ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹100 ಮುಖಬೆಲೆಯ ಹಳೆಯ ನೋಟುಗಳನ್ನು RBI ಹಿಂಪಡೆಯುತ್ತದೆ ಎಂಬುದು ಸುಳ್ಳು ಸುದ್ದಿ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಪ್ರಸ್ತುತ ಚಲಾವಣೆಯಲ್ಲಿರುವ ₹100 ಮುಖಬೆಲೆಯ ಹಳೆಯ ನೋಟುಗಳನ್ನು ಮಾರ್ಚ್‌ ಅಂತ್ಯದ ಹೊತ್ತಿಗೆ ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ. ಇದು ಡಿಮಾನಿಟೈಸೇಷನ್‌ ಅಲ್ಲ. ಹಾಗಾಗಿ ಭೀತಿ ಬೇಡ. ಜೊತೆಗೆ, ಮಾರ್ಚ್‌ ನಂತರದಲ್ಲಿ ಹೊಸದಾದ ₹100 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ. ಹಳೆಯ ₹100 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ’ ಎಂಬಂಥ ಪೋಸ್ಟ್‌ಗಳು ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆ 2016ರಲ್ಲಿ ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆದಿತ್ತು. ಆದ್ದರಿಂದ, ‘₹100, ₹10 ಹಾಗೂ ₹5 ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆಯಲಿದೆ. ಇದು ಎರಡನೇ ನೋಟು ರದ್ದತಿಯಾಗಲಿದೆ’ ಎಂಬಂಥ ಪೋಸ್ಟ್‌ಗಳು 2019ರಲ್ಲಿ ಹಾಗೂ 2021ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈಗ ಮತ್ತೊಮ್ಮೆ ₹100 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂಬಂತೆ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪೋಸ್ಟ್‌ಗಳ ಕುರಿತು ಆರ್‌ಬಿಐ 2021ರಲ್ಲಿ ಸ್ಪಷ್ಟನೆ ನೀಡಿತ್ತು. ‘ಪ್ರಸ್ತುತ ಚಲಾವಣೆಯಲ್ಲಿರುವ ₹100, ₹10 ಹಾಗೂ ₹5 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುವುದು ಎಂಬಂಥ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಇಂಥ ವರದಿಗಳು ತಪ್ಪು ಮಾಹಿತಿಯಿಂದ ಕೂಡಿವೆ. ನಾವು ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ’ ಎಂದು ಆರ್‌ಬಿಐ ಸ್ಪಷ್ಟನೆ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿರುವ ಸುದ್ದಿಗೆ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಆದ್ದರಿಂದ, ಈಗ ಮತ್ತೊಮ್ಮೆ ಹರಿದಾಡುತ್ತಿರುವ ₹100 ಮುಖಬೆಲೆಯ ಹಳೆಯ ನೋಟುಗಳ ಹಿಂಪಡೆದುಕೊಳ್ಳುವ ಸುದ್ದಿಯು ಸಹ ಸುಳ್ಳು ಸುದ್ದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT