ಸೋಮವಾರ, ಮಾರ್ಚ್ 1, 2021
29 °C

ವಾಲ್‌ಮಾರ್ಟ್‌ ವಶಕ್ಕೆ ಫ್ಲಿಪ್‌ಕಾರ್ಟ್‌ ಇ– ಕಾಮರ್ಸ್ ಹೊಸ ಮೈಲುಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲ್‌ಮಾರ್ಟ್‌ ವಶಕ್ಕೆ ಫ್ಲಿಪ್‌ಕಾರ್ಟ್‌ ಇ– ಕಾಮರ್ಸ್ ಹೊಸ ಮೈಲುಗಲ್ಲು

ವಿಶ್ವದ ಅತಿದೊಡ್ಡ ರಿಟೇಲ್‌ ಸಂಸ್ಥೆ ವಾಲ್‌ಮಾರ್ಟ್‌, ದೇಶದ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಶೇ 77 ಪಾಲು ಬಂಡವಾಳವನ್ನು  ₹ 1.07 ಲಕ್ಷ ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ವಿದ್ಯಮಾನವು ದೇಶಿ ಇ– ಕಾಮರ್ಸ್‌ ಜಗತ್ತಿನಲ್ಲಿ ಹೊಸ ಅಧ್ಯಾಯಕ್ಕೆ ಶ್ರೀಕಾರ ಹಾಕಿದೆ. ಭಾರತದಲ್ಲಿನ ರಿಟೇಲ್‌ ವಹಿವಾಟಿನ ಮೇಲೆ ದೂರಗಾಮಿ ಪರಿಣಾಮವನ್ನೂ ಬೀರಲಿದೆ. ಭಾರತದಲ್ಲಿನ ಇ– ಕಾಮರ್ಸ್‌ ವಹಿವಾಟಿನ ಮೇಲೆ ಈ ಬಹುರಾಷ್ಟ್ರೀಯ ಸಂಸ್ಥೆಯು ನಿಯಂತ್ರಣ ಹೊಂದುವ ಸ್ಪಷ್ಟ ಪ್ರಯತ್ನವೂ ಎದ್ದುಕಾಣುತ್ತಿದೆ. ಈ ವಹಿವಾಟಿನಿಂದಾಗಿ ಫ್ಲಿಪ್‌ಕಾರ್ಟ್‌ ವಿಶ್ವದಾದ್ಯಂತ ಗಮನ ಸೆಳೆದುಕೊಂಡಿರುವುದು ಸ್ಟಾರ್ಟ್‌ಅಪ್‌ ರಾಜಧಾನಿ ಖ್ಯಾತಿಯ ಬೆಂಗಳೂರಿನ ಹಿರಿಮೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ತನ್ನ ನೆಲೆ ಸ್ಥಾಪಿಸಲು ವಾಲ್‌ಮಾರ್ಟ್ ಕಂಪನಿ ಬಹಳ ಕಾಲದಿಂದಲೂ ಪ್ರಯತ್ನಿಸುತ್ತಾಬಂದಿದೆ. ಆದರೆ ದೇಶಿ ಬಹುಬ್ರ್ಯಾಂಡ್‌ ರಿಟೇಲ್‌ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ನಮ್ಮ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ, ಹಿಂಬಾಗಿಲ ಮೂಲಕ ಎಂದರೆ ಆನ್‍ಲೈನ್ ಮಾರಾಟ ಕ್ಷೇತ್ರದ ಮೂಲಕ ಭಾರತದ ರಿಟೇಲ್‌ ಮಾರುಕಟ್ಟೆಯನ್ನು ವಾಲ್‌ಮಾರ್ಟ್ ಪ್ರವೇಶಿಸುತ್ತಿದೆ ಎಂದೇ ಅನುಮಾನಿಸಲಾಗಿದೆ. ಸ್ಪರ್ಧೆ ಹೆಚ್ಚಿದಷ್ಟೂ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ. ಸಹಸ್ಥಾಪಕ ಸಚಿನ್ ಬನ್ಸಲ್‌ ಅವರು ಹೊರನಡೆದಿದ್ದಾರೆ. ಹೊಸ ಆಡಳಿತ ಮಂಡಳಿಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇದೆ ಎಂದು ವಾಲ್‌ಮಾರ್ಟ್‌ ಷರತ್ತು ವಿಧಿಸಿದ್ದರಿಂದ ಸಚಿನ್‌ ನಿರ್ಗಮನ ಅನಿವಾರ್ಯವಾಗಿತ್ತು.

ವಾಲ್‌ಮಾರ್ಟ್‌, ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು ಜಾಣ್ಮೆ ಮೆರೆದಿದೆ. ಫ್ಲಿಪ್‌ಕಾರ್ಟ್‌ ಸ್ವಾಧೀನಕ್ಕೆ ಸ್ಪರ್ಧೆಯಲ್ಲಿದ್ದ, ಅಮೆರಿಕ

ದಲ್ಲಿನ ತನ್ನ ಪ್ರತಿಸ್ಪರ್ಧಿ ಸಂಸ್ಥೆ ಅಮೆಜಾನ್‌ನ ಭಾರತದಲ್ಲಿನ ಮುನ್ನಡೆಗೆ ಅಡ್ಡಗಾಲು ಹಾಕುವಲ್ಲಿ ಯಶಸ್ವಿಯಾಗಿದೆ. ಏಷ್ಯಾದ ಇ–ಕಾಮರ್ಸ್‌ ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಹಾದಿಯನ್ನು ಈ ಮೂಲಕ ವಾಲ್‍ಮಾರ್ಟ್ ಸುಗಮಗೊಳಿಸಿಕೊಂಡಿದೆ. ಆನ್‌ಲೈನ್‌ನಲ್ಲಿ ಖರೀದಿ ಮಾಡುವವರ ಪ್ರಮಾಣ ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ. ಆದರೆ ದೇಶಿ ಇ– ವಾಣಿಜ್ಯ ವಹಿವಾಟು ಸದ್ಯಕ್ಕೆ ₹ 2.01 ಲಕ್ಷ ಕೋಟಿ ತಲುಪಿದ್ದು 2026ರ ವೇಳೆಗೆ ₹ 13.40 ಲಕ್ಷ ಕೋಟಿ ಆಗಲಿದೆ ಎಂಬುದನ್ನು ನಿರ್ಲಕ್ಷಿಸಲಾಗದು. ಹನ್ನೊಂದು ವರ್ಷಗಳ ಹಿಂದೆ ಕೇವಲ ₹ 4 ಲಕ್ಷ ಹೂಡಿಕೆಯಿಂದ ಆನ್‌ಲೈನ್‌ ಪುಸ್ತಕ ಮಾರಾಟ ವಹಿವಾಟು ಆರಂಭಿಸಿದ್ದ ಫ್ಲಿಪ್‍ಕಾರ್ಟ್ ಈಗ ₹ 1.47 ಲಕ್ಷ ಕೋಟಿಗಳಷ್ಟು ವಹಿವಾಟಿನ ಸಂಸ್ಥೆಯಾಗಿ ಬೆಳೆದಿರುವುದು ಹೊಸ ತಲೆಮಾರಿನ ಉದ್ಯಮಶೀಲರ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ. ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್‌ ಆಗಿ ಜನಪ್ರಿಯವಾಗಿರುವ ಫ್ಲಿಪ್‌ಕಾರ್ಟ್‌ನ ಮಾಲೀಕತ್ವ ಬದಲಾವಣೆಯು ದೇಶದಲ್ಲಿನ ಉದ್ಯಮಶೀಲತೆಗೆ ಹೊಸ ದಿಕ್ಕು ತೋರಲಿದೆ. ದೇಶಿ ಸ್ಟಾರ್ಟ್‌ಅಪ್‌ಗಳ ಪಾಲಿಗೆ ಈ ಬೆಳವಣಿಗೆಯು ಸ್ಫೂರ್ತಿದಾಯಕವೂ ಆಗಿದೆ. ಫ್ಲಿಪ್‍ಕಾರ್ಟ್ ಹೂಡಿಕೆದಾರರು ಹಾಗೂ ಅನೇಕ ಉದ್ಯೋಗಿಗಳು ವಾಲ್‍ಮಾರ್ಟ್ ಜೊತೆಗಿನ ಒಪ್ಪಂದದಿಂದ ಭಾರಿ ಲಾಭ ಪಡೆದಿದ್ದಾರೆ. ಹೊಸ ತಲೆಮಾರಿನ ಉದ್ಯಮಶೀಲರು ಪ್ರಬುದ್ಧತೆ ಸಾಧಿಸಿರುವುದು ಮತ್ತು ನವೋದ್ಯಮ ವಲಯದ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದೂ ಇದರಿಂದ ಸ್ಪಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.