ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳುಪ್ರಳಯಕ್ಕೆ ಉತ್ತರ ಭಾರತ ತತ್ತರ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ರಾಜಕೀಯ ಮೈದಾನದಲ್ಲಿ ಕಳೆದೆರಡು ವಾರ ಅಷ್ಟೊಂದು ಬಗೆಯ ಗಾಳಿ, ಮಿನಿ ಸುಂಟರಗಾಳಿ, ಕೊಳೆಗಾಳಿ, ದೂಳು, ಕೆಸರು, ಷಂಡಮಾರುತ ಬೀಸುತ್ತಿದ್ದಾಗ ಅತ್ತ ಇಡೀ ಉತ್ತರ ಭಾರತ ಅಸಲೀ ಬಿರುಗಾಳಿಗೆ ಸಿಕ್ಕು ತತ್ತರಿಸುತ್ತಿತ್ತು. ರಾಜಸ್ತಾನದಿಂದ ಹಿಡಿದು ಹರ‍್ಯಾಣಾ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರದವರೆಗೂ ಹಠಾತ್ ಸುಂಟರಗಾಳಿ, ದೂಳುಗಾಳಿ, ಜಡಿಗಾಳಿ, ಬಿರುಮಳೆ, ಜಂಝಾವಾತಗಳಿಂದ ಜನಸ್ತೋಮ ಜನರು ತತ್ತರಿಸುತ್ತಿದ್ದರು. ಇತ್ತ ದಿನಕ್ಕೊಂದು ರೂಪ ತಳೆಯುತ್ತಿದ್ದ ರಾಜಕೀಯ ಪಲ್ಲಟಗಳನ್ನು ಅರ್ಥೈಸಲು ಮತವಿಶ್ಲೇಷಕರು ಪರದಾಡಿದ ಹಾಗೇ ಅತ್ತ ಉತ್ತರದಲ್ಲಿ ದಿನದಿನಕ್ಕೆ ಎದ್ದೆದ್ದು ಬೀಸುತ್ತಿದ್ದ ಕೆಂದೂಳಿಗೆ ಉತ್ತರ ಸಿಗದೆ ಹವಾಮಾನ ತಜ್ಞರು ಪರದಾಡುತ್ತಿದ್ದರು.

ಉತ್ತರ ಭಾರತಕ್ಕೆ ಹವಾಮಾನ ವೈಪರೀತ್ಯ ಹೊಸದೇನಲ್ಲ. ಆದರೆ ಈ ಬಾರಿ ಬೀಸಿ ಬಂದ ದೂಳುಗಾಳಿಯನ್ನು ಅಲ್ಲಿನ ಯುವಜನರು ಹಿಂದೆಂದೂ ಅನುಭವಿಸಿರಲಿಲ್ಲ. ಕಣ್ಣು ಹಾಯಿಸುವಷ್ಟು ದೂರವೂ ಬರೀ ದೂಳು, ಮರಳು. ಕತ್ತೆತ್ತಿ ನೋಡಿದಷ್ಟು ಎತ್ತರಕ್ಕೂ ದೂಳು. ರಸ್ತೆಯಲ್ಲಿ ಕಾರು ಲಾರಿಗಳು ಹಗಲು ಹೊತ್ತಿನಲ್ಲೂ ಹೆಡ್‌ಲೈಟ್ ಹಾಕಿ ಓಡಿಸುವಂಥ ಪರಿಸ್ಥಿತಿ. ಜಡಿಮಳೆಯನ್ನೇ ಹೋಲುವ ಮರಳಿನ ಒಣಮಳೆಯ ಚಟಪಟ ಸದ್ದು. ಹಲವು ಕಡೆ ರಸ್ತೆ ಸಂಚಾರ, ಕೆಲವು ಕಡೆ ವಿಮಾನಗಳ ಹಾರಾಟ ಸ್ಥಗಿತ. ಸೂರುಗಳನ್ನು ಕಿತ್ತೆಸೆದು, ಗಿಡಮರಗಳನ್ನು ಬುಡಮೇಲು ಮಾಡಿ, ಗುಡಿಸಲುಗಳನ್ನು ಗುಡಿಸಿ ಹಾಕಿ, ಗುಡಿಸಿಟ್ಟ ತಿಪ್ಪೆರಾಶಿಗಳನ್ನು ಎತ್ತಿ ಊರಿಗೆಲ್ಲ ಎರಚಿದ ಕಂದುಬಣ್ಣದ ಚಂಡಮಾರಿ. ಇತ್ತ ಮೋದಿಯವರು ಚುನಾವಣಾ ಭಾಷಣದಲ್ಲಿ ವರಕವಿ ಬೇಂದ್ರೆಯವರ ‘ಕುರುಡು ಕಾಂಚಾಣ ಕುಣಿಯುತಲಿತ್ತು’ ಎಂಬ ಪದ್ಯವನ್ನು ತಪ್ಪುತಪ್ಪಾಗಿ ಓದುತ್ತಿದ್ದಾಗ ಅತ್ತ ಉತ್ತರದಲ್ಲಿ ಅದೇ ಕವನದ ಮುಂದಿನ ಭಾಗವನ್ನು ನೆನಪಿಸುವಂತೆ ‘ಬಡವನ ಒಡಲಿನ ಬಡಬಾನಲದಲ್ಲಿ ದೂಳಿನ ಭಂಡಾರ ಹಣೆಯೊಳಗಿಟ್ಟು’ ಜನಸ್ತೋಮವನ್ನು ಅಕ್ಷರಶಃ ಕುರುಡಾಗಿಸಿ ಮರಳುಮಣ್ಣೇ ಮೇಲೆದ್ದು ಕುಣಿಯುತ್ತಿತ್ತು. ಬಿರುಗಾಳಿಗೆ ಬರೇಲಿಯಲ್ಲಿ ಮಸೀದಿಯೇ ಕುಸಿದಿದ್ದರಿಂದ ಆಸರೆಗಾಗಿ ನಿಂತಿದ್ದವರಲ್ಲಿ ಎಂಟು ಜನರು ಮೃತರಾದರು. ಜಾಹೀರಾತು ಫಲಕಗಳು ಬಿದ್ದು ಸತ್ತವರೇನು, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಸೂರಿನ ತಗಡುಗಳು ಬಿದ್ದು ಸತ್ತವರೇನು, ಅಂತೂ ಐದು ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಜನರ ಪ್ರಾಣ ತೆಗೆದು 530ಕ್ಕೂ ಹೆಚ್ಚು ಜನರ ಕೈಕಾಲು ಮುರಿದು, ಎಂಟು ನೂರಕ್ಕೂ ಹೆಚ್ಚು ದನಕರುಗಳನ್ನು ಕೊಂದು, 1800 ಮನೆಗಳನ್ನು ಬೀಳಿಸಿ, 20 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ನೆಲಸಮ ಮಾಡಿ, ಲಕ್ಷೋಪಲಕ್ಷ ಜನರ ಮುಖಗಳಿಗೆ ಮುಖವಾಡ ತೊಡಿಸಿದ ಈ ‘ಇಂಥ ಭೀಕರ ಚಂಡಮಾರುತವನ್ನು ನಾವು ಹಿಂದೆಂದೂ ನೋಡಿರಲಿಲ್ಲ’ ಎಂದು ಪವನವಿಜ್ಞಾನಿಗಳೇ ಹೇಳುವಂತಾಯಿತು.

ಬೇರೆ ದೇಶಗಳಲ್ಲಿ ಮರುಭೂಮಿಯ ಅಂಚಿನ ಸುಡುನೆಲದಿಂದ ಪ್ರಚಂಡ ದೂಳುಗಾಳಿ ಆಗೊಮ್ಮೆ ಈಗೊಮ್ಮೆ ಏಳುತ್ತಿರುತ್ತದೆ. ಅಮೆರಿಕದ ಟೆಕ್ಸಸ್, ಚೀನಾದ ಪಕ್ಕದ ಮೊಂಗೋಲಿಯಾ, ಆಫ್ರಿಕದ ಕಲಹಾರಿ, ದಕ್ಷಿಣ ಅಮೆರಿಕದ ಅಟಕಾಮಾ ಇಲ್ಲೆಲ್ಲ ದೂಳು ಪ್ರಳಯ ಸಂಭವಿಸಿದರೂ ಜನಸಂಖ್ಯೆ ಕಮ್ಮಿ ಇರುವುದರಿಂದ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ‘ಹತ್ತು ಸಾವಿರ ವರ್ಷಗಳಿಂದ ಮಲಗಿಯೇ ಇದ್ದ ಕಲಹಾರಿಯ ಮರಳ ಹಾಸಿಗೆಯನ್ನು ನಿಸರ್ಗ ಈ ಬಾರಿ ಮೇಲೆತ್ತಿ ಕೊಡವಿತು’ ಎಂದು 2014ರ ಬೇಸಿಗೆಯಲ್ಲಿ ಐರೋಪ್ಯ ಮಾಧ್ಯಮಗಳು ವರ್ಣಿಸಿದ್ದವು. ಮಧ್ಯಪ್ರಾಚ್ಯದ ಸಿರಿಯಾ, ಲೆಬನಾನ್, ಟರ್ಕಿ, ಸೈಪ್ರಸ್‌ ಗಳಲ್ಲಿ ದೂಳು ಸುಂಟರಗಾಳಿ ಎದ್ದು ಮನುಷ್ಯನ ಆಸ್ತಿಗಳನ್ನೆಲ್ಲ ಆಕಾಶಕ್ಕೆ ತೂರಿ, ವಿಮಾನಗಳನ್ನು ಕೆಳಕ್ಕಿಳಿಸಿ ತಾನೇ ಯುದ್ಧವಿರಾಮ ಘೋಷಿಸಿಬಿಡುತ್ತದೆ. ಬಾಂಬ್ ದಾಳಿ ನಿಂತಿತೆಂದು ನಿಟ್ಟುಸಿರು ಬಿಡಲೂ ಅವಕಾಶ ಕೊಡದೆ ದೂಳುಮಾರಿ ಜನಸಾಮಾನ್ಯರ ಕಣ್ಣು, ಮೂಗು, ಬಾಯೊಳಗೆ ನುಗ್ಗುತ್ತದೆ.

ಮನುಷ್ಯ ಚರಿತ್ರೆಯ ಅತ್ಯಂತ ಭೀಕರ ದೂಳುಮಾರುತ 1935ರ ಏಪ್ರಿಲ್ 14ರಂದು ಅಮೆರಿಕದ ಟೆಕ್ಸಾಸ್ ಪ್ರಾಂತದಲ್ಲಿ ದಾಖಲಾಗಿತ್ತು. ಅಲ್ಲಿನ ಕೃಷಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವಷ್ಟು ಅದು ಉಗ್ರವಾಗಿತ್ತು. ದೂರದ ಕ್ಷಿತಿಜದಲ್ಲಿ ಆಕಾಶವೇ ಮಗುಚಿಕೊಂಡಂತೆ ಕಾಣತೊಡಗಿತ್ತು. ಸುರುಳಿ ಬಿಚ್ಚುತ್ತಿದ್ದ ಹಾಸಿಗೆಯಂತೆ ಕರೀ ಭೀಕರ ಮೇಘರಾಶಿ ನೆಲದ ಮೇಲೆ ಉರುಳುತ್ತ ನಮ್ಮೆಡೆಗೆ ಬರತೊಡಗಿತ್ತು.. ಎಂದು ಕಣ್ಣಾರೆ ನೋಡಿದವರು ಬರೆದಿಟ್ಟಿದ್ದಾರೆ. ಹಿತ್ತಿಲಲ್ಲಿದ್ದವರು ಮನೆಯ ಬಾಗಿಲನ್ನು ಹುಡುಕುತ್ತ ತಡವುತ್ತ ಬರುವಂತಾಯಿತು. ವಾರವಿಡೀ ನಾವು ದೂಳನ್ನೇ ಕುಡಿದೆವು, ದೂಳನ್ನೇ ತಿಂದೆವು, ದೂಳನ್ನೇ ಹಾಸಿ ಹೊದ್ದೆವು ಎಂದು ಏವಿಸ್ ಕಾರ್ಲ್‌ಸನ್ ಎಂಬಾತ ದಾಖಲಿಸಿದ್ದಾನೆ. ಆ ಪ್ರಚಂಡ ಮಾರುತವನ್ನು ದೂರದಿಂದಲೇ ಗ್ರಹಿಸಿ ಕಕ್ಕಾಬಿಕ್ಕಿಯಾದ ಪಕ್ಷಿಗಳು ಶಕ್ತಿಮೀರಿ ಹಾರಿ ಗೂಡು ಸೇರಲು ಯತ್ನಿಸಿ, ನೆಲಕ್ಕೆ ಅಪ್ಪಳಿಸಿದವು. ಪೊದೆಗಳಲ್ಲಿದ್ದ ಮೊಲಗಳು ಸಂಭ್ರಮಿಸುವ ಬದಲು ಅವೂ ಅರೆಜೀವವಾಗಿ ಬಿದ್ದಿದ್ದರಿಂದ ನೆಲವೆಲ್ಲ ನರಕವಾಯಿತು ಎಂದು ಕನ್ಸಾಸ್‌ನ ಗೋಧಿ ಬೆಳೆಗಾರನೊಬ್ಬ ದಾಖಲಿಸಿದ್ದಾನೆ. ಮೊದಲೇ ಮರುಭೂಮಿ ಸದೃಶ ಆ ನಾಡಿನಲ್ಲಿ ಇದ್ದಬದ್ದ ಹಸುರನ್ನೆಲ್ಲ ಕುರಿಗಾರರು ಮತ್ತು ದನಗಾಹಿಗಳು ಖಾಲಿ ಮಾಡಿದ್ದರು. ಖುರಪುಟಗಳಿಂದ ನೆಲವೆಲ್ಲ ಗಾರೆದ್ದು, ಸಿಮೆಂಟಿನ ಹಕ್ಕಳೆಗಳಾಗಿ ಸಣ್ಣಗಾಳಿಗೂ ಕಿತ್ತೆದ್ದು ಕುಪ್ಪಳಿಸುವಂತಾಗಿದ್ದವು.  1930ರಲ್ಲಿ ಹತ್ತು ವರ್ಷಗಳ ಕಾಲ ಪದೇ ಪದೇ ಇಂಥ ದೂಳು ಮಾರುತ ಬರುತ್ತಿದ್ದ ಕಾರಣ ಆ ದಶಕಕ್ಕೆ ಡರ್ಟಿ ಥರ್ಟಿ ಎಂತಲೇ ಅಡ್ಡ ಹೆಸರು ಬಿದ್ದಿದೆ. ಆಗಿನ ಕರಾಳ ಅನುಭವಗಳು ಜಾನಪದ ಕತೆಗಳಾಗಿ, ಗ್ರಾಮೀಣ ಹಾಡು ಹಸೆ, ಚಿತ್ರ, ವರದಿಗಳಲ್ಲಿ ಅಚ್ಚೊತ್ತಿವೆ. ಟೆಕ್ಸಸನ್ನು ಅಮೆರಿಕದ ಡಸ್ಟ್‌ಬೌಲ್ (ದೂಳು ಬೋಗುಣಿ) ಎಂತಲೇ ಇಂದಿಗೂ ಹೇಳುತ್ತಾರೆ. ಆದರೆ ಅದಕ್ಕಿಂತ ಭೀಕರ ದೂಳುಮಾರಿಗಳು ಮಧ್ಯಪೂರ್ವ ದೇಶಗಳಲ್ಲಿ ಈಗ ಅಬ್ಬರಿಸುತ್ತಿವೆ.

ಹೀಗಾಗಲು ಕಾರಣವೇನು? ಮೂರು ಕಾರಣಗಳು ಒಟ್ಟಿಗೆ ಸೇರಿದಾಗ ಇಂಥ ನಿಸರ್ಗ ಪ್ರಕೋಪ ಸಂಭವಿಸುತ್ತದೆ. 1. ನೆಲದ ತಾಪಮಾನ ತೀರ ಜಾಸ್ತಿಯಾಗಿರಬೇಕು. 2. ನೆಲದಲ್ಲಿ ದೂಳು ದಟ್ಟಣಿಸಿರಬೇಕು ಮತ್ತು 3. ದೂರದಲ್ಲಿ ದಟ್ಟ ಮೋಡ ಕವಿದಿರಬೇಕು. ಕಳೆದೆರಡು ವಾರ ನಮ್ಮ ಗಡಿಯಾಚೆ ಪಾಕಿಸ್ತಾನದ ನವಾಬ್‌ಶಾ ಪಟ್ಟಣದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ರಾಜಸ್ತಾನದಲ್ಲಿ ದೂಳಂತೂ ಹೇರಳವಾಗಿತ್ತು. ಇತ್ತ ಹರ‍್ಯಾಣಾ, ಉತ್ತರಾಖಂಡ, ದಿಲ್ಲಿಯಲ್ಲಿ ಮೋಡ ಕವಿದಿತ್ತು. ಇವು ಎದ್ದು ಕಾಣುವ ಕಾರಣಗಳಷ್ಟೆ. ಇದರ ಜೊತೆಗೆ ಸಮೀಕ್ಷೆಗೆ ಸಿಗದ ಅದೆಷ್ಟೊ ಕಾರಣಗಳೂ ಸೇರಿಕೊಳ್ಳುತ್ತವೆ: ಸಸ್ಯಗಳ ಕಣ್ಮರೆ, ಕೆರೆಕಟ್ಟೆಗಳ ಒಣಪಾತ್ರ, ಡೀಸೆಲ್ ಹೊಗೆಭರಿತ ಹವಾಮಾನ ಇತ್ಯಾದಿಗಳೆಲ್ಲ ಸೇರಿದಾಗ ಸಾಮಾನ್ಯ ಬಿರುಗಾಳಿಯೂ ಮೇಘನಾದ, ಘಟೋತ್ಕಚ.

ಮೇಘಸ್ಫೋಟ, ಅವಲಾಂಚ್, ಬ್ಲಿಝರ್ಡ್ ಮುಂತಾದ ಪದಗಳನ್ನು ಈಚೆಗೆ ಕಲಿತ ನಮ್ಮ ಪವನ ವಿಜ್ಞಾನಿಗಳು ಇದೀಗ ಡೌನ್‌ಬರ್ಸ್ಟ್ (ಕೆಳಸ್ಫೋಟ), ಮೈಕ್ರೊಬರ್ಸ್ಟ್ (ಕಿರುಸ್ಫೋಟ), ಹಬೂಬ್, ಬ್ರೌನ್‌ರೇನ್ ಮುಂತಾದ ಅಪರಿಚಿತ ಪದಗಳನ್ನು ಬಳಸತೊಡಗಿದ್ದಾರೆ. ಹಬೂಬ್ ಎಂದರೆ ಪರ್ವತಗಾತ್ರದ ಕೆಂದೂಳಿನ ಮೇಘರಾಶಿ ನೆಲವನ್ನು ಹೊಸೆಯುತ್ತ ಸಾಗಿ ಬರುತ್ತದೆ. ಡೌನ್‌ಬರ್ಸ್ಟ್ (ಕೆಳಸ್ಫೋಟ) ಅಂದರೆ ಎತ್ತರದಲ್ಲಿದ್ದ ಮೇಘರಾಶಿ ಕಾದ ನೆಲಕ್ಕೆ ಹಠಾತ್ ಧುಮುಕಿ, ವೃತ್ತಾಕಾರದ ಸುರುಳಿಗಾಳಿಯನ್ನು ಸೃಷ್ಟಿಸುತ್ತದೆ. ದಿಲ್ಲಿಯ ರಾಜಕೀಯ ಧುರೀಣರು ಈಚೆಗೆ ನಮ್ಮ ಜಿಲ್ಲಾಕೇಂದ್ರಗಳಿಗೆ ಬಂದಿಳಿದು ಗರ್ಜಿಸಿ, ಸುತ್ತೆಲ್ಲ ಗಾಳಿ ಎಬ್ಬಿಸಿ ಹೋದಂತಲ್ಲ; ವಾಸ್ತವ ನಿಜಕ್ಕೂ ಭೀಕರವಾಗಿರುತ್ತದೆ. ಕೆಳಸ್ಫೋಟವಾದಾಗ ಮೊದಲು ದೂಳು ಮೇಲ್ಮುಖ ಎದ್ದು ತನ್ನ ಮೇಲೆಯೇ ಮಗುಚಿ ಕೊಳ್ಳುತ್ತ ಗಂಟೆಗೆ 120 ಕಿಮೀ ವೇಗದಲ್ಲಿ ಸುತ್ತ ನೂರಾರು ಕಿಲೊಮೀಟರ್‌ವರೆಗೆ ಸಾಗುತ್ತದೆ. ಅದರ ಬೆನ್ನಹಿಂದೆಯೇ ಗುಡುಗು ಸಿಡಿಲಿನ ಆಲಿಕಲ್ಲು ಮಳೆ ಸುರಿಯುತ್ತ, ಅದಾಗಲೇ ನೆಲಕ್ಕುರುಳಿದ ಗಿಡಮರ, ಮನೆಮಠಗಳ ಮೇಲೆ ಕೆಸರಿನ ಹಾಸು ಹೊದೆಸಿ ಹೋಗುತ್ತದೆ. ಕೆಳಸ್ಫೋಟ ನೂರಾರು ಚದರ ಕಿಮೀ ವಿಸ್ತೀರ್ಣದ್ದಾದರೆ ಕಿರುಸ್ಫೋಟಗಳು ಹತ್ತಾರು ಚಕಿಮೀ ಅಗಲಕ್ಕೆ ಅಪ್ಪಳಿಸುತ್ತದೆ.

ಡರ್ಟಿ ಥರ್ಟಿಗೆ ಹೋಲಿಸಿದರೆ ಆಧುನಿಕ ಜಗತ್ತಿನ ಕತೆ ಇನ್ನೂ ಭೀಕರವಾಗಿರುತ್ತದೆ; ಏಕೆಂದರೆ ಎಲ್ಲೆಲ್ಲೊ ಅವಿತಿಟ್ಟ ನಂಜು ಮಾಲಿನ್ಯ ಮತ್ತು ತಿಪ್ಪೆಗುಡ್ಡೆಗಳೆಲ್ಲ ಕಿತ್ತೆದ್ದು ಗಾಳಿಗೆ ಸೇರುತ್ತವೆ. ಪೆಟ್ರೋಲ್ ಗೋದಾಮುಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಘರ್ಷಣೆಯಿಂದ ಸ್ಫೋಟಿಸುತ್ತವೆ. ಗರಾಜು, ಗೋದಾಮುಗಳಲ್ಲಿದ್ದ ಲೋಹದ ಸಾಮಗ್ರಿಗಳು, ಸೂರಿನ ಹೆಂಚುಗಳು, ರಸ್ತೆಪಕ್ಕದ ನಾನಾ ಬಗೆಯ ಕೇಬಲ್‌ಗಳು, ಕಂಬಗಳು ಕೂಡ ಬಾಣ ಭರ್ಜಿಗಳಾಗುತ್ತವೆ. ಎಷ್ಟೊಂದು ಬಗೆಯ ಕಿರುಕಣಗಳು ಶ್ವಾಸಕೋಶದೊಳಗೆ ಹೊಕ್ಕು ಕೂರುತ್ತವೆ. ಮರುಭೂಮಿಯ ಒಂಟೆಗಳೇನೊ ಧೂಳಿನ ಮಹಾಪೂರ ಬಂದಾಗ ತಮ್ಮ ಹೊರಳೆಗಳನ್ನೂ ಪ್ರತಿ ಕಣ್ಣಿನ ಎರಡೆರಡು ರೆಪ್ಪೆಗಳನ್ನೂ ಭದ್ರವಾಗಿ ಮುಚ್ಚಿಕೊಂಡು ತಲೆತಗ್ಗಿಸಿ ಕೂರುತ್ತವೆ. ದಿನಗಟ್ಟಲೆ ಮರಳು ಮಳೆಯಲ್ಲಿ ಕೂತು ತಮ್ಮ ಡುಬ್ಬದ ನೀರನ್ನೇ ಹೀರಿಕೊಳ್ಳುತ್ತವೆ. ಆಧುನಿಕ ಮನುಷ್ಯನೊ ಮೊಬೈಲ್ ಟವರ್ ಬಿದ್ದರೆ, ವಿದ್ಯುತ್ ಕೈಕೊಟ್ಟರೆ, ಪೈಪ್ ತುಂಡಾಗಿ ನೀರು, ಅಡುಗೆ ಅನಿಲ ಬಾರದಿದ್ದರೆ, ಪೆಟ್ರೋಲ್ ಬಂಕ್ ಮುಚ್ಚಿದ್ದರೆ, ಎಟಿಮ್ ಬಂದಾಗಿದ್ದರೆ, ಆಟೊ ಸಿಗದಿದ್ದರೆ ಕಂಗೆಡುತ್ತಾನೆ. ಇಷ್ಟೆಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟವರಿಗೆ ಅವೆಲ್ಲ ಏಕಕಾಲಕ್ಕೆ ಕೈಕೊಟ್ಟಾಗ ಹೇಗೆ ಏಗಬೇಕೆಂಬುದನ್ನು ಯಾರೂ ಕಲಿಸಿಕೊಟ್ಟಿಲ್ಲ.

ಅಭಿವೃದ್ಧಿಯ ಅಮಲೇರಿದ ಚೀನಾದಲ್ಲಿ ಹೊಂಜಿನ ಮುಸುಕಿನ ಜೊತೆಗೆ ಪದೇ ಪದೇ ಹಬೂಬ್‌ಗಳು, ಡೌನ್‌ಬರ್ಸ್ಟ್‌ಗಳು ಸಂಭವಿಸುತ್ತ, ಮತ್ತೆ ಮತ್ತೆ ತುರ್ತುಸ್ಥಿತಿಗೆ ಕಾರಣವಾಗುತ್ತ ಸಂಚಾರ, ಉದ್ಯಮ, ಕಲಿಕೆಯನ್ನು ಸ್ಥಗಿತ ಗೊಳಿಸುತ್ತ ಪ್ರಜೆಗಳನ್ನು ಗೃಹಬಂಧನಕ್ಕೆ ಸಿಲುಕಿಸುತ್ತಿ ರುತ್ತವೆ.  2015ರಲ್ಲಿ ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ಅತಿ ಮಾಲಿನ್ಯದ ‘ರೆಡ್ ಅಲರ್ಟ್’ ಮೊಳಗಿಸಿದ್ದ ಚೀನಾ ಈಗ ಹತ್ತಾರು ನಗರಗಳಲ್ಲಿ ವರ್ಷಕ್ಕೆ ಅದೆಷ್ಟೊ ಬಾರಿ ಮೊಳಗಿಸ ತೊಡಗಿದೆ.

ಅಮೆರಿಕವೇನೊ ‘ಡರ್ಟಿ ಥರ್ಟಿ’ಯ ಕಟುಪಾಠ ಕಲಿತು ಮಣ್ಣುಸಂರಕ್ಷಣಾ ಇಲಾಖೆಯನ್ನು ಆರಂಭಿಸಿತು. ಗಿಡಮರ ಸಂವರ್ಧನೆ, ಮರಳಿಗೆ ತಡೆಗೋಡೆ, ಕಂದಕ, ಹಸುರುಬೇಲಿ, ಕೆರೆಕಟ್ಟೆಗಳ ಯೋಜನೆ ಜಾರಿಗೆ ಬಂದವು. ನಮ್ಮಲ್ಲಿ ತದ್ವಿರುದ್ಧ ಬೆಳವಣಿಗೆ ಆಗುತ್ತಿದೆ. ಗಿಡಮರ, ಕೆರೆಕಟ್ಟೆಗಳ ಸಂಖ್ಯೆ ಕಡಿಮೆಯಾಗುತ್ತ ಮರುಭೂಮಿ ವಿಸ್ತೀರ್ಣವಾಗುತ್ತಿದೆ. ಗಾಳಿಯಲ್ಲಿ ತೇವಾಂಶ ಕಡಿಮೆ ಯಾಗುತ್ತಿದೆ, ಗ್ರಾಮಗಳಲ್ಲಿ ಕುರಿಮೇಕೆ ಸಾಕಣೆಯೇ ಪ್ರಧಾನ ವೃತ್ತಿಯಾಗಿದ್ದರಿಂದ ಸದಾ ಮುಸುಕಿದ ದೂಳಿನಿಂದಾಗಿ ‘ವಿಮಾನ ಪಯಣಿಗರಿಗೆ ದಿಲ್ಲಿಯೇ ಕಾಣದಂತಾಗಿದೆ’ ಎಂದು ದಶಕಗಳ ಹಿಂದೆಯೇ ಮೇನಕಾ ಗಾಂಧಿ ಹೇಳಿದ್ದರು. ಒಂದೆಡೆ ಡೀಸೆಲ್, ಕಲ್ಲಿದ್ದಲಿನ ಎಗ್ಗಿಲ್ಲದ ಬಳಕೆಯಿಂದಾಗಿ ಜಾಗತಿಕ ತಾಪಮಾನ ಏರುತ್ತಿದೆ. ಇನ್ನೊಂದೆಡೆ ಅನಿಯಂತ್ರಿತ ಕೊಳವೆಬಾವಿ ಮತ್ತು ಮೇಕೆ ಸಾಕಣೆಯಿಂದಾಗಿ ನೆಲವೂ ಬೆಂಗಾಡಾಗುತ್ತಿದೆ. ಗ್ರಾಮೀಣ ಜನತೆ ನಗರಕ್ಕೆ ಧಾವಿಸುವಂತೇ ಪ್ರಾಕೃತಿಕ ವಿಕೋಪಗಳೂ ನಗರಕ್ಕೆ ಬಂದೆರಗುತ್ತಿವೆ.

ಉತ್ತರ ಭಾರತವೆಂದರೆ ಸದಾಕಾಲ ಸಮರಕಾಲ. ಪಶ್ಚಿಮ ದಿಕ್ಕಿಗೆ ನೀರಿನ ಬದಲು ಬಿಸಿಗಾಳಿಯ ಮರಳು ಸಮುದ್ರ. ಉತ್ತರಕ್ಕೆ ಹಿಮಪರ್ವತ. ಅತಿಚಳಿ, ಅತಿಸೆಕೆ. ವಾಯವ್ಯದಿಂದ ದಂಡೆತ್ತಿ ಬರುವ ದಾಳಿಕೋರರು, ಮಿಡತೆಗಳು, ಉಗ್ರರು. ಒಂದಲ್ಲ ಒಂದು ಕಡೆ ಭೂಕಂಪನ, ಮೇಘಸ್ಫೋಟ, ಮಹಾಪೂರ, ಸುಂಟರಗಾಳಿ ದಾಳಿ. ಈಗ ಪಶ್ಚಿಮದ ಮಾದರಿಯ ಟೆಕ್ನಾಲಜಿ, ಭೋಗ್ಯತ್ಯಾಜಗಳ ಜೀವನಕ್ರಮವೂ ಅನಿರೀಕ್ಷಿತ ಸಂಕಟಗಳನ್ನು ತರುತ್ತಿದೆ. ಹಾಗೆಂದು ದಕ್ಷಿಣದ ನಾವೇ ಸುರಕ್ಷಿತ ಎಂದು ಬೀಗುತ್ತ ಕೂರುವಂತಿಲ್ಲ. ಅಲ್ಲಿನ ವೈಪರೀತ್ಯಗಳಿಗೆ ಬೇಸತ್ತವರು, ತತ್ತರಿಸಿದವರು ಇಲ್ಲಿಗೆ ಬರುತ್ತಿದ್ದಾರೆ. ದೇಶದ ಎರಡನೆಯ ಅತಿದೊಡ್ಡ ಮರುಭೂಮಿ ಉತ್ತರ ಕರ್ನಾಟಕದಲ್ಲಿ ಸೃಷ್ಟಿಯಾ ಗುತ್ತಿದೆ. ಅದೇ ಅಕ್ಷಾಂಶದಲ್ಲಿ ತೆಲಂಗಾಣ, ಆಂಧ್ರದಲ್ಲೂ ತಾಪಮಾನ 50ಕ್ಕೆ ತಲುಪಿ ಅಲ್ಲೂ ಕಳೆದ ವಾರ ದೂಳುಮೇಘ ಸಿಡಿದಿದೆ. ನಮ್ಮಲ್ಲಿ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಬಂದ ಯಾವ ರಾಜಕಾರಣಿಯೂ ಹವಾಗುಣ ಬದಲಾವಣೆ ಬಗ್ಗೆ ಪೀಪಿಟ್ಟೆನ್ನಲಿಲ್ಲ. ನಾಳಿನ ದುಷ್ಕಾಲವನ್ನು ಎದುರಿಸುವ ಕ್ರಮಗಳ ಬಗ್ಗೆ ಯಾವ ಪ್ರಣಾಳಿಕೆಯಲ್ಲೂ ಚಕಾರವಿಲ್ಲ. ಪಕ್ಷಭೇದವಿಲ್ಲದೇ ಉಷ್ಟ್ರಪಕ್ಷಿಗಳನ್ನೇ ಎಲ್ಲೆಲ್ಲೂ ಗೆಲ್ಲಿಸುತ್ತಿದ್ದೇವೆಯೆ ನಾವು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT