ಗುರುವಾರ , ಜೂನ್ 24, 2021
27 °C

ಸ್ತ್ರೀವಾದಿಗಳಲ್ಲಿ ಸಂಕಟ ಸೃಷ್ಟಿಸಿದ ಜರ್ಮೆನ್ ಗ್ರೀರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ತ್ರೀವಾದಿಗಳಲ್ಲಿ ಸಂಕಟ ಸೃಷ್ಟಿಸಿದ ಜರ್ಮೆನ್ ಗ್ರೀರ್‌

ಸಿಲ್ಯಾನ್ ಯೆಗಿನ್ಸು

‘ಅತ್ಯಾಚಾರ ಎಂಬುದು ಹಿಂಸಾತ್ಮಕ ಅಪರಾಧ ಅಲ್ಲ. ಇದಕ್ಕೆ ನಿಗದಿ ಮಾಡಿರುವ ಶಿಕ್ಷೆಯನ್ನು ಕಡಿಮೆ ಮಾಡಬೇಕು’ ಎಂದು ಹೇಳುವ ಮೂಲಕ ಆಸ್ಟ್ರೇಲಿಯನ್ ಲೇಖಕಿ ಜರ್ಮೆನ್ ಗ್ರೀರ್‌ ಅವರು ಕಳೆದ ವಾರ ವಾಗ್ವಾದವೊಂದನ್ನು ಹುಟ್ಟುಹಾಕಿದರು. ಗ್ರೀರ್ ಅವರು ಸ್ತ್ರೀವಾದಿಗಳ ವಲಯದಲ್ಲಿನ ಭಿನ್ನ ದನಿ ಎಂದು ಗುರುತಿಸಿಕೊಂಡಿರುವ ಮಹಿಳೆ. ‘ಗ್ರೀರ್ ಅವರು ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದವರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವಂತೆ ಮಾಡುವ, ಲೈಂಗಿಕ ದೌರ್ಜನ್ಯ ಎಸಗಿದವರನ್ನು ಹೊಣೆಗಾರರನ್ನಾಗಿ ಮಾಡುವ ಚಳವಳಿಗೆ ಅವರ ಮಾತುಗಳು ಧಕ್ಕೆ ಉಂಟುಮಾಡಬಹುದು’ ಎಂಬ ಟೀಕೆಗಳು ವ್ಯಕ್ತವಾದವು.

70ರ ದಶಕದ ಜನಪ್ರಿಯ ಕೃತಿ ‘ದಿ ಫಿಮೇಲ್ ಯುನಕ್’ ಬರೆದ ಗ್ರೀರ್ ಅವರು ಈ ಮಾತು ಆಡಿದ್ದು ವೇಲ್ಸ್‌ನಲ್ಲಿ ನಡೆದ ಸಾಹಿತ್ಯ ಹಾಗೂ ಕಲೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ. ಅವರು ಈ ಮಾತುಗಳನ್ನು ಆಡುತ್ತಿದ್ದಂತೆಯೇ ವೀಕ್ಷಕರ ಸಾಲಿನಲ್ಲಿ ಕುಳಿತಿದ್ದ ಕೆಲವರು ಎದ್ದು ಹೊರನಡೆದರು – ಹೊರನಡೆದವರ ಮುಖದಲ್ಲಿ ಬೇಸರ ಎದ್ದುಕಾಣುತ್ತಿತ್ತು. ‘ಸಮ್ಮತಿ’ಯ ಸುತ್ತಲಿನ ವಾದಗಳು ಅತ್ಯಾಚಾರ ಎಸಗಿದವರನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಅಡ್ಡಿಯಾಗಿ ನಿಂತಿರುವ ಕಾರಣ, ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ಪುನರಾವಲೋಕನ ಆಗಬೇಕು ಎಂದು ಹೇಳಿದರು ಗ್ರೀರ್.

‘ಬಹುತೇಕ ಅತ್ಯಾಚಾರಗಳಲ್ಲಿ ಯಾವುದೇ ರೀತಿಯಗಾಯಗಳು ಆಗುವುದಿಲ್ಲ. ಅತ್ಯಾಚಾರದ ಬಗ್ಗೆ ಶತಮಾನಗಳಿಂದ ನಾವು ಬರೆಯುತ್ತ, ಆಲೋಚಿಸುತ್ತ ಬಂದಿರುವುದರಿಂದ ಆಗಿದ್ದು ಏನೂ ಇಲ್ಲ. ಅತ್ಯಾಚಾರವನ್ನು ನಾವು ಅಸೂಕ್ಷ್ಮ, ಎಚ್ಚರಗೇಡಿ ಕೆಲಸವನ್ನಾಗಿ ಕಾಣಬೇಕು. ಸುಸ್ತಾಗಿ ಮಲಗಿರುವ ಪತ್ನಿಯ ಮೈಮೇಲೆ ಪತಿ ಬಿದ್ದು, ತನ್ನ ಹಕ್ಕನ್ನು ಚಲಾಯಿಸಿದಾಗಲೆಲ್ಲ, ಆತ ಆಕೆಯನ್ನು ಅತ್ಯಾಚಾರಕ್ಕೆ ಒಳಪಡಿಸಿದಂತೆ ಆಗುತ್ತದೆ. ಆದರೆ, ಇಂತಹ ಪ್ರಕರಣಗಳು ಕೋರ್ಟ್‌ನ ಮೆಟ್ಟಿಲು ಹತ್ತುವುದಿಲ್ಲ. ಅತ್ಯಾಚಾರವನ್ನು ಭಯಂಕರ ಹಿಂಸೆಯ ಕೃತ್ಯ – ಕೆಲವು ಅತ್ಯಾಚಾರಗಳು ಹಿಂಸಾತ್ಮಕವಾಗಿರುತ್ತವೆ – ಎಂದು ಕಾಣುವ ಬದಲು ಅವುಗಳನ್ನು ಸಮ್ಮತಿಯಿಲ್ಲದೆ ನಡೆಯುವ ಲೈಂಗಿಕ ಸಂಪರ್ಕ ಎಂಬ ನೆಲೆಯಲ್ಲಿ ಆಲೋಚಿಸಬೇಕು’ ಎಂದೂ ಗ್ರೀರ್ ಹೇಳಿದ್ದಾರೆ.

ಇಂತಹ ಕೃತ್ಯ ಎಸಗಿದ್ದಕ್ಕೆ 200 ತಾಸುಗಳ ಕಾಲ ಸಮಾಜ ಸೇವೆಯ ಕೆಲಸದಲ್ಲಿ ತೊಡಗಿಕೊಳ್ಳುವ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದ್ದಾರೆ. ಗ್ರೀರ್‌ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ಹಿಂದೆಯೂ ನೀಡಿದ್ದಾರೆ. ‘ಗ್ರೀರ್ ಅವರ ಹೇಳಿಕೆಗಳು ಮಹಿಳೆಯರ ಹಿತಾಸಕ್ತಿಗಳಿಗೆ ದೊಡ್ಡ ಮಟ್ಟದಲ್ಲಿ ಧಕ್ಕೆ ತರುವಂತಿವೆ’ ಎನ್ನುತ್ತಾರೆ ಸ್ತ್ರೀವಾದಿ ನಟಾಲಿ ಕಾಲಿನ್ಸ್‌. ‘ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯದಾನ ವ್ಯವಸ್ಥೆಯು ಸಮರ್ಪಕವಾಗಿ ನಿಭಾಯುಸುತ್ತಿಲ್ಲ ಎಂದು ಗ್ರೀರ್ ಹೇಳಿರುವುದನ್ನು ಒಪ್ಪುತ್ತೇನೆ. ಆದರೆ, ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲ’ ಎಂದೂ ಕಾಲಿನ್ಸ್ ಹೇಳಿದ್ದಾರೆ.

ಗ್ರೀರ್ ಹೇಳಿಕೆಯನ್ನು ಖಂಡಿಸಿರುವ ‘ರೇಪ್‌ ಕ್ರೈಸಿಸ್‌ ಇಂಗ್ಲೆಂಡ್ ಆ್ಯಂಡ್‌ ವೇಲ್ಸ್‌’ ಸಂಸ್ಥೆಯ ವಕ್ತಾರರೊಬ್ಬರು, ‘ಅತ್ಯಾಚಾರ ಎನ್ನುವುದು ಹಿಂಸಾತ್ಮಕ ಕೃತ್ಯ. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಮೈಮೇಲೆ ಗಾಯಗಳನ್ನು ಗುರುತಿಸಬಹುದೇ, ಇಲ್ಲವೇ ಎಂಬುದು ಇಲ್ಲಿ ಮುಖ್ಯವಲ್ಲ’ ಎಂದು ಹೇಳಿದ್ದಾರೆ. ಗ್ರೀರ್‌ ಅವರು ಈ ವರ್ಷ ಹೊಸ ಪುಸ್ತಕವೊಂದನ್ನು ಪ್ರಕಟಿಸುತ್ತಿದ್ದಾರೆ. ಹೀಗೆ ಹೇಳಿಕೆ ನೀಡುವ ಮೂಲಕ ಆ ಪುಸ್ತಕ ಮಾರಾಟ ಹೆಚ್ಚಾಗುವಂತೆ ಮಾಡುವ ಆಲೋಚನೆ ಹೊಂದಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

‘ಈ ಕಾಲಘಟ್ಟದಲ್ಲಿ ಬಹುಬೇಗನೆ ಮುನ್ನೆಲೆಗೆ ಬರಬೇಕು ಎಂದಾದರೆ, ಏನಾದರೂ ಪ್ರಚೋದನಕಾರಿ ಮಾತು ಆಡಬೇಕಾಗುತ್ತದೆ. ಗ್ರೀರ್ ಅವರು ಆ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಅವರ ಬಗ್ಗೆ ಮಾತನಾಡಲು ಆರಂಭಿಸಿದ್ದೇವೆ. ಆದರೆ ನಾನು ಅವರ ಪುಸ್ತಕ ಖರೀದಿ ಮಾಡುವುದಿಲ್ಲ’ ಎಂದು ಎಮಿಲಿ ಹಂಟ್ ಎಂಬುವರು ಹೇಳಿದ್ದಾರೆ.

ಗ್ರೀರ್ ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಬೇಕು ಎಂದು ಹಲವಾರು ಸ್ತ್ರೀವಾದಿಗಳು, ಮಹಿಳಾ ಹಕ್ಕುಗಳ ಪರ ಹೋರಾಟಗಾರರು ಹೇಳಿದ್ದಾರೆ. ಆದರೆ, ‘ಹಾಗೆ ನಿರ್ಲಕ್ಷ್ಯ ಮಾಡುವುದರಿಂದ, ಸ್ತ್ರೀವಾದಿ ಜಗತ್ತಿನಲ್ಲಿ ವಯಸ್ಸಾದ ಮಹಿಳೆಯರನ್ನು ಹೀಗಳೆಯುವುದು ಹೆಚ್ಚಾಗಬಹುದು’ ಎಂಬ ಆತಂಕವನ್ನು ಕಾಲಿನ್ಸ್‌ ವ್ಯಕ್ತಪಡಿಸಿದ್ದಾರೆ.

‘ಗ್ರೀರ್‌ ಅವರನ್ನು ವಯಸ್ಸಾಗಿರುವ ಹುಚ್ಚು ಅತ್ತೆ ಎಂದು ಕರೆಯುವ ಗೀಳು ಶುರುವಾಗಿದೆ. ಅವರ ಅನಿಸಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕುವ ಬಯಕೆಯೂ ಕೆಲವರಲ್ಲಿ ಇದೆ. ಆದರೆ, ಹಾಗೆ ಮಾಡುವುದು ನನಗೆ ಸರಿ ಕಾಣುವುದಿಲ್ಲ. ಏಕೆಂದರೆ, ಸ್ತ್ರೀವಾದಕ್ಕೆ ಗ್ರೀರ್‌ ನೀಡಿರುವ ಕೊಡುಗೆ ಬಹಳ ದೊಡ್ಡದು. ಅವರು ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗ, ಸ್ತ್ರೀವಾದದ ಪಾಲಿಗೆ ಸಮಸ್ಯೆಯಂತೆ ಕಾಣುವ ಹೇಳಿಕೆಗಳನ್ನು ಕೊಡುವ ಹಾಗೂ ಕೃತ್ಯಗಳನ್ನು ಎಸಗುವ ಹಿರಿಯರಿಗೂ ಗೌರವ ಕೊಡುವ ಬಗ್ಗೆ ಆಲೋಚಿಸಬೇಕು’ ಎಂದು ಕಾಲಿನ್ಸ್‌ ಹೇಳುತ್ತಾರೆ.

ಟೀಕೆ ಬರುತ್ತದೆ ಎಂಬುದನ್ನು ನಿರೀಕ್ಷಿಸಿದ್ದರು ಗ್ರೀರ್. ‘ಸ್ತ್ರೀವಾದಿಗಳು ನನ್ನನ್ನು ಗುರಿಯಾಗಿಸಿಕೊಂಡು ಅಬ್ಬರಿಸುತ್ತಿರುವುದು ನನಗೆ ಗೊತ್ತಾಗಿದೆ’ ಎನ್ನುವ ಅವರು, ತಾವು ಕೂಡ ಈ ಹಿಂದೆ ಅತ್ಯಾಚಾರಕ್ಕೆ ಗುರಿಯಾಗಿದ್ದನ್ನು ನೆನಪಿಸುತ್ತಾರೆ. ‘ಈ ರೀತಿಯ ಹೇಳಿಕೆ ನೀಡಿರುವ ಮಹಿಳೆ ಕೂಡ ತಮ್ಮ 18ನೆಯ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ನೋವು ಅನುಭವಿಸಿದವರು ಎಂಬುದನ್ನು ಜನ ಮರೆತುಬಿಡುತ್ತಾರೆ’

ಎಂದು ಹೇಳಿದರು 32 ವರ್ಷ ವಯಸ್ಸಿನ ಜೆಮ್ಮಾ ಮುರ್‍ರೆ. ಈಕೆ ಕೂಡ ಅತ್ಯಾಚಾರದ ನೋವು ಅನುಭವಿಸಿದವರು. ‘ಈ ಸಂಕಟವನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ನಿಭಾಯಿಸುತ್ತಾರೆ. ಆದರೆ ಅತ್ಯಾಚಾರ ಎಂಬುದು ತಮ್ಮ ಜೀವನದ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಅವರ ಮನಸ್ಸು ನಿರಾಕರಿಸುತ್ತಿರಬಹುದು’ ಎಂದರು ಮುರ್‍ರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.