ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ‘ದೇಸಿ’ ಫ್ಯಾಷನ್

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ನಿಮ್ಮ ಮತ್ತು ದೇಸಿಯ ಒಡನಾಟ ಹೇಗೆ ಶುರುವಾಯಿತು?

’ದೇಸಿ’ ಮತ್ತು ನನ್ನ ಒಡನಾಟ ಶುರುವಾಗಿದ್ದು ಹತ್ತು ವರ್ಷಗಳ ಹಿಂದೆ. ಮುಂಬೈಗೆ ಹೋಗಲು ಮಧ್ಯದಲ್ಲಿ ಸ್ವಲ್ಪ ಬಿಡುವು ಪಡೆದುಕೊಂಡೆ. ಆರಂಭದ ಎರಡು ವರ್ಷಗಳಲ್ಲಿ ‘ದೇಸಿ’ ಜತೆ ನಿರಂತರವಾಗಿ ತೊಡಗಿಕೊಂಡು ‘ಚರಕ’ದೊಂದಿಗೂ ಬಾಂಧವ್ಯ ಬೆಸೆಯಿತು.

ದೇಸಿ ವಿನ್ಯಾಸದ ಬಗ್ಗೆ ಹೇಳಿ

ಯಾವುದು ನಮಗೆ ಎಲ್ಲದಕ್ಕಿಂತ ಸೂಕ್ತವಾಗಿರುತ್ತದೋ ಅದುವೇ ಫ್ಯಾಷನ್. ಮೊದಲನೆಯದಾಗಿ ನಾವು ಯಾರಿಗಾಗಿ ಕೆಲಸ ಮಾಡುತ್ತೇವೆ. ಅದರ ಹಿಂದಿರುವ ಬದ್ಧತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರವೇ ನಾವು ಸೂಕ್ತವಾದ ರೀತಿಯಲ್ಲಿ ವಸ್ತ್ರವಿನ್ಯಾಸ ಮಾಡಬಹುದು. ‘ದೇಸಿ’ ಅಂದರೆ ಆಡಂಬರ ಅಲ್ಲ. ಅದೊಂದು ಸಹಜ ಗತಿಯ ಜೀವನಶೈಲಿ. ಅದಕ್ಕೆ ತಕ್ಕಂತೆ ವಿನ್ಯಾಸ ಮಾಡುವತ್ತ ಯೋಚಿಸುತ್ತೇನೆ. ಸ್ಥಳೀಯವಾಗಿ ಯಾವ ಸಂಪನ್ಮೂಲ ದೊರೆಯುತ್ತದೆಯೋ, ಅಲ್ಲಿನ ಕುಶಲಕರ್ಮಿಗಳು ಮತ್ತು ಆಯಾ ಕಾಲಕ್ಕೆ ಪ್ರಸ್ತುತವಾಗುವ ಸಂಗತಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇನೆ. ವಿನ್ಯಾಸ ಅನ್ನೋದು ಎಲ್ಲಾ ಹಂತಗಳಲ್ಲೂ ಆಗುವ ಪ್ರಕ್ರಿಯೆ. ಅದು ಅಂತಿಮ ಹಂತದಲ್ಲಿ ತಯಾರಾಗುವಂಥದ್ದಲ್ಲ.

ದೇಸಿ ಬಟ್ಟೆಗಳ ವಿಶೇಷ ಗುಣವೇನು?

‘ಚರಕ’ ಮತ್ತು ‘ದೇಸಿ’ಯಲ್ಲಿನ ಬಟ್ಟೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಬಳಸುವುದಿಲ್ಲ. ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸುತ್ತೇವೆ. ಒಂದು ಪರಿಸರದ ಕಾಳಜಿ  ಮತ್ತೊಂದು ಆರೋಗ್ಯದ ಹಿತದೃಷ್ಟಿಯಿಂದ. ಬಟ್ಟೆ ಅನ್ನೋದು ನಮ್ಮ ಎರಡನೇ ಚರ್ಮವಿದ್ದಂತೆ. ಅದು ನಿಮ್ಮ ಚರ್ಮದಷ್ಟೇ ಆರೋಗ್ಯಕರವಾಗಿರಬೇಕು. ಅದು ನೈಸರ್ಗಿಕವಾಗಿ ಇದ್ದಷ್ಟೂ ಒಳ್ಳೆಯದು. ಪ್ರಕೃತಿಗೂ ಹತ್ತಿರ, ಮನಸಿಗೂ ಹಿತವೆನಿಸುವಂಥ ಉಡುಪುಗಳನ್ನು ತಯಾರಿಸುವುದೇ ನಮ್ಮ ಉದ್ದೇಶ. ಮುಖ್ಯವಾಗಿ ಗ್ರಾಹಕರಿಗೆ ಹೊರೆಯಾಗದಂತೆ ದರವನ್ನು ನಿಗದಿಪಡಿಸುತ್ತೇವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೈಮಗ್ಗದ ಥರೇವಾರಿ ವಿನ್ಯಾಸದ ಉಡುಪುಗಳು ನಮ್ಮಲ್ಲಿ ದೊರೆಯುತ್ತವೆ.

ಖಾದಿ ಬಟ್ಟೆಗಳಲ್ಲಿ ಒಂದೇ ರೀತಿಯ ಬಣ್ಣಗಳಿರುತ್ತವೆ ಎನ್ನುತ್ತಾರಲ್ಲ...

ನೈಸರ್ಗಿಕ ಬಣ್ಣಗಳಲ್ಲಿ ಗಾಢ ಬಣ್ಣಗಳಿರುವುದಿಲ್ಲ ಅನ್ನೋದು ಸುಳ್ಳು. ಇಲ್ಲಿಯೂ ಕಡು ಗುಲಾಬಿ, ಕೆಂಪು, ದಟ್ಟ ಹಸಿರು ಬಣ್ಣಗಳಿವೆ. ಆದರೆ, ಅವುಗಳನ್ನು ನೈಸರ್ಗಿಕವಾಗಿ ತಯಾರಿಸಲು ತಗುಲುವ ವೆಚ್ಚ ಹೆಚ್ಚು. ನಮ್ಮಲ್ಲಿ ಇಪ್ಪತ್ತು ರೀತಿಯ ವರ್ಣಗಳಿವೆ. ಇವನ್ನು ಪರಿಸರ ಮತ್ತು ಗ್ರಾಹಕರ ಚರ್ಮದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸುತ್ತೇವೆ. ಈ ವಿಚಾರದಲ್ಲಿ ನಾವು ಗ್ರಾಹಕರಿಗೆ ತಿಳಿವಳಿಕೆ ನೀಡುತ್ತಿದ್ದೇವೆ.

‌ಟ್ರೆಂಡ್‌ ಮತ್ತು ಋತುಮಾನಕ್ಕನುಗಣವಾಗಿ ವಿನ್ಯಾಸ ಮಾಡುತ್ತೀರಾ?

ನಾವು ಋತುಮಾನಕ್ಕನುಗುಣವಾಗಿ ಎಂದಿಗೂ ವಸ್ತ್ರ ವಿನ್ಯಾಸ ಮಾಡುವುದಿಲ್ಲ. ಆದರೆ, ನಮ್ಮ ಉತ್ಪನ್ನಗಳು ವರ್ಷದುದ್ದಕ್ಕೂ ಬಳಸಲು ಯೋಗ್ಯವಾಗಿವೆ. ಚಳಿ, ಮಳೆ, ಬಿಸಿಲು ಹೀಗೆ ಮೂರು ಋತುಗಳಿಗೆ ಅನುಗುಣವಾಗಿಯೇ ‘ದೇಸಿ’ ಬಟ್ಟೆಗಳನ್ನು ಧರಿಸಬಹುದು. ನಮ್ಮನ್ನು ನಾವು ಸ್ಲೋ ಫ್ಯಾಷನ್ ಅಂದರೆ ನಿಧಾನಗತಿಯ ಫ್ಯಾಷನ್ ಅಂತಲೇ ಕರೆದುಕೊಳ್ಳಲು ಇಷ್ಟಪಡ್ತೀವಿ. ಈ ನಿಧಾನಗತಿ ಸುಸ್ಥಿರ ಬದುಕಿಗಾಗಿ ಎಂಬದು ನೆನಪಿರಲಿ. ನಮ್ಮ ಬಟ್ಟೆಗಳು ಎಂದಿಗೂ ಔಟ್ ಆಫ್ ಸ್ಟೈಲ್ ಎಂದಿಗೂ ಆಗಲ್ಲ.

ನಿಮ್ಮ ವಿನ್ಯಾಸ ಯುವಜನರ ಅಭಿರುಚಿಗೆ ಪೂರಕವಾಗಿವೆಯೇ?

ಖಂಡಿತಾ. ಯುವಜನರು ‘ದೇಸಿ’ಯತ್ತ ಈಗ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವೈಯಕ್ತಿಕವಾಗಿ ಪ್ರಜ್ಞಾಪೂರ್ವಕವಾಗಿ ದೇಸಿ ಉಡುಗೆಗಳನ್ನು ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ. ನಮ್ಮಷ್ಟು ಕಡಿಮೆ ದರದಲ್ಲಿ ಇತರರು ಕೈಮಗ್ಗದ ಉತ್ಪನ್ನ ಗಳನ್ನು ಮಾರುವುದಿಲ್ಲ.

ದೇಸಿ ಅಂಗಡಿಯ ಹೊಸ ಉತ್ಪನ್ನಗಳ ಬಗ್ಗೆ ಹೇಳಿ

‘ದೇಸಿ’ ವತಿಯಿಂದ ಈಗ ಗೃಹಾಲಂಕಾರ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಬ್ಲಾಕ್ ಪ್ರಿಂಟಿಂಗ್ ಬಳಸಲಾಗಿದೆ. ಸಿಂಗಲ್ ಬೆಡ್‌ಶೀಟ್, ಸಣ್ಣ ಕೌದಿ, ಟೇಬಲ್ ರನ್ನರ್ಸ್‌, ಕುಷನ್ ಕವರ್ ಬಿಡುಗಡೆ ಮಾಡಿದ್ದೇವೆ. ಸದ್ಯಕ್ಕೆ ಇದನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ.

ವಿಳಾಸ: ದೇಸಿ ಅಂಗಡಿ, ಸೌತ್ ಎಂಡ್ ಸರ್ಕಲ್, ಜಯನಗರ

ದೂರವಾಣಿ: 080-2657 6669

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT