‌ ವಿಶ್ವವಿದ್ಯಾಲಯ–ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ್ದ ಮೊದಲ ಸುತ್ತಿನ ಸಮೀಕ್ಷೆ ಹೇಳಿತ್ತು. ಆಗ, ಕಾಂಗ್ರೆಸ್‌ ಮತ್ತು ಬಿಜೆಪಿ ಪರ ಮತದಾರರ ಒಲವಿನ ಪ್ರಮಾಣದ ವ್ಯತ್ಯಾಸ ಶೇ 2 ರಷ್ಟಿತ್ತು. ಕರ್ನಾಟಕವು ಅತಂತ್ರ ವಿಧಾನಸಭೆಯತ್ತ ಮುಖಮಾಡುವ ಸಾಧ್ಯತೆಯ ಬಗ್ಗೆ ಸಮೀಕ್ಷೆ ಬೆಳಕು ಚೆಲ್ಲಿತ್ತು.

ಮೂರು ವಾರಗಳ ನಂತರ ರಾಜ್ಯದ ಮತದಾರರ ಭಾವನೆಯಲ್ಲಿ ಚಿಕ್ಕ, ಆದರೆ, ಅತ್ಯಂತ ಮಹತ್ವದ ಬದಲಾವಣೆಯಾದಂತೆ ಕಾಣುತ್ತದೆ. ಮತದಾರರ ಒಲವಿನ ವಿಚಾರದಲ್ಲಿ ಕಾಂಗ್ರೆಸ್‌, ಬಿಜೆಪಿಗಿಂತ ಶೇ 5ರಷ್ಟು ಅಂಶಗಳಿಂದ ಮುಂದಿದೆ. ಕಾಂಗ್ರೆಸ್‌ಗೆ ಶೇ 38ರಷ್ಟು ಮಂದಿ ಬೆಂಬಲ ಸೂಚಿಸಿದರೆ, ಬಿಜೆಪಿಗೆ ಶೇ 33ರಷ್ಟು ಜನರ ಬೆಂಬಲವಷ್ಟೇ ಸಿಕ್ಕಿದೆ. ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಈ ಬಾರಿ ಶೇ 1ರಷ್ಟು ಲಾಭವಾಗಿದ್ದರೂ, ಬಿಜೆಪಿಗೆ ಶೇ 2ರಷ್ಟು ನಷ್ಟವಾಗಿದೆ. ಮತ್ತೊಂದು ಪ್ರಮುಖ ‍‍ಪಕ್ಷವಾದ ಜೆಡಿಎಸ್‌ಗೆ ಶೇ 2ರಷ್ಟು ಲಾಭವಾಗಿದೆ. ಜೆಡಿಎಸ್‌ ಪರ ಒಲವು ತೋರಿರುವ ಮತದಾರರ ಪ್ರಮಾಣ ಶೇ 20ರಿಂದ 22ಕ್ಕೆ ಏರಿದೆ.

ಆಡಳಿತ ವಿರೋಧಿ ಮತ ವಿಭಜನೆ: ಮೊದಲಿಗೆ ಹೋಲಿಸಿದರೆ ಈಗ ಜೆಡಿಎಸ್‌ನ ಶಕ್ತಿ ವೃದ್ಧಿಸಿರುವುದು ಕಾಂಗ್ರೆಸ್‌ಗೆ ಸ್ವಲ್ಪ ಅನುಕೂಲವನ್ನೇ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನರಲ್ಲಿದ್ದ ಆಡಳಿತ ವಿರೋಧಿ ಅಲೆ ಭಾವನೆ ಹಿಂದೆ ಇದ್ದುದಕ್ಕಿಂತ ಈಗ ಸ್ವಲ್ಪ ಕಡಿಮೆಯಾಗಿದೆ. ಹೊಸ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಶೇ 47ರಷ್ಟು ಜನ ಹೇಳಿದ್ದಾರೆ. ಈ ಪೈಕಿ ಶೇ 53ರಷ್ಟು ಮಂದಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದರೆ, ಶೇ 34ರಷ್ಟು (ಬಹುತೇಕ ಒಕ್ಕಲಿಗರು) ಜೆಡಿಎಸ್‌ನತ್ತ ವಾಲಿದ್ದಾರೆ. ಕರಾವಳಿ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ವಿರೋಧಿ ಮತಗಳ ವಿಭಜನೆಯಲ್ಲಿ ಹೆಚ್ಚು ಬದಲಾವಣೆಯಾಗದಿದ್ದರೂ, ಅತ್ಯಂತ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಆಸೆಗೆ ತಣ್ಣೀರು ಎರಚಲು ಇದು ಸಾಕು.

ಅಭ್ಯರ್ಥಿಗಳ ಆಯ್ಕೆಯಿಂದ ಲಾಭ: ಸ್ಥಳೀಯ ವಿಚಾರಗಳ ಆಧಾರದಲ್ಲೇ ನಡೆಯುತ್ತಿರುವಂತೆ ಕಾಣುತ್ತಿರುವ ಈ ಚುನಾವಣೆಯಲ್ಲಿ ಶೇ 90ರಷ್ಟು ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ಕಾಂಗ್ರೆಸ್‌ನ ತಂತ್ರ, ಅದಕ್ಕೆ ಲಾಭ ತರುವ ನಿರೀಕ್ಷೆ ಇದೆ. ಯಾವುದೇ ಪಕ್ಷದ ಶಾಸಕನ ವಿರುದ್ಧ ಮತದಾರರಲ್ಲಿ ವಿರೋಧಿ ಭಾವನೆ ಇರುವುದು ಸಮೀಕ್ಷೆಯಲ್ಲಿ ಕಂಡು ಬಂದಿಲ್ಲ. ತಮ್ಮ ಶಾಸಕರ ಕಾರ್ಯನಿರ್ವಹಣೆ ತೃಪ್ತಿ ತಂದಿದೆ ಎಂದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದಿದ್ದ ಕ್ಷೇತ್ರಗಳ ಶೇ 69ರಷ್ಟು ಮಂದಿ ಹೇಳಿದ್ದಾರೆ. ಹಾಲಿ ಬಿಜೆಪಿ ಶಾಸಕರು ಮತ್ತು ಜೆಡಿಎಸ್‌ ಶಾಸಕರ ಕಾರ್ಯನಿರ್ವಹಣೆಗೆ ತಲಾ ಶೇ 79 ಮಂದಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬಹುತೇಕ ಮತದಾರರು ‘ಪಕ್ಷ’ಕ್ಕಿಂತ ‘ಅಭ್ಯರ್ಥಿ’ ನೋಡಿ ಮತ ಚಲಾಯಿಸುತ್ತಾರೆ ಎಂಬ ಸಂಗತಿ ಸಮೀಕ್ಷೆಯಿಂದ ಗೊತ್ತಾಗಿದೆ. ಹಾಗಾಗಿ, ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳ ಮೇಲೆ ಜನರು ಅಸಮಾಧಾನ ಹೊಂದಿಲ್ಲದಿರುವುದು ಚುನಾವಣೆಯಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಅಭ್ಯರ್ಥಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವುದಾಗಿ ಶೇ 45ರಷ್ಟು ಜನ ಹೇಳಿದ್ದರೆ. ಅಭ್ಯರ್ಥಿ ಮುಖ್ಯ ಅಲ್ಲ ಎಂದು ಶೇ 39ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಶೇ 12ರಷ್ಟು ಜನರಿಗೆ ಮುಖ್ಯಮಂತ್ರಿ ಅಭ್ಯರ್ಥಿಯೇ ಮುಖ್ಯ.

ಕರ್ನಾಟಕದ ಚುನಾವಣೆಯು ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ನಡುವಣ ಸ್ಪರ್ಧೆಯಂತೆ ಬಿಂಬಿಸಲು ಬಿಜೆಪಿ ಹೊರಟಿದ್ದರೆ, ಸಿದ್ದರಾಮಯ್ಯ ಮತ್ತು ಬಿಜೆಪಿ ಮಧ್ಯದ ಕದನ ಎಂದು ಬಿಂಬಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಆದರೆ, ಮತ ಚಲಾಯಿಸುವಾಗ ಮತದಾರ, ಪಕ್ಷ ಇಲ್ಲವೇ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೆಚ್ಚು ಯೋಚಿಸುವಂತೆ ಕಾಣಿಸುವುದಿಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿ ಹೇಳುವುದಾದರೇ ಅಭ್ಯರ್ಥಿಯೇ ಮುಖ್ಯವಾಗಬಹುದು.

ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿಲ್ಲ ಸಿದ್ದರಾಮಯ್ಯ: ನಾಯಕತ್ವ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವನ್ನು ಬಹುತೇಕ ಮತದಾರರು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದರೂ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವವರ ನಡುವೆ ಕಾಂಗ್ರೆಸ್‌ ಉತ್ತಮ ಸಾಧನೆ ತೋರಿದೆ. ಶೇ 42ರಷ್ಟು ಮಂದಿ ಕಾಂಗ್ರೆಸ್‌ ಪರ ಒಲವು ಹೊಂದಿದ್ದಾರೆ. ಸ್ಥಳೀಯ ವಿಚಾರಗಳ ಆಧಾರದಲ್ಲೇ ಚುನಾವಣೆ ನಡೆಯುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ‘ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು’ ಎಂಬ ‍ಪ್ರಶ್ನೆಗೆ ಮೂವರಲ್ಲಿ ಒಬ್ಬರು ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದಾರೆ. ಹಿಂದಿನ ಸಮೀಕ್ಷೆಗಿಂತ ಸಿದ್ದರಾಮಯ್ಯ ಅವರ ಜನಪ್ರಿಯತೆಯಲ್ಲಿ ಶೇ ಮೂರು ಅಂಶ ಏರಿಕೆಯಾಗಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಅವರ ಜನಪ್ರಿಯತೆ ಸಿದ್ದರಾಮಯ್ಯ ಅವರಿಗಿಂತ ಸಾಕಷ್ಟು ಕಡಿಮೆ ಇದ್ದರೂ, ಅವರನ್ನು ಮೆಚ್ಚುವವರ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ‘ಯಾರನ್ನು ಹೆಚ್ಚು ಇಷ್ಟಪಡುತ್ತೀರಿ’ ಎಂದು ಕೇಳಿದಾಗ ಶೇ 41ರಷ್ಟು ಜನ ಸಿದ್ದರಾಮಯ್ಯ ಅವರತ್ತ ಬೆರಳು ತೋರಿದರೆ, ಯಡಿಯೂರಪ್ಪ ಅವರತ್ತ ಕೈ ತೋರಿದವರು ಶೇ 29ರಷ್ಟು ಮಂದಿ ಮಾತ್ರ.

ಜನಪ್ರಿಯತೆಯಲ್ಲಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನೇ ಹಿಂದಿಕ್ಕುವಂತೆ ಕಾಣಿಸುತ್ತಿದೆ. ಸದ್ಯ ಶೇ 4ರಷ್ಟು ಅಂಶಗಳಿಂದ ಮೋದಿ ಮುಂದಿದ್ದಾರೆ. ಆದರೆ, ಮೋದಿ ಅವರು ಹೊಂದಿರುವ ಅಪಾರ ಜನಪ್ರಿಯತೆಯನ್ನು ಆಧರಿಸಿ ಹೇಳುವುದಾದರೆ, ರಾಜ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರು ಪ್ರಧಾನಿಯವರ ಸಮೀಪಕ್ಕೆ ಬಂದಿರುವುದು ಬಿಜೆಪಿಗೆ ಆತಂಕ ಉಂಟು ಮಾಡಿರುವುದು ಖಚಿತ. ಮೋದಿ ಸರ್ಕಾರದ ಸಾಧನೆಗೆ ಹೋಲಿಸಿದರೆ, ಜನರು ಸಿದ್ದರಾಮಯ್ಯ ಸರ್ಕಾರದ ಸಾಧನೆಗೆ ಹೆಚ್ಚು ಅಂಕಗಳನ್ನು ನೀಡಿದ್ದಾರೆ.

ಮೂರು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದ ಈಗಿನ ಚಿತ್ರಣ ನೋಡಿ ಚುನಾವಣಾ ಫಲಿತಾಂಶವನ್ನು ಸ್ಪಷ್ಟವಾಗಿ ಹೇಳುವುದು ಕಷ್ಟವಾದರೂ, ತನ್ನ ವಿರೋಧಿ ಪಕ್ಷಗಳಿಗಿಂತ ಕಾಂಗ್ರೆಸ್‌ ಸ್ವಲ್ಪ ಮುಂದಿದೆ. ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕಂಡು ಬರುತ್ತಿರುವ ಪ್ರವೃತ್ತಿಯನ್ನು ಮೀರಿ, ಚುನಾವಣಾ ಇತಿಹಾಸವನ್ನು ಮತ್ತೆ ಬರೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಲಿದೆಯೇ ಎಂಬುದು ಸದ್ಯದ ಪ್ರಶ್ನೆ.

-ಶ್ರೇಯಸ್‌ ಸರ್ದೇಸಾಯಿ/ಅಂಕಿತಾ ಭರ್ತ್ವಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT