ಮಂಗಳವಾರ, ಮಾರ್ಚ್ 2, 2021
23 °C

ವಾಗ್ದಂಡನೆ ನೋಟಿಸ್‌ ವಜಾ ಪ್ರಶ್ನಿಸಿದ ಅರ್ಜಿ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಗ್ದಂಡನೆ ನೋಟಿಸ್‌ ವಜಾ ಪ್ರಶ್ನಿಸಿದ ಅರ್ಜಿ ವಾಪಸ್‌

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ವಿರುದ್ಧ ನೀಡಲಾಗಿದ್ದ ವಾಗ್ದಂಡನೆ ನೋಟಿಸನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಇಬ್ಬರು ಸಂಸದರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.

ರಾಜ್ಯಸಭೆ ಸದಸ್ಯರಾಗಿರುವ ಪ್ರತಾಪ್‌ ಸಿಂಗ್‌ ಬಾಜ್ವ ಮತ್ತು ಅಮೀ ಹರ್ಷದ್‌ರಾಯ್‌ ಯಾಜ್ಞಿಕ್‌ ಅವರು ಸಲ್ಲಿಸಿದ್ದ ಅರ್ಜಿಯ ಪರವಾಗಿ ಕಾಂಗ್ರೆಸ್‌ ಮುಖಂಡ ಮತ್ತು ವಕೀಲ ಕಪಿಲ್‌ ಸಿಬಲ್‌ ಅವರು ವಾದಿಸಿದರು. ಅರ್ಜಿಯ ವಿಚಾರಣೆ ನಡೆಸಲು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವನ್ನು ರಚಿಸಿದವರು ಯಾರು ಎಂದು ಅವರು ಪ್ರಶ್ನಿಸಿದರು.

‌ಆಡಳಿತಾತ್ಮಕ ಆದೇಶದ ಮೂಲಕ ಈ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವಹಿಸಲಾಗಿದೆ. ಆದರೆ ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿಗೆ ಸಂಬಂಧಿಸಿದ್ದಾಗಿರುವುದರಿಂದ ಅವರು ಆದೇಶ ನೀಡುವಂತಿಲ್ಲ. ಈ ಆದೇಶದ ಪ್ರತಿ ತಮಗೆ ಬೇಕು ಎಂದು ಅವರು ಒತ್ತಾಯಿಸಿದರು. ಈ ಆದೇಶವನ್ನು ಪ್ರಶ್ನಿಸುವುದಾಗಿಯೂ ಹೇಳಿದರು.

ಪೀಠ ರಚನೆ ಆದೇಶದ ಪ್ರತಿ ದೊರೆ ಯುವುದರಿಂದ ಏನು ಪ್ರಯೋಜನ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ ಮತ್ತೆ ಮತ್ತೆ ಪ್ರಶ್ನಿಸಿತು. ‘ಮುಖ್ಯ ನ್ಯಾಯಮೂರ್ತಿಯ ವಿರುದ್ಧವೇ ಈ ಅರ್ಜಿ ಇದೆ.  ಹಾಗೆಯೇ ಇತರ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳಿಗೂ ಇದರಲ್ಲಿ ಪಾತ್ರ ಇದೆ. ಹಾಗಾಗಿ ಇದೊಂದು ಕಳವಳಕಾರಿ ಮತ್ತು ಅಭೂತಪೂರ್ವ ಸನ್ನಿವೇಶ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಸಿಬಲ್‌ ಅವರು ಆದೇಶದ ‍ಪ್ರತಿಗಾಗಿ ಪಟ್ಟು ಹಿಡಿದರು. ಈ ಪ್ರತಿ ದೊರೆತರೆ ಮಾತ್ರ ಅದನ್ನು ಪ್ರಶ್ನಿಸುವ ನಿರ್ಧಾರ ಕೈಗೊಳ್ಳುವುದು ಸಾಧ್ಯ ಎಂದರು. ಪೀಠ ಈ ವಾದವನ್ನು ಒಪ್ಪಲಿಲ್ಲ. ಹಾಗಾಗಿ ಅರ್ಜಿಯನ್ನೇ ವಾಪಸ್‌ ಪಡೆಯವುದಾಗಿ ಸಿಬಲ್‌ ತಿಳಿಸಿದರು.

ರಾಜ್ಯಸಭಾ ಸಭಾಪತಿ ಪರವಾಗಿ ಹಾಜರಾದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಅರ್ಜಿಯು ವಿಚಾರಣೆಗೇ ಅರ್ಹವಲ್ಲ ಎಂದು ವಾದಿಸಿದರು. ವಾಗ್ದಂಡನೆ ನೋಟಿಸ್‌ಗೆ ಏಳು ಪಕ್ಷಗಳ 64 ಸಂಸದರು ಸಹಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನ ಇಬ್ಬರು ಮಾತ್ರ ರಾಜ್ಯಸಭಾ ಸಭಾಪತಿ ನಿರ್ಧಾರವನ್ನು ಪ್ರಶ್ನಿಸಿದ್ದಾರೆ ಎಂದರು.

ಸಿಬಲ್‌ ವಾದಿಸುವುದಕ್ಕೇ ವಿರೋಧ: ಕಾಂಗ್ರೆಸ್‌ ಸಂಸದರ ಪರವಾಗಿ ಸಿಬಲ್‌ ವಾದಿಸುವುದನ್ನು ಇಬ್ಬರು ವಕೀಲರು ವಿರೋಧಿಸಿದರು. ನಾಯ್ಡು ಅವರಿಗೆ ಸಲ್ಲಿಸಿದ ವಾಗ್ದಂಡನೆ ನೋಟಿಸ್‌ಗೆ ಸಿಬಲ್‌ ಅವರೂ ಸಹಿ ಮಾಡಿದ್ದಾರೆ. ಹಾಗಾಗಿ ಅವರು ವಾದಿಸುವಂತಿಲ್ಲ ಎಂದು ಈ ವಕೀಲರು ಹೇಳಿದರು. ಆದರೆ ಇದನ್ನು ಪೀಠವು ಗಣನೆಗೆ ತೆಗೆದುಕೊಳ್ಳಲಿಲ್ಲ.

ಹಿನ್ನೆಲೆ:  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ ಏಳು ಪಕ್ಷಗಳ  64 ಸಂಸದರು ಸಹಿ ಮಾಡಿದ ವಾಗ್ದಂಡನೆ ನೋಟಿಸನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಲಾಗಿತ್ತು. ಏಪ್ರಿಲ್‌ 23ರಂದು ನಾಯ್ಡು ಅವರು ಅದನ್ನು ತಿರಸ್ಕರಿಸಿದ್ದರು. ಮುಖ್ಯ ನ್ಯಾಯಮೂರ್ತಿಯ ವಿರುದ್ಧ ವಾಗ್ದಂಡನೆ ನೋಟಿಸ್‌ ಸಲ್ಲಿಕೆಯಾಗಿರುವುದು ಇದೇ ಮೊದಲು.

ಹೋರಾಟ:  ಅರ್ಜಿಯನ್ನು ವಾಪಸ್‌ ಪಡೆದ ಬಳಿಕವೂ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಹೋರಾಟ ವನ್ನು ಕಾಂಗ್ರೆಸ್‌ ಮುಂದುವರಿಸಿದೆ.  ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ನ್ಯಾಯಾಂಗ ಪ್ರಕ್ರಿಯೆ ಯಲ್ಲಿ ಪಾರದರ್ಶಕತೆ ಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕಪಿಲ್‌ ಸಿಬಲ್‌ ಹೇಳಿದರು.  ಸಿಜೆಐ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ರಾಜಕೀಯ ಪ್ರೇರಿತ ಅಲ್ಲ ಎಂದ ಅವರು , ಇದು ರಾಜಕೀಯ ವಿಚಾರ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದರು. ಕಾಂಗ್ರೆಸ್‌ಗೆ ಯಾರ ವಿರುದ್ಧವೂ ವೈಯಕ್ತಿಕ ದೂರು ಇಲ್ಲ ಎಂದರು.

ಕಾಂಗ್ರೆಸ್‌ ವರ್ತನೆಗೆ ಬಿಜೆಪಿ ಖಂಡನೆ

ದೂರು ಸಲ್ಲಿಸಿ, ಸಂವಿಧಾನ ಪೀಠ ರಚನೆಯಾದ ಬಳಿಕ ಅದನ್ನು ಹಿಂದಕ್ಕೆ ಪಡೆಯುವ ಮೂಲಕ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಅಮೂಲ್ಯ ಸಮಯವನ್ನು ಹಾಳು ಮಾಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮಮಾಧವ್‌ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ನೋಟಿಸ್‌ ನೀಡಿಕೆಯನ್ನು ಬಿಜೆಪಿ ಹಿಂದೆಯೂ ಟೀಕಿಸಿತ್ತು. ಪಕ್ಷದ ಅಧ್ಯಕ್ಷ ಅಮಿತ್‌ ಷಾ ಮತ್ತು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ವಿರೋಧ ಪಕ್ಷಗಳ ಕ್ರಮವನ್ನು ಖಂಡಿಸಿದ್ದರು.

‘ಪ್ರಶ್ನಿಸಲಾಗದ ಆದೇಶ ಭಾರತದಲ್ಲಿ ಯಾವುದಿದೆ? ನಮ್ಮ ಪ್ರಶ್ನೆ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ, ಅದು ನ್ಯಾಯಾಂಗದ ಬೆಳವಣಿಗೆಗಳಿಗೆ ಸಂಬಂಧಿಸಿದ್ದಾಗಿದೆ’

– ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಮುಖಂಡ

‘ಮುಖ್ಯ ನ್ಯಾಯಮೂರ್ತಿ ವಿರುದ್ಧದ ವಾಗ್ದಂಡನೆ ನೋಟಿಸ್‌ ವಜಾ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡರ ಕೋಡಂಗಿ ವರ್ತನೆ ಸುಪ್ರೀಂ ಕೋರ್ಟ್‌ನ ಅಮೂಲ್ಯ ಸಮಯವನ್ನು ಹಾಳು ಮಾಡಿದೆ’

– ರಾಮ ಮಾಧವ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.