ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಟ್ರಿ ಪ್ಯಾರಡೈಸ್‌ ಸ್ಟಾರ್ಟ್‌ಅಪ್‌

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಆ ಹಾರ ಸೇವನೆ ವಿಷಯದಲ್ಲಿ ಜಾಗರೂಕತೆ ವಹಿಸುವುದರಿಂದ ಅನೇಕ ಕಾಯಿಲೆಗಳನ್ನು ದೂರ ಇರಿಸಬಹುದು. ‘ಜೋಳ ತಿನ್ನುವವ ತೋಳ, ಅಕ್ಕಿ ತಿನ್ನುವವ ಹಕ್ಕಿ, ರಾಗಿ ತಿನ್ನುವವ ನಿರೋಗಿ’ ಎನ್ನುವ ನಾಣ್ಣುಡಿ ಬಳಕೆಯಲ್ಲಿ ಇದೆ. ಕಾಯಿಲೆಗಳು ಬಂದಾಗ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಾಗ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದು ಗೊಂದಲ ಮೂಡಿಸುತ್ತದೆ. ವೈದ್ಯರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಔಷಧೋಪಚಾರಗಳಿಂದ ಗುಣಪಡಿಸುವ ಬಗ್ಗೆಯೇ ಅವರು ಗಮನ ಕೇಂದ್ರಿಕರಿಸಿರುತ್ತಾರೆ. ಚಿಕಿತ್ಸೆಗೆ ಪೂರಕವಾಗುವಂತಹ ವೈಜ್ಞಾನಿಕ ನೆಲೆಯಲ್ಲಿ ಸಿದ್ಧಪಡಿಸುವ ಆರೋಗ್ಯಕರ ಆಹಾರವು ಕಾಯಿಲೆ ಗುಣಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುವವರು ಶೀಘ್ರ ಗುಣಮುಖರಾಗಲು ನೆರವಾಗುವ ಆಹಾರ ಉತ್ಪನ್ನಗಳನ್ನು ತಯಾರಿಸುವ ನವೋದ್ಯಮ ಸ್ಥಾಪಿಸಿರುವ ಬೆಂಗಳೂರಿನ ಮೂವರು ಯುವಕರು ಈ ನಿಟ್ಟಿನಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾರೆ.

ಶಾಲಾ ದಿನಗಳಿಂದಲೂ ಸ್ನೇಹಿತರಾಗಿರುವ ವಿಜಯಸೂರ್ಯ ಮತ್ತು ಕುಶಾಲ್‌ ‘ನ್ಯೂಟ್ರಿ ಪ್ಯಾರಡೈಸ್‌ ಫುಡ್ಸ್‌’ (NutriParadise Foods) ಸ್ಟಾರ್ಟ್ಅಪ್‌ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವವರು ಪಡೆಯುವ ಚಿಕಿತ್ಸೆಗೆ ಪೂರಕವಾಗಿ ಆರೋಗ್ಯಕರ ಸಿದ್ಧ ಆಹಾರ ಪೂರೈಸುವುದು ಈ ನವೋದ್ಯಮದ ಉದ್ದೇಶವಾಗಿದೆ.

ಕಾಯಿಲೆಪೀಡಿತರು ಶೀಘ್ರವಾಗಿ ಗುಣಮುಖರಾಗುವಲ್ಲಿ ವೈದ್ಯರ ನಗುಮೊಗದ ಸೇವೆ, ಚಿಕಿತ್ಸಾ ವಿಧಾನ, ಚಿಕಿತ್ಸೆಗೆ ಸ್ಪಂದಿಸುವ ರೋಗಿಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಜತೆಗೆ ಪೋಷಕಾಂಶಭರಿತ ಊಟೋಪಚಾರವೂ ಮುಖ್ಯವಾಗಿರುತ್ತದೆ. ರೋಗಿಗಳಿಗೆ ನೀಡುವ ಔಷಧ ಉಪಚಾರಕ್ಕೆ ಪೂರಕವಾಗಿ ಕೆಲಸ ಮಾಡಿ ರೋಗಿ ಶೀಘ್ರ ಗುಣಮುಖರಾಗುವಲ್ಲಿ ಇಂತಹ ಆರೋಗ್ಯಕರ ಆಹಾರ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಅಂತಹ ಅಪರೂಪದ ಉದ್ಯಮಕ್ಕೆ ಕೈ ಹಾಕಿರುವ ಈ ವಿಜಯಸೂರ್ಯ ಮತ್ತು ಕುಶಾಲ್‌ ಅವರಿಗೆ ಇನ್ನೊಬ್ಬ ಮಿತ್ರ ವಿಶಾಲ್‌ ಹೂಡಿಕೆದಾರನ ರೂಪದಲ್ಲಿ ಹಣಕಾಸಿನ ಬೆಂಬಲ ಒದಗಿಸುತ್ತಿದ್ದಾರೆ.

ಶಾಲಾದಿನಗಳಿಂದಲೂ ಸ್ನೇಹಿತರಾಗಿರುವ ವಿಜಯ್‌ಸೂರ್ಯ (32) ಮತ್ತು ಕುಶಾಲ್‌ (31) ಕಾಲೇಜ್‌ ಓದುತ್ತಿರುವಾಗಲೇ ಉದ್ದಿಮೆ ವಹಿವಾಟಿನ ಬಗ್ಗೆ ಬಹಳಷ್ಟು ತಲೆಕೆಡಿಸಿಕೊಂಡಿದ್ದರು. ಹೋಟೆಲ್‌, ಬಟ್ಟೆ ವ್ಯಾಪಾರವನ್ನೂ ನಡೆಸಿ ಉದ್ಯಮ ಸ್ಥಾಪನೆಯ ಮೂಲ ಪಾಠಗಳನ್ನು ತಿಳಿದುಕೊಂಡಿದ್ದರು. ಆಹಾರ ಕ್ಷೇತ್ರದಲ್ಲಿಯೇ ಏನಾದರೂ ಮಾಡಬೇಕೆಂಬ ತುಡಿತದಿಂದಲೇ ಕುಶಾಲ್‌ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕಲಿಕೆಗೆ ಗಮನ ಕೇಂದ್ರಿಕರಿಸಿದ್ದರು. ವಿಜಯಸೂರ್ಯ ಅವರು ಗ್ಲೋಬಲ್‌ ಅಂಟರಪ್ರಿನರಶಿಪ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಗಮನ ಕೇಂದ್ರಿಕರಿಸಿದ್ದರು. ಈ ಕಲಿಕೆಯ ಭಾಗವಾಗಿ ಹಲವು ದೇಶಗಳನ್ನು ಸುತ್ತಿ ಬರುವಾಗ ಜರ್ಮನಿಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪ್ರತ್ಯೇಕ ಆಹಾರ ನೀಡುತ್ತಿರುವುದು ಅವರ ಗಮನ ಸೆಳೆದಿತ್ತು. ಈ ಪ್ರಯೋಗವನ್ನು ಭಾರತದಲ್ಲಿಯೂ ಮಾಡಿ ನೋಡಬೇಕು ಎನ್ನುವ ಛಲದಿಂದ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಜೈನ್‌ ಕಾಲೇಜ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ತಮ್ಮ ನವೋದ್ಯಮದ ಕನಸನ್ನು ಹಂಚಿಕೊಂಡಾಗ, ಸಭಿಕರಲ್ಲಿದ್ದ ಒಬ್ಬರು ಅದನ್ನು ಮೆಚ್ಚಿಕೊಂಡು ಹಣ ಹೂಡುವುದಾಗಿ ಪ್ರಕಟಿಸಿದ್ದರು. ಅಷ್ಟು ಹೊತ್ತಿಗೆ ಕುಶಾಲ್‌ ಅವರೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ತಮ್ಮ ಕಲಿಕೆ ಪೂರ್ಣಗೊಳಿಸಿದ್ದರು. ಇಬ್ಬರೂ ಜತೆಯಾಗಿ ಸ್ಟಾರ್ಟ್‌ಅಪ್‌ ಸ್ಥಾಪಿಸಿದರು.

ಆಸ್ಪತ್ರೆಗಳಿಗೆ ಮತ್ತು ಕಾಯಿಲೆಪೀಡಿತರಿಗೆ ಪೋಷಕಾಂಶಯುಕ್ತ, ಆರೋಗ್ಯಕರ ಮತ್ತು ಸುಲಭ ರೀತಿಯಲ್ಲಿ ಬೇಯಿಸಿ ಸೇವಿಸಬಹುದಾದ ಆಹಾರ ತಯಾರಿಸುವುದು ಸವಾಲಿನ ಕೆಲಸವಾಗಿತ್ತು. ಈ ಇನ್‌ಸ್ಟಂಟ್‌ ಆಹಾರಗಳ ತಯಾರಿಕೆಯಲ್ಲಿ ಸಂರಕ್ಷಕಗಳು, ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ. ಹೀಗಾಗಿ ಸೀಮಿತ ಅವಧಿಯಲ್ಲಿ ಅವುಗಳನ್ನು ಬಳಕೆ ಮಾಡಬೇಕಾಗುತ್ತದೆ. ಆಸ್ಪತ್ರೆಗಳಿಗೆ ಅರ್ಧಗಂಟೆಯಲ್ಲಿ ಇಂತಹ ಆಹಾರ ಪೂರೈಸಬೇಕಾಗುತ್ತದೆ. ಇಂತಹ ಸವಾಲನ್ನು ಸಂಸ್ಥೆಯು ಯಶಸ್ವಿಯಾಗಿ ನಿರ್ವಹಿಸಲು ಸಜ್ಜಾಗಿದೆ. ಈಗಾಗಲೇ ಬೆಂಗಳೂರಿನ ಐದಾರು ಆಸ್ಪತ್ರೆಗಳಿಗೆ ‘ರೆಡಿ ಟು ಈಟ್‌’ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.ಈ ಉತ್ಪನ್ನಗಳು ಸಂಪೂರ್ಣ ಸಸ್ಯಾಹಾರಿಯಾಗಿವೆ.

ಆಸ್ಪತ್ರೆಗಳ ಕ್ಯಾಂಟಿನ್‌ನಲ್ಲಿ ಆಹಾರ ಬಿಸಿ ಮಾಡಿ ಪೂರೈಸಲಾಗುತ್ತಿದೆ. ಈ ಆಹಾರ ಸೇವಿಸಿದವರು ನಿರೀಕ್ಷೆಗಿಂತ ಬೇಗ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಇದರಿಂದ ಚಿಕಿತ್ಸಾ ವೆಚ್ಚದಲ್ಲಿಯೂ ಉಳಿತಾಯ ಆಗುತ್ತಿದೆ. ಈ ಸಿದ್ಧ ಆಹಾರಗಳ ಬೆಲೆ ದುಬಾರಿಯಾಗಿಲ್ಲ.

ಕಾಯಿಲೆ ಬಿದ್ದಾಗ ದೇಹ ನಿತ್ರಾಣಗೊಂಡಿರುತ್ತದೆ. ಚಿಕಿತ್ಸೆಗೆ ಸ್ಪಂದಿಸಲು ದೇಹದಲ್ಲಿ ಶಕ್ತಿಯೂ ಇರಬೇಕಾಗುತ್ತದೆ. ಅದನ್ನು ‘ನ್ಯೂಟ್ರಿ ಪ್ಯಾರಡೈಸ್‌’ನ ಉತ್ಪನ್ನಗಳು ಪೂರೈಸುತ್ತವೆ. ಈ ಬಗೆಯ ಆಹಾರ ಉತ್ಪನ್ನ ಸರಳ ಮತ್ತು ಎಲ್ಲರಿಗೂ ಒಗ್ಗುವಂತಿರಬೇಕು ಎನ್ನುವ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ.

ರೋಗಿಗಳ ಪಾಲಿಗೆ ಇದೊಂದು ಮೌಲ್ಯವರ್ಧಿತ ಸೇವೆಯಾಗಿದೆ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರುವ ಬದಲಿಗೆ ಐದಾರು ದಿನಗಳಿಗೆ ಮನೆಗೆ ಮರಳಬಹುದು. ವೈದ್ಯರಿಂದಲೂ ಈ ಉತ್ಪನ್ನಕ್ಕೆ ಶಹಬ್ಬಾಸಗಿರಿ ಸಿಕ್ಕಿದೆ. ನೈಸರ್ಗಿಕ ಉತ್ಪನ್ನಗಳಿಂದ ಸಿದ್ಧಪಡಿಸಿರುವ ಈ ಉತ್ಪನ್ನಗಳು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಮಧುಮೇಹಿಗಳಿಗಾಗಿ ಕಿಚಡಿ, ಸಾಮಾನ್ಯ ರೋಗಿಗಳಿಗಾಗಿ ಆರೋಗ್ಯಕರ ಪೇಯ ‘ಪ್ರೊಪೋಷನ್‌’ ಮತ್ತು ಗೃಹಿಣಿಯರಿಗಾಗಿ ‘ಒಮೆಗಾ 3’ ಚಟ್ನಿ ಪುಡಿ ತಯಾರಿಸಲಾಗಿದೆ ’ ಎಂದು ಸಹಸ್ಥಾಪಕ ವಿಜಯ ಸೂರ್ಯ ಹೇಳುತ್ತಾರೆ.

ಎಕ್ಸೇಲ್‌ ಕೇರ್‌ ಹಾಸ್ಪಿಟಲ್‌, ಸಾಗರ್‌ ಚಂದ್ರಮ, ಬಿಗ್‌ ಹಾಸ್ಪಿಟಲ್‌, ಎಸ್‌ಎಚ್‌ಆರ್‌ಸಿ, ದಿವಾಕರ ಆಸ್ಪತ್ರೆಗಳಲ್ಲಿ ಈ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.  ಸಂಸ್ಥೆಯ ಉತ್ಪನ್ನಗಳನ್ನು ಇದುವರೆಗೆ 1.2 ಲಕ್ಷ ಜನರಿಗೆ ಪೂರೈಸಲಾಗಿದೆ. ಕ್ಯಾನ್ಸರ್‌, ಕಿಡ್ನಿ ವೈಫಲ್ಯ ರೋಗಿಗಳಿಗೂ ಪ್ರತ್ಯೇಕ ಆಹಾರ ಸಿದ್ಧಪಡಿಸಲಾಗುತ್ತಿದೆ. ರಕ್ತ ಶುದ್ಧೀಕರಣ ಮಾಡುವ ಕಿಡ್ನಿಗಳಿಗೆ ಚಿಕಿತ್ಸೆ ಸಂದರ್ಭದಲ್ಲಿ ಪೊಟಾಶಿಯಂ, ಸೋಡಿಯಂ, ಪಾಸ್ಪರಸ್‌ಗಳನ್ನು ಪ್ರತ್ಯೇಕಿಸಿದ ಆಹಾರ ಕೊಡುವುದು ಮುಖ್ಯವಾಗಿರುತ್ತದೆ. ಆ ಬಗ್ಗೆಯೂ ಸಂಸ್ಥೆಯು ಸಂಶೋಧನೆ ನಡೆಸುತ್ತಿದೆ.

ಆಸ್ಪತ್ರೆ ಹೊರಗೂ ಈ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದರೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ ಇವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಗಮನ ಕೇಂದ್ರಿಕರಿಸಲಾಗಿದೆ. ಚೆನ್ನೈ, ಮುಂಬೈನ ಆಸ್ಪತ್ರೆಗಳಿಂದಲೂ ಬೇಡಿಕೆ ಬರುತ್ತಿದೆ. ಅದನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.

‘ನ್ಯೂಟ್ರಿ ಪ್ಯಾರಡೈಸ್‌’ ಸ್ಥಾಪಿಸಿ ಮತ್ತು ವಹಿವಾಟು ಮುಂದುವರೆಸುವುದಕ್ಕೆ ಪೂರಕವಾದ ಸಂಶೋಧನೆಗಳಿಗೆ 2011 ರಿಂದಲೇ ಚಾಲನೆ ನೀಡಲಾಗಿತ್ತು. ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಕ್ಯಾನ್ಸರ್‌ಪೀಡಿತರಿಗಾಗಿಯೇ ಪ್ರತ್ಯೇಕ ದ್ರವರೂಪದ ಉತ್ಪನ್ನ ಸಿದ್ಧಪಡಿಸಲಾಗಿದೆ. ಇದನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಬೆಳೆಸುತ್ತದೆ. ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನಿರ್ಬಂಧಿಸುತ್ತದೆ. ₹ 20ಕ್ಕೆ ದೊರೆಯುವ ಡಯಾಬಿಟಿಕ್‌ ಕಿಚಡಿ ಪ್ಯಾಕೇಟ್‌ನಿಂದ ಒಂದು ಬಟ್ಟಲು ಪೂರ್ಣ ಕಿಚಡಿ ದೊರೆಯಲಿದೆ. ಇದು ಒಬ್ಬರಿಗೆ ಸಾಕಾಗುತ್ತಿದೆ. ವೈದ್ಯರ ಶಿಫಾರಸಿನ ಅಗತ್ಯ ಇಲ್ಲದೆಯೂ ಇವುಗಳನ್ನು ಖರೀದಿಸಬಹುದು.

‘ಇದುವರೆಗೆ ₹ 7 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ವಹಿವಾಟು ವಿಸ್ತರಣೆಗೆ ಅಗತ್ಯವಾದ ಬಂಡವಾಳ ಸಂಗ್ರಹಕ್ಕೆ ಉದ್ದೇಶಿಸಲಾಗಿದೆ. ಮೈಸೂರಿನಲ್ಲಿ ಇರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಇ) 2017–18ರ ಸಾಲಿನ ಸ್ಟಾರ್ಟ್‌ಅಪ್‌ಗಳ ನೆರವು ಕಾರ್ಯಕ್ರಮಕ್ಕೆ ‘ನ್ಯೂಟ್ರಿ ಪ್ಯಾರಡೈಸ್‌’ ಆಯ್ಕೆಯಾಗಿದೆ. ಅಲ್ಲಿನ ಸುಸಜ್ಜಿತ ಪ್ರಯೋಗಾಲದಿಂದ ಗಮನಾರ್ಹ ಪ್ರಯೋಜನ ದೊರೆತಿದೆ. ಆಹಾರ ಉತ್ಪನ್ನಗಳ ಪರೀಕ್ಷೆ, ಸಂಶೋಧನೆಗೆ ಇದರಿಂದ ಸಂಸ್ಥೆಗೆ ತುಂಬ ಪ್ರಯೋಜನವಾಗಿದೆ. ವಿಜ್ಞಾನಿಗಳಿಂದಲೂ ನೆರವು ಸಿಕ್ಕಿದೆ. ಇದರಿಂದ ಸಂಸ್ಥೆಯ ಸಂಶೋಧನೆಗೆ ತುಂಬ ವೇಗ ಸಿಕ್ಕಿದೆ. ಅಲ್ಲಿಯೇ ಕಚೇರಿಗೆ ಅವಕಾಶ ಮಾಡಿಕೊಡಲಾಗಿದೆ. ಆಹಾರಕ್ಕೆ ಸಂಬಂಧಿಸಿದ 32 ವಿಭಾಗಗಳಿಂದ ಅಗತ್ಯ ನೆರವು ದೊರೆಯುತ್ತಿದೆ. ಸಂಸ್ಥೆಯ ಉತ್ಪನ್ನಗಳೆಲ್ಲ ‘ಸಿಎಫ್‌ಟಿಆರ್‌ಐ’ನಿಂದ ಪ್ರಮಾಣೀಕೃತಗೊಂಡಿವೆ. ಇನ್ನೂ 20 ಉತ್ಪನ್ನಗಳು ಪರೀಕ್ಷಾರ್ಥ ಹಂತದಲ್ಲಿ ಇವೆ. ಸದ್ಯಕ್ಕೆ ಮೂರು ಉತ್ಪನ್ನಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ’ ಎಂದು ವಿಜಯ್‌ಸೂರ್ಯ ಹೇಳುತ್ತಾರೆ.

‘2015ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆ ಈಗ ಯಶಸ್ಸಿನ ಒಂದೊಂದೆ ಮೆಟ್ಟಿಲನ್ನು ಏರುತ್ತಿದೆ. ಸಂಶೋಧನೆಯು ನಿರಂತರವಾಗಿ ನಡೆಯುತ್ತಿದೆ. ಮೂರು ವರ್ಷಗಳ ನಂತರವೇ ಲಾಭ ಬರುವ ನಿರೀಕ್ಷೆ ಇದೆ. ಐದಾರು ಜನರಿದ್ದ ಸಂಸ್ಥೆಯಲ್ಲಿ ಈಗ ಸಿಬ್ಬಂದಿ ಸಂಖ್ಯೆ 120ಕ್ಕೆ ಏರಿಕೆಯಾಗಿದೆ. ಸಂಶೋಧನೆಗೆ ಹೆಚ್ಚು ಪರಿಶ್ರಮ ಪಡಲಾಗಿದೆ. ಕೆಲವರ ಸಂಶೋಧನೆಯನ್ನೂ ಖರೀದಿಸಲಾಗಿದೆ. ಪೇಟೆಂಟ್‌ ಪಡೆಯಲಾಗುತ್ತಿದೆ ಎಂದು ವಿಜಯ್‌ಸೂರ್ಯ ಹೇಳುತ್ತಾರೆ.

ಮಾಹಿತಿಗೆ www.nutriparadise.com

080:26951616 / 96114 18555

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT