ಶುಕ್ರವಾರ, ಮಾರ್ಚ್ 5, 2021
28 °C

ಇ–ವಾಹನ’ಕ್ಕೆ ಬ್ಯಾಟರಿ ಬಾಡಿಗೆ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಇ–ವಾಹನ’ಕ್ಕೆ ಬ್ಯಾಟರಿ ಬಾಡಿಗೆ

ನಮ್ಮಲ್ಲಿ ವಿದ್ಯುತ್ ಚಾಲಿತ ವಾಹನಗಳು ಜನಪ್ರಿಯವಾಗದೇ ಇರಲು ಬಹಳಷ್ಟು ಕಾರಣಗಳಿವೆ. ಅವುಗಳಲ್ಲಿ ಬ್ಯಾಟರಿಗಳ ಬೆಲೆ ಮತ್ತು ಬ್ಯಾಟರಿಗಳ ಕಾರ್ಯಕ್ಷಮತೆ ಅತ್ಯಂತ ಮುಖ್ಯವಾದ ಕಾರಣ. ಈ ಎರಡಕ್ಕೂ ಪರಿಣಾಮಕಾರಿ ಪರಿಹಾರವಾಗಿ ಬ್ಯಾಟರಿಗಳನ್ನು ಬಾಡಿಗೆಗೆ ನೀಡುವ ಸೇವೆಯನ್ನು ಆರಂಭಿಸಲು ಬೆಂಗಳೂರಿನ ಸನ್‌ ಮೊಬಿಲಿಟಿ ಅಂತಿಮ ಹಂತದ ಸಿದ್ಧತೆ ನಡೆಸಿದೆ.

ಹೌದು. ಇಂತಹದ್ದೊಂದು ಪರಿಹಾರವನ್ನು ಮುಂದಿಟ್ಟುಕೊಂಡು ಸನ್‌ ಮೊಬಿಲಿಟಿ ಮಾರುಕಟ್ಟೆ ಪ್ರವೇಶಿಸಿದೆ. ಕಂಪನಿ ಮುಂದೊಡ್ಡುತ್ತಿರುವ ಪರಿಹಾರ ಅತ್ಯಂತ ಸರಳ ಮತ್ತು ಕಾರ್ಯಸಾಧ್ಯವಾದುದು ಎಂದೆನಿಸುತ್ತದೆ.

ನಾಲ್ಕು ಜನ ಇಕ್ಕಟ್ಟಾಗಿ ಕೂತುಕೊಳ್ಳಲು ಸಾಧ್ಯವಾಗುವ ಸಣ್ಣ ವಿದ್ಯುತ್‌ ಕಾರ್‌ನ ಬೆಲೆ ₹ 10 ಲಕ್ಷದಿಂದ ₹ 12 ಲಕ್ಷದವರೆಗೂ ಇದೆ. ಈ ಬೆಲೆಯಲ್ಲಿ ಬ್ಯಾಟರಿಯದ್ದೇ ಸಿಂಹಪಾಲು. ಹೀಗಾಗಿ ವಾಹನವನ್ನು ಮಾತ್ರ ಮಾರಾಟ ಮಾಡಿ, ಬ್ಯಾಟರಿಯನ್ನು ಬಾಡಿಗೆಗೆ ನೀಡಿದರೆ ಹೇಗೆ ಎಂಬ ಆಲೋಚನೆಯೇ ‘ಬ್ಯಾಟರಿ ಸ್ವಾಪಿಂಗ್’ ಪರಿಕಲ್ಪನೆಯ ಹುಟ್ಟಿಗೆ ಕಾರಣ ಎನ್ನುತ್ತಾರೆ ಸನ್‌ ಮೊಬಿಲಿಟಿಯ ಸಹಸಂಸ್ಥಾಪಕ ಚೇತನ್ ಮೈನಿ.

ಆಗ ವಿದ್ಯುತ್ ಚಾಲಿತ ವಾಹನಗಳ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ. ಬ್ಯಾಟರಿಗಳ ಬದಲಿಗೆ ಬ್ಯಾಟರಿಗಳಲ್ಲಿರುವ ವಿದ್ಯುತ್‌ಗೆ ಹಣ ನೀಡಿದರೆ ಸಾಕು ಎನ್ನುತ್ತದೆ ಸನ್ ಮೊಬಿಲಿಟಿ.

‘ಸದ್ಯಕ್ಕೆ ದ್ವಿಚಕ್ರ ವಾಹನ, ಇ–ರಿಕ್ಷಾ ಮತ್ತು ಆಟೊ ರಿಕ್ಷಾಗಳಿಗೆಂದು ವಿದ್ಯುತ್ ಮೋಟರ್ ಮತ್ತು ಬ್ಯಾಟರಿ ಡೆಕ್ ಕಿಟ್‌ಗಳನ್ನು ಕಂಪನಿ ಅಭಿವೃದ್ಧಿಪಡಿಸಿದೆ. ಆಟೊ ರಿಕ್ಷಾ ಕಿಟ್‌ಗಳನ್ನು ಸಾಮಾನ್ಯ ಆಟೊಗಳಿಗೂ ಅಳವಡಿಸಿಕೊಳ್ಳಬಹುದು. ಈ ಕಿಟ್‌ಗಳ ಬೆಲೆ ₹ 25 ಸಾವಿರದಿಂದ ₹ 30 ಸಾವಿರದವರೆಗೂ ಇರಲಿದೆ. ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು’ ಎಂದು ಚೇತನ್ ಮೈನಿ ಹೇಳುತ್ತಾರೆ.

ಈ ಕಿಟ್ ಅಳವಡಿಸಿರುವ ವಾಹನಗಳನ್ನೂ ಸನ್‌ ಮೊಬಿಲಿಟಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಇನ್ನೂ 6 ತಿಂಗಳು ಕಾಯಬೇಕಾಗುತ್ತದೆ.

ಅಶೋಕ್‌ ಲೇಲ್ಯಾಂಡ್ ಅಭಿವೃದ್ಧಿಪಡಿಸಿರುವ ವಿದ್ಯುತ್ ಚಾಲಿತ ಬಸ್‌ಗಳಿಗೂ ಸನ್‌ ಮೊಬಿಲಿಟಿಯೇ ಬ್ಯಾಟರಿಗಳನ್ನು ಪೂರೈಸುತ್ತಿದೆ. ಹಲವಾರು ಬ್ಯಾಟರಿಗಳನ್ನು ಹೊಂದಿರುವ ದೊಡ್ಡ ಬ್ಯಾಟರಿ ಪ್ಯಾಕ್‌ ಅನ್ನು ಈ ಬಸ್‌ಗಳಿಗೆಂದೇ ಅಭಿವೃದ್ದಿಪಡಿಸಲಾಗಿದೆ. ಸುಮಾರು ಅರ್ಧ ಟನ್ ತೂಗುವ ಈ ಬ್ಯಾಟರಿ ಪ್ಯಾಕ್‌ಗಳನ್ನು ಬದಲಿಸಲು ಯಂತ್ರವನ್ನೂ ಕಂಪನಿ ಅಭಿವೃದ್ಧಿಪಡಿಸಿದೆ. ಅಗತ್ಯವಿದ್ದೆಡೆ ಈ ಯಂತ್ರಗಳನ್ನು ಅಳವಡಿಸಿ, ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬಹುದು.

‘ಬಿಎಂಟಿಸಿಯ ಎಲ್ಲಾ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್‌ಗಳಾಗಿ ಬದಲಿಸಿದರೆ, ನಗರದಲ್ಲಿ ಇಂತಹ 34 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬೇಕಾಗುತ್ತದೆ. ಆಗ ನಗರ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿದ್ಯುತ್ ಚಾಲಿತವನ್ನಾಗಿ ಮಾಡಬಹುದು’ ಎಂದು  ಸನ್ ಮೊಬಿಲಿಟಿ ಸಂಸ್ಥಾಪಕ ಉದಯ್ ಖೇಮ್ಕ ಹೇಳುತ್ತಾರೆ.

**

ಬ್ಯಾಟರಿ ಬದಲಿಸುವುದು ಹೀಗೆ

1 ಸನ್‌ ಮೊಬಿಲಿಟಿಯ ವಿದ್ಯುತ್ ಚಾಲಿತ ವಾಹನವನ್ನು ಖರೀದಿಸಿದಾಗ ಅದರಲ್ಲಿ ವಿದ್ಯುತ್ ಮೋಟರ್ ಮತ್ತು ಬ್ಯಾಟರಿ ಡೆಕ್ ಮಾತ್ರ ಇರುತ್ತದೆ. ಬ್ಯಾಟರಿ ಇರುವುದಿಲ್ಲ. ಬ್ಯಾಟರಿಗಳನ್ನು ಖರೀದಿಸುವ ಬದಲಿಗೆ, ಕಂಪನಿಯಲ್ಲಿ ಭದ್ರತಾ ಠೇವಣಿ ಇರಿಸಿ ಬ್ಯಾಟರಿಯನ್ನು ಪಡೆದುಕೊಂಡರಾಯಿತು. ನಿಮ್ಮ ವಾಹನದಲ್ಲಿ ಎಷ್ಟು ಡೆಕ್‌ಗಳಿವೆ ಎಂಬುದನ್ನು ಆಧರಿಸಿ ಅಷ್ಟು ಬ್ಯಾಟರಿಗಳನ್ನು ಪಡೆದುಕೊಂಡರಾಯಿತು‌.

2 ಖರೀದಿದಾರರರಿಗೆ ಕಂಪನಿ ಸ್ಮಾರ್ಟ್‌ಕಾರ್ಡ್ ಮತ್ತು ಇ–ವಾಲೆಟ್ ನೀಡುತ್ತದೆ. ಈ ಇ–ವಾಲೆಟ್‌ನಲ್ಲಿ ಹಣ ತುಂಬಿಸಬೇಕು.

3 ಸನ್‌ ಮೊಬಿಲಿಟಿ ಕೊಡುವ ಬ್ಯಾಟರಿ ‘ಸ್ಮಾರ್ಟ್ ಬ್ಯಾಟರಿ’ ಆಗಿರುತ್ತದೆ. ಅದರಲ್ಲಿ ಜಿಪಿಎಸ್‌ ಮತ್ತು ಪವರ್ ಮ್ಯಾನೇಜ್‌ಮೆಂಟ್ ಸವಲತ್ತು ಇರಲಿದೆ. ಬ್ಯಾಟರಿಯಲ್ಲಿ ಎಷ್ಟು ವಿದ್ಯುತ್ ಉಳಿದಿದೆ, ನಿಮ್ಮ ವಾಹನ ಎಷ್ಟು ದೂರ ಕ್ರಮಿಸಲಿದೆ ಎಂಬುದರ ಮಾಹಿತಿಯನ್ನು ಪವರ್ ಮ್ಯಾನೇಜ್‌ಮೆಂಟ್ ಸಿಸ್ಟಂ ತಿಳಿಸುತ್ತದೆ. ನಿಮ್ಮ ವಾಹನ ಇರುವಲ್ಲಿಂದ ಹತ್ತಿರದ ಬ್ಯಾಟರಿ ಸ್ಟೇಷನ್ ಎಲ್ಲಿದೆ ಎಂಬುದನ್ನು ಜಿಪಿಎಸ್‌ ತಿಳಿಸಲಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಂಡಿರುವ ಸನ್ ಮೊಬಿಲಿಟಿ ಆ್ಯಪ್‌ನಲ್ಲಿ ಈ ಮಾಹಿತಿ ದೊರೆಯಲಿದೆ.

4 ನಗರದ ಹಲವೆಡೆ ತ್ವರಿತ ಚಾರ್ಜಿಂಗ್ ವ್ಯವಸ್ಥೆ ಇರುವ ಬ್ಯಾಟರಿ ಸ್ವಾಪಿಂಗ್ ಘಟಕಗಳನ್ನು ಸ್ಥಾಪಿಸಲಾಗಿರುತ್ತದೆ. ಒಂದು ಸ್ವಾಪಿಂಗ್ ಯಂತ್ರದಲ್ಲಿ 15 ಬ್ಯಾಟರಿಗಳನ್ನು ಇಡಬಹುದು. ಇವುಗಳಲ್ಲಿ 12 ಬ್ಯಾಟರಿಗಳು ಸದಾ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಿರುತ್ತವೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರುವುದರಿಂದ ಬ್ಯಾಟರಿಯನ್ನು ಇಟ್ಟ ಒಂದು ಗಂಟೆಯಲ್ಲಿ ಅವು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗುತ್ತವೆ

5 ಫಾಸ್ಟ್ ಚಾರ್ಜಿಂಗ್ ಘಟಕ ತಲುಪಿದ ತಕ್ಷಣ, ಸ್ಮಾರ್ಟ್ ಕಾರ್ಡ್ ಅನ್ನು ಸ್ವೈಪ್ ಮಾಡಬೇಕು. ಆಗ ಯಂತ್ರದಲ್ಲಿ ಖಾಲಿ ಇರುವ ಡೆಕ್ ತೆರೆದುಕೊಳ್ಳುತ್ತದೆ. ವಾಹನದಿಂದ ತೆಗೆದ ಬ್ಯಾಟರಿಯನ್ನು ಅದರಲ್ಲಿ ಇರಿಸಬೇಕು. ನಂತರ ಪೂರ್ಣ ಚಾರ್ಜ್ ಆಗಿರುವ ಬ್ಯಾಟರಿ ಇರುವ ಡೆಕ್ ತೆರೆದುಕೊಳ್ಳುತ್ತದೆ. ಆ ಬ್ಯಾಟರಿಯನ್ನು ತೆಗೆದುಕೊಂಡು ವಾಹನದಲ್ಲಿ ಅಳವಡಿಸಿದರಾಯಿತು. ವಾಹನವನ್ನು ಚಲಾಯಿಸಿಕೊಂಡು ಹೋಗಬಹುದು.

**

ಲಾಭಗಳು

* ಇಡೀ ಪ್ರಕ್ರಿಯೆಗೆ 2ರಿಂದ 3 ನಿಮಿಷ ಮಾತ್ರ ತಗಲುವುದರಿಂದ ಸಮಯ ಉಳಿತಾಯವಾಗಲಿದೆ

* ಬ್ಯಾಟರಿಯಲ್ಲಿ ನೀವು ಬಳಸಿರುವಷ್ಟು ವಿದ್ಯುತ್‌ಗೆ ಮಾತ್ರ ನೀವು ಶುಲ್ಕ ತೆರಬೇಕಾಗುತ್ತದೆ. ಅಂದರೆ ಬ್ಯಾಟರಿಯಲ್ಲಿದ್ದ ವಿದ್ಯುತ್‌ನಲ್ಲಿ ಶೇ 80ರಷ್ಟನ್ನು ಮಾತ್ರ ನೀವು ಬಳಸಿದ್ದರೆ. ಆ ವಿದ್ಯುತ್‌ಗೆ ಮಾತ್ರ ನೀವು ಶುಲ್ಕ ಪಾವತಿ ಮಾಡಬೇಕಾಗುತ್ತದೆ

* ಬ್ಯಾಟರಿಯ ಕಾರ್ಯದಕ್ಷತೆ ಕಡಿಮೆಯಾದ ತಕ್ಷಣ ಅದನ್ನು ಕಂಪನಿ ಬದಲಿಸುತ್ತದೆ. ಹೀಗಾಗಿ ಬಳಕೆದಾರರಿಗೆ ಸದಾ ಉತ್ತಮ ಕಾರ್ಯದಕ್ಷತೆಯ ಬ್ಯಾಟರಿಯೇ ಸಿಗುತ್ತದೆ.

* ಬ್ಯಾಟರಿಯ ನಿರ್ವಹಣೆಯ ಜವಾಬ್ದಾರಿ ಕಂಪನಿಯದ್ದೇ ಆಗಿರುವುದರಿಂದ, ಬಳಕೆದಾರರು ಅದಕ್ಕೆ ಹಣ ವ್ಯಯ ಮಾಡುವ ಅಗತ್ಯವಿರುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.