ಸೋಮವಾರ, ಮಾರ್ಚ್ 8, 2021
22 °C
ರಾಷ್ಟ್ರೀಯ ತಂತ್ರಜ್ಞಾನ ದಿನದ ಪ್ರಯುಕ್ತ ವಸ್ತುಪ್ರದರ್ಶನ l ದೀರ್ಘ ಕಾಲದವರೆಗೆ ಕೆಡದೇ ಇರುವ ತಿಂಡಿ–ತಿನಿಸು

ಎರಡು ನಿಮಿಷದಲ್ಲಿ ಬಾಸುಮತಿ ಅನ್ನ, ಚಿಕನ್‌ ಪಲಾವ್‌...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ನಿಮಿಷದಲ್ಲಿ ಬಾಸುಮತಿ ಅನ್ನ, ಚಿಕನ್‌ ಪಲಾವ್‌...

ಮೈಸೂರು: ಒಂಬತ್ತು ತಿಂಗಳವರೆಗೆ ಹಾಳಾಗದೆ ಇರುವ ಕತ್ತರಿಸಿದ ತರಕಾರಿ ಹಾಗೂ ಹಣ್ಣುಗಳು, ಎರಡು ವರ್ಷಗಳವರೆಗೆ ಕೆಡದೆ ಇರುವ ನೀರು, ಆರು ತಿಂಗಳಿಂದ ಒಂದು ವರ್ಷದವರೆಗೆ ಕೆಡದೆ ಇರುವ ಚಿಕನ್‌, ಮಟನ್‌ ಪಲಾವ್‌, ಚಿಕನ್‌ ರೋಲ್‌, ಮಟನ್‌ ಕ್ರಂಚ್‌ (ಕುರ್‌ಕುರೆ), ಒಂದು ನಿಮಿಷ ದಲ್ಲಿ ಸಿದ್ಧವಾಗುವ ಬಾಸುಮತಿ ಅನ್ನ...

ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು (ಡಿಎಫ್‌ ಆರ್‌ಎಲ್‌) ತಯಾರಿಸಿರುವ ಆಹಾರ ಪದಾರ್ಥಗಳಿವು. 60ರಿಂದ 70 ವಿಧದ ಆಹಾರ ಪದಾರ್ಥಗಳನ್ನು ಸಂಸ್ಥೆಯು ತಯಾರಿಸುತ್ತಿದೆ. ರಾಷ್ಟ್ರೀಯ ತಂತ್ರಜ್ಞಾನ ದಿನದ ಪ್ರಯುಕ್ತ ಶುಕ್ರವಾರ ಈ ವಸ್ತುಗಳ ಪ್ರದರ್ಶನ ಏರ್ಪಡಿಸಿತ್ತು. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು.

‘ದುರ್ಗಮ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗಾಗಿ ಸೋಜಿ ಹಲ್ವಾ, ತರಕಾರಿ ಪಲಾವ್‌, ದಾಲ್‌ ಕರಿ, ಪನ್ನೀರ್‌ ಕರಿ, ಉಪ್ಪಿಟ್ಟು ಸೇರಿದಂತೆ ಅನೇಕ ವಿಧದ ಪದಾರ್ಥಗಳನ್ನು ತಯಾರಿಸಲಾಗಿದೆ. ಇವು ಒಂದು ವರ್ಷದವರೆಗೂ ಕೆಡುವುದಿಲ್ಲ. ಸೇನೆಯ ಪೈಲೆಟ್‌ಗಳ ಬಳಕೆಗೆ 100 ಮಿ.ಲೀ. ನೀರಿನ ಪೊಟ್ಟಣಗಳನ್ನು ತಯಾರಿಸಲಾಗಿದೆ. ಈ ನೀರು 2 ವರ್ಷಗಳವರೆಗೆ ಕೆಡುವುದಿಲ್ಲ. ಸುಮಾರು 8 ವರ್ಷಗಳಿಂದ ಇದನ್ನು ಸೇನೆಗೆ ಪೂರೈಸಲಾಗುತ್ತಿದೆ. ಈ ಹಿಂದೆ ವಿದೇಶಗಳಿಂದ ನೀರನ್ನು ಖರೀದಿಸಲಾಗುತ್ತಿತ್ತು. ಪ್ರತಿ ಪೊಟ್ಟಣಕ್ಕೆ

₹ 40 ವೆಚ್ಚವಾಗುತ್ತಿತ್ತು. ಈಗ ₹4ಕ್ಕೆ ಪೂರೈಕೆ ಮಾಡುತ್ತಿದ್ದೇವೆ’ ಎಂದು ತಾಂತ್ರಿಕ ಅಧಿಕಾರಿ ರಾಜ ಮಾಣಿಕ್ಯಂ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಸಿಲಿಗೆ ಪುಡಿಯಾಗುವ ಕವರ್‌: ಲಡಾಕ್‌, ಸಿಯಾಚಿನ್‌ನಂತಹ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಕವರುಗಳನ್ನು ಬಳಸಿ ಬಿಸಾಡಿದರೆ ಹಾಗೆ ಉಳಿದುಬಿಡುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸೂರ್ಯನ ಶಾಖಕ್ಕೆ ಪುಡಿಯಾಗುವಂತಹ ಕವರುಗಳನ್ನು ತಯಾರಿಸಲಾಗಿದೆ. ಜತೆಗೆ, ಮಣ್ಣಿನಲ್ಲಿ ಕರಗುವ ಕವರುಗಳನ್ನೂ ತಯಾರಿಸಲಾಗಿದೆ ಎಂದು ಹೇಳಿದರು.

ಒಂದೆರಡು ನಿಮಿಷಗಳಲ್ಲಿ ಸಿದ್ಧಪಡಿಸುವಂತಹ ಬಾಸುಮತಿ ಅನ್ನ, ಚಿಕನ್‌ ಪಲಾವ್‌, ಮಟನ್‌ ಪಲಾವ್‌, ಮಟನ್‌ ರೋಲ್‌, ಚಿಕನ್‌ ರೋಲ್‌, ಮೊಸರನ್ನವನ್ನೂ ತಯಾರಿಸಲಾಗಿದೆ. ಬಾಸುಮತಿ ಅಕ್ಕಿಯನ್ನು ಬೇಯಿಸಿ ಅನ್ನ ಮಾಡದ ಬಳಿಕ, ಅದಲ್ಲಿನ ನೀರಿನಾಂಶವನ್ನು ತೆಗೆಯಲಾಗುತ್ತದೆ. ಇದೇ ವಿಧಾನ ಬಳಸಿ, ಕಿತ್ತಳೆ, ಮೂಸಂಬಿ, ಅನಾನಸ್‌, ಮಾವು, ನೇರಳೆ ಪುಡಿಗಳನ್ನು ತಯಾರಿಸಲಾಗಿದೆ ಎಂದು ತಾಂತ್ರಿಕ ಅಧಿಕಾರಿ ಮಧುಕರ್‌ ತಿಳಿಸಿದರು.

ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸಿ, ಕತ್ತರಿಸಿ ಪ್ಯಾಕ್‌ ಮಾಡುವ ತಂತ್ರಜ್ಞಾನವೂ ಲಭ್ಯವಿದೆ. ಈ ತರಕಾರಿಗಳು ಆರು ತಿಂಗಳವರೆಗೆ ತಾಜಾತನದಿಂದ ಕೂಡಿರುತ್ತವೆ. ಮೊಸರು ಮಾಡುವ ಉಪಕರಣವನ್ನೂ ತಯಾರಿಸಲಾಗಿದೆ.

‘ಸೈನಿಕರಿಗೆ ಪೂರೈಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಲು ಪ್ರದರ್ಶನ ಸಹಕಾರಿ. ನಮ್ಮ ಮನೆಗಳಲ್ಲಿ ತಯಾರಿಸುವ ಆಹಾರ ಒಂದೆರಡು ದಿನಗಳಲ್ಲಿ ಕೆಡುತ್ತದೆ. ಆದರೆ, ಇಲ್ಲಿ ತಯಾರಿಸಿರುವ ಪದಾರ್ಥಗಳು ನೂರಾರು ದಿನಗಳವರೆಗೆ ಇರುತ್ತವೆ’ ಎಂದು ಹೊಸಹುಂಡಿ ಗ್ರಾಮದ ವಾಕ್‌ ಭಾರತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ರಘು ಹಾಗೂ ನಿರಂಜನ ಅಚ್ಚರಿ ವ್ಯಕ್ತಪಡಿಸಿದರು.

ಸೈನಿಕರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಡಿಎಫ್‌ಆರ್‌ಎಲ್‌ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹರಿವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಗಳಾದ ಕಾಂಚನಾ ಮತ್ತು ಅರ್ಶಿತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಊಟದ ಬಳಿಕ ಚಮಚ, ತಟ್ಟೆ ತಿನ್ನಿ!

ದುರ್ಗಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌, ಸ್ಟೀಲ್‌ನಂತಹ ವಸ್ತುಗಳನ್ನು ಕೊಂಡೊಯ್ಯಲು ಸೈನಿಕರಿಗೆ ಕಷ್ಟವಾಗುತ್ತದೆ. ಈ ಕಾರಣಕ್ಕೆ ಹಗುರವಾದ ಹಾಗೂ ತಿನ್ನಬಹುದಾದ ಚಮಚ, ತಟ್ಟೆ, ಬಟ್ಟಲು ಹಾಗೂ ಫೋರ್ಕ್‌ಗಳನ್ನು ಡಿಎಫ್‌ಆರ್‌ಎಲ್‌ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಕಾಳುಗಳು ಹಾಗೂ ವಿವಿಧ ಪದಾರ್ಥಗಳನ್ನು ಬಳಸಿ ಇವುಗಳನ್ನು ತಯಾರಿಸಲಾಗಿದೆ. ಸ್ಟ್ರಾಬೆರಿ, ಸಿಹಿ ಹಾಗೂ ಖಾರದ ಸ್ವಾದದಲ್ಲಿ ಲಭ್ಯ.

ಹಾಲಿನ ಗುಣಮಟ್ಟ ಪರೀಕ್ಷಾ ಕಿಟ್‌

ಹಾಲಿಗೆ ಯುರಿಯಾ, ಸೋಪಿನ ಮಿಶ್ರಣ, ಬೋರಿಕ್‌ ಆಮ್ಲ, ಜಲಜನಕ ಪೆರಾಕ್ಸೈಡ್‌ ಮಿಶ್ರಣ ಮಾಡಿ ಕಲಬೆರಕೆ ಮಾಡುತ್ತಿದ್ದಾರೆ. ಇದನ್ನು ಪತ್ತೆ ಮಾಡಬೇಕಾದರೆ ದುಬಾರಿ ವೆಚ್ಚ ವಾಗುತ್ತದೆ. ಹೀಗಾಗಿ, ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ಮಾಡುವ ಕಿಟ್‌ ಅನ್ನು ಕಂಡು ಹಿಡಿಯಲಾಗಿದೆ. ಇದರ ಬೆಲೆ ₹ 900. ಈ ಕಿಟ್‌ನಲ್ಲಿರುವ ಸ್ಟ್ರಿಪ್‌ಗಳನ್ನು ಹಾಲಿಗೆ ಹಾಕಿದ ತಕ್ಷಣ ಅದರ ಬಣ್ಣ ಬದಲಾದರೆ ಹಾಲು ಕಲಬೆರಕೆ ಆಗಿದೆ ಎಂದರ್ಥ.

ತಂತ್ರಜ್ಞಾನ ಹಸ್ತಾಂತರ

ಹಣ್ಣುಗಳ ಸಂರಕ್ಷಣೆಗೆ ಸಂಬಂಧಿಸಿದ ‘ಹರ್ಡಲ್‌’ ತಂತ್ರಜ್ಞಾನವನ್ನು ಡಿಎಫ್‌ಆರ್‌ಎಲ್‌ ಹೈದರಾಬಾದ್‌ನ ನೇಚರ್ಸ್‌ ಕೇನ್‌ ಪ್ರೈವೇಟ್‌ ಲಿಮಿಟೆಡ್‌ಗೆ ಹಸ್ತಾಂತರಿಸಿತು. ಡಿಎಫ್‌ಆರ್‌ಎಲ್‌ ನಿರ್ದೇಶಕ ಡಾ.ಆರ್‌.ಕೆ.ಶರ್ಮಾ, ಸಹಾಯಕ ನಿರ್ದೇಶಕ ಡಾ.ಜಿ.ಕೆ.ಶರ್ಮಾ, ತಂತ್ರಜ್ಞಾನ ವರ್ಗಾವಣೆ ವಿಭಾಗದ ಮುಖ್ಯಸ್ಥ ಡಾ.ಎ.ಡಿ.ಸೆಮ್ವಾಲ್‌ ಹಾಗೂ ನೇಚರ್ಸ್‌ ಕೇನ್‌ ಕಂಪನಿಯ ನಿರ್ದೇಶಕ ಪ್ರೇಮ್‌ಚಂದ್‌ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.