ತಿರುಪತಿ ದೇವಾಲಯಕ್ಕೆ ಲಾಡು ತಯಾರಿಸಲು ತುಪ್ಪ ಪೂರೈಸುತ್ತಿದ್ದ ತಮಿಳುನಾಡಿನ ಕಂಪನಿಯ ಆಡಳಿತ ಮಂಡಳಿಯ ಅತ್ಯುನ್ನತ ಸ್ಥಾನಗಳಲ್ಲಿ ಮುಸ್ಲಿಮರು ಇದ್ದಾರೆ ಎಂಬರ್ಥದ ಪೋಸ್ಟ್‌ಗಳು ‘ಎಕ್ಸ್’, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿವೆ. ಎ.ಆರ್.ಫುಡ್ಸ್ (ಪ್ರೈವೆಟ್) ಲಿಮಿಟೆಡ್ ಎಂಪ್ಲಾಯೀಸ್ ಮತ್ತು ಕಂಪನಿಯ ಉನ್ನತ ಹುದ್ದೆಗಳಲ್ಲಿರುವ ಐವರ ಹೆಸರುಗಳು ಮತ್ತು ಫೋಟೊಗಳು ಇರುವ ಸ್ಕ್ರೀನ್‌ಶಾಟ್ ಅನ್ನೂ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ‘ತಿರುಪತಿ ಬಾಲಾಜಿಯ ಲಾಡು ಪ್ರಸಾದಕ್ಕೆ ತುಪ್ಪ ಪೂರೈಸುತ್ತಿದ್ದ ಕಂಪನಿಯ ಆಡಳಿತ ಮಂಡಳಿಯ ಉನ್ನತ ಹುದ್ದೆಗಳಲ್ಲಿ ಈ ಕೆಳಗಿನವರು ಇದ್ದಾರೆ ಎಂದು ಹೇಳಿಕೊಳ್ಳುವ ಹಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಇದು ನಿಜವೇ’ ಎಂದು ಬಳಕೆದಾರರೊಬ್ಬರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಇದು ನಿಜವಲ್ಲ.
ಪೋಸ್ಟ್‌ನಲ್ಲಿದ್ದ ಎ.ಆರ್.ಫುಡ್ಸ್ (ಪ್ರೈವೆಟ್) ಲಿಮಿಟೆಡ್ ಎಂಬ ಹೆಸರನ್ನು ಇಂಟರ್‌ನೆಟ್‌ನಲ್ಲಿ ಜಾಲಾಡಿದಾಗ, ಅದರ ಲಿಂಕ್ಡ್ ಇನ್ ಪ್ರೊಫೈಲ್ ಸಿಕ್ಕಿತು. ಅದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಆಹಾರ ಮತ್ತು ಪಾನೀಯ ಕಂಪನಿ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಪೋಸ್ಟ್‌ನಲ್ಲಿರುವ ಸ್ಕ್ರೀನ್‌ಶಾಟ್‌ನಲ್ಲಿ ಇರುವ ಹೆಸರುಗಳ ಜೊತೆಗೆ ಪಾಕಿಸ್ತಾನ ಎಂಬ ಉಲ್ಲೇಖವೂ ಇದೆ. ಲಾಡು ತಯಾರಿಕೆಗೆ ತುಪ್ಪ ಪೂರೈಸಿದ ಕಂಪನಿಯ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಕಂಪನಿಯ ಹೆಸರನ್ನು ಎ.ಆರ್.ಡೈರಿ ಫುಡ್ (ಪ್ರೈವೆಟ್) ಲಿಮಿಟೆಡ್ ಎಂದು ಬರೆಯಲಾಗಿದೆ. ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಅದು ತಮಿಳುನಾಡಿನ ದಿಂಡಿಗಲ್‌ನ ಕಂಪನಿ ಎಂದು ಗೊತ್ತಾಗಿದೆ ಎಂದು ಆಲ್ಟ್‌ನ್ಯೂಸ್‌ನ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.